
ಅಡುಗೆಗೆ ಹಸಿಮೆಣಸು ಇದ್ದರೆ ರುಚಿ ಆಗೋದು ಸತ್ಯ. ಆದರೆ ಹಸಿಮೆಣಸು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ. ಇನ್ನೊಂದು ಕಡೆ ಎಲ್ಲ ಸಮಯದಲ್ಲಿ ಹಸಿಮೆಣಸು ಇರೋದಿಲ್ಲ, ಆಗ ನಾವು ಮನೆಯಲ್ಲಿ ಹಸಿಮೆಣಸು ಬದಲಾಗಿ ಗಾಂಧಾರಿ ಮೆಣಸು ( Gandhari Menasu ) ಬೆಳೆಯಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಶಿರಸಿ ಮೂಲದ ರವಿಚಂದ್ರ ಹೆಗಡೆ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸೂಜಿ ಮೆಣಸು ಅಥವಾ ಗಾಂಧಾರಿ ಮೆಣಸಸಿನ ಗಿಡ ( Birds Eye Chilli ) ತಯಾರಿಕೆ ವಿಧಾನ ಅನೇಕರಿಗೆ ಗೊತ್ತಿರೋದಿಲ್ಲ. ಇದು ಮೆಣಸಿನ ಕಾಯಿಗಳಲ್ಲಿಯೇ ಅತ್ಯಂತ ಶ್ರೇಷ್ಠವಾದ , ಖಾರವಾದ , ರುಚಿಕರ ಮೆಣಸಿನ ಪ್ರಭೇದವಾಗಿದ್ದು, ಹೆಚ್ಚಾಗಿ ಮಲೇನಾಡು ಪ್ರದೇಶದಲ್ಲಿ ಬೆಳೆಯುತ್ತದೆ.
ಸಾಮಾನ್ಯವಾಗಿ ಹಕ್ಕಿ ಪಕ್ಷಿಗಳು ಇದರ ಹಣ್ಣನ್ನು ಕಂಡೊಡನೆ ತಿನ್ನುವ ಹಾಗೂ ಆ ಮೂಲಕ ಬೀಜ ಪಸರಿಸುವ ಕಾರಣಕ್ಕೋ ಏನೋ ಇದಕ್ಕೆ ಇಂಗ್ಲೀಷಿನಲ್ಲಿ "Birds eye chilli" ಕರೆಯುತ್ತಾರೆ !!
ಬಹುತೇಕರು ಈ ಸೂಜಿ ಮೆಣಸು ನೈಸರ್ಗಿಕವಾಗಿ, ಅಂದರೆ ಹಕ್ಕಿಗಳ ಹಿಕ್ಕೆ ಮೂಲಕ ಮಾತ್ರ ಹುಟ್ಟುವ ತಳಿಯೆಂದು ತಿಳಿದಿದ್ದಾರೆ. ವಾಸ್ತವದಲ್ಲಿ ಸೂಜಿಮೆಣಸಿನ ಗಿಡವನ್ನು ನಾವೇ ಸುಲಭವಾಗಿ ತಯಾರಿಸಬಹುದು!!
ಸೂಜಿ ಮೆಣಸಿನ ಹಣ್ಣಿನಲ್ಲಿನ ಹಸಿಯಾದ ಬೀಜವನ್ನು ಹಣ್ಣಿನ ಲೋಳೆಯೊಂದಿಗೇ ಫಲವತ್ತಾದ ಗೊಬ್ಬರದ ಮಣ್ಣಿನಲ್ಲಿ ಹಾಕಿ ನೀರೆರೆದರೆ ಒಂದು ವಾರದಲ್ಲೇ ಮೊಳಕೆಯೊಡೆದು ಸಸಿಗಳು ಮೇಲೆದ್ದು ಬರುತ್ತವೆ.!
ಆದರೆ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಈ ಸಸಿಯನ್ನು ಕಿತ್ತು ಬೇರೆಡೆ ನೆಟ್ಟರೆ ಬೆಳವಣಿಗೆಗೆ ಕುಂಠಿತ ಆಗಿಬಿಡುವ ಸಾಧ್ಯತೆ ಹೆಚ್ಚು!. ಹಾಗಾಗಿ ಕೊಟ್ಟೆಯಲ್ಲಿಯೇ ಸಸಿ ಮಾಡಿ ಮಣ್ಣುಗೂಡಲೇ ನಮಗೆ ಅನುಕೂಲವಿರುವ ಕಡೆ ಹುಗಿದು ಗಿಡ ಬೆಳೆಸಿಕೊಳ್ಳಬಹುದು, ಅಥವಾ ದೊಡ್ಡ ಚೀಲದಲ್ಲಿ ಅಥವಾ ಪಾಟ್ ನಲ್ಲಿ ಸಹ ಪ್ರಯತ್ನಿಸಬಹುದು!! ಬೀಜ ಹಾಕಿದ ಒಂದೆರಡು ದಿನಗಳ ಸಮಯ ಇರುವೆಗಳು ತಿನ್ನದಂತೆ ಸಹ ಗಮನವಿರಲಿ!
ಒಣಗಿದ ಸೂಜಿಮೆಣಸಿಗೆ ಮಾರುಕಟ್ಟೆಯಲ್ಲಿ ₹1500 ರಿಂದ 1800 ವರೆಗೂ ಬೆಲೆ ಇರುವ ಕಾರಣ ಇದನ್ನು ವಾಣಿಜ್ಯ ಉದ್ದೇಶದ ಬೆಳೆಯಾಗಿ ಸಹ ಸಾಕಷ್ಟು ರೈತರು ಬೆಳೆಸುತ್ತಿದ್ದಾರೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.