
ಬಿರಿಯಾನಿ, ಪಲಾವ್, ಕುರ್ಮಾ ಅಥವಾ ಸೂಪ್ ಮಾಡುವಾಗ 'ಪಲಾವ್ ಎಲೆ' (Bay Leaf) ಹಾಕುವುದು ನಮಗೆಲ್ಲಾ ರೂಢಿ. ಆದರೆ ಊಟ ಮಾಡುವಾಗ ಆ ಎಲೆ ಬಾಯಿಗೆ ಸಿಕ್ಕಿದರೆ ಅದನ್ನು ಎತ್ತಿ ಹೊರಗೆ ಎಸೆಯುತ್ತೇವೆ. ಹೀಗಾಗಿ ಅನೇಕ ಜನರಿಗೆ ಒಂದು ದೊಡ್ಡ ಅನುಮಾನವಿದೆ. ಈ ಎಲೆಯಿಂದ ಅಡುಗೆಗೆ ನಿಜವಾಗಿಯೂ ಏನಾದರೂ ಉಪಯೋಗವಿದೆಯಾ? ಅಥವಾ ಕೇವಲ ಶೋಕಿಗಾಗಿ ಹಾಕ್ತಾರಾ?. ಆದರೆ, ಫುಡ್ ಸೈನ್ಸ್ (ಆಹಾರ ವಿಜ್ಞಾನ) ಮತ್ತು ಪ್ರಾಯೋಗಿಕ ಟೇಸ್ಟ್ ಟೆಸ್ಟ್ ಪ್ರಕಾರ, ಪಲಾವ್ ಎಲೆ ಕೇವಲ ಹೆಸರಿಗಷ್ಟೇ ಅಲ್ಲ, ಅದು ಅಡುಗೆಯ ಸ್ವಾದವನ್ನೇ (Aroma) ಬದಲಾಯಿಸುವ ಅಪ್ರತಿಮ ಶಕ್ತಿ ಹೊಂದಿದೆ!
ಪಲಾವ್ ಎಲೆಗಳಿಗೆ ಅದರದೇ ಆದ ಸುವಾಸನೆ ನೀಡುವ ಆವಿಯಾಗುವ ಸಂಯುಕ್ತಗಳಿರುತ್ತವೆ (Aromatic compounds). ಆದರೆ ಹೆಚ್ಚಿನವರ ಮನೆಯ ಮಸಾಲೆ ಡಬ್ಬದಲ್ಲಿ ಈ ಎಲೆಗಳು ವರ್ಷಗಟ್ಟಲೆ ಬಿದ್ದಿರುತ್ತವೆ. 6 ತಿಂಗಳು ಕಳೆದರೆ ಎಲೆಯಲ್ಲಿನ ಸುಗಂಧವೆಲ್ಲಾ ಗಾಳಿಯಲ್ಲಿ ಆವಿಯಾಗಿ ಹೋಗಿರುತ್ತದೆ. ಅಂತಹ ಹಳೆಯ ಎಲೆ ಹಾಕಿದರೆ ಅದರಿಂದ ಯಾವುದೇ ರುಚಿ ಸಿಗುವುದಿಲ್ಲ.
ಇದು ಅರಿಶಿನ, ಖಾರದ ಪುಡಿ ಅಥವಾ ಲವಂಗದಂತೆ ಅತಿಯಾದ ಘಾಟು ಅಥವಾ ಗಾಢ ರುಚಿಯನ್ನು ಹೊಂದಿರುವುದಿಲ್ಲ. ಇದರ ಪರಿಮಳ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಇದರ ಇರುವಿಕೆ ತಕ್ಷಣ ಎದ್ದು ಕಾಣಿಸುವುದಿಲ್ಲ.
ಖ್ಯಾತ ಆಹಾರ ವಿಜ್ಞಾನಿ ಹೆರಾಲ್ಡ್ ಮೆಕ್‌ಗೀ ಅವರ ಪ್ರಕಾರ, ಪಲಾವ್ ಎಲೆಯಲ್ಲಿ ನೀಲಗಿರಿ (Eucalyptus), ಲವಂಗ (Clove), ಪೈನ್ ಮತ್ತು ಹೂವಿನ ಸುವಾಸನೆಗಳ ಅದ್ಭುತ ಮಿಶ್ರಣವಿರುತ್ತದೆ. ಹಾಗೆ ನೋಡಿದರೆ ಪಲಾವ್ ಎಲೆಯನ್ನು ತಣ್ಣೀರಿನಲ್ಲಿ 15 ನಿಮಿಷ ಇಟ್ಟರೂ ನೀರಿಗೆ ಯಾವುದೇ ರುಚಿ ಬರುವುದಿಲ್ಲ. ಆದರೆ ಇದೇ ಎಲೆಯನ್ನು ಕುದಿಯುವ ನೀರಿನಲ್ಲಿ ಅಥವಾ ಬಿಸಿ ಎಣ್ಣೆಯಲ್ಲಿ ಹಾಕಿದಾಗ, ಶಾಖಕ್ಕೆ ಅದರೊಳಗಿನ ಆಂಟಿಆಕ್ಸಿಡೆಂಟ್ ಹಾಗೂ ಪರಿಮಳದ ಎಣ್ಣೆಗಳು ಹೊರಬಂದು ಅಡುಗೆಗೆ ಅದ್ಭುತವಾದ ನೈಸರ್ಗಿಕ ಸುಗಂಧ ಮತ್ತು ಲಘು ಕಹಿ ಮಿಶ್ರಿತ 'ಉಮಾಮಿ' (Umami) ರುಚಿಯನ್ನು ನೀಡುತ್ತವೆ.
