ರೆಸ್ಟೋರೆಂಟ್‌ಗಳಲ್ಲಿ ಟುಡೇಸ್ ಸ್ಪೆಷಲ್ ಬೋರ್ಡ್ ಏಕಿರುತ್ತೆ ಗೊತ್ತಾ?

By Suvarna NewsFirst Published Mar 11, 2020, 2:41 PM IST
Highlights

ಪ್ರತಿ ರೆಸ್ಟೋರೆಂಟ್‌ಗಳಲ್ಲೂ ಕೆಲ ಸೀಕ್ರೆಟ್‌ಗಳಿರುತ್ತವೆ. ಗ್ರಾಹಕರಿಗೆ ಆ ರಹಸ್ಯಗಳು ತಿಳಿಯುವುದು ಯಾವ ರೆಸ್ಟೋರೆಂಟ್‌ಗೂ ಇಷ್ಟವಿರುವುದಿಲ್ಲ. ನೀವು ಟೇಬಲ್ ಎದುರು ಕುಳಿತು ಫುಡ್ ಆರ್ಡರ್ ಮಾಡಿ ಕಾಯುವಾಗ ಅಲ್ಲಿ ಹಲವಷ್ಟು ಸಂಗತಿಗಳು ನಡೆಯುತ್ತಿರುತ್ತವೆ. ಅವು ಸಾಮಾನ್ಯವಾಗಿ ಯಾರಿಗೂ ಗಮನಕ್ಕೆ ಬರುವುದಿಲ್ಲ. 

ರೆಸ್ಟೋರೆಂಟ್‌ಗಳಿಗೆ ಹೋದಾಗ ಅತ್ಯುತ್ತಮ ಸರ್ವೀಸ್ ಹಾಗೂ ಅತ್ಯುತ್ತಮ ಆಹಾರ ಪ್ರತಿಯೊಬ್ಬರ ನಿರೀಕ್ಷೆ. ಒಳಗೆ ಕಾಲಿಡುತ್ತಿದ್ದಂತೆ ರೆಸ್ಟೋರೆಂಟ್‌ನ ಆ್ಯಂಬಿಯನ್ಸ್ ಹಾಗೂ ಸರ್ವರ್‌ಗಳ ಸರ್ವೀಸ್‌ ಮೇಲೆ ನಮ್ಮ ಸಂತೋಷ ಅಥವಾ ಕಿರಿಕಿರಿ ಅವಲಂಬಿತವಾಗಿರುತ್ತದೆ. ನಾವು ಹೇಗೆ ರೆಸ್ಟೋರೆಂಟ್ ಒಂದರ ಒಳ ಹೋದಾಗ ಅಲ್ಲಿನ ಸರ್ವೀಸ್ ಹಾಗೂ ಆಹಾರ ರುಚಿಯನ್ನು ಜಜ್ಡ್ ಮಾಡುತ್ತಿರುತ್ತೇವೋ, ಹಾಗೆಯೇ ಹೊಟೇಲ್ ಸ್ಟಾಫ್ ಕೂಡಾ ನಮ್ಮನ್ನು ಜಡ್ಜ್ ಮಾಡುತ್ತಿರುತ್ತಾರೆ. ಅಂದ ಹಾಗೆ ಈ ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ತಿಳಿಯದಂಥ ಹಲವು ರಹಸ್ಯಗಳನ್ನು ನಿಭಾಯಿಸುತ್ತಿರುತ್ತವೆ. ಅವುಗಳಲ್ಲಿ ಕೆಲವು ಇಲ್ಲಿವೆ ನೋಡಿ.

