ಭಾನುವಾರ ಬಂತೆಂದರೆ ನಾನ್ವೆಜ್ ಪ್ರಿಯರಿಗೆ ರಾಗಿ ಮುದ್ದೆ ಜೊತೆ ಘಮಘಮಿಸುವ ಚಿಕನ್ ಸಾಂಬಾರ್ ಇರಲೇಬೇಕು. ಆದ್ದರಿಂದ ಹೆಚ್ಚಿನ ಗೋಜಿಲ್ಲದೆ, ಹೋಟೆಲ್ ರುಚಿಯನ್ನೂ ಮೀರಿಸುವಂತೆ ಮನೆಯಲ್ಲೇ ಕುಕ್ಕರ್ ಬಳಸಿ ಸುಲಭವಾಗಿ ಚಿಕನ್ ಸಾಂಬಾರ್ ಮಾಡುವ ವಿಧಾನ ಇಲ್ಲಿದೆ.
ಚಿಕನ್: 1 ಕೆಜಿ (ತೊಳೆದು ಸ್ವಚ್ಛಗೊಳಿಸಿದ್ದು)
ಈರುಳ್ಳಿ: 1 (ಸಣ್ಣದಾಗಿ ಹೆಚ್ಚಿದ್ದು)
ಅಡುಗೆ ಎಣ್ಣೆ: 2-3 ಚಮಚ
ಖಾರದ ಪುಡಿ: 1.5 ರಿಂದ 2 ಚಮಚ (ಖಾರಕ್ಕೆ ತಕ್ಕಂತೆ)
ಧನಿಯಾ ಪುಡಿ: 1 ಚಮಚ
ಅರಿಶಿನ ಪುಡಿ: ½ ಚಮಚ
ಗರಂ ಮಸಾಲ: ½ ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಶುಂಠಿ: 1-2 ಇಂಚು
ಬೆಳ್ಳುಳ್ಳಿ: 1 ಪೂರ್ತಿ ಗಡ್ಡೆ (ಸಿಪ್ಪೆ ತೆಗೆದದ್ದು)
ಪುದೀನಾ ಸೊಪ್ಪು: ಸ್ವಲ್ಪ
ಕೊತ್ತಂಬರಿ ಸೊಪ್ಪು: ಸ್ವಲ್ಪ (ಹೆಚ್ಚು ಹಾಕಬೇಡಿ, ಬಣ್ಣ ಕಪ್ಪಾಗುತ್ತದೆ)
ಚಕ್ಕೆ (ದಾಲ್ಚಿನ್ನಿ): 3-4 ಸಣ್ಣ ತುಂಡು
ಲವಂಗ: 7-8
ಕಾಳುಮೆಣಸು: ½ ಚಮಚ
ಗೋಡಂಬಿ: 7-8 (ಅಥವಾ 1 ಚಮಚ ಹುರಿಗಡಲೆ + 1 ಚಮಚ ಗಸಗಸೆ)
ಮಿಕ್ಸಿ ಜಾರ್ಗೆ ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ, ಕಾಳುಮೆಣಸು, ಪುದೀನಾ, ಕೊತ್ತಂಬರಿ ಸೊಪ್ಪು ಮತ್ತು ಗೋಡಂಬಿ (ಅಥವಾ ಹುರಿಗಡಲೆ-ಗಸಗಸೆ) ಹಾಕಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಕುಕ್ಕರ್ಗೆ 2 ಚಮಚ ಎಣ್ಣೆ ಹಾಕಿ ಬಿಸಿಯಾದ ನಂತರ ½ ಚಮಚ ಅರಿಶಿನ, ½ ಚಮಚ ಖಾರದ ಪುಡಿ, ತೊಳೆದ ಚಿಕನ್ ಮತ್ತು ಸ್ವಲ್ಪ ಉಪ್ಪು ಹಾಕಿ. ಮಧ್ಯಮ ಉರಿಯಲ್ಲಿ 5 ನಿಮಿಷ ಫ್ರೈ ಮಾಡಿ. ಚಿಕನ್ ನೀರು ಬಿಟ್ಟು ಸಾಫ್ಟ್ ಆಗುವವರೆಗೆ ಹುರಿದು, ಚಿಕನ್ ತುಂಡುಗಳನ್ನು ಪ್ರತ್ಯೇಕವಾಗಿ ಎತ್ತಿಡಿ.
