ಸಾಂಪ್ರದಾಯಿಕ ಇಡ್ಲಿಗೆ ಹೊಸ ರುಚಿ ನೀಡಿ ಆಸಕ್ತಿಕರವಾಗಿಸಿ

By Suvarna NewsFirst Published Jun 29, 2020, 5:00 PM IST
Highlights

ಬಿಳಿ ಇಡ್ಲಿ, ಕರಿ ಇಡ್ಲಿ ಎಂದೆಲ್ಲ ಚರ್ಚಿಸುತ್ತ ರಾಜಕೀಯ ಮಾತಾಡೋದು ಬೇಡ. ನಾವೇನಿದ್ದರೂ ಈ ಲೇಖನವನ್ನು ರುಚಿಕರ ಹಾಗೂ ಆರೋಗ್ಯಕರ ಇಡ್ಲಿಗೆ ಸೀಮಿತಗೊಳಿಸೋಣ. ಅಂದ ಹಾಗೆ ಸ್ಟಫ್ಡ್ ಮಸಾಲಾ ಇಡ್ಲಿ ಸವಿದು ನೋಡಿದ್ದೀರಾ?

ಹುದುಗು ಬರಿಸಿದ ಹಿಟ್ಟಿನಿಂದ ಮಾಡುವ ಇಡ್ಲಿ ಬಹಳ ಆರೋಗ್ಯಕರ. ಪ್ರೋಟೀನ್ ಹಾಗೂ ಕಾರ್ಬೋಹೈಡ್ರೇಟ್‌ಗಳ ಸರಿಯಾದ ಮಿಶ್ರಣ. ಮಗುವಿನಿಂದ ಹಿಡಿದು ರೋಗಿಗಳು, ಮುದುಕರವರೆಗೆ- ಇಡ್ಲಿ ತಿನ್ನಲಾಗದವರು ಸಿಗಲಿಕ್ಕಿಲ್ಲ. ಆದರೆ, ಚಪ್ಪೆಚಪ್ಪೆಯಾದ ಇಡ್ಲಿಯನ್ನು ಎಷ್ಟೂಂತ ತಿನ್ನುವುದು ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಇಡ್ಲಿಗೆ ಹೊಸ ಹೊಸ ರೂಪಗಳನ್ನು ನೀಡಿ ನೋಡಿ. ಹೊಸ ತಿಂಡಿಯೂ ಆಗುತ್ತದೆ, ಆರೋಗ್ಯಕರವಾಗಿಯೂ ಇರುತ್ತದೆ. 

ಫ್ರೈಡ್ ಇಡ್ಲಿ
ಇದು ಸಂಜೆ ಹೊತ್ತಿಗೆ ಬಾಯಾಡಲು ಹೇಳಿ ಮಾಡಿಸಿದಂತಿರುತ್ತದೆ. ಬೆಳಗ್ಗೆ ಮಾಡಿದ ಇಡ್ಲಿ ಉಳಿದಿದ್ದರೆ ಇಡ್ಲಿ ಉಪ್ಪಿಟ್ಟು ಮಾಡೋದು ಗೊತ್ತೇ ಇದೆ. ಈ ಬಾರಿ ಸ್ವಲ್ಪ ವಿಭಿನ್ನವಾದುದನ್ನು ಪ್ರಯತ್ನಿಸಿ. ಫ್ರೈಡ್ ಇಡ್ಲಿ ಮಾಡಿ.

ಹೊಟ್ಟೆ ಕ್ಯಾನ್ಸರ್ ಲಕ್ಷಣಗಳಿವು, ಕಡೆಗಣಿಸಿದ್ರೆ ಕಡೆಗಾಲ ಬಂದಂತೆ!

ಬೇಕಾಗುವ ಸಾಮಗ್ರಿಗಳು: ಇಡ್ಲಿ 6-8, ಖಾರದ ಪುಡಿ 1 ಚಮಚ, ಚಾಟ್ ಮಸಾಲಾ 1 ಚಮಚ, ಸ್ವಲ್ಪ ಉಪ್ಪು, ಕರಿಯಲು ಎಣ್ಣೆ, 

