ಬೇಸಿಗೆಯಲ್ಲಿ ತಂಪಾಗಿಸುವ ಆರೋಗ್ಯಕರ ಜ್ಯೂಸ್!

By Suvarna NewsFirst Published Feb 28, 2020, 4:10 PM IST
Highlights

ಗಸಗಸೆ, ಹೆಸರು ಕಾಳು, ಮೆಂತ್ಯೆ, ಎಳ್ಳು- ಇವೆಲ್ಲವೂ ಆರೋಗ್ಯಕ್ಕೆ ಒಳ್ಳೆಯವೇ. ಇವುಗಳ ಲಾಭವನ್ನು ಈ ಬೇಸಿಗೆಯಲ್ಲಿ ಪಡೆಯಲು ಜ್ಯೂಸ್ ಮಾಡಿ ಸವಿಯುವ ಅಭ್ಯಾಸ ಮಾಡಿಕೊಳ್ಳಿ. 

ಬೇಸಿಗೆ ಆರಂಭವಾಗಿದೆ. ಧಗೆಯ ಕಾರಣಕ್ಕೆ ಪದೇ ಪದೆ ಏನಾದರೂ ತಂಪಾದ ಪಾನೀಯ ಕುಡಿಯುತ್ತಿರೋಣವೆನಿಸುತ್ತದೆ. ಸಕ್ಕರೆಯಿಂದ ತುಂಬಿದ, ಪ್ರಿಸರ್ವೇಟಿನವ್ಸ್ ಹೊಂದಿದ ಹಾಳು ಮೂಳು ಕುಡಿವ ಬದಲು ತಾಜಾ ಹಣ್ಣುಗಳು ಹಾಗೂ ಇತರೆ ವಸ್ತುಗಳಿಂದ ಮನೆಯಲ್ಲೇ ತಯಾರಿಸಿಕೊಳ್ಳುವ ಜ್ಯೂಸ್‌ಗಳಿಗೆ ಮಣೆ ಹಾಕಿ. ಹೀಗೆ ಬೇಸಿಗೆಯ ಬಿಸಿಗೆ ತಂಪುತಂಪಾಗಿರಿಸಿ, ಆರೋಗ್ಯಕ್ಕೆ ಬೆಸ್ಟ್ ಎನಿಸುವ, ಮಾಡಲು ಸರಳವೂ ಆದಂಥ ಕೆಲ ರೆಸಿಪಿಗಳು ಇಲ್ಲಿವೆ. ಟ್ರೈ ಮಾಡಿ ರುಚಿ ಹೇಳಿ.

ಗಸಗಸೆ ಹಾಲು

ಸರ್ವಿಂಗ್ಸ್ 3

ಬೇಕಾಗುವ ಸಾಮಗ್ರಿಗಳು

4 ಚಮಚ ಗಸಗಸೆ, 7-8 ಬಾದಾಮಿ, 1 ಏಲಕ್ಕಿ, ತುರಿದ ಕಾಯಿ ಅರ್ಧ ಕಪ್, 5 ಚಮಚ ಜೇನುತುಪ್ಪ
ಗಸಗಸೆಯನ್ನು 4ರಿಂದ 6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಾದಾಮಿಯನ್ನು ಕೂಡಾ ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ಅದರ ಸಿಪ್ಪೆ ತೆಗೆದುಕೊಳ್ಳಿ. ಈಗ ನೆನೆದ ಗಸಗಸೆ, ಬಾದಾಮಿ ಹಾಗೂ ಕಾಯಿಯನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ ಪೇಸ್ಟ್ ಹದಕ್ಕೆ ತನ್ನಿ. ಇದಕ್ಕೆ 2 ಕಪ್ ನೀರು ಸೇರಿಸಿ. ಏಲಕ್ಕಿಯನ್ನು ಕುಟ್ಟಿ ಪುಡಿ ಮಾಡಿ ಹಾಕಿ. ಮೇಲಿನಿಂದ ಜೇನುತುಪ್ಪ ಬೆರೆಸಿ. ಸವಿಯಾದ ಗಸಗಸೆ ಹಾಲು ಕುಡಿಯಲು ಸಿದ್ಧ. 

ಎಕ್ಸಾಂ ಟೈಮಲ್ಲಿ ಮಕ್ಕಳಿಗೆ ಈ ರೆಸಿಪಿ ಇಷ್ಟವಾಗ್ಬಹುದು ನೋಡಿ......

ಎಳ್ಳು ಜ್ಯೂಸ್

ಸರ್ವಿಂಗ್ಸ್ 3

ಬೇಕಾಗುವ ಸಾಮಗ್ರಿಗಳು

ಎಳ್ಳು ಅರ್ಧ ಲೋಟ, ಕಾಯಿ 2 ಚಮಚ, ಏಲಕ್ಕಿ 1, ಬೆಲ್ಲ 1 ಸೌಟಿನಷ್ಟು. 

