ಹೊಟ್ಟೆ ನೋವು ಕಾಣಿಸಿಕೊಂಡಾಗ, ಅತಿಯಾಗಿ ಹೊಟ್ಟೆ ತುಂಬಿದ್ದಾಗ ಜನರು ಶುಂಠಿ ಸೇವನೆ ಮಾಡ್ತಾರೆ. ಆರೋಗ್ಯಕ್ಕೆ ಒಳ್ಳೆಯದಾಗಿರುವ ಈ ಶುಂಠಿ ಎಲ್ಲ ಸಮಯದಲ್ಲಿ ಹಾಗೆ ಎಲ್ಲ ದೇಹ ಪ್ರಕೃತಿಗೆ ಯೋಗ್ಯವಲ್ಲ.
ಭಾರತದ ಅಡುಗೆ ಪದ್ಧತಿಯಲ್ಲಿ ಬಳಸಲಾಗುವ ಸಾಂಬಾರ ಪದಾರ್ಥಗಳು ಅನೇಕ ರೀತಿಯ ಔಷಧೀಯ ಗುಣಗಳನ್ನು ಹೊಂದಿವೆ. ನಾವು ನಿತ್ಯದ ಅಡುಗೆಯಲ್ಲಿ ಬಳಸುವ ಸಾಸಿವೆ, ಜೀರಿಗೆ, ಅರಿಶಿನ ಮುಂತಾದವುಗಳು ಉತ್ತಮ ಆರೋಗ್ಯಕ್ಕೆ ಮೂಲವಾಗಿದೆ. ಇಂತವುಗಳು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ.
ಉತ್ತಮ ಆರೋಗ್ಯ (Health)ವನ್ನು ನೀಡುವ ಕೆಲವು ಆಹಾರಗಳಲ್ಲಿ ಶುಂಠಿ ಕೂಡ ಒಂದು. ಶುಂಠಿ (Ginger) ಅಡುಗೆಯ ರುಚಿಯನ್ನು ಇಮ್ಮಡಿಗೊಳಿಸುವುದಲ್ಲದೇ ಉತ್ತಮ ಆರೋಗ್ಯವನ್ನೂ ನೀಡುತ್ತದೆ. ಪುರಾತನ ಕಾಲದಿಂದಲೂ ಭಾರತ (India) ದಲ್ಲಿ ಶುಂಠಿಯ ಬಳಕೆ ಇದೆ. ಹೊರದೇಶಗಳಲ್ಲಿಯೂ ಇದನ್ನು ಬಳಸುತ್ತಾರೆ. ಅನೇಕ ರೀತಿಯ ಕಷಾಯಗಳಿಗೆ ಹಾಗೂ ಈಗಿನ ಹೊಸ ಶೈಲಿಯ ಅಡುಗೆಗೆ ಶುಂಠಿ ಬೇಕೇ ಬೇಕು. ಹೀಗೆ ನಾವು ಆರೋಗ್ಯಕ್ಕೆ ಉತ್ತಮವೆಂದು ಸೇವಿಸುವ ಶುಂಠಿ ಅತಿಯಾದರೆ ಅದು ನಮ್ಮ ಆರೋಗ್ಯದಲ್ಲಿ ಅನೇಕ ಸಮಸ್ಯೆಯನ್ನು ಹುಟ್ಟುಹಾಕುತ್ತದೆ.
ಆಹಾರ ಕ್ರಮದಿಂದಲೂ ದಾಂಪತ್ಯ ಜೀವನದಲ್ಲಿ ಮೂಡುತ್ತೆ ಬಿರುಕು!