ಮಾಡುವ ವಿಧಾನ: ಫ್ರಿಡ್ಜ್‌ನಲ್ಲಿಟ್ಟು ತಣ್ಣಗಾಗಿಸಿದ ಇಡ್ಲಿಗಳನ್ನು ಚೌಕಾಕಾರದಲ್ಲಿ ಚಾಕುವಿನಿಂದ ಕತ್ತರಿಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಕತ್ತರಿಸಿಟ್ಟುಕೊಂಡ ಇಡ್ಲಿ ಚೂರುಗಳನ್ನು ಹಾಕಿ.  ಕೆಂಬಣ್ಣಕ್ಕೆ ಬಂದ ಮೇಲೆ ಇಡ್ಲಿ ಚೂರುಗಳನ್ನು ತೆಗೆದು ಪೇಪರ್ ಟವೆಲ್ ಮೇಲೆ ಹರಡಿ, ಹೆಚ್ಚಿನ ಎಣ್ಣೆಯನ್ನು ಪೇಪರ್ ಹೀರಿಕೊಳ್ಳಲು ಬಿಡಿ. ಮೇಲಿನಿಂದ ಕೆಂಪು ಮೆಣಸಿನ ಪುಡಿ ಹಾಗೂ ಚಾಟ್ ಮಸಾಲಾ ಉದುರಿಸಿ. ಪಾವ್‌ಬಾಜಿ ಮಸಾಲಾವನ್ನೂ ಹಾಕಬಹುದು. ಟೊಮ್ಯಾಟೋ ಸಾಸ್ ಜೊತೆ ಈ ಇಡ್ಲಿ ಸವಿಯಬಹುದು. 

***

ಸ್ಟಫ್ಡ್ ಮಸಾಲಾ ಇಡ್ಲಿ 
ಇದನ್ನು ಇನ್ಸ್‌ಟೆಂಟ್ ರವೆ ಇಡ್ಲಿ ಹಿಟ್ಟಿನಲ್ಲೂ ಅಥವಾ ಸಾಮಾನ್ಯ ಅಕ್ಕಿ ಅಥವಾ ಅವಲಕ್ಕಿ ಇಡ್ಲಿ ಹಿಟ್ಟಿನಿಂದಲೂ ತಯಾರಿಸಬಹುದು. ಇದೊಂತರಾ ಇಡ್ಲಿ ಸ್ಯಾಂಡ್‌ವಿಚ್ ಇದ್ದ ಹಾಗೆ. 

ಬೇಕಾಗುವ ಸಾಮಗ್ರಿಗಳು: 1 ಕಪ್ ಹುರಿದ ರವೆ, 1 ಕಪ್ ಮೊಸರು, ಅರ್ಧ ಚಮಚ ಸೋಡಾ, ನೀರು ಹಾಗೂ ಉಪ್ಪು ಅಗತ್ಯಕ್ಕೆ ತಕ್ಕಷ್ಟು.
ಆಲೂ ಸ್ಟಫ್ ಮಾಡಲು- 3 ಮಧ್ಯಮ ಗಾತ್ರದ ಆಲೂಗಡ್ಡೆ, 1 ಈರುಳ್ಳಿ, 2 ಹಸಿಮೆಣಸು, 1 ಚಮಚ ಶುಂಠಿ  ಬೆಳ್ಳುಳ್ಳಿ ಪೇಸ್ಟ್, ಅರ್ಧ ಚಮಚ ಅರಿಶಿನ, 8-10 ಕರಿಬೇವಿನ ಸೊಪ್ಪು, ಅರ್ಧ ಚಮಚ ಸಾಸಿವೆ, ಕೊತ್ತಂಬರಿ ಸೊಪ್ಪು, ಅರ್ಧ ಚಮಚ ಜೀರಿಗೆ, 2 ಚಮಚ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು. 

