ಈಗ ದಿನಾ ದಿನ ಮಾಡಿ ಪುದೀನಾ ಸ್ಪೆಷಲ್, ಬೇಸಿಗೆಗೆ ಬೆಸ್ಟ್ ಮದ್ದು

By Suvarna NewsFirst Published Mar 11, 2020, 3:22 PM IST
Highlights

ಸೊಪ್ಪುಗಳಲ್ಲೇ ವಿಶಿಷ್ಠ ಪರಿಮಳ ಹೊಂದಿ, ಅದರ ರುಚಿಯಲ್ಲೇ ಔಷಧೀಯ ಗುಣಗಳಿರುವುದನ್ನು ಸಾರಿ ಹೇಳಬಲ್ಲ ಛಾತಿ ಪುದೀನಾದ್ದು. ಪುದೀನಾದ ಔಷಧೀಯ ಗುಣಗಳ ಲಾಭ ಪಡೆಯಲು ಅದನ್ನು ಸಾಧ್ಯವಾದಷ್ಟು ಅಡುಗೆಯಲ್ಲಿ ಬಳಸಿ. 

ಪುದೀನಾ ರುಚಿಯಲ್ಲಿ ಆಹ್ಲಾದಕಾರಿ, ಪರಿಮಳ ಚೇತೋಹಾರಿ. ಹಲವಾರು ಆರೋಗ್ಯ ಲಾಭಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಈ ಪುದೀನಾ ಬೇಸಿಗೆಗೆ ತಂಪು ಪಾನೀಯವಾಗಿ ಹೊಟ್ಟೆ ಸೇರಿದರೆ ಉಳಿದಂತೆ ಚಟ್ನಿ, ಬಿರಿಯಾನಿ ಇತ್ಯಾದಿ ಅಡುಗೆಯ ರೂಪ ಪಡೆದು ರಿಫ್ರೆಶ್ ಮಾಡುತ್ತದೆ. ಯಾವುದೇ ಅಡುಗೆ ತಯಾರಿಸಿದರೂ ಅದರಲ್ಲಿ ತನ್ನತನವನ್ನು ತೋರುವ ವ್ಯಕ್ತಿತ್ವ ಅದರದು. ಉತ್ತಮ ಆ್ಯಂಟಿಆಕ್ಸಿಡೆಂಟ್‌ ಆಗಿದ್ದು, ಜೀರ್ಣಕ್ರಿಯೆ ಸರಾಗಗೊಳಿಸುವ ಜೊತೆಗೆ ದೇಹವನ್ನು ತಂಪು ಮಾಡುತ್ತದೆ ಪುದೀನಾ. ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಶೀತಕ್ಕೆ ಔಷಧವಾಗಿ, ತೂಕ ಇಳಿಸಲು ನೆರವಾಗಿ, ಚರ್ಮದ ಕಾಂತಿ ಹೆಚ್ಚಿಸುತ್ತದೆ ಪುದೀನಾ. ಇಂಥ ಔಷಧೀಯ ಸೊಪ್ಪನ್ನು ಆಹಾರದಲ್ಲಿ ಹೇಗೆಲ್ಲ ಬಳಸಬಹುದೆಂಬುದಕ್ಕೆ ಕೆಲ ರೆಸಿಪಿಗಳು ಇಲ್ಲಿವೆ. 

ಮಿಂಟ್ ಲಸ್ಸಿ
ಬೇಕಾಗುವ ಪದಾರ್ಥಗಳು
ಪುದೀನಾ ಅರ್ಧ ಕಟ್ಟು, ಮೊಸರು 3 ದೊಡ್ಡ ಲೋಟ, ಸಕ್ಕರೆ 5 ಚಮಚ, ಜೀರಿಗೆ 1 ಚಮಚ
ಮಾಡುವ ವಿಧಾನ
ಪುದೀನಾ, ಜೀರಿಗೆ, ಮೊಸರು ಹಾಗೂ ಸಕ್ಕರೆಯನ್ನು ಮಿಕ್ಸ‌ರ್‌ನಲ್ಲಿ ಚೆನ್ನಾಗಿ ಬ್ಲೆಂಡ್ ಮಾಡಿ. ಮೇಲಿನಿಂದ ಪುದೀನಾ ಸೊಪ್ಪನ್ನಿಟ್ಟು ಅಲಂಕರಿಸಿದರೆ ಪುದೀನಾ ಲಸ್ಸಿ ಸವಿಯಲು ಸಿದ್ಧ. 

