
ಸಂಜೆ ಚಹಾ ಜೊತೆಗೆ ಏನಾದರೂ ಗರಿಗರಿಯಾದ ಸ್ನ್ಯಾಕ್ಸ್ ತಿನ್ನಬೇಕು ಅನಿಸೋದು ಸಹಜ. ಅದರಲ್ಲೂ ಬೆಂಗಳೂರಿನಂಥ ಐಟಿಬಿಟಿ ನಗರದಲ್ಲಿನ ಯುವಕ-ಯುವತಿಯರಿಗೆ ಇಂಥ ಅಭ್ಯಾಸ ತುಸು ಹೆಚ್ಚೆನ್ನಿ. ಸಂಜೆ ಚಹಾದೊಂದಿಗೆ ಏನಾದರೂ ತಿಂದರೆ ಮುಂದಿನ ಕೆಲಸ ಶುರುವಾಗೋದು. ಆದರೆ ಬಹುತೇಕ ಟೀ ಸ್ಟಾಲ್‌ಗಳಲ್ಲಿ, ನಿಪ್ಪಟ್ಟು, ಕೋಡುಬಳೆ, ಚಕ್ಕುಲಿ ಸಿಗುತ್ತೆ. ಆದರೆ ಇವುಗಳಲ್ಲಿ ಹೆಚ್ಚಿನವರು ಮೈದಾ ಬಳಸಿ ತಯಾರಿಸಿರ್ತಾರೆ. ಇದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. ಇನ್ಮುಂದೆ ಅವುಗಳಿಗೆಲ್ಲ ಗುಡ್‌ಬೈ ಹೇಳಿ. ಇನ್ನು ಆ ಚಿಂತೆ ಬೇಡ, ಏಕೆಂದರೆ ಮೈದಾ, ಗೋಧಿ ಹಿಟ್ಟು ಅಥವಾ ರವೆ ಇಲ್ಲದೆಯೂ ಅತ್ಯಂತ ರುಚಿಕರವಾದ ಮತ್ತು ಆರೋಗ್ಯಕರವಾದ ಮಠರಿ(Mathari snacks)ಯನ್ನು ಮನೆಯಲ್ಲೇ ತಯಾರಿಸಬಹುದು.
ಈ ವಿಶೇಷ ಮಠರಿ(ಉತ್ತರ ಭಾರತದ ಜನಪ್ರಿಯ ತಿನಿಸು) ಮಾಡಲು ಬೇಕಾಗಿರುವುದು ಕೆಲವು ಬಗೆಯ ಬೇಳೆಕಾಳುಗಳು ಮತ್ತು ಅಕ್ಕಿ. ಇವುಗಳನ್ನು ಮಿಕ್ಸರ್‌ನಲ್ಲಿ ಹಾಕಿ ಮಾಡುವ ಹಿಟ್ಟು, ಮಠರಿಗೆ ವಿಶಿಷ್ಟವಾದ ರುಚಿ ಮತ್ತು ಗರಿಗರಿತನವನ್ನು ನೀಡುತ್ತದೆ. ಒಮ್ಮೆ ಮಾಡಿಟ್ಟರೆ, ಗಾಳಿಯಾಡದ ಡಬ್ಬದಲ್ಲಿ ತುಂಬಿಟ್ಟು ಹಲವು ದಿನಗಳ ತಿನ್ನಬಹುದು. ಹಾಗಾದರೆ, ತಡಮಾಡದೆ ಈ ಹೊಸ ಬಗೆಯ ಮಠರಿ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ.
ಈ ಮಠರಿ(Mathari snacks) ತಯಾರಿಸಲು ಒಂದು ಕಪ್ ಕಡಲೆ ಬೇಳೆ, ಅರ್ಧ ಕಪ್ ಉದ್ದಿನ ಬೇಳೆ, ಅರ್ಧ ಕಪ್ ಹೆಸರು ಬೇಳೆ ಮತ್ತು ಕಾಲು ಕಪ್ ಅಕ್ಕಿ ಬೇಕಾಗುತ್ತದೆ. ಇವುಗಳ ಜೊತೆಗೆ, ಹಿಟ್ಟು ಕಲಸಲು 2-3 ಚಮಚ ತುಪ್ಪ, ಒಂದು ಚಮಚ ಓಂಕಾಳು (ಅಜ್ವೈನ್), ಒಂದು ಚಮಚ ಕಸೂರಿ ಮೇಥಿ, ಅರ್ಧ ಚಮಚ ಕಾಳುಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೇಕು. ಕರಿಯಲು ಎಣ್ಣೆಯನ್ನು ಸಿದ್ಧವಾಗಿಟ್ಟುಕೊಳ್ಳಿ.
ಮಾಡುವ ವಿಧಾನ
ಮೊದಲಿಗೆ, ತೆಗೆದುಕೊಂಡ ಎಲ್ಲಾ ಬೇಳೆಕಾಳುಗಳು ಮತ್ತು ಅಕ್ಕಿಯನ್ನು ಒದ್ದೆ ಬಟ್ಟೆಯಿಂದ ಚೆನ್ನಾಗಿ ಒರೆಸಿಕೊಳ್ಳಿ. ನಂತರ ಪ್ರತಿಯೊಂದನ್ನು ಪ್ರತ್ಯೇಕವಾಗಿ ಸಣ್ಣ ಉರಿಯಲ್ಲಿ ಸುವಾಸನೆ ಬರುವವರೆಗೆ ಹುರಿದುಕೊಳ್ಳಿ. ಹುರಿದ ಪದಾರ್ಥಗಳು ತಣ್ಣಗಾದ ಮೇಲೆ, ಮಿಕ್ಸರ್ ಜಾರ್‌ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿ, ಜರಡಿ ಹಿಡಿದುಕೊಳ್ಳಿ. ಈಗ ನಿಮ್ಮ ಮಠರಿ ಹಿಟ್ಟು ಸಿದ್ಧ. ಈ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ತುಪ್ಪ, ಓಂಕಾಳು, ಕಸೂರಿ ಮೇಥಿ, ಕಾಳುಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ, ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲಸಿಕೊಳ್ಳಿ. ಈ ಹಿಟ್ಟನ್ನು ಒಂದು ಬಟ್ಟೆಯಿಂದ ಮುಚ್ಚಿ 10-15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಹಿಟ್ಟನ್ನು ಮತ್ತೊಮ್ಮೆ ನಾದಿಕೊಂಡು, ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಪ್ರತಿ ಉಂಡೆಯನ್ನು ಸ್ವಲ್ಪ ದಪ್ಪಗೆ ಲಟ್ಟಿಸಿ, ಫೋರ್ಕ್‌ನಿಂದ ಅಲ್ಲಲ್ಲಿ ಚುಚ್ಚಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಲಟ್ಟಿಸಿದ ಮಠರಿಗಳನ್ನು ಸಣ್ಣ ಉರಿಯಲ್ಲಿ ಎರಡೂ ಬದಿ ಹೊಂಬಣ್ಣ ಬರುವವರೆಗೆ ಗರಿಗರಿಯಾಗುವಂತೆ ಕರಿಯಿರಿ. ಎಣ್ಣೆಯಿಂದ ತೆಗೆದು ತಣ್ಣಗಾದ ಮೇಲೆ ಡಬ್ಬದಲ್ಲಿ ಸಂಗ್ರಹಿಸಿಟ್ಟರೆ, ಚಹಾ ಸಮಯಕ್ಕೆ ಗರಿಗರಿ ಮಠರಿ ಸವಿಯಲು ಸಿದ್ಧ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.