ಬೆಂಗಳೂರು Domino’s ನಲ್ಲಿ ವೆಜ್ ಟ್ಯಾಕೋ ಕೇಳಿದ ಗ್ರಾಹಕನಿಗೆ ನಾನ್‌ವೆಜ್ ಸರ್ವ್, ದೂರು ನೀಡಿದ ವ್ಯಕ್ತಿ ಮೇಲೆ ರಾಡ್‌ನಿಂದ ದಾಳಿ

Published : Jul 13, 2026, 11:05 AM IST
Bengaluru Dominos restaurant worker hits customer on the head with a rod after food complaint

ಸಾರಾಂಶ

ವೆಜ್ ಟ್ಯಾಕೋ ಬದಲು ನಾನ್‌ವೆಜ್ ಆಹಾರ ನೀಡಿದ್ದನ್ನು ಪ್ರಶ್ನಿಸಿದ ಗ್ರಾಹಕನ ಮೇಲೆ ಬೆಂಗಳೂರಿನ ಡೊಮಿನೋಸ್ ಔಟ್‌ಲೆಟ್‌ನಲ್ಲಿ ಸಿಬ್ಬಂದಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

ಬೆಂಗಳೂರು ನಗರದ ವೈಟ್‌ಫೀಲ್ಡ್ ನಲ್ಲಿರುವ ಡೊಮಿನೋಸ್ ಔಟ್‌ಲೆಟ್‌ನಲ್ಲಿ ತಪ್ಪಾದ ಆಹಾರ ಆರ್ಡರ್‌ ವಿಚಾರವಾಗಿ ಆರಂಭವಾದ ವಿವಾದ ಹಿಂಸಾತ್ಮಕ ತಿರುವು ಪಡೆದಿದೆ. ವೆಜ್ ಟ್ಯಾಕೋ ಆರ್ಡರ್ ಮಾಡಿದ್ದ ಗ್ರಾಹಕರಿಗೆ ನಾನ್‌ವೆಜ್ ಟ್ಯಾಕೋ ನೀಡಿದ ಬಳಿಕ, ದೂರು ನೀಡಲು ಹೋದ ಗ್ರಾಹಕನ ಮೇಲೆ ರೆಸ್ಟೋರೆಂಟ್ ಸಿಬ್ಬಂದಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

ಜುಲೈ 4ರಂದು ನಡೆದ ಈ ಘಟನೆಯಲ್ಲಿ 33 ವರ್ಷದ ಸಿದ್ಧಾರ್ಥ ಶೌರ್ಯ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಿದ್ಧಾರ್ಥ ನೀಡಿದ ದೂರಿನ ಪ್ರಕಾರ, ಮಧ್ಯಾಹ್ನ ಸುಮಾರು 12.55ಕ್ಕೆ ಅವರು ಡೊಮಿನೋಸ್‌ನಿಂದ ವೆಜ್ ಗಾರ್ಲಿಕ್ ಬ್ರೆಡ್ ಹಾಗೂ ವೆಜ್ ಟ್ಯಾಕೋ ಮೆಕ್ಸಿಕನ್‌ ಆರ್ಡರ್ ಮಾಡಿದ್ದರು. ಆದರೆ, ಅವರಿಗೆ ನಾನ್‌ವೆಜ್ ಟ್ಯಾಕೋ ಮೆಕ್ಸಿಕನ್‌ ಬಂದಿತ್ತು ಎಂದು ಆರೋಪಿಸಿದ್ದಾರೆ.