ಟುಡೇಸ್ ಸ್ಪೆಷಲ್
ಸಾಮಾನ್ಯವಾಗಿ ಬಹುತೇಕ ಹೋಟೆಲ್‌ಗಳಲ್ಲಿ ಟುಡೇಸ್ ಸ್ಪೆಷಲ್ ಬೋರ್ಡ್ ಪ್ರತಿ ದಿನ ಹಾಕಿರುತ್ತಾರೆ. ಸ್ಪೆಷಲ್ ಎಂದ ಕೂಡಲೇ ಗ್ರಾಹಕರು ಅದರತ್ತ ಆಕರ್ಷಿತರಾಗುವುದು ಸಾಮಾನ್ಯ. ಅಂದಿನ ಸ್ಪೆಷಲ್ ಏನಿದೆಯೋ ಅದನ್ನೇ ಹೆಚ್ಚು ಜನರು ಆರ್ಡರ್ ಮಾಡುತ್ತಾರೆ. ಆದರೆ, ನಿಮಗೆ ಗೊತ್ತಾ, ಬಹುತೇಕ ಕಡೆ, ಹಿಂದಿನ ದಿನ ಉಳಿದಿದ್ದು, ಹಳಸಲು ಹತ್ತಿರವಾಗಿದ್ದು, ಎಕ್ಸ್‌ಪೈರಿ ಡೇಟ್ ಹತ್ತಿರ ಬಂದಿದ್ದು ಹೀಗೆ ತಕ್ಷಣದಲ್ಲಿ ಯಾವುದು ಖರ್ಚಾಗಬೇಕಿರುತ್ತೋ,  ಅದನ್ನೇ ಟುಡೇಸ್ ಸ್ಪೆಷಲ್ ಹೆಸರಿನಲ್ಲಿ ಹಾಕಿ ಖಾಲಿ ಮಾಡುವ ಪ್ಲ್ಯಾನ್ ಇರುತ್ತದೆ. ನೀವು ಚಪ್ಪರಿಸಿಕೊಂಡು ತಿಂದು ಹಣ ತೆತ್ತದ್ದು ಹಳೆಯದಕ್ಕೆ ಎಂದು ತಿಳಿದರೆ, ಮನೆಯಲ್ಲಿರುವ ತಂಗಳನ್ನವೇ ಹೆಚ್ಚು ಆರೋಗ್ಯಕಾರಿಯಾಗಿ ಕಾಣುತ್ತದೆ. 



ರೆಸ್ಟೋರೆಂಟ್ ನಿಮ್ಮ ಮನೆ ಎಂದು ವರ್ತಿಸುವುದು ಸರ್ವರ್‌ಗಳಿಗೆ ಇಷ್ಟವಿಲ್ಲ
ನಿಮ್ಮ ಫೇವರೇಟ್ ಪುಡ್ ಆರ್ಡರ್ ಮಾಡಿ ಕಾಲನ್ನು ಕೌಚ್ ಮೇಲಿಟ್ಟು ಆರಾಮಾಗಿ ಕುಳಿತು, ಸರ್ವರನ್ನು ಕರೆದು ಮ್ಯೂಸಿಕ್ ವಾಲ್ಯೂಮ್ ಕಡಿಮೆ ಮಾಡಲು ಹೇಳಿ, ಎಸಿ ಸ್ವಲ್ಪ ಹೆಚ್ಚಿಸಲು ಹೇಳಿ ಆ ಹೋಟೆಲನ್ನು ನಿಮ್ಮ ಮನೆ ರೀತಿ ಟ್ರೀಟ್ ಮಾಡುತ್ತೀರಲ್ಲಾ, ಈ ಸಂದರ್ಭದಲ್ಲಿ ಸರ್ವರ್‌ಗಳನ್ನು ನಿಮ್ಮ ವೈಯಕ್ತಿಕ ಕೆಲಸದವರಂತೆಯೂ ನಡೆಸಿಕೊಂಡಿರುತ್ತೀರಿ. ಇದು ಖಂಡಿತಾ ಒಳ್ಳೆಯ ನಡೆಯಲ್ಲ. ನೀವು ಆಹಾರಕ್ಕೆ ಹಣ ಕೊಡುತ್ತೀರಿ ಎಂಬುದು ನಿಜವಷ್ಟೇ, ಹಾಗಂಥ ಈ ಯಜಮಾನಿಕೆಗಳು ಹೋಟೆಲ್‌ನ ಯಾವ ಸ್ಟಾಫ್‌ಗೂ ಇಷ್ಟವಾಗುವುದಿಲ್ಲ. ಅಲ್ಲದೆ, ಅಲ್ಲಿ ಬೇರೆ ಗ್ರಾಹಕರೂ ಇರುತ್ತಾರೆ, ಅವರ ಇಷ್ಟಕಷ್ಟಗಳೂ ಬೇರೆ ಇರುತ್ತವೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕಲ್ಲವೇ?

