
ಕೊರೋನಾದಿಂದಾಗಿ ಮನೆಮಂದಿಯೆಲ್ಲಾ ಮನೆಯಲ್ಲಿದ್ದಾರೆ. ಶ್ರಾವಣ ಬಂದಿದೆ. ಈ ಹೊತ್ತಲ್ಲಿ ಏನೇನು ಅಡುಗೆ ಮಾಡಿ ಸವಿಯಬಹುದು, ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಅಡುಗೆಗಳ ವಿವರ ಇಲ್ಲಿದೆ.
ಸಿಹಿ ಕಡಬು (ಹಬೆ ಕಡಬು)
ಬೇಕಾಗುವ ಪದಾರ್ಥಗಳು: ತೊಳೆದ ಅಕ್ಕಿಯ ಹಿಟ್ಟು- ಎರಡು ಪಾವು, ಒಂದು ತೆಂಗಿನ ಕಾಯಿ ತುರಿ, ಸಣ್ಣಗೆ ಹೆರೆದಿಟ್ಟಬೆಲ್ಲ- ಅರ್ಧ ಕೆಜಿ, ಏಲಕ್ಕಿ ಪುಡಿ- ಅರ್ಧ ಚಮಚ, ಎಣ್ಣೆ- ಎರಡು ಚಮಚ, ನೀರು- ಒಂದು ಲೋಟ
ವಿಧಾನ: (ಅಕ್ಕಿಯನ್ನು ಎರಡರಿಂದ ಮುರು ಗಂಟೆಗಳ ಕಾಲ ನೆನೆಸಿ, ಒಣಗಿಸಿ, ಹಿಟ್ಟು ಮಾಡಿಟ್ಟುಕೊಳ್ಳಬೇಕು)
ಒಂದು ದಪ್ಪ ತಳದ ಪಾತ್ರೆಯಲ್ಲಿ, ನೀರನ್ನು ಹಾಕಿ ಚನ್ನಾಗಿ ಕಿಡಿಯಲು ಇಡಬೇಕು. ಅದಕ್ಕೆ ಅರ್ಧ ಚಮಚ ಎಣ್ಣೆ, ಒಂದು ಚಿಟಿಕೆ ಉಪ್ಪನ್ನು ಹಾಕಿ, ಆಮೇಲೆ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಹಾಕಿ, ತೊಳೆಸುತ್ತಾ ಬರಬೇಕು, ಹಿಟ್ಟು ಪಾತ್ರೆಗೆ ಅಂಟದಂತೆ ಬಂದಾಗ ಪೂರ್ತಿ ಬೆಂದಿದೆ ಎಂದರ್ಥ. ಈ ಹಂತದಲ್ಲಿ ಅದನ್ನ ಕೆಳಗಿಳಿಸಿಕೊಳ್ಳಬೇಕು.
ನುಗ್ಗೆಸೊಪ್ಪಿನ ದೋಸೆ, ಮೊಟ್ಟೆ ಫ್ರೈ ಟೇಸ್ಟ್ ಮಾಡಿದ್ದೀರಾ? ರೆಸಿಪಿ ಇಲ್ಲಿದೆ...
ಒಂದು ಪಾತ್ರೆಯಲ್ಲಿ ಬೆಲ್ಲ ಮತ್ತು ಕಾಯಿ ಹಾಕಿ ಒಲೆಯ ಮೇಲಿಟ್ಟು, ಬೆಲ್ಲ ಪೂರ್ತಿ ಕರಗಿ, ಹೊಂದಿಕೊಳ್ಳುವ ತನಕ ತಿರುಗಿಸಬೇಕು. ಎರಡೂ ಚನ್ನಾಗಿ ಹೊಂದಿಕೊಂಡಮೇಲೆ ಏಲಕ್ಕಿ ಪುಡಿ ಹಾಕಿ ಕೆಳಗಿಳಿಸಿಕೊಳ್ಳಬೇಕು.
ಬೆಂದ ಹಿಟ್ಟನ್ನು ಚೆನ್ನಾಗಿ ನಾದಿಕೊಂಡು, ಹಾಳೆಗಳನ್ನು ಲಟ್ಟಿಸಿಕೊಳ್ಳಬೇಕು, ಹೂರಣವನ್ನಿಟ್ಟು, ನೀರಿನಿಂದ ಅಂಟಿಸಿ ಕಡುಬು ಮುಚ್ಚಬೇಕು. ಎಣ್ಣೆ ಸವರಿದ ಇಡ್ಲಿ ತಟ್ಟೆಯಲ್ಲಿಟ್ಟು, ಹಬೆಯಲ್ಲಿ ಬೇಯಿಸಿಕೊಂಡರೆ ರುಚಿಯಾದ ಆರೋಗ್ಯಕರ ಕಡುಬು ಸಿದ್ಧ.