ವಿಡಿಯೋದಲ್ಲಿ ಶೆಫ್ ಎರಡು ಪ್ರತ್ಯೇಕ ಪಾತ್ರೆಗಳಲ್ಲಿ ಒಂದೇ ಅಳತೆಯ ಅಕ್ಕಿ, ಈರುಳ್ಳಿ, ಬೆಳ್ಳುಳ್ಳಿ ಹಾಗೂ ಅರಿಶಿನ ಹಾಕಿ ಹಳದಿ ರೈಸ್ (Yellow Rice) ತಯಾರಿಸುತ್ತಾರೆ. ಆದರೆ, ಕೇವಲ ಒಂದಕ್ಕೆ ಮಾತ್ರ ‘ಪಲಾವ್ ಎಲೆ’ ಹಾಕಿ, ಇನ್ನೊಂದಕ್ಕೆ ಹಾಕುವುದಿಲ್ಲ.
ಎರಡೂ ಅನ್ನ ಬೆಂದ ನಂತರ ವಾಸನೆ ಮತ್ತು ರುಚಿ ನೋಡಿದಾಗ ಅಚ್ಚರಿಯ ಫಲಿತಾಂಶ ಹೊರಬಂತು! ಪಲಾವ್ ಎಲೆ ಹಾಕಿದ ಅನ್ನದಲ್ಲಿ ಅದ್ಭುತವಾದ ರಾಯಲ್ ಸುವಾಸನೆ ಮತ್ತು ರಿಚ್ ಆದ ರುಚಿ ಇತ್ತು. ಎಲೆ ಹಾಕದ ಅನ್ನ ಕೇವಲ ಸಾದಾ ಅನ್ನದಂತಿತ್ತು. ಅಂದರೆ, ಎಲೆ ಹಾಕಿದಾಗ ಬಾಯಿಗೆ ಕರಾರುವಕ್ಕಾಗಿ ಗೊತ್ತಾಗದಿದ್ದರೂ, ಎಲೆ ಹಾಕದಿದ್ದರೆ ಅಡುಗೆಯಲ್ಲಿ "ಏನೋ ಒಂದು ಮಿಸ್ಸಿಂಗ್" ಎಂಬ ಭಾವನೆ ಬರುವುದು ಖಚಿತ!
ಅಡುಗೆಗೆ ಬಳಸುವ ಮುನ್ನ ಎಲೆಯನ್ನು ಮೂಸಿ ನೋಡಿ. ಅದರಲ್ಲಿ ಯಾವುದೇ ಸುವಾಸನೆ ಇಲ್ಲದಿದ್ದರೆ, ಅದು ಹಳೆಯದಾಗಿದೆ ಎಂದರ್ಥ. ಅದನ್ನು ತಕ್ಷಣ ಎಸೆದು ತಾಜಾ ಎಲೆಗಳನ್ನು ಖರೀದಿಸಿ. ಅಡುಗೆ ಪೂರ್ತಿ ಬೆಂದು ಅದರ ಸುವಾಸನೆ ಇಳಿದ ನಂತರ ಎಲೆಯನ್ನು ತೆಗೆದು ಎಸೆಯಬಹುದು, ಏಕೆಂದರೆ ಅದನ್ನು ನೇರವಾಗಿ ಜಗಿದು ತಿನ್ನಲು ಸಾಧ್ಯವಿಲ್ಲ.
ಪಲಾವ್ ಎಲೆ ಕೇವಲ ತಟ್ಟೆಯ ಅಲಂಕಾರವಲ್ಲ, ಅದು ಅಡುಗೆಯ ಘಮವನ್ನು ಹೆಚ್ಚಿಸುವ 'ಸೈಲೆಂಟ್ ಹೀರೋ'! ಮುಂದಿನ ಬಾರಿ ಬಿರಿಯಾನಿ ಅಥವಾ ಪಲಾವ್ ಮಾಡುವಾಗ ತಾಜಾ ಪಲಾವ್ ಎಲೆ ಬಳಸಲು ಮರೆಯಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.