ರೆಗುಲರ್ ಭೇಟಿ
ಆ ಒಂದು ರೆಸ್ಟೋರೆಂಟ್‌ಗೆ ರೆಗುಲರ್ ಗ್ರಾಹಕನಾದರೆ, ಹೋಟೆಲ್ ಸ್ಟಾಫ್‌ಗೆ ನಿಮ್ಮ ಮೇಲೆ ಹೇಳಿಕೊಳ್ಳದ ಪ್ರೀತಿಯೊಂದಿರುತ್ತದೆ. ಅವರು ಅಪರೂಪಕ್ಕೊಮ್ಮೆ ಸ್ವೀಟನ್ನೋ, ಜ್ಯೂಸನ್ನೋ ಫ್ರೀಯಾಗಿ ಕೊಟ್ಟು ಈ ಕುರಿತ ತಮ್ಮ ಪ್ರೀತಿ ವ್ಯಕ್ತಪಡಿಸಬಹುದು. ಅಲ್ಲದೆ, ನಿಮ್ಮನ್ನು ಒಂದು ಬಾರಿ ಬಂದು ಹೋಗುವ ಗ್ರಾಹಕನಿಗಿಂತ ಹೆಚ್ಚು ವಿಶೇಷವಾಗಿ ನಡೆಸಿಕೊಳ್ಳಲಾಗುತ್ತಿರುತ್ತದೆ. 

ಅಸ್ತವ್ಯಸ್ತ ಅಡಿಗೆಮನೆ
ನೀವು ಎಷ್ಟೇ ದೊಡ್ಡ ಹೋಟೆಲ್‌ಗೆ ಹೋಗಿ, ಪೀಕ್ ಅವರ್ಸ್ ಎಂದರೆ, ಅಲ್ಲಿನ ಅಡುಗೆಕೋಣೆ ರಣರಂಗವಾಗಿರುತ್ತದೆ. ಆದರೆ, ಗ್ರಾಹಕರಿಗೆ ಕಾಣುವಷ್ಟು ಭಾಗ ಸ್ವಚ್ಛವಾಗಿಯೂ, ಜೋಡಿಸಿದಂತೆಯೂ ಇರುವಂತೆ ನೋಡಿಕೊಳ್ಳಲಾಗುತ್ತದೆ. ರಶ್ ಸಮಯದಲ್ಲಿ ಕಿಚನ್‌ನಲ್ಲಿ ಜೋರು ಜೋರು ಕೂಗಾಟ ಕೇಳಿಬರುವುದೂ ಸಾಮಾನ್ಯ. ಅಂಥದ್ದೇನೂ ಗ್ರಾಹಕನಿಗೆ ತೋರಿಬರುತ್ತಿಲ್ಲವೆಂದರೆ, ಆ ರೆಸ್ಟೋರೆಂಟನ್ನು ಬಹಳ ಚೆನ್ನಾಗಿ ನಿಭಾಯಿಸುತ್ತಿದ್ದಾರೆ ಎಂದರ್ಥ. ಹಾಗಾಗಿ, ರೇಟಿಂಗ್ ನೀಡುವಾಗ ಇಂಥವುಗಳ ವಿಷಯದಲ್ಲಿ ಉದಾರತೆ ತೋರುವುದು ಸೌಜನ್ಯ.