ಮಾಡುವ ವಿಧಾನ: ಆಲೂಗಡ್ಡೆಗಳನ್ನು ಬೇಯಿಸಿಟ್ಟುಕೊಳ್ಳಿ. ಬಾಣಲೆ ಬಿಸಿ ಮಾಡಿ ಎಣ್ಣೆ ಹಾಕಿ, ಸಾಸಿವೆ ಜೀರಿಗೆ ಚಟಪಟಿಸಿ ಕರಿಬೇವು, ಇಂಗು ಸೇರಿಸಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸಣ್ಣದಾಗಿ ಹೆಚ್ಚಿಕೊಂಡ ಹಸಿಮೆಣಸು ಹಾಗೂ ಈರುಳ್ಳಿ ಹಾಕಿ ಅದು ಕೆಂಪಗಾಗುವವರೆಗೆ ಹುರಿಯಿರಿ. ಬಳಿಕ ಅರಿಶಿನ ಹಾಗೂ ಮ್ಯಾಶ್ ಮಾಡಿದ ಆಲೂಗಡ್ಡೆಗಳನ್ನು ಹಾಕಿ. ಇದಕ್ಕೆ ಉಪ್ಪು ಸೇರಿಸಿ. ಸಣ್ಣದಾಗಿ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ. ಈಗ ಆಲೂ ಪಲ್ಯ ರೆಡಿ. ಇದನ್ನು ತಣ್ಣಗಾಗಲು ಬಿಡಿ. 
ಪಲ್ಯ ತಣ್ಣಗಾದ ಬಳಿಕ ಅದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿಸಿ. ಕೈನಲ್ಲೇ ತಟ್ಟಿ ಫ್ಲ್ಯಾಟ್ ಪ್ಯಾಟೀಸ್ ಮಾಡಿಕೊಳ್ಳಿ. 
ಮತ್ತೊಂದೆಡೆ ಬಟ್ಟಲೊಂದರಲ್ಲಿ ಹುರಿದ ರವೆ, ಮೊಸರು, ಸ್ವಲ್ಪ ನೀರು ಹಾಕಿ ಚೆನ್ನಾಗಿ ಬೆರೆಸಿ. ಮೊಸರು ಹುಳಿ ಇದ್ದಷ್ಟೂ ರುಚಿ ಹೆಚ್ಚು ಕೊಡುತ್ತದೆ. ಹಿಟ್ಟನ್ನು ಅರ್ಧ ಗಂಟೆ ನೆನಯಲು ಬಿಡಿ. ಅರ್ಧ ಗಂಟೆಯ ಬಲಿಕ ಅರ್ಧ ಚಮಚ ಅಡುಗೇ ಸೋಡಾ ಸೇರಿಸಿ ಕಲೆಸಿ. ಈಗ ಇಡ್ಲಿ ಪ್ಲೇಟ್‌ಗೆ ಎಣ್ಣೆ ಹಚ್ಚಿ. ಬಳಿಕ ಒಂದೆರಡು ಚಮಚದಷ್ಟು ಇಡ್ಲಿ ಹಿಟ್ಟನ್ನು ಹಾಕಿ. ಅದರ ಮೇಲೆ ಆಲೂ ಪ್ಯಾಟೀಸ್ ಇಟ್ಟು ಪ್ರೆಸ್ ಮಾಡಿ. ಮೇಲಿನಿಂದ ಮತ್ತೆ ಇಡ್ಲಿ ಹಿಟ್ಟು ಒಂದೆರಡು ಚಮಚ ಹಾಕಿ ಪ್ಯಾಟೀಸ್ ಮುಚ್ಚುವಂತೆ ನೋಡಿಕೊಳ್ಳಿ. 10ರಿಂದ 12 ನಿಮಿಷ ಸ್ಟೀಮರ್‌ನಲ್ಲಿ ಇಡ್ಲಿ ಬೇಯಲು ಬಿಡಿ. 
ಈ ಸ್ಟಫ್ಡ್ ಇಡ್ಲಿಯು ಕಾಯಿಚಟ್ನಿಯೊಂದಿಗೆ ಚೆನ್ನಾಗಿರುತ್ತದೆ. 
***

ಓಟ್ಸ್ ಇಡ್ಲಿ
ಇದೊಂದು ಲೋ ಕ್ಯಾಲೋರಿ ತಿಂಡಿಯಾಗಿದ್ದು, ಓಟ್ಸನ್ನು ಹೊಸ ಬಗೆಯಲ್ಲಿ ಸೇವಿಸಬೇಕೆನ್ನುವವರಿಗೆ ಹಾಗೆಯೇ ಇಡ್ಲಿಯನ್ನು ಹೊಸರುಚಿಯಲ್ಲಿ ನೋಡಬೇಕೆನ್ನುವವರಿಗೆ ಹೇಳಿ ಮಾಡಿಸಿದ್ದು. 

ಬೇಕಾಗುವ ಸಾಮಗ್ರಿಗಳು:  1 ಕಪ್ ಓಟ್ಸ್, 1 ಕ್ಯಾರೆಟ್, ಎಣ್ಣೆ 2 ಚಮಚ, ಜೀರಿಗೆ 1 ಚಮಚ, ಸಾಸಿವೆ 1 ಚಮಚ, ಕಡ್ಲೆಬೇಳೆ 1 ಚಮಚ, ಉದ್ದಿನ ಬೇಳೆ 1 ಚಮಚ, ಗೋಡಂಬಿ 8, ಕರಿ ಮೆಣಸಿನ ಪುಡಿ ಸ್ವಲ್ಪ, ಕೊತ್ತಂಬರಿ ಸೊಪ್ಪು, ಸಣ್ಣದಾಗಿ ಹೆಚ್ಚಿಟ್ಟುಕೊಂಡ ಕರಿಬೇವು, ಶುಂಠಿ 1 ಚಮಚ, ಹಸಿಮೆಣಸು 2, ಸೂಜಿರವೆ ಅರ್ಧ ಕಪ್. 