ಗ್ರಾಹಕನ ಮೇಲೆ ಡೊಮಿನೋಸ್ ಸಿಬ್ಬಂದಿ ದರ್ಫ

ತಪ್ಪಾದ ಆಹಾರವನ್ನು ಹಿಂದಿರುಗಿಸಿದ ಬಳಿಕ ತಮ್ಮ ಸೋದರ ಮಾವ ಕುಶಾಗ್ರ ಅವರೊಂದಿಗೆ ನೇರವಾಗಿ ಡೊಮಿನೋಸ್ ಔಟ್‌ಲೆಟ್‌ಗೆ ತೆರಳಿ ಈ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಆರಂಭದಲ್ಲಿ ಮಾತಿನ ಚಕಮಕಿ ನಡೆದಿದ್ದು, ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಿದ್ಧಾರ್ಥ ಅವರ ಆರೋಪದ ಪ್ರಕಾರ, ವಾಗ್ವಾದದ ವೇಳೆ ಸಿಬ್ಬಂದಿಯೊಬ್ಬರು ಮೊದಲು ಅವರ ಮುಖಕ್ಕೆ ಹೊಡೆದಿದ್ದಾರೆ. ಬಳಿಕ ಮುಖ್ಯ ಕೌಂಟರ್ ಬಳಿ ಇದ್ದ ಮತ್ತೊಬ್ಬ ಸಿಬ್ಬಂದಿ ಕಬ್ಬಿಣದ ರಾಡ್ ತೆಗೆದುಕೊಂಡು ಅವರ ತಲೆಗೆ ಬಲವಾಗಿ ಹೊಡೆದಿದ್ದಾರೆ ಎನ್ನಲಾಗಿದೆ. ಈ ಹಲ್ಲೆಯಿಂದ ಸಿದ್ಧಾರ್ಥ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಘಟನೆಯನ್ನು ನೋಡಿದ ಸಾರ್ವಜನಿಕರು ಹಾಗೂ ಕುಶಾಗ್ರ ಸಿದ್ಧಾರ್ಥ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅಲ್ಲಿದ್ದವರು ಆರೋಪಿತ ಸಿಬ್ಬಂದಿಯನ್ನು ತಡೆದು ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುವಿಗೆ ತಕ್ಷಣ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದು, ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿದ್ಧಾರ್ಥ ತಮ್ಮ ದೂರಿನಲ್ಲಿ, ಹಲ್ಲೆ ನಡೆಸಿದ ಸಿಬ್ಬಂದಿಯನ್ನು ವೈಯಕ್ತಿಕವಾಗಿ ಪರಿಚಯವಿಲ್ಲ. ಆದರೆ, ಇತರ ಸಿಬ್ಬಂದಿ ಅವರನ್ನು "ಶ್ರೀನಿವಾಸ್" ಎಂದು ಕರೆಯುವುದನ್ನು ಕೇಳಿದ್ದಾಗಿ ತಿಳಿಸಿದ್ದಾರೆ.

ಈ ಸಂಬಂಧ ವೈಟ್‌ಫೀಲ್ಡ್ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 118 ಅಡಿಯಲ್ಲಿ ಅಪಾಯಕಾರಿ ಆಯುಧ ಬಳಸಿ ಗಾಯಗೊಳಿಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಡೊಮಿನೋಸ್ ಸಿಬ್ಬಂದಿಯೂ ಪ್ರತಿದೂರು ದಾಖಲಿಸಿದ್ದು, ಎರಡೂ ಕಡೆಯ ಹೇಳಿಕೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸಂಬಂಧಪಟ್ಟ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಘಟನೆಯ ಬಗ್ಗೆ ಡೊಮಿನೋಸ್ ಸಂಸ್ಥೆ ಇದುವರೆಗೆ ಯಾವುದೇ ಅಧಿಕೃತ ಸಾರ್ವಜನಿಕ ಹೇಳಿಕೆ ನೀಡಿಲ್ಲ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಟನ್‌ನಲ್ಲಿ ಜೂನಿಯರ್ ಎನ್‌ಟಿಆರ್‌ಗೆ ಇಷ್ಟವಾದ ಭಾಗ ಯಾವುದು? 200 ಪೀಸ್ ತಿಂತಾರಂತೆ!
ಗಣಿತದಲ್ಲಿ ಫೇಲ್‌, ಕಾಲೇಜು ಡ್ರಾಪ್‌ಔಟ್‌; ಬಂಡಿಯಲ್ಲಿ ಐಸ್‌ಕ್ರೀಮ್ ಮಾರಾಟ ಮಾಡುತ್ತಿದ್ದ ಯುವಕ ಇಂದು ₹20,000 ಕೋಟಿ ಒಡೆಯ