ಅದೇ ಕುಕ್ಕರ್ಗೆ ಹೆಚ್ಚಿದ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ರುಬ್ಬಿದ ಹಸಿ ಮಸಾಲೆ ಪೇಸ್ಟ್ ಸೇರಿಸಿ. ಇದಕ್ಕೆ 1 ಚಮಚ ಖಾರದ ಪುಡಿ, ½ ಚಮಚ ಅರಿಶಿನ, 1 ಚಮಚ ಧನಿಯಾ ಪುಡಿ ಸೇರಿಸಿ. ಕುಕ್ಕರ್ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 8-10 ನಿಮಿಷ ಮಸಾಲೆಯಿಂದ ಎಣ್ಣೆ ಬಿಡುವವರೆಗೆ ಚೆನ್ನಾಗಿ ಬೇಯಿಸಿ.
ಮಸಾಲೆ ಚೆನ್ನಾಗಿ ಬೆಂದ ನಂತರ, ಮೊದಲೇ ಫ್ರೈ ಮಾಡಿಟ್ಟ ಚಿಕನ್ ತುಂಡುಗಳನ್ನು ಸೇರಿಸಿ 5 ನಿಮಿಷ ಮಸಾಲೆಯೊಂದಿಗೆ ಕೈಯಾಡಿಸಿ. ನಂತರ ಸಾಂಬಾರಿಗೆ ಬೇಕಾದ ಹದಕ್ಕೆ (1 ರಿಂದ 1.5 ಲೋಟ) ನೀರು, ½ ಚಮಚ ಗರಂ ಮಸಾಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿ.
ಕುಕ್ಕರ್ ಮುಚ್ಚಳ ಮುಚ್ಚಿ, ಹೈ ಫ್ಲೇಮ್ನಲ್ಲಿ 4 ರಿಂದ 5 ವಿಷಲ್ ಕೂಗಿಸಿ ಗ್ಯಾಸ್ ಆಫ್ ಮಾಡಿ. ಪ್ರೆಶರ್ ಸಂಪೂರ್ಣ ಇಳಿದ ಮೇಲೆ ಮುಚ್ಚಳ ತೆಗೆದರೆ ಘಮಘಮಿಸುವ ಚಿಕನ್ ಸಾಂಬಾರ್ ರೆಡಿ!
ನೀರಿನ ಹದ (Consistency)
ರಾಗಿ ಮುದ್ದೆಗೆ ಸಾಂಬಾರ್ ತುಂಬಾ ತಿಳಿಯಾಗಿಯೂ ಇರಬಾರದು, ಅತಿಯಾಗಿ ಗಟ್ಟಿಯಾಗಿಯೂ ಇರಬಾರದು. ಚಿಕನ್ ಬೇಯುವಾಗ ಸ್ವತಃ ನೀರು ಬಿಡುವುದರಿಂದ, ಆರಂಭದಲ್ಲೇ ಅತಿಯಾಗಿ ನೀರು ಸುರಿಯಬೇಡಿ.
ಸ್ವಲ್ಪ ಹೊತ್ತು ಬಿಟ್ಟು ಬಡಿಸಿ
ಕುಕ್ಕರ್ ವಿಶಲ್ ಇಳಿದ ತಕ್ಷಣ ಬಡಿಸಬೇಡಿ. ಕನಿಷ್ಠ 15 ರಿಂದ 20 ನಿಮಿಷ ಹಾಗೆಯೇ ಬಿಟ್ಟರೆ, ಚಿಕನ್ ತುಂಡುಗಳು ಮಸಾಲೆಯನ್ನು ಚೆನ್ನಾಗಿ ಹೀರಿಕೊಂಡು ಅದ್ಭುತ ರುಚಿ ನೀಡುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.