ಮನೆಗೆ ಇರುವೆ ಮುತ್ತಿಕೊಂಡಾಗ ತಲೆಬಿಸಿ ಶುರುವಾಗುತ್ತೆ. ಎಲ್ಲಿಂದ ಬಂತಪ್ಪ ಅಂತಾ ಅಲವತ್ತುಕೊಳ್ತೇವೆ. ಈಗಷ್ಟೇ ಇಟ್ಟಿದ್ದ ಸಿಹಿ ತಿಂಡಿ ಇರುವೆ ಪಾಲಾಯ್ತು ಎಂದಾ ಗೊಣಗ್ತೇವೆ. ಮನೆ ಬಳಿ ಇರುವೆ ಬರಬಾರದು ಅಂದ್ರೆ ಖರ್ಚಿಲ್ಲದ ಈ ಟಿಪ್ಸ್ ಅನುಸರಿಸಿ.
ನೋಡಲು ತುಂಬಾ ಚಿಕ್ಕದಾಗಿದ್ದರೂ ಇರುವೆ (Ants)ಗಳ ಕಾಟ ಹೆಚ್ಚಿರುತ್ತದೆ. ಒಂದೆರಡು ಇರುವ ಬಂದ್ರೆ ಸಮಸ್ಯೆಯಿಲ್ಲ. ಸಾಲುಗಟ್ಟಿ ನೂರಾರು ಇರುವೆಗಳು ದಾಳಿ ಮಾಡಿದರೆ ಕಥೆ ಮುಗಿದಂತೆ. ಅಡುಗೆ ಮನೆ (Kitchen)ಯಲ್ಲಿಟ್ಟಿರುವ ಸಿಹಿ ತಿಂಡಿಗಳಿಗೆ ಮುತ್ತಿಗೊಳ್ಳುವ ಈ ಇರುವೆಗಳು ಅನೇಕ ಬಾರಿ ಹಾಲನ್ನೂ ಬಿಡುವುದಿಲ್ಲ. ಮನೆಯಲ್ಲಿರುವ ಸಕ್ಕರೆಯಿಂದ ಹಿಡಿದು ಸಿಹಿ ಪದಾರ್ಥಗಳು ಎಲ್ಲಿವೆ ಎಂಬ ಸುಳಿವು ಇರುವೆಗೆ ಅದು ಹೇಗೆ ಸಿಗುತ್ತೆ ಗೊತ್ತಿಲ್ಲ. ಎಲ್ಲ ಬಳಗದೊಂದಿಗೆ ಆಹ್ವಾನಿಸದೆ ಇದ್ದರೂ ಅತಿಥಿಗಳಂತೆ ಬಂದ್ಬಿಡುತ್ತದೆ. ಕೆಲ ಇರುವೆಗಳ ಕಡಿಯುತ್ತವೆ. ಅವು ಕಡಿಯುವುದ್ರಿಂದ ಉರಿ,ತುರಿಕೆ (Itching )ಸೇರಿದಂತೆ ಚರ್ಮದ ಸಮಸ್ಯೆ ಕಾಡುತ್ತದೆ.
ಮನೆ (Home)ಗೆ ಬಂದ ಇರುವೆಯನ್ನು ಹೊರಗೆ ಹಾಕುವುದು ತುಂಬಾ ಕಷ್ಟ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅನೇಕ ಕೀಟನಾಶಕಗಳು ಲಭ್ಯವಿವೆ. ಅವುಗಳನ್ನು ಸಿಂಪಡಿಸಿದರೆ ಇರುವೆಗಳು ಸಾಯುತ್ತವೆ. ಆದರೆ ಕೆಲವರು ಕೆಂಪಿರುವೆ(red ants) ಸೇರಿದಂತೆ ಇರುವೆಗಳನ್ನು ಸಾಯಿಸಲು ಮನಸ್ಸು ಮಾಡುವುದಿಲ್ಲ. ಅವುಗಳನ್ನು ಮನೆಯಿಂದ ಹೊರಹಾಕಲು ಬಯಸುತ್ತಾರೆ. ನೀವೂ ಇರುವೆಯನ್ನು ಸಾಯಿಸದೆ ಮನೆಯಿಂದ ಹೊರ ಹಾಕಲು ಬಯಸಿದ್ದರೆ ಕೆಲವೊಂದು ಮನೆ ಮದ್ದನ್ನು ಬಳಸಬಹುದು. ಅದ್ರ ಮೂಲಕ ಸುಲಭವಾಗಿ ಇರುವೆಗಳಿಗೆ ಮನೆ ಹೊರಗಿನ ದಾರಿ ತೋರಿಸಬಹುದು.