ಹವಾಮಾನ ಬದಲಾದಂತೆ ರೋಗಗಳು ಕೂಡ ಬದಲಾಗುತ್ತವೆ. ಮಳೆಗಾಲದಲ್ಲಿ ಒಂದು ರೀತಿಯ ಆರೋಗ್ಯ ಸಮಸ್ಯೆಯಾದರೆ. ಚಳಿಗಾಲ ಹಾಗೂ ಬೇಸಿಗೆಯಲ್ಲಿ ಇನ್ನೊಂದು ಬಗೆಯ ಸಮಸ್ಯೆಗಳಿರುತ್ತವೆ. ಹಾಗೆಯೇ ಮನುಷ್ಯ ಕೂಡ ಬೇಸಿಗೆಯಲ್ಲಿ ಬಿಸಿ ಆಹಾರದಿಂದ ದೂರವಿರುತ್ತಾನೆ. ಅದೇ ಚಳಿಗಾಲ ಬಂತೆಂದರೆ ಬಿಸಿ ಆಹಾರಕ್ಕೆ ಹತ್ತಿರವಾಗುತ್ತಾನೆ. ಚಳಿಗಾಲದಲ್ಲಿ ಅನೇಕ ಮಂದಿ ಶುಂಠಿ ಟೀಯನ್ನು ಕುಡಿಯುತ್ತಾರೆ. ಶುಂಠಿ ಟೀ ವಿಶೇಷ ರುಚಿಯನ್ನು ನೀಡುವುದರ ಜೊತೆಗೆ ಶರೀರವನ್ನು ಬೆಚ್ಚಗಿಡುತ್ತದೆ ಎನ್ನುವ ಕಾರಣಕ್ಕೆ ಶುಂಠಿಯನ್ನು ಹೆಚ್ಚು ಬಳಕೆಮಾಡುತ್ತಾರೆ. ಈ ರೀತಿ ಶುಂಠಿಯನ್ನು ಹೆಚ್ಚು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅಂತಹ ಕೆಲವು ಸಮಸ್ಯೆಗಳ ಬಗೆಗಿನ ಮಾಹಿತಿ ಇಲ್ಲಿದೆ.
ಹೆಚ್ಚು ಶುಂಠಿ ಸೇವನೆಯಿಂದ ಉಂಟಾಗುತ್ತೆ ಈ ತೊಂದರೆ :
ಹೊಟ್ಟೆ ನೋವು : ನಾವು ಆರೋಗ್ಯಕ್ಕೆ ಒಳ್ಳೆಯದು ಎಂದು ಸೇವಿಸುವ ಶುಂಠಿ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುತ್ತದೆ. ಆದರೆ ಇದನ್ನು ಹೆಚ್ಚು ಸೇವಿಸುವುದರಿಂದ ಹೊಟ್ಟೆ ನೋವು, ಆಮ್ಲೀಯತೆ, ಗ್ಯಾಸ್ ಮತ್ತು ಮಲಬದ್ಧತೆಯ ಸಮಸ್ಯೆಗಳು ಉಂಟಾಗುತ್ತವೆ. ಶುಂಠಿಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ಹೊಟ್ಟೆ ಉಬ್ಬುವುದು ಮುಂತಾದ ಸಮಸ್ಯೆಗಳನ್ನು ಕಡಿಮೆಮಾಡಬಹುದು.
ರಕ್ತವನ್ನು ತೆಳುವಾಗಿಸುತ್ತೆ : ಶುಂಠಿಯಲ್ಲಿ ರಕ್ತವನ್ನು ತೆಳುವಾಗಿಸುವ ಗುಣವಿದೆ. ಇದು ಬ್ಲಡ್ ಕ್ಲಾಟಿಂಗ್ ಅನ್ನು ನಿಯಂತ್ರಿಸುತ್ತದೆ. ಆದರೆ ರಕ್ತಸ್ರಾವದ ಸಮಸ್ಯೆಯನ್ನು ಹೊಂದಿರುವವರು ಶುಂಠಿಯನ್ನು ಹೆಚ್ಚು ಸೇವಿಸುವುದರಿಂದ ರಕ್ತಸ್ರಾವವಾಗಬಹುದು. ಆದ್ದರಿಂದ ರಕ್ತಸ್ರಾವದ ಸಮಸ್ಯೆ ಇರುವವರು ಶುಂಠಿಯನ್ನು ಮಿತವಾಗಿ ಬಳಸುವುದು ಉತ್ತಮ.
ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತೆ : ಶುಂಠಿ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ನಾವು ಆಹಾರದಲ್ಲಿ ಹೆಚ್ಚು ಹೆಚ್ಚು ಶುಂಠಿಯನ್ನು ಬಳಸುವುದರಿಂದ ಶರೀರದಲ್ಲಿ ಸಕ್ಕರೆಯ ಪ್ರಮಾಣ ಹಠಾತ್ತನೆ ಕಡಿಮೆಯಾಗಬಹುದು. ಆದ್ದರಿಂದ ಮಧುಮೇಹಿಗಳು ಶುಂಠಿಯ ಬಳಕೆ ಮಾಡುವಾಗ ಬಹಳ ಜಾಗರೂಕರಾಗಿರಬೇಕು.
ಬಾಯಿ ಸುಡುವುದು : ಶುಂಠಿ ಉಷ್ಣವಾದ್ದರಿಂದ ಅದರ ಅತಿಯಾದ ಬಳಕೆಯಿಂದ ಕೆಲವರಿಗೆ ಬಾಯಿ ಸುಡುವುದು, ಎದೆಯುರಿ ಮುಂತಾದ ಸಮಸ್ಯೆಗಳು ಕಾಡಬಹುದು. ಅಂತಹ ಸಮಸ್ಯೆಯನ್ನು ಹೊಂದಿರುವವರು ಸಾಧ್ಯವಾದಷ್ಟು ಶುಂಠಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.
ಕ್ವಿಕ್ ಆಗಿ ಮಾಡೋ, ಎಲ್ಲ ಅಚ್ಚು ಮೆಚ್ಚಿನ ಮ್ಯಾಗಿ ಕಂಡು ಹಿಡಿದ ರೋಚಕ ಕಥೆ ಇದು!
ಈ ರೀತಿಯ ಸಮಸ್ಯೆಗಳೂ ಕಾಣಬಹುದು : ಶುಂಠಿ ಸೇವನೆಯಿಂದ ಅತಿಸಾರ, ಹೊಟ್ಟೆ ಉರಿ ಮುಂತಾದ ಸಮಸ್ಯೆಗಳು ಕಾಡಬಹುದು. ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ರೀತಿ ಇರುತ್ತದೆ. ಆದ್ದರಿಂದ ಕೆಲವರ ದೇಹ ಪ್ರಕೃತಿಗೆ ಶುಂಠಿ ಅಡ್ಡಪರಿಣಾಮ ಬೀರಬಹುದು. ಕೆಲವರಿಗೆ ಇದರಿಂದ ಚರ್ಮದ ತೊಂದರೆ, ತುರಿಕೆ , ದದ್ದುಗಳು ಉಂಟಾಗಬಹುದು. ರಕ್ತದೊತ್ತಡದ ಮೇಲೆ ಶುಂಠಿ ಪರಿಣಾಮ ಬೀರುವುದರಿಂದ ಇದು ಹೃದಯಾಘಾತಕ್ಕೂ ಕಾರಣವಾಗಬಹುದು. ಗರ್ಭಿಣಿಯರಿಗೆ ಕೂಡ ಶುಂಠಿ ಒಳ್ಳೆಯದಲ್ಲ. ಹಾಗೇ ಖಾಲಿ ಹೊಟ್ಟೆಯಲ್ಲಿ ಶುಂಠಿಯನ್ನು ಸೇವಿಸುವುದರಿಂದ ಹೊಟ್ಟೆಯ ಅಸ್ವಸ್ಥತೆ ಉಂಟಾಗುತ್ತದೆ.