***
ಪುದೀನಾ ತಂಬುಳಿ

ಬೇಕಾಗುವ ಪದಾರ್ಥಗಳು
ಪುದೀನಾ ಸೊಪ್ಪು 1 ಕಪ್, ಕಾಳು ಮೆಣಸು 8-10, ತುರಿದಿಟ್ಟುಕೊಂಡ ಕಾಯಿ ಅರ್ಧ ಕಪ್, ಮಜ್ಜಿಗೆ 2 ಬಟ್ಟಲು, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ ಜೀರಿಗೆ, ಸಾಸಿವೆ, ಒಣಮೆಣಸು ಹಾಗೂ ಕರಿಬೇವು.

ಮಾಡುವ ವಿಧಾನ
ಪುದೀನಾ ಸೊಪ್ಪನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ನಂತರ ಸೊಪ್ಪನ್ನು ಮಿಕ್ಸಿಗೆ ಹಾಕಿಕಾಯಿ ಹಾಗೂ ಕಾಳುಮೆಣಸನ್ನು ಸೇರಿಸಿ ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಪಾತ್ರೆಗೆ ವರ್ಗಾಯಿಸಿ ಅದಕ್ಕೆ ಮಜ್ಜಿಗೆ ಸೇರಿಸಿ ಅಗತ್ಯವಿರುವಷ್ಟು ಉಪ್ಪು ಹಾಕಿ. ಈಗ ಒಗ್ಗರಣೆ ಕೊಡಿ. ಪುದೀನಾ ತಂಬುಳಿ ರೆಡಿ. ಅನ್ನದೊಂದಿಗೆ ಕಲೆಸಿ ತಿನ್ನಬಹುದು ಇಲ್ಲವೇ ಹಾಗೇ ಕುಡಿಯಬಹುದು.