ಮನೆಯಿಂದ ಕೆಂಪು ಇರುವೆಗಳನ್ನು ಹೊರಗೆ ಹಾಕಲು ಈ ಐದು ಉಪಾಯಗಳಲ್ಲಿ ಒಂದನ್ನು ಪ್ರಯೋಗಿಸಿ.
ಅರಿಶಿನ ಮತ್ತು ಹರಳೆಣ್ಣೆ : ಅಡುಗೆ ಮನೆಯಲ್ಲಿ ಅರಿಶಿನ ಹಾಗೂ ಹರಳೆಣ್ಣೆ ಎರಡೂ ಇರುತ್ತದೆ. ಸಮಾನ ಪ್ರಮಾಣದಲ್ಲಿ ಅರಿಶಿನ ಮತ್ತು ಹರಳೆಣ್ಣೆಯನ್ನು ಬೆರೆಸಬೇಕು. ಈ ಮಿಶ್ರಣವನ್ನು ಮನೆಯಲ್ಲಿ ಇರುವೆಗಳು ಬರುವ ಸ್ಥಳಗಳಲ್ಲಿ ಸಿಂಪಡಿಸಬೇಕು. ಮಿಶ್ರಣ ಸಿಂಪಡಿಸಿದ ಕೆಲವೇ ಕ್ಷಣದಲ್ಲಿ ಇರುವೆಗಳು ಮಾಯವಾಗುತ್ತವೆ. ಈ ವಿಧಾನವು ಪರಿಣಾಮಕಾರಿ ಎಂದು ಸಾಬೀತಾಗಿದೆ.
ಕಿತ್ತಳೆ : ಕಿತ್ತಳೆ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲ ಇರುವೆ ಓಡಿಸಲೂ ಪ್ರಯೋಜನಕಾರಿ. ಕಿತ್ತಳೆ ರಸಕ್ಕೆ ಸ್ವಲ್ಪ ಬೆಚ್ಚಗಿನ ನೀರನ್ನು ಬೆರೆಸಬೇಕು. ನಂತರ ಇರುವೆಗಳು ಬರುವ ಸಾಧ್ಯತೆ ಇರುವ ಸ್ಥಳಗಳಲ್ಲಿ ಇದನ್ನು ಸಿಂಪಡಿಸಬೇಕು. ಸಾಮಾನ್ಯವಾಗಿ ಮನೆಯ ಕೆಲ ಭಾಗಗಳಲ್ಲಿ ಮಾತ್ರ ಇರುವೆಗಳು ಬರುತ್ತವೆ. ಇರುವೆ ಎಲ್ಲಿಂದ ಬರ್ತಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಕಿತ್ತಳೆ ಹಣ್ಣಿನ ರಸವನ್ನು ಮಾತ್ರವಲ್ಲ ನೀವು ಬಯಸಿದರೆ, ಕಿತ್ತಳೆ, ನಿಂಬೆ ಮುಂತಾದ ಸಿಟ್ರಿಕ್ ಹಣ್ಣುಗಳ ಸಿಪ್ಪೆಯನ್ನು ಸಹ ಬಳಸಬಹುದು. ಸಿಪ್ಪೆಯನ್ನು ಇರುವೆ ಬರುವ ಜಾಗಕ್ಕೆ ಇಟ್ಟರೆ ಸಾಕು. ಅದರ ವಾಸನೆಗೆ ಇರುವೆಗಳು ಅಲ್ಲಿಂದ ಓಡಿ ಹೋಗುತ್ತವೆ.
