ಚಾಟ್ಸ್ ಎಂದಾಕ್ಷಣ ಎಲ್ಲವೂ ಅಧಿಕ ಕ್ಯಾಲರಿ ಹೊಂದಿದವುಗಳೇ ಆಗಬೇಕಿಲ್ಲ. ಕರಿದ ಪದಾರ್ಥಗಳನ್ನು ಹೊರತುಪಡಿಸಿ, ತರಕಾರಿ, ಬೇಳೆ, ಬೀಜಗಳ ಚಾಟ್ಸ್ ಕೂಡ ರುಚಿಕರವಾಗಿರುತ್ತವೆ. ಅವು ಆರೋಗ್ಯಕ್ಕೂ ಉತ್ತಮ. ಅಂತಹ ಕೆಲವು ಚಾಟ್ಸ್ ಗಳ ಮಾಹಿತಿ ನಿಮಗಾಗಿ.
ಚಾಟ್ಸ್ ಎಂದರೆ ಬಾಯಲ್ಲಿ ನೀರೂರುತ್ತದೆ. ತಕ್ಷಣ ಹೋಗಿ ತಿಂದೇ ಬಿಡುವ ಆಸೆಯಾಗುತ್ತದೆ. ಜತೆಗೇ, ಆರೋಗ್ಯದ ಬಗ್ಗೆ ಕಾಳಜಿಯಾಗಿ ಹಿಂದೇಟು ಹಾಕುವಂತೆ ಆಗುತ್ತದೆ. ಆದರೆ, ಕೆಲವು ಚಾಟ್ಸ್ ಗಳನ್ನು ಮನೆಯಲ್ಲೇ ಸಿಂಪಲ್ಲಾಗಿ, ರುಚಿಕರವಾಗಿ ತಯಾರಿಸಿಕೊಳ್ಳಬಹುದು. ಕ್ಯಾಲರಿಯ ಹಂಗಿಲ್ಲದೆ ನಿರಾತಂಕವಾಗಿ ಸೇವನೆ ಮಾಡಬಹುದು. ಬಾಯಲ್ಲಿ ನೀರೂರಿಸುವ ಹಲವಾರು ಆರೋಗ್ಯಕರ ಚಾಟ್ಸ್ ಗಳನ್ನು ಮನೆಯಲ್ಲೇ ಸಿದ್ಧ ಮಾಡಿಕೊಳ್ಳಬಹುದು. ಚಟ್ನಿಗಳ ನೆರವಿನಿಂದ ಅವುಗಳನ್ನು ಪರಿಮಳ ಭರಿತವನ್ನಾಗಿಸಬಹುದು. ಅಷ್ಟೇ ಅಲ್ಲ, ಪ್ರೊಟೀನ್ ಹಾಗೂ ನಾರಿನಂಶವೂ ಇರುವಂತೆ ನೋಡಿಕೊಂಡು ಆರೋಗ್ಯಕ್ಕೂ ಹಾನಿ ಆಗದಂತೆ ನೋಡಿಕೊಳ್ಳಬಹುದು. ಅಂತಹ ಹಲವಾರು ಚಾಟ್ ಗಳಿವೆ. ಈ ಎಲ್ಲ ಚಾಟ್ ಗಳನ್ನು ಮಾಡುವುದು ಭಾರೀ ಸುಲಭ. ಮೊದಲೇ ಸಿದ್ಧತೆ ಮಾಡಿಕೊಂಡು, ಎಲ್ಲವನ್ನೂ ಸೇರಿಸಿಬಿಟ್ಟರೆ ಆಯಿತು. ಸಂಜೆಯ ವೇಳೆಯ ಹಸಿವಿಗೆ ಇವು ಉತ್ತಮ. ಆಲೂಗಡ್ಡೆಯನ್ನು ಹೊರತುಪಡಿಸಿದರೆ ಉಳಿದೆಲ್ಲ ತರಕಾರಿಗಳು ಮಧುಮೇಹಿಗಳಿಗೂ ಉತ್ತಮ. ಅವರೂ ಸಹ ಈ ಚಾಟ್ ಗಳನ್ನು ಖುಷಿಯಾಗಿ ಸವಿಯಬಹುದು.
• ಆಲೂಗಡ್ಡೆ ಚಾಟ್ (Sweet Potato Chat)
ಆಲೂಗಡ್ಡೆ, ಪೈನಾಪಲ್, ಸ್ವಲ್ಪ ಚೀಸ್ (Cheese), ಕಾಳುಮೆಣಸಿನ ಪೌಡರ್ (Pepper) ಹಾಕಿ ಸಿದ್ಧಪಡಿಸುವ ಈ ಚಾಟ್ ಖಂಡಿತವಾಗಿ ಎಲ್ಲರಿಗೂ ಇಷ್ಟವಾಗುವಂಥದ್ದು. ಸೈಂಧವ ಲವಣ ಅಥವಾ ಬ್ಲಾಕ್ ಸಾಲ್ಟ್ (Black Salt), ಕೆಂಪು ಮೆಣಸಿನಕಾಯಿ ಪೌಡರ್, ವಿನೆಗರ್, ಯಾವುದಾದರೂ ಎಣ್ಣೆ, ಒಂದು ಸೇಬು (Apple) ತೆಗೆದುಕೊಳ್ಳಬೇಕು. ಆಲೂಗಡ್ಡೆ ಸೇರಿದಂತೆ ಎಲ್ಲ ತರಕಾರಿಯನ್ನು ಸರಿಯಾಗಿ ಬೇಯಿಸಿಕೊಂಡು ಅದಕ್ಕೆ ಮೇಲಿನ ಎಲ್ಲ ಐಟಂ ಮಿಕ್ಸ್ ಮಾಡಬೇಕು, ಪನೀರ್ (Paneer) ಕೂಡ ಬಳಕೆ ಮಾಡಬಹುದು.
