
ಕೆನೆಭರಿತ ಹಾಲಿನ ಮೇಲೆ ತೆಳುವಾದ ಪದರವನ್ನು ನೋಡಿರಬಹುದು. ಇದುವೇ ಹಾಲಿನ ಕೆನೆ ಅಥವಾ ಮಲೈ. ಮಲೈ ಅನ್ನು ಹೆಚ್ಚಾಗಿ ಮೇಲೋಗರಗಳಿಗೆ ಹೆಚ್ಚು ರುಚಿ ತರಲು ಅಥವಾ ಚಹಾವನ್ನು ಹೆಚ್ಚು ಟೇಸ್ಟೀಯಾಗಿಸಲು ಬೆರೆಸುತ್ತಾರೆ. ಹೆಚ್ಚಿನವರ ಮನೆಯಲ್ಲಿ ತುಪ್ಪವನ್ನು ತಯಾರಿಸಲು ಕೆನೆಯನ್ನು ಬಳಸಲಾಗುತ್ತದೆ. ಆದರೆ ನೀವು ಎಂದಾದರೂ ಉಳಿದ ಹಾಲಿನ ಕೆನೆಯಿಂದ ರುಚಿಕರವಾದ ತಿನಿಸುಗಳನ್ನು ಮಾಡಲು ಪ್ರಯತ್ನಿಸಿದ್ದೀರಾ ? ಇಲ್ಲವಾದಲ್ಲಿ ಇದು ಸೂಕ್ತ ಸಮಯ. ಮಲೈ ಅಥವಾ ಹಾಲಿನ ಕೆನೆಯಿಂದ ರುಚಿಕರವಾದ, ಆರೋಗ್ಯಕ್ಕೆ ಹಿತವಾದ ಹಲವು ಸಿಹಿತಿಂಡಿಗಳನ್ನು ತಯಾರಿಸಬಹುದು. ಅದ್ಯಾವುದು ತಿಳಿಯೋಣ.
ಕ್ರೀಮ್ ಡ್ರೈ ಫ್ರೂಟ್ ಬಾರ್
ಈ ರುಚಿಕರವಾದ ಸಿಹಿತಿಂಡಿಯನ್ನು ಮಾಡಲು, ನೀವು ಮೊದಲು ಪ್ಯಾನ್ ತೆಗೆದುಕೊಂಡು 200 ಗ್ರಾಂ ಬಿಳಿ ಚಾಕೋಲೇಟ್ ಬಾರ್ ಅನ್ನು ಹಾಕಿ ಕರಗಿಸಿ. ಈ ಕರಗಿದ ಚಾಕೊಲೇಟ್‌ಗೆ, 1 ಕಪ್ ದಪ್ಪ ಉಳಿದಿರುವ ಮಲೈ, 1 ಹಿಡಿ ಮಿಶ್ರಿತ ಹಣ್ಣುಗಳು ಮತ್ತು ರುಚಿಗೆ ತಕ್ಕಂತೆ ಸಕ್ಕರೆ ಸೇರಿಸಿ. ಈ ಮಿಶ್ರಣವನ್ನು ಟ್ರೇ ಮೇಲೆ ಸುರಿದು ಸಮತಟ್ಟು ಮಾಡಿ. ಮೇಲಿನಿಂದ ಹುರಿದ ಡ್ರೈಫ್ರೂಟ್ಸ್ ಹಾಕಿ ಅಲಂಕರಿಸಿ,. ಫ್ರಿಡ್ಜ್ ನಲ್ಲಿಟ್ಟು ಗಟ್ಟಿ ಮಾಡಿಟ್ಟುಕೊಳ್ಳಿ. ಇದನ್ನು ಯಾವಾಗ ಬೇಕಾದರೂ ಸವಿಯಬಹುದು.
ಮಲೈ ಲಾಡು
ಏನಾದರೂ ಸಿಹಿಯಾಗಿ ತಿನ್ನಬೇಕು ಅನಿಸುತ್ತಿದೆಯಾ. ಹಾಗಿದ್ರೆ ಮನೆಯಲ್ಲಿ ಸುಲಭವಾಗಿ ಸರಳವಾಗಿ ಈ ರುಚಿಕರವಾದ ಮಲೈ ಲಾಡನ್ನು ಸವಿಯಬಹುದು. ಈ ಲಾಡನ್ನು ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ತಯಾರಿಸಬಹುದು. ಈ ಕೆನೆ ಲಾಡು ತಯಾರಿಸಲು ನೀವು ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು 1 ಚಮಚ ತುಪ್ಪವನ್ನು ಹಾಕಿ. ನಂತರ 1 ಕಪ್ ತುರಿದ ತೆಂಗಿನಕಾಯಿಯನ್ನು ಸೇರಿಸಿ. ಅದು ಕಂದು ಬಣ್ಣಕ್ಕೆ ತಿರುಗುವವರೆಗೆ ಬೇಯಿಸಿಕೊಳ್ಳಿ. ನಂತರ ಇದನ್ನು ಒಂದು ಪ್ಲೇಟ್‌ಗೆ ವರ್ಗಾಯಿಸಿ ಮತ್ತು ಅದೇ ಪ್ಯಾನ್‌ನಲ್ಲಿ ಪುಡಿಮಾಡಿದ ಬಾದಾಮಿ ಮತ್ತು ಗೋಡಂಬಿಯನ್ನು ಹುರಿದುಕೊಳ್ಳಿ. ಇದನ್ನು ಸಹ ಪ್ಲೇಟ್ ಗೆ ಹಾಕಿಕೊಂಡು 1 ಕಪ್ ಉಳಿದಿರುವ ಮಲೈ ಅನ್ನು ಸೇರಿಸಿಕೊಂಡು ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ. ಇದಕ್ಕೆ ಬೆಲ್ಲವನ್ನು ಸೇರಿಸಿ ಮತ್ತು ಎಲ್ಲವನ್ನೂ ಮಿಶ್ರಣ ಮಾಡಿ ಸಣ್ಣ ಸಣ್ಣ ಲಾಡುಗಳನ್ನು ತಯಾರಿಸಿ.