ಶುರುವಾಗಿದೆ ಹೊಸ ಫುಡ್ ಟ್ರೆಂಡ್; ನಾನ್‌ ವೆಜ್‌ನಿಂದ ವೆಜ್‌ ಕಡೆ ಬರ್ತಿದ್ದಾರೆ ಸೆಲಬ್ರಿಟಿಗಳು!...
ಟೇಬಲ್ ಹಾಗೂ ಮೆನು ಬಹಳ ಕೊಳಕಾಗಿರುತ್ತದೆ
ರೆಸ್ಟೋರೆಂಟ್ ಒಳಗೆ ನೋಡಲು ಎಷ್ಟೇ ಸ್ವಚ್ಛವಾಗಿ ಕಾಣುತ್ತಿರಲಿ, ಆದರೆ, ಸದಾ ಗಿಜಿಗುಡುವ, ಜನರಿಂದ ತುಂಬಿರುವ ಸ್ಥಳ, ಅದರಲ್ಲೂ ಆಹಾರ ಸೇವಿಸುವ ಸ್ಥಳ ಕಂಡಷ್ಟು ಸ್ವಚ್ಛವಾಗಿರುವುದು ಸಾಧ್ಯವಿಲ್ಲ. ಟೇಬಲ್ ಕ್ಲೀನ್ ಮಾಡುವ ಬಟ್ಟೆ ಎಲ್ಲ ಕೊಳಕನ್ನು ಒರೆಸಿ ಒರೆಸಿ ಬ್ಯಾಕ್ಟೀರಿಯಾಗಳಿಂದ ತುಂಬಿ ತುಳುಕುತ್ತಿರುತ್ತದೆ. ಹೀಗಾಗಿ, ಟೇಬಲ್ ಸ್ವಚ್ಛವಾದಂತೆ ಕಂಡರೂ ಬ್ಯಾಕ್ಟೀರಿಯಾಗಳು ಹರಡುತ್ತವೆ. ಇನ್ನು ಬಂದವರೆಲ್ಲ ಮುಟ್ಟಿ ಬಿಡುವ ಆ ಮೆನು ಕೂಡಾ ಬ್ಯಾಕ್ಟೀರಿಯಾಗಳಿಂದ ತುಂಬಿರುತ್ತದೆ. ಇಷ್ಟೇ ಅಲ್ಲದೆ, ಟೇಬಲ್ ಮೇಲೆ ಇರುವ ಸಾಸ್, ಉಪ್ಪು ಹಾಗೂ ಪೆಪ್ಪರ್ ಡಬ್ಬಿಗಲು ಕೂಡಾ ಕ್ರಿಮಿಗಳಿಂದ ತುಂಬಿರುತ್ತವೆ. ಅವು ಮುಟ್ಟಲು ಕೂಡಾ ಅಂಟಂಟಾಗಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಹೀಗಾಗಿ, ಟೇಬಲ್ ಅಥವಾ ಮೆನು ಮುಟ್ಟಿದ ಬಳಿಕ ಕೈ ತೊಳೆದುಕೊಂಡು ತಿನ್ನುವುದು ಉತ್ತಮ ಅಭ್ಯಾಸ.

ಮೆನುವನ್ನು ನೀವು ಹೆಚ್ಚು ಹಣ ತೆರುವಂತೆ ವಿನ್ಯಾಸಪಡಿಸಲಾಗಿರುತ್ತದೆ.
ಹೌದು, ಮೆನುವಿನ ಬಲಭಾಗದಲ್ಲಿ ಕಾಸ್ಟ್ಲಿ ಆಹಾರಗಳ ಪಟ್ಟಿ ಇರುತ್ತದೆ. ಸಾಮಾನ್ಯವಾಗಿ ಗ್ರಾಹಕರು ಮೆನುವನ್ನು ನೋಡುವಾಗ ಬಲಭಾಗಕ್ಕೇ ಹೆಚ್ಚು ಗಮನ ಹರಿಸುತ್ತಾರೆ. ಇನ್ನು ಅತಿ ಕಾಸ್ಟ್ಲಿಯಾದ ಆಹಾರವನ್ನು ಮೆನುವಿನ ಮೇಲ್ಭಾಗದಲ್ಲಿ ಹಾಕಿದರೆ, ಉಳಿದೆಲ್ಲ ಆಹಾರಗಳ ರೇಟ್ ಕಡಿಮೆ ಎನ್ನುವಂತೆ ಭಾಸವಾಗುತ್ತದೆ. ಹಾಗಾಗಿ, ಹೆಚ್ಚು ರೇಟಿನ ತಿಂಡಿ ಎಲ್ಲಕ್ಕಿಂತ ಮೇಲೆ ಮುದ್ರಿತವಾಗಿರುತ್ತದೆ. 

ಅಬ್ಬಾ ಈ ಎಲೆಯಿಂದ ಇಷ್ಟೆಲ್ಲಾ ಉಪಯೋಗವಿದ್ಯಾ?

click me!