ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ಮುಂದೆ 50 ರೂ.ಗೆ ಸಿಗುತ್ತೆ ಭರ್ಜರಿ ಊಟ, ನೀರಿಗೆ ಜಸ್ಟ್‌ 3 ರೂ !

By Vinutha Perla  |  First Published Jul 20, 2023, 10:33 AM IST

ರೈಲಿನಲ್ಲಿ ಪ್ರಯಾಣಿಸುವವರಿಗೆ ಗುಡ್‌ನ್ಯೂಸ್‌. ಇನ್ಮುಂದೆ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಆಹಾರ ಮತ್ತು ನೀರಿನ ಬಗ್ಗೆ ಚಿಂತಿಸಬೇಕಾಗಿಲ್ಲ. ರೈಲ್ವೆ ಇಲಾಖೆ, ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ಸಾಮಾನ್ಯ ಬೋಗಿಯ ಮುಂದೆ ಎಕಾನಮಿ ಮೀಲ್ಸ್ ಸ್ಟಾಲ್ ಸ್ಥಾಪಿಸಲಾಗುವುದು ಎಂದು ತಿಳಿಸಿದೆ.


ಭಾರತೀಯ ರೈಲ್ವೇಯು ಕಾಲಕಾಲಕ್ಕೆ ಪ್ರಯಾಣಿಕರಿಗಾಗಿ ಹೊಸ ಸೌಲಭ್ಯಗಳನ್ನು ತರುತ್ತಲೇ ಇರುತ್ತದೆ. ಈ ಬಾರಿ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವವರಿಗೆ ವಿಶೇಷ ಸೌಲಭ್ಯ ಕಲ್ಪಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಇನ್ಮುಂದೆ ರೈಲಿನ ಜನರಲ್ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಊಟ-ತಿಂಡಿಗೆ ಪರದಾಡಬೇಕಿಲ್ಲ. ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿಯೇ ಜನರಲ್ ಕೋಚ್ ಎದುರು 'ಎಕಾನಮಿ ಮೀಲ್ಸ್' ಸ್ಟಾಲ್ ಸ್ಥಾಪಿಸಲಾಗುವುದು ಎಂದು ಭಾರತೀಯ ರೈಲ್ವೇ ತಿಳಿಸಿದೆ. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ಮತ್ತು ಪಾನೀಯ ಇಲ್ಲಿ ದೊರಕಲಿದೆ.

ಜನರಲ್ ಬೋಗಿನಲ್ಲಿ ಜನದಟ್ಟಣೆ ಹಾಗೂ ಸೀಟು ಸಮಸ್ಯೆಯಿಂದಾಗಿ ಪ್ರಯಾಣಿಕರು ಕೋಚ್ ನಿಂದ ಕೆಳಗಿಳಿಯಲು ಸಾಧ್ಯವಾಗುತ್ತಿಲ್ಲ. ಹೇಗೋ ಪ್ಲಾಟ್ ಫಾರಂ ಮೇಲೆ ಇಳಿದರೂ ಕ್ಯಾಟರಿಂಗ್ ಸ್ಟಾಲ್ ತಲುಪುವಷ್ಟರಲ್ಲಿ ರೈಲು ಹೊರಡಲು ಶುರುವಾಗುತ್ತದೆ. ಇದರಿಂದಾಗಿ ಹಲವು ಬಾರಿ ಪ್ಲಾಟ್‌ಫಾರ್ಮ್‌ಗೆ ಇಳಿದರೂ ಪ್ರಯಾಣಿಕರು ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನರಿಗೆ ಅನುಕೂಲವಾಗಲೆಂದು ಈ ಹೊಸ ಸೌಲಭ್ಯ ನೀಡಲಾಗುತ್ತಿದೆ.