ಮಳೆಗಾಲದಲ್ಲಿ ಹೊರಗಿನ ಆಹಾರ ತಿನ್ನೋದನ್ನು ಕಡಿಮೆ ಮಾಡಿ
undefined
• ಸ್ಪೈಸಿ ಮಖಾನ ಭೇಲ್ (Spicy Makhana Bhel)
ಮಖಾನ ಅಥವಾ ಫಾಕ್ಸ್ ನಟ್ (Fox Nut) ಅನ್ನು ಬಳಕೆ ಮಾಡಿ ಮಾಡುವ ಈ ಭೇಲ್ ಆರೋಗ್ಯಕ್ಕೆ ಭಾರೀ ಉತ್ತಮ. ಇದರಲ್ಲಿ ಹೇರಳವಾಗಿ ಆಂಟಿಆಕ್ಸಿಡಂಟ್ಸ್ ಮತ್ತು ಪೌಷ್ಟಿಕಾಂಶ (Nutrients) ಇರುತ್ತದೆ. ಪ್ರೊಟೀನ್ (Protein) ಮತ್ತು ನಾರಿನಂಶವೂ ಹೇರಳವಾಗಿ ಇರುತ್ತದೆ. ರೋಸ್ಟ್ (Roast) ಮಾಡಿದ ಫಾಕ್ಸ್ ನಟ್, ಬೇಯಿಸಿದ ಆಲೂಗಡ್ಡೆ, ರೋಸ್ಟ್ ಮಾಡಿ ಕಡಲೆಬೀಜ, ಲಿಂಬೆರಸ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಪುಡಿ, ದಾಳಿಂಬೆ ಬೀಜಗಳನ್ನು ಸೇರಿಸಿ ಮಾಡಿದರೆ ಈ ಚಾಟ್ ಸವಿಯದೆ ಇರಲು ಸಾಧ್ಯವಿಲ್ಲ.
• ಸ್ವೀಟ್ ಕಾರ್ನ್ ಮಸಾಲಾ ಚಾಟ್ (Sweet Corn Masala Chat)
ಸ್ವೀಟ್ ಕಾರ್ನ್ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ನಾರಿನಂಶ, ವಿಟಮಿನ್ ಸಿ ಹಾಗೂ ವಿವಿಧ ಪೌಷ್ಟಿಕಾಂಶಗಳು ತುಂಬಿರುತ್ತವೆ. ಜೀರ್ಣ ವ್ಯವಸ್ಥೆಗೆ ಇದು ಉತ್ತಮ ಆಹಾರ. ಅಲ್ಲದೆ, ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹೀಗಾಗಿ, ಮನೆಯಲ್ಲೇ ಇದರ ಮಸಾಲಾ ಚಾಟ್ ಮಾಡಿಕೊಂಡು ಸವಿಯಬಹುದು. ಬೇಯಿಸಿದ ಸ್ವೀಟ್ ಕಾರ್ನ್, ಸೌತೆಕಾಯಿ (Cucumber) ಹೋಳುಗಳು, ಟೊಮ್ಯಾಟೋ, ಈರುಳ್ಳಿ (Onion), ಪುದೀನಾ ಚಟ್ನಿ, ಕೊತ್ತಂಬರಿ ಸೊಪ್ಪು, ಲಿಂಬೆರಸ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಾಡುವ ಈ ಚಾಟ್ ಬಾಯಲ್ಲಿ ನೀರೂರಿಸದೆ ಇರದು.
• ನೆನೆಸಿದ ಬೀಜಗಳ ಚಾಟ್ (Sprouted Beans)
ಬೀನ್ಸ್ ಹಲವು ವಿಧಗಳಲ್ಲಿ ಲಭ್ಯ. ಅಲಸಂದೆ ಸೇರಿದಂತೆ ಹಲವಾರು ಬೀಜಗಳನ್ನು ಬಳಸಿ ಮಾಡುವ ಈ ಚಾಟ್ ಆರೋಗ್ಯಕ್ಕೆ ಉತ್ತಮ. ಕಿಡ್ನಿ ಬೀನ್ಸ್, ಸೋಯಾ ಬೀನ್ಸ್, ಕಡಲೆಬೇಳೆ, ಅಲಸಂದೆಗಳನ್ನು ಮೊದಲೇ ನೀರಿನಲ್ಲಿ ನೆನೆಸಿಟ್ಟು ಹುದುಗು ಬರಿಸಿಕೊಳ್ಳಬೇಕು. ಬಳಿಕ ಅದಕ್ಕೆ ಪನ್ನೀರ್, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಈರುಳ್ಳಿ, ಒಂದು ಕಪ್ ಟೊಮ್ಯಾಟೋ, ಚಾಟ್ ಮಸಾಲಾ, ಲಿಂಬೆರಸ, ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಈ ಚಾಟ್ ಸಿದ್ಧ ಮಾಡಬೇಕು. ಸೌತೆಕಾಯಿ, ಕ್ಯಾರೆಟ್ ತುರಿಯನ್ನೂ ಈ ಚಾಟ್ ಗಳಿಗೆ ಸೇರಿಸಬಹುದು.