ಎಲೆಲೆ ಎಲೆಯೇ ಎಂದು ಮೂಗು ಮುರಿಯದಿರಿ.....
***

ಪುದೀನಾ ರೈಸ್
ಬೇಕಾಗುವ ಪದಾರ್ಥಗಳು

ಅಕ್ಕಿ 1 ಕಪ್, ಪುದೀನಾ 2-3 ಕಟ್ಟು, ಈರುಳ್ಳಿ 2, ಹಸಿಮೆಣಸು 6, ಕಾಯಿ ನಾಲ್ಕು ಚಮಚ, ಹುಣಸೆ ಹುಳಿ 1 ಗೋಲಿ ಗಾತ್ರ, ಎಣ್ಣೆ 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ ಸಾಸಿವೆ, ಉದ್ದು, ಕಡಲೇಬೇಳೆ, ಗೋಡಂಬಿ, ಕರಿಬೇವು. 
ಮಾಡುವ ವಿಧಾನ
ಅಕ್ಕಿಯನ್ನು ಚೆನ್ನಾಗಿ ತೊಳೆದು ಅರ್ಧ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಳಿಕ ಇದನ್ನು ಕುಕ್ಕರ್‌ನಲ್ಲಿ ಬೇಯಿಸಿ ಅನ್ನ ತಯಾರಿಸಿಟ್ಟುಕೊಳ್ಳಿ. 
ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಮೆಣಸಿನಕಾಯಿ ಹಾಗೂ ಪುದೀನಾ ಹಾಕಿ ಚೆನ್ನಾಗಿ ಹುರಿಯಿರಿ. ಸೊಪ್ಪು ಚೆನ್ನಾಗಿ ಬಾಡಿದ ಬಳಿಕ ತೆಂಗಿನ ತುರಿ ಹಾಕಿ 30 ಸೆಕೆಂಡ್ ಹುರಿಯಿರಿ. ಸ್ಟೌ ಆಫ್ ಮಾಡಿ ಆರಲು ಬಿಡಿ. ಇದು ಆರಿದ ಬಳಿಕ ನೀರಿನಲ್ಲಿ ನೆನೆಸಿಟ್ಟು ಹುಣಸೆಹುಳಿ ಹಾಗೂ ಉಪ್ಪು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. 
ಬಾಣಲೆಯಲ್ಲಿ ಮತ್ತೆ ಸ್ವಲ್ಪ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ. ಚಟಪಟಗುಟ್ಟಿದ ಬಳಿಕ ಉದ್ದು, ಕಡಲೇಬೇಳೆ, ಗೋಡಂಬಿ, ಕರಿಬೇವು ಹಾಕಿ ಹುರಿಯಿರಿ. ಗೋಂಡಬಿ ಕೆಂಪಗಾಗುತ್ತಿದ್ದಂತೆಯೇ, ಸಣ್ಣದಾಗಿ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ಕೆಂಪಗಾಗುವವರೆಗೆ ಹುರಿಯಿರಿ. ಇದಕ್ಕೆ ರುಬ್ಬಿದ ಪುದೀನಾ ಪೇಸ್ಟ್ ಸೇರಿಸಿ ಸ್ವಲ್ಪ ಬಿಸಿಯಾಗುವವರೆಗೆ ಹುರಿದು ಸ್ಟೌ ಆಫ್ ಮಾಡಿ. ಎಷ್ಟು ಸ್ಟ್ರಾಂಗ್ ಬೇಕೋ ಅದಕ್ಕೆ ಸರಿಯಾಗಿ ಅನ್ನ ಹಾಕಿ ಕಲೆಸಿಕೊಳ್ಳಿ. ಸಂಡೇ ಮಧ್ಯಾಹ್ನದ ಊಟಕ್ಕೆ ಅಥವಾ ಬಾಕ್ಸ್‌ಗೆ ಇದು ಹೇಳಿ ಮಾಡಿಸಿದ ರೆಸಿಪಿ. 

ಡಯಟ್‌ನಲ್ಲಿ ಶುಗರ್ ಡಿಟಾಕ್ಸ್ ಮಾಡಿದರೆ ಏನೆಲ್ಲ ಲಾಭಗಳಿರಬಹುದು?...
 

***

ಪುದೀನಾ ರೋಟಿ
ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು 2 ಕಪ್, ಪುದೀನಾ ಸೊಪ್ಪು 1 ಕಟ್ಟು, ತುಪ್ಪ 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ
ಪುದೀನಾವನ್ನು ಸ್ವಲ್ಪೇ ಸ್ವಲ್ಪ ನೀರು ಹಾಕಿ ರುಬ್ಬಿಟ್ಟುಕೊಳ್ಳಿ. ಗೋಧಿಹಿಟ್ಟು, ತುಪ್ಪ, ಉಪ್ಪನ್ನು ಸ್ವಲ್ಪ ನೀರಿನೊಂದಿಗೆ ಚೆನ್ನಾಗಿ ನಾದಿಕೊಳ್ಳಿ. ಇದಕ್ಕೆ ಪುದೀನಾ ರಸ ಸೇರಿಸಿ ಮತ್ತೆ ನಾದಿಕೊಳ್ಳಿ. ಹಿಟ್ಟನ್ನು 30 ನಿಮಿಷ ಪಕ್ಕಕ್ಕಿಡಿ. ಬಳಿಕ ಒಂದೇ ಗಾತ್ರದ ಉಂಡೆ ಕಟ್ಟಿ ಲಟ್ಟಿಸಿ, ತವಾಲ್ಲಿ ತುಪ್ಪ ಹಾಕಿ ಬೇಯಿಸಿ. ಚಟ್ನಿ ಅಥವಾ ಪಲ್ಯದೊಂದಿಗೆ ಸವಿಯಲು ಬಲು ರುಚಿ.

click me!