ಸ್ಲಿಮ್ ಆ್ಯಂಡ್ ಫಿಟ್ ಆಗಬೇಕೆಂದರೆ ಸ್ಟೀಮ್ ಕುಕ್ಕಿಂಗ್ ಬೆಸ್ಟ್
ಬೆಳ್ಳುಳ್ಳಿ : ಬೆಳ್ಳುಳ್ಳಿ ವಾಸನೆ ಅನೇಕರಿಗೆ ಇಷ್ಟವಾಗುವುದಿಲ್ಲ. ಇರುವೆಗೂ ಬೆಳ್ಳುಳ್ಳಿಯ ವಾಸನೆ ಇಷ್ಟವಾಗುವುದಿಲ್ಲ. ಬೆಳ್ಳುಳ್ಳಿ ವಾಸನೆಯಿಂದ ಇರುವೆಗಳು ಓಡಿಹೋಗುತ್ತವೆ. ಆದ್ದರಿಂದ ಬೆಳ್ಳುಳ್ಳಿಯನ್ನು ಪುಡಿಮಾಡಿ ರಸವನ್ನು ಹೊರತೆಗೆಯಿರಿ. ಅದನ್ನು ಎಲ್ಲಾ ಸ್ಥಳಗಳಿಗೆ ಸಿಂಪಡಿಸಿ. ಹೀಗೆ ಮಾಡುವುದರಿಂದ ಕೆಂಪು ಇರುವೆಗಳು ಕಣ್ಣಿಗೆ ಕಾಣದಂತೆ ಕಾಲ್ಕಿಳುತ್ತವೆ.
ಉಪ್ಪು : ಅನೇಕರು ಮನೆಯನ್ನು ಸ್ವಚ್ಛಗೊಳಿಸುವ ವೇಳೆ ನೀರಿಗೆ ಉಪ್ಪನ್ನು ಹಾಕುತ್ತಾರೆ. ಇರುವೆ ಕಾಟವಿದೆ ಎನ್ನುವವರು ನೀರಿಗೆ ಉಪ್ಪು ಸೇರಿಸಿ ಸ್ವಚ್ಛಗೊಳಿಸುವುದರಿಂದ ಮನೆಗೆ ಇರುವೆಗಳು ಬರುವುದಿಲ್ಲ. ಮನೆಯಲ್ಲಿ ಈಗಾಗಲೇ ಇರುವೆಗಳಿದ್ದರೆ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ,ಇರುವೆ ಇರುವ ಜಾಗಕ್ಕೆ ಸಿಂಪಡಿಸಿ.
ವಿನೆಗರ್ : ಇರುವೆಗಳನ್ನು ಓಡಿಸಲು ನೀವು ಯಾವುದೇ ರೀತಿಯ ವಿನೆಗರ್ ಬಳಸಬಹುದು. ವಿನೆಗರ್‌ಗೆ ಸಮಾನ ಪ್ರಮಾಣದಲ್ಲಿ ನೀರನ್ನು ಬೆರೆಸಬೇಕು. ಇದನ್ನು ಇರುವೆಗಳಿರುವ ಜಾಗಕ್ಕೆ ಅಥವಾ ಇರುವೆಗಳು ಬರುವ ಜಾಗಕ್ಕೆ ಹಾಕಬೇಕು. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಹೀಗೆ ಮಾಡಬೇಕು. ನಾಲ್ಕೈದು ದಿನ ಹೀಗೆ ಮಾಡಿದರೆ ಇರುವೆಗಳು ಮತ್ತೆ ಇಲ್ಲಿಗೆ ಬರುವುದಿಲ್ಲ.