ಮಲೈ ಸ್ಯಾಂಡ್‌ವಿಚ್
ರುಚಿಕರವಾದ ಕೆನೆ ಸ್ಯಾಂಡ್‌ವಿಚ್ ತಿನ್ನುವ ಖುಷಿ ಇನ್ಯಾವುದರಲ್ಲೂ ಸಿಗದು. ಆದರೆ ನೀವು ಅಂಗಡಿಯಲ್ಲಿ ಮೇಯನೇಸ್ ಖರೀದಿಸುವ ಬದಲು ಆರೋಗ್ಯಕರ ಮಲೈ ಅನ್ನು ಬಳಸಬಹುದು. ಸ್ಯಾಂಡ್‌ವಿಚ್ ಮಾಡುವಾಗ ಉಳಿದ ಮಲೈ ಅನ್ನು ಸ್ಪ್ರೆಡ್ ಆಗಿ ಬಳಸಬಹುದು. ಈ ರುಚಿಕರವಾದ ಸ್ಯಾಂಡ್‌ವಿಚ್ ಮಾಡಲು 3 ಟೇಬಲ್ ಸ್ಪೂನ್ ಮಲೈ ತೆಗೆದುಕೊಳ್ಳಿ, ಇದಕ್ಕೆ 2 ಟೇಬಲ್ ಸ್ಪೂನ್ ಕರಗಿದ ಕಡಲೆಕಾಯಿ ಬೆಣ್ಣೆ, 1 ಟೀ ಸ್ಪೂನ್ ಚಿಲ್ಲಿ ಫ್ಲೇಕ್ಸ್, ಬೆಳ್ಳುಳ್ಳಿ ಪುಡಿ, ರುಚಿಗೆ ತಕ್ಕಂತೆ ಉಪ್ಪು ಮತ್ತು ಮೆಣಸು ಸೇರಿಸಿ ಮಿಶ್ರಣ ಮಾಡಿ. ಸ್ಪ್ರೆಡ್ ಸಿದ್ಧವಾದ ನಂತರ, ಇದನ್ನು 4 ಬ್ರೆಡ್ ಸ್ಲೈಸ್‌ಗಳ ಮೇಲೆ ಲೇಯರ್ ಮಾಡಿ, ತರಕಾರಿಗಳು, ಬೇಯಿಸಿದ ಮೊಟ್ಟೆ ಮತ್ತು ಚೀಸ್ ಸ್ಲೈಸ್‌ಗಳನ್ನು ಸೇರಿಸಿ. ಗ್ರಿಲ್ ಮಾಡಿ ಮತ್ತು ಬಿಸಿಯಾಗಿ ತಿನ್ನಿ
ಮಲೈ ಫ್ರೂಟ್ ಸಲಾಡ್
ಮಲೈ ಫ್ರೂಟ್ ಸಲಾಡ್ ತಿನ್ನಲು ರುಚಿಕರ. ತಯಾರಿಸುವುದು ಸುಲಭ. ಮಲೈ ಫ್ರೂಟ್ ಸಲಾಡ್ ನ್ನು ತಯಾರಿಸಲು ಮೊದಲು ಒಂದು ಬೌಲ್ ತೆಗೆದುಕೊಂಡು ಕಪ್ ಉಳಿದಿರುವ ಕೆನೆ ಸೇರಿಸಿ, 2 ಟೇಬಲ್ ಸ್ಪೂನ್ ಜೇನುತುಪ್ಪ, ದಾಲ್ಚಿನ್ನಿ ಪುಡಿ ಮತ್ತು ವೆನಿಲ್ಲಾ ಎಸೆನ್ಸ್ ನ್ನು ಹಾಕಿಕೊಳ್ಳಿ. ನಂತರ ಇದಕ್ಕೆ 1 ಕತ್ತರಿಸಿದ ಸೇಬು, 1 ಕತ್ತರಿಸಿದ ಬಾಳೆಹಣ್ಣು, ¼ ಕಪ್ ಅನಾನಸ್, ಒಂದಿಷ್ಟು ಚರ‍್ರಿಗಳು, ಅರ್ಥ ಕಿತ್ತಳೆಯನ್ನು ಸೇರಿಸಿ. ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ ಸವಿಯಿರಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.