ಕರ್ನಾಟಕದ 'ಗಿರೀಶ್​ ಬೇಕರಿ' ನೆನೆದ ಪ್ರಧಾನಿ ನರೇಂದ್ರ ಮೋದಿ: ಗೂಗಲ್​ನಲ್ಲಿ ಹುಡುಕಾಟ ಶುರು

Published : Oct 09, 2026, 10:06 PM IST
PM Narendra Modi and Smriti Nambiar

ಸಾರಾಂಶ

ವರ್ಲ್ಡ್‌ ಸ್ಕಿಲ್ಸ್ ಸ್ಪರ್ಧೆಯಲ್ಲಿ ವಿಜೇತರಾದ ಟೀಮ್ ಇಂಡಿಯಾ ಪ್ರತಿನಿಧಿಗಳನ್ನು ಪ್ರಧಾನಿ ಮೋದಿ ಭೇಟಿಯಾಗಿ ಅಭಿನಂದಿಸಿದರು. ಈ ವೇಳೆ ಬೆಂಗಳೂರಿನ ಸ್ಪರ್ಧಿ ಸ್ಮೃತಿ ನಂಬಿಯಾರ್ ಬಳಿ ಕರ್ನಾಟಕದ 'ಗಿರೀಶ್ ಬೇಕರಿ' ಬಗ್ಗೆ ಮೋದಿ ಕೇಳಿದ ಪ್ರಶ್ನೆ ಇದೀಗ ವೈರಲ್ ಆಗಿದೆ. ಭಾರತವು ಈ ಸ್ಪರ್ಧೆಯಲ್ಲಿ 6 ಬೆಳ್ಳಿ ಹಾಗೂ 20 ಅತ್ಯುತ್ತಮ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ದೆಹಲಿ: ಚೀನಾದ ಶಾಂಘೈನಲ್ಲಿರುವ ರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿ ಕಳೆದ ತಿಂಗಳು ನಡೆದ ವರ್ಲ್ಡ್‌ ಸ್ಕಿಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಟೀಮ್ ಇಂಡಿಯಾ ಪ್ರತಿನಿಧಿಗಳೊಂದಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ಪ್ರಧಾನಿ, ಸ್ಪರ್ಧಿಗಳಿಗೆ ಸಿಹಿ ಹಂಚುತ್ತಲೇ ಸ್ಪರ್ಧಿಗಳ ಜೊತೆ ಮಾತಿಗಿಳಿದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧಿಗಳ ಜೊತೆ ಮಾತನಾಡುತ್ತಿರುವಾಗಿ ಕರ್ನಾಟಕದ ಸ್ಪರ್ಧಿಯೊಬ್ಬರ ಜೊತೆಗಿನ ಮಾತೀಗ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದಕ್ಕೆ ಕಾರಣ, ಪ್ರಧಾನಿ ಅವರು, ಕರ್ನಾಟಕದಲ್ಲಿ ಗಿರೀಶ್​ ಬೇಕರಿ ಇದೆ ಎನ್ನುವುದು ಗೊತ್ತಿದ್ಯಾ ಎಂದು ಸ್ಪರ್ಧಿಗೆ ಕೇಳಿದ ಹಿನ್ನೆಲೆಯಲ್ಲಿ, ಇದಕ್ಕಾಗಿ ಗೂಗಲ್​ನಲ್ಲಿ ನೆಟ್ಟಿಗರು ಹುಡುಕಾಟ ನಡೆಸಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಈ ಸಂವಾದದ ಸಂದರ್ಭದಲ್ಲಿ, ಸ್ಪರ್ಧಿಗಳು ತಮ್ಮ ಸ್ಪರ್ಧೆಯ ಅನುಭವಗಳನ್ನು ಹಂಚಿಕೊಂಡರು ಮತ್ತು ಜಾಗತಿಕ ವೇದಿಕೆಯಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ, ಬೇಕರಿ ವಿಭಾಗದಲ್ಲಿ ಬೆಳ್ಳಿ ಪದಕ ಮತ್ತು 'ಬೆಸ್ಟ್ ಆಫ್ ನೇಷನ್' ಪ್ರಶಸ್ತಿ ಪಡೆದ ಬೆಂಗಳೂರು ಮೂಲದ ಸ್ಮೃತಿ ನಂಬಿಯಾರ್ ತಮ್ಮ ಅನುಭವ ಹಂಚಿಕೊಂಡರು. ಆ ಸಂದರ್ಭದಲ್ಲಿ ಸ್ಮೃತಿ ಅವರು ಬೇಕರಿ ವಿಭಾಗದಲ್ಲಿ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದ ವೇಳೆ ಪ್ರಧಾನಿ, ಕರ್ನಾಟಕದಲ್ಲಿ ಗಿರೀಶ್​ ಬೇಕರಿ ಎನ್ನುವ ಫೇಮಸ್​ ಬೇಕರಿ ಅಂಗಡಿ ಇದೆ ಗೊತ್ತಾ ಎಂದು ಪ್ರಶ್ನಿಸಿದರು. ಅದಕ್ಕೆ ಸ್ಮೃತಿ ಅವರು ಇದು ಎಲ್ಲಿದೆ ಗೊತ್ತಿಲ್ಲ. ಆದರೆ ನನ್ನ ಅಪ್ಪನ ಹೆಸರು ಗಿರೀಶ್​ ಎಂದಾಗ, ಪ್ರಧಾನಿ ಜೋರಾಗಿ ನಕ್ಕರು. ಈ ಹಿನ್ನೆಲೆಯಲ್ಲಿ ಈ ಬೇಕರಿ ಬಗ್ಗೆ ಇನ್ನಿಲ್ಲದ ಸರ್ಚ್​ ಶುರುವಾಗಿದೆ.