Tap to resize

Latest Videos

ಪ್ರಯಾಣಿಕರಿಗೆ ಗುಡ್‌ನ್ಯೂಸ್, ರೈಲಿನಲ್ಲಿ ಇನ್ಮುಂದೆ ಈ ಎಲ್ಲಾ ಸೌಲಭ್ಯ ಸಂಪೂರ್ಣ ಉಚಿತ

ಕಡಿಮೆ ಬೆಲೆಗೆ ಆಹಾರ, ನೀರಿನ ವ್ಯವಸ್ಥೆ 
ಜನರಲ್ ಬೋಗಿಯಲ್ಲಿ ಸಾಮಾನ್ಯವಾಗಿ ಹೆಚ್ಚು ಜನಸಂದಣಿ ಇರುತ್ತದೆ. ಮಲಗಲು, ಕೂರಲು ಯಾವುದಕ್ಕೂ ಸ್ಥಳವಿರುವುದಿಲ್ಲ. ನಿರ್ಧಿಷ್ಟ ಸೀಟ್‌ಗಳಲ್ಲಿ ಜನರು ಕುಳಿತಿರುತ್ತಾರೆ. ಅನೇಕ ಬಾರಿ ಪ್ರಯಾಣಿಕರು ಕೆಲವು ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಲು ಇಳಿಯುತ್ತಾರೆ. ನಂತರ ಇನ್ನೊಬ್ಬ ಪ್ರಯಾಣಿಕರು ಬಂದು ಅವರ ಜಾಗದಲ್ಲಿ ಕುಳಿತುಕೊಳ್ಳುತ್ತಾರೆ. ಅಂಥಾ ಪರಿಸ್ಥಿತಿಯಲ್ಲಿ, ಅನೇಕ ಬಾರಿ ಈ ವಿಷಯಕ್ಕೆ ಜಗಳ ಆಗೋದಿದೆ. ಇದಲ್ಲದೇ ಹಲವು ಬಾರಿ ರೈಲಿನ ಸಾಮಾನ್ಯ ಬೋಗಿಯಿಂದ ದೂರದಲ್ಲಿ ಆಹಾರ ಮತ್ತು ಪಾನೀಯ ಮಳಿಗೆಗಳನ್ನು ಸ್ಥಾಪಿಸಲಾಗಿರುತ್ತದೆ. ಆದ್ರೆ ಇನ್ಮುಂದೆ ಆ ಸಮಸ್ಯೆ ಕಾಡಲ್ಲ

ಭಾರತೀಯ ರೈಲ್ವೇಯ ಹೊಸ ಸೌಲಭ್ಯದಿಂದ ಸಾಮಾನ್ಯ ಕೋಚ್‌ನ ಪ್ರಯಾಣಿಕರು ಆಹಾರ ಮತ್ತು ಪಾನೀಯಕ್ಕಾಗಿ ಅಲೆದಾಡುವುದು ತಪ್ಪಲಿದೆ. ಭಾರತೀಯ ರೈಲ್ವೇಯು ಸಾಮಾನ್ಯ ಕೋಚ್‌ನ ಮುಂದೆ ಎಕಾನಮಿ ಮೀಲ್ ಸ್ಟಾಲ್‌ನ್ನು ಸ್ಥಾಪಿಸಲು ಮುಂದಾಗಿದೆ. ಈ ಕುರಿತು ರೈಲ್ವೆ ಮಂಡಳಿಯಿಂದ ಸೂಚನೆಗಳನ್ನು ನೀಡಲಾಗಿದೆ. ಭಾರತೀಯ ರೈಲ್ವೆಯ ಪ್ರಕಾರ, ಜೂನ್ 27, 2023 ರಂದು ರೈಲ್ವೆ ಮಂಡಳಿಯಿಂದ ನಿರ್ದೇಶನವನ್ನು ನೀಡಲಾಗಿದೆ. ಈ ಕೌಂಟರ್‌ಗಳ ಸ್ಥಳವನ್ನು ವಲಯ ರೈಲ್ವೆ ನಿರ್ಧರಿಸುತ್ತದೆ.