ಒತ್ತಡಕ್ಕೆ ಗೋಲಿ ಹೊಡೆಯಲು ಮೂಗಿಗೆ ಕೆಲಸ ಕೊಡಿ

ಮಾಡುವ ವಿಧಾನ: ಮೊದಲು ಓಟ್ಸನ್ನು ಬ್ಲೆಂಡರ್‌ನಲ್ಲಿ ಪುಡಿಯಾಗಿಸಿ. 

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಣ್ಣ ಉರಿಯಲ್ಲಿಟ್ಟುಕೊಂಡು ಜೀರಿಗೆ, ಸಾಸಿವೆ, ಕಡ್ಲೆಬೇಳೆ, ಉದ್ದಿನ ಬೇಳೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸಾಸಿವೆ ಹೊಟ್ಟೆ ಬೇಳೆಗಲು ಕೆಂಪಾದ ಬಳಿಕ ಸಣ್ಣದಾಗಿ ಕತ್ತರಿಸಿದ ಹಸಿಮೆಣಸು, ಶುಂಠಿ, ಕರಿಬೇವು, ಗೋಡಂಬಿ ಹಾಗೂ ಕರಿಮೆಣಸಿನ ಪುಡಿ ಮತ್ತು ಇಂಗು ಸೇರಿಸಿ 1 ನಿಮಿಷ ಹುರಿಯಿರಿ. ಇದಕ್ಕೆ ಅರ್ಧ ಕಪ್ ಸೂಜಿ ರವೆ ಸೇರಿಸಿ 2 ನಿಮಿಷ ಹುರಿಯಿರಿ. ನಂತರ ಓಟ್ಸ್ ಪೌಡರ್ ಸೇರಿಸಿ ಸಣ್ಣ ಉರಿಯಲ್ಲಿ 4-5 ನಿಮಿಷ ಹುರಿಯಿರಿ. ಸ್ಟೌ ಆರಿಸಿ ಮಿಕ್ಸ್‌ಚರ್ ತಣ್ಣಗಾಗಲು ಬಿಡಿ. ಇದು ತಣ್ಣಗಾದ ಬಳಿಕ ತುರಿದ ಕ್ಯಾರೆಟ್ ಹಾಗೂ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಹೆಚ್ಚು ತರಕಾರಿ ಬೇಕಿದ್ದಲ್ಲಿ ಬೇಯಿಸಿಕೊಂಡ ಬಟಾಣಿ ಹಾಗೂ ಸಣ್ಣದಾಗಿ ಕತ್ತರಿಸಿದ ಬೀನ್ಸ್ ಸೇರಿಸಬಹುದು. ಇದಕ್ಕೆ ಮೊಸರು ಹಾಗೂ 1 ಕಪ್ ನೀರು ಸೇರಿಸಿ. 10 ನಿಮಿಷ ಹಿಟ್ಟನ್ನು ಸೈಡಿಗಿಡಿ. 

ಈ ಸಮಯದಲ್ಲಿ ಇಡ್ಲಿ ತಟ್ಟೆಗೆ ಎಣ್ಣೆ ಹಚ್ಚಿಕೊಳ್ಳಿ. ಈಗ ಬದಿಗಿಟ್ಟ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಅರ್ಧ ಚಮಚ ಬೇಕಿಂಗ್ ಸೋಡಾ ಸೇರಿಸಿ. ಬೇಕಿದ್ದರೆ ಸೋಡಾ ಬದಲಿಗೆ ಈನೋ ಹಾಕಬಹುದು. ಹಿಟ್ಟನ್ನು ಚೆನ್ನಾಗಿ ಕಲೆಸಿ. ನಂತರ ಇಡ್ಲಿ ಹಿಟ್ಟನ್ನು ತಟ್ಟೆಗೆ ಹಾಕಿ ಸ್ಟೀಮ್ ಮಾಡಿ ಬೇಯಿಸಿ. ಸಾಂಬಾರ್ ಅಥವಾ ಚಟ್ನಿಯೊಂದಿಗೆ ಈ ಇಡ್ಲಿಗಳು ರುಚಿಯಾಗಿರುತ್ತವೆ. 

click me!