ಇದೇ ವೇಳೆ, ಸ್ಪರ್ಧಿಗಳ ಜೊತೆ ಸಂವಾದ ನಡೆಸಿದ ಪ್ರಧಾನಿ, ತಾಂತ್ರಿಕ ಪ್ರಗತಿಯ ವೇಗವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಯುವಜನರು ತಮ್ಮ ಕೌಶಲ್ಯಗಳನ್ನು ನಿರಂತರವಾಗಿ ಉನ್ನತೀಕರಿಸಿಕೊಳ್ಳುವ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳುವ ಅಗತ್ಯದ ಕುರಿತು ಮಾತನಾಡಿದರು.

ಪ್ರಧಾನಿ ಅಭಿನಂದನೆ

ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಸ್ಪರ್ಧಿಗಳನ್ನು ಪ್ರತಿನಿಧಿಗಳನ್ನು ಅಭಿನಂದಿಸಿದ ಪ್ರಧಾನಿ, ಅಂತರರಾಷ್ಟ್ರೀಯ ಮಾರುಕಟ್ಟೆಯ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯಗಳನ್ನು ಬೆಳೆಸಿಕೊಳ್ಳುವಂತೆ ಹಾಗೂ ತಮ್ಮ ಅನುಭವಗಳು ಮತ್ತು ಸಲಹೆಗಳ ಮೂಲಕ ಭಾರತದ ಕೌಶಲ್ಯ ತರಬೇತಿ ವ್ಯವಸ್ಥೆಯನ್ನು ಸುಧಾರಿಸಲು ಕೊಡುಗೆ ನೀಡುವಂತೆ ಕರೆ ನೀಡಿದರು. ಭಾರತವನ್ನು ನುರಿತ ಮಾನವ ಸಂಪನ್ಮೂಲದ ಜಾಗತಿಕ ಕೇಂದ್ರವನ್ನಾಗಿ ರೂಪಿಸಲು ಯುವಜನರು, ಸರ್ಕಾರ ಮತ್ತು ತರಬೇತಿ ಸಂಸ್ಥೆಗಳು ಒಗ್ಗೂಡಿ ಪ್ರಯತ್ನಿಸಬೇಕಾದ ಅಗತ್ಯವನ್ನೂ ಪ್ರಧಾನಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಅಂದಹಾಗೆ, ಚೀನಾದಲ್ಲಿ ನಡೆದ ಈ ಸ್ಪರ್ಧೆಯಲ್ಲಿ 'ಟೀಮ್ ಇಂಡಿಯಾ' ಸ್ಪರ್ಧಿಗಳು 6 ಬೆಳ್ಳಿ ಪದಕ ಮತ್ತು 20 Medals for Excellence ಪ್ರಶಸ್ತಿಗಳನ್ನು ಗೆದ್ದುಕೊಂಡರು. 63 ವಿವಿಧ ಕೌಶಲ್ಯ ವಿಭಾಗಗಳಲ್ಲಿ ಭಾಗವಹಿಸಿದ 70 ಸ್ಪರ್ಧಿಗಳನ್ನೊಳಗೊಂಡ ತಂಡವು ಭಾರತವನ್ನು ಪ್ರತಿನಿಧಿಸಿತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Watermelon Idli Recipe: ಕಣ್ಣು ಕುಕ್ಕುವ ಕಲ್ಲಂಗಡಿ ಇಡ್ಲಿ.. ಮಕ್ಕಳು ವಾವ್ ಅನ್ನೋದು ಗ್ಯಾರಂಟಿ!
ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿದರೆ ಏನಾಗುತ್ತದೆ? ಲಾಭವೋ ಇಲ್ಲ ನಷ್ಟವೋ?