ಬಿಳಿಎಳ್ಳನ್ನು ತೊಳೆದು 1 ಕಪ್ ನೀರಿನಲ್ಲಿ ನೆನೆಯಲು ಹಾಕಿ. 1 ಗಂಟೆಯ ಬಳಿಕ ಸ್ವಲ್ಪ ನೀರನ್ನು ತೆಗೆದಿಟ್ಟುಕೊಂಡು ಎಳ್ಳನ್ನು ಮಿಕ್ಸಿಗೆ ಹಾಕಿ ಜೊತೆಗೆ ಎರಡು ಚಮಚತ ಕಾಯಿ ಹಾಗೂ ಏಲಕ್ಕಿ ಸೇರಿಸಿ ಪೇಸ್ಟ್ ಹದಕ್ಕೆ ತಂದುಕೊಳ್ಳಿ. ಇದಕ್ಕೆ ಮುಂಚೆ ತೆಗೆದಿಟ್ಟುಕೊಂಡ ನೀರು ಸೇರಿಸಿ. ಇದಕ್ಕೆ ಬೆಲ್ಲ ಹಾಕಿ ಸೌಟಿನಲ್ಲಿ ಕರಗಿಸಿ. ಈಗ ಎಳ್ಳಿನ ಜ್ಯೂಸ್ ಕುಡಿಯಲು ಸಿದ್ಧ. ಜೋನಿಬೆಲ್ಲ ಬಳಸುವುದು ಉತ್ತಮ. 

ಮೊಳಕೆಕಾಳಿನ ಜ್ಯೂಸ್

ಸರ್ವಿಂಗ್ಸ್ 3

ಬೇಕಾಗುವ ಸಾಮಗ್ರಿಗಳು

ಮೊಳಕೆ ಬರಿಸಿದ ಹೆಸರು ಕಾಳು 3 ಮುಷ್ಠಿ, ಬೆಲ್ಲ 1 ಸೌಟು, ನೀರು 3 ಲೋಟ.
ಹೆಸರು ಕಾಳನ್ನು ಮೊಳಕೆ ಬರಿಸಿ. ಚೆನ್ನಾಗಿ ಮೊಳಕೆ ಬಂದ ಹೆಸರುಕಾಳನ್ನು ಹಾಗೂ 1 ಸೌಟು ಬೆಲ್ಲವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ನೀರು ಸೇರಿಸಿ. ರುಚಿಯಾದ ಹಾಗೂ ಆರೋಗ್ಯಕಾರಿ ಮೊಳಕೆಕಾಳಿನ ಜ್ಯೂಸ್ ರೆಡಿ. ಮಕ್ಕಳು ಮೊಳಕೆ ಕಾಳನ್ನು ತಿನ್ನಲು ತಯಾರಿಲ್ಲದಿದ್ದಾಗ ಹೀಗೆ ಜ್ಯೂಸ್ ಮಾಡಿ ಕುಡಿಸಬಹುದು. ಪರಿಮಳಕ್ಕೆ ಬೇಕಾದಲ್ಲಿ ಏಲಕ್ಕಿ ಪುಡಿಯನ್ನು ಹಾಕಿಕೊಳ್ಳಿ. 

ದಿನಾ ಶುಂಠಿ ನೀರು ಕುಡಿದ್ರೆ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?...

ಮೆಂತ್ಯೆ ಜ್ಯೂಸ್

ಸರ್ವಿಂಗ್ಸ್ 3

ಬೇಕಾಗುವ ಸಾಮಗ್ರಿಗಳು

ಮೆಂತ್ಯೆ 1 ಕಪ್, ಬೆಲ್ಲ 1 ಸೌಟು, ನೀರು 3 ಲೋಟ.
1 ಕಪ್ ಮೆಂತ್ಯೆಯನ್ನು ಒಂದು ರಾತ್ರಿ ನೀರಿನಲ್ಲಿ ನೆನೆಯಲು ಹಾಕಿ. ಮರು ಬೆಳಗ್ಗೆ ನೀರನ್ನು ಖಾಲಿ ಮಾಡಿ(ಈ ನೀರನ್ನು ಸೇವಿಸುವುದರಿಂದ ಪ್ರಯೋಜನಗಳಿವೆ) ಸಂಜೆಯವರೆಗೆ ಮೊಳಕೆ ಬರಲು ಬಿಡಿ. ನಂತರ ಮೆಂತ್ಯೆಯನ್ನು ಮಿಕ್ಸಿಯಲ್ಲಿ ತಿರುಗಿಸಿ ಪಾತ್ರೆಗೆ ಬಗ್ಗಿಸಿಕೊಂಡು ಅದಕ್ಕೆ ಬೆಲ್ಲ ಹಾಗೂ ನೀರು ಸೇರಿಸಿ. ಇದು ಬಹಳಷ್ಟು ರುಚಿಯಾಗಿರುತ್ತದಲ್ಲದೆ, ಎಲ್ಲಿಯೂ ಮೆಂತ್ಯೆಯ ಕಹಿ ಅನುಭವಕ್ಕೆ ಬರುವುದಿಲ್ಲ. ಮೈಕೈ ನೋವಿರುವವರು ಮೆಂತ್ಯೆ ಜ್ಯೂಸ್ ಪ್ರತಿದಿನ ಸೇವಿಸುವುದು ಒಳ್ಳೆಯದು. ರುಚಿ ಹೆಚ್ಚಿಸಲು ಬೇಕಿದ್ದರೆ ತಿರಿಸುವಾಗ ಸ್ವಲ್ಪ ಶುಂಠಿ ಹಾಗೂ ನಿಂಬೆರಸ  ಬೆರೆಸಬಹುದು. 

click me!