ಇದು ಟ್ರೈನೋ, ಓಪನ್‌ ಶವರ್‌ ಬೋಗಿಯೋ: ಎಸಿ ಕೋಚ್‌ನಲ್ಲಿ ನೀರು ಸೋರಿಕೆ ವಿರುದ್ಧ ನೆಟ್ಟಿಗರ ವ್ಯಂಗ್ಯ

ಫುಡ್ ಲಿಸ್ಟ್‌ನಲ್ಲಿರುವ ಮೆನು ಏನು?
ಭಾರತೀಯ ರೈಲ್ವೇ ಪ್ರಕಾರ, 20 ರೂಪಾಯಿಗೆ ಪೂರಿ, ತರಕಾರಿ ಪಲ್ಯ ಮತ್ತು ಉಪ್ಪಿನಕಾಯಿ ನೀಡುವ ಯೋಜನೆ ಇದೆ. ಇದು 7 ಪೂರಿ ಮತ್ತು 150 ಗ್ರಾಂ ತರಕಾರಿಗಳನ್ನು ಹೊಂದಿರುತ್ತದೆ. ಈ ಸೌಲಭ್ಯದ ಪರಿಚಯದಿಂದ ದೂರದ ಪ್ರಯಾಣ ಮಾಡುವವರಿಗೆ ಅನುಕೂಲವಾಗಲಿದೆ. ಇದಲ್ಲದೆ, ಲಘು ಊಟದ ಬೆಲೆ 50 ರೂ. ಆಗಿರಲಿದೆ. ಈ ಊಟದಲ್ಲಿ ರಾಜ್ಮಾ-ಅನ್ನ, ಖಿಚಡಿ, ಕುಲ್ಚೆ-ಚೋಲೆ, ಚೋಲೆ-ಭಾತುರೆ, ಪಾವ್‌ಬಾಜಿ ಅಥವಾ ಮಸಾಲೆ ದೋಸೆಯನ್ನು ತೆಗೆದುಕೊಳ್ಳಬಹುದು. ಇದರೊಂದಿಗೆ ಪ್ರಯಾಣಿಕರಿಗೆ 200 ಮಿಲಿ ಲೀಟರ್ ನೀರು 3 ರೂ.ಗೆ ಸಿಗಲಿದೆ. 

ಯಾವೆಲ್ಲಾ ನಿಲ್ದಾಣದಲ್ಲಿ ಸೌಲಭ್ಯ ಲಭ್ಯವಿದೆ?
ಗೋರಖ್‌ಪುರ ಜಂಕ್ಷನ್ ಸೇರಿದಂತೆ ಕೆಲವು ಪ್ರಮುಖ ನಿಲ್ದಾಣಗಳಲ್ಲಿ ಪ್ರಾಯೋಗಿಕ ಯೋಜನೆ ಯಶಸ್ವಿಯಾದ ನಂತರ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಪ್ಲಾಟ್‌ಫಾರ್ಮ್‌ನಲ್ಲಿ ಜನರಲ್ ಕೋಚ್‌ನ ಮುಂಭಾಗದಲ್ಲಿ ಈ ಸ್ಟಾಲ್ ಅನ್ನು ಸ್ಥಾಪಿಸಲು ಯೋಜನೆಯನ್ನು ಸಿದ್ಧಪಡಿಸಿದೆ. ಪ್ರಸ್ತುತ ಈ ಸೌಲಭ್ಯವನ್ನು ವಾಯುವ್ಯ ರೈಲ್ವೆಯ ಫುಲೇರಾ, ಅಜ್ಮೀರ್, ರೇವಾರಿ, ಅಬು ರೋಡ್, ನಾಗೌರ್, ಜೈಪುರ, ಅಲ್ವಾರ್, ಉದಯಪುರ ಮತ್ತು ಅಜ್ಮೀರ್ ನಿಲ್ದಾಣಗಳಲ್ಲಿ ಪ್ರಾರಂಭಿಸಲಾಗಿದೆ. ಶೀಘ್ರದಲ್ಲೇ ಹೆಚ್ಚಿನ ರೈಲು ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಲಾಗುವುದು ಎಂದು ಭಾರತೀಯ ರೈಲ್ವೇ ತಿಳಿಸಿದೆ.

click me!