ಅಕ್ಕಿ- ಕಡ್ಲೆಬೇಳೆ ಪಾಯಸ
ಬೇಕಾಗುವ ಪದಾರ್ಥಗಳು: ಅಕ್ಕಿ - ಒಂದು ಪಾವು, ಕಡಲೆ ಬೇಳೆ- ಅರ್ಧ ಪಾವು, ಬೆಲ್ಲ- ಒಂದೂ ವರೆ ಅಚ್ಚು, ಹಾಲು- ಅರ್ಧ ಲೋಟ, ಏಲಕ್ಕಿ ಪುಡಿ- ಒಂದು ಚಿಟಿಕೆ
ವಿಧಾನ: ಅಕ್ಕಿ ಮತ್ತು ಕಡಲೆ ಬೇಳೆಯನ್ನು ಒಂದು ಗಂಟೆಗಳ ಕಾಲ ನೆನೆಸಿ, ಮುಳುಗುವಷ್ಟುನೀರು ಹಾಕಿ ಎರಡರಿಂದ ಮೂರು ವಿಷಲ್‌ನ ನಂತರ ಇಳಿಸಿಕೊಳ್ಳಬೇಕು. ಒಂದು ಬಾಣಲೆಗೆ ಬೆಲ್ಲ ಹಾಕಿ ಎರಡು ಚಮಚ ನೀರು ಹಾಕಿ, ಬೆಲ್ಲ ಕರಗಿದ ನಂತರ, ಬೆಂದ ಅಕ್ಕಿ ಕಡಲೇಬೇಳೆಯನ್ನು ಹಾಕಿ, ಕುದಿಸಬೇಕು. ನಂತರ ಹಾಲನ್ನು ಹಾಕಿ ಪಾಯಸದ ಹದ ಬರುವವರೆಗೆ ಕುದಿಸಬೇಕು. ಕೊನೆಗೆ ಏಲಕ್ಕಿ ಪುಡಿಯನ್ನು ಹಾಕಿದರೆ ಪಾಯಸ ಸಿದ್ಧವಾಗುತ್ತದೆ. ಇದು ದೇವಿಗೆ ಅತಿಪ್ರಿಯವಾದ ನೈವೇದ್ಯ ಎಂಬ ಪ್ರತೀತಿ ಇದೆ.
ಚಿಗಳಿ ಉಂಡೆ
ಬೇಕಾಗುವ ಪದಾರ್ಥಗಳು: ಎಳ್ಳು- ಅರ್ಧ ಕೆಜಿ, ಬೆಲ್ಲ- ಅರ್ಧ ಕೆಜಿ, ತುಪ್ಪ - ಎರಡು ಚಮಚ,
ವಿಧಾನ: ಎಳ್ಳನ್ನು ಕೆಂಪಗೆ, ಸುವಾಸನೆ ಬರುವಂತೆ ಹುರಿದು, ಪುಡಿಮಾಡಿಕೊಳ್ಳಬೇಕು, ನಂತರ ಬೆಲ್ಲವನ್ನು ಸಣ್ಣಗೆ ಹೆರೆದು ಮತ್ತೊಮ್ಮೆ ಎಳ್ಳಿನ ಪುಡಿಯೊಂದಿಗೆ ಮಿಕ್ಸಿಗೆ ಹಾಕಿ, ತಪ್ಪದೊಂದಿಗೆ ಉಂಡೆಕಟ್ಟಬೇಕು. ಬಹಳ ರುಚಿಯಾದ, ಸುಲಭವಾದ ಈ ಉಂಡೆ, ದೇವಿಯ ಪ್ರತಿಯೊಂದು ಹಬ್ಬದಲ್ಲೂ ಇರಲೇ ಬೇಕು ಎನ್ನುವಷ್ಟುಪ್ರಸಿದ್ಧಿ.
ತುಪ್ಪದನ್ನ
ಬೇಕಾಗುವ ಪದಾರ್ಥಗಳು: ಕಡಲೆ ಬೇಳೆ - ಎರಡು ಚಮಚ, ಉದ್ದಿನ ಬೇಳೆ- ಎರಡು ಚಮಚ, ಉದ್ದಿನ ಹಪ್ಪಳ - ನಾಲ್ಕು, ಅಕ್ಕಿ - ಒಂದು ಪಾವು, ಕರಿಬೇವು- ಎರಡು ಗರಿ, ಇಂಗು- ಒಂದು ಚಿಟಿಕೆ, ಉಪ್ಪು- ರುಚಿಗೆ ತಕ್ಕಷ್ಟು, ಒಣ ಮೆಣಸಿನಕಾಯಿ- ಎರಡು, ತುಪ್ಪ- ಅರ್ಧ ಬಟ್ಟಲು
ಲೇಸ್ ಸ್ಟೈಲ್‌ನ ಆಲೂಗೆಡ್ಡೆ ಚಿಪ್ಸ್ ರಿಸಿಪಿ ಇಲ್ಲಿದೆ ನೋಡಿ
ವಿಧಾನ: ಹದವಾಗಿ ಅಣ್ಣ ತಯಾರಿಸಿ ಪಕ್ಕಕ್ಕಿಟ್ಟು, ಬಾಣಲೆಗೆ ತುಪ್ಪವನ್ನು ಹಾಕಿ ಸಾಸಿವೆ, ಕರಿಬೇವು, ಒಣಮೆಣಸಿನ ಕಾಯಿ,ಇಂಗು ಹಾಕಬೇಕು ನಂತರ ಹುರಿದು ಪುಡಿ ಮಾಡಿದ ಕಡಲೆಬೇಳೆ, ಉದ್ದಿನ ಬೇಳೆ ಹಾಕಬೇಕು. ನಂತರ ಅದಕ್ಕೆ ಅನ್ನವನ್ನು ಹಾಕಿ ಕೈಯಾಡಿಸಿ, ಸುಟ್ಟಉದ್ದಿನ ಹಪ್ಪಳವನ್ನು ಚೂರುಗಳನ್ನಾಗಿ ಮಾಡಿ ಅನ್ನದ ಜೊತೆ ಕಲಸಬೇಕು. ಇದು ಕೂಡ ಚಿತ್ತಾನ್ನಕ್ಕೆ ಪರ್ಯಾಯವಾಗಿ ಬಳಸಬಹುದಾದ ರುಚಿಯಾದ, ಸಾಂಪ್ರದಾಯಿಕ ಅಡುಗೆ.
-ಆರ್ . ವಿಜಯ ರಾಮಚಂದ್ರ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.