ದಾಲ್ಗೊನಾ ಕಾಫಿ ಆಯ್ತು, ಈಗ ದಾಲ್ಗೊನಾ ರೈಸ್‌!

By Suvarna News  |  First Published Apr 14, 2020, 3:03 PM IST

ದಾಲ್ಗೊನಾ ರೈಸ್‌ ಬಂದಾಯಿತು.  ಇದನ್ನು ಮಾಡಿಕೊಳ್ಳುವುದು ಸುಲಭ. ಹೇಗೂ ಊಟಕ್ಕೆ ಅನ್ನ ಮಾಡಿಕೊಳ್ಳುತ್ತೀರಿ. ದಾಲ್‌ ಮಾಡಿಕೊಳ್ಳುವುದೂ ಮಾಮೂಲೇ. ಇದು ರೈಸ್‌ ಮತ್ತು ದಾಲ್‌ ಕಾಂಬಿನೇಶನ್‌ನಲ್ಲಿ ಮಾಡಿಕೊಳ್ಳುವ ಒಂದು ಖಾದ್ಯ ವೈವಿಧ್ಯ.


ದಾಲ್ಗೊನಾ ಕಾಫಿ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಒಂದು ಗ್ಲಾಸ್‌ನಲ್ಲಿ ಅರ್ಧ ಭಾಗ ಕೋಲ್ಡ್‌ ಮಿಲ್ಕ್ ಹಾಕಿಕೊಂಡು, ಇನ್‌ಸ್ಟಂಟ್‌ ಕಾಫಿ ಪುಡಿ ಕಲಕಿಕೊಂಡು ಪೇಸ್ಟ್‌ ಮಾಡಿಕೊಂಡು, ಮಿಲ್ಕ್‌ ಮೇಲಿನಿಂದ ಪೇಸ್ಟ್‌ ಹಾಕಿಕೊಂಡು, ಸ್ಪೂನ್‌ ಮೂಲಕ ಅದನ್ನು ಇಷ್ಟಿಷ್ಟೇ ತೆಗೆದುಕೊಂಡು ಚಪ್ಪರಿಸುತ್ತಾ ಸೇವಿಸಿದರೆ ಆಹಾ! ಎಂಥ ಸ್ವರ್ಗ ಸುಖ ಅಂತ ಸೆಲೆಬ್ರಿಟಿಗಳು ವಿಡಿಯೋ ಮಾಡಿ ಹಾಕಿರುವುದನ್ನು ನೀವು ನೋಡಿಯೇ ಇರುತ್ತೀರಿ. ನೀವೂ ಮನೆಯಲ್ಲಿ ಮಾಡಿ ಕುಡಿದಿರಬಹುದು. ಮಾಡಿಲ್ಲದಿದ್ದರೆ ಈಗಲಾದರೂ ಮಾಡಿಕೊಳ್ಳಬಹುದು. ಇರಲಿ. ಈಗ ಅದೂ ಕಳೆದು, ದಾಲ್ಗೊನಾ ರೈಸ್‌ ಬಂದಾಯಿತು. 

ಇದನ್ನು ಮಾಡಿಕೊಳ್ಳುವುದು ಸುಲಭ. ಹೇಗೂ ಊಟಕ್ಕೆ ಅನ್ನ ಮಾಡಿಕೊಳ್ಳುತ್ತೀರಿ. ದಾಲ್‌ ಮಾಡಿಕೊಳ್ಳುವುದೂ ಮಾಮೂಲೇ. ಇದು ರೈಸ್‌ ಮತ್ತು ದಾಲ್‌ ಕಾಂಬಿನೇಶನ್‌ನಲ್ಲಿ ಮಾಡಿಕೊಳ್ಳುವ ಒಂದು ಖಾದ್ಯ ವೈವಿಧ್ಯ. ಹೀಗೆ ಮಾಡಿ: ಒಂದು ಗ್ಲಾಸ್‌ ಕಪ್‌ ತೆಗೆದುಕೊಳ್ಳಿ. ಅದರಲ್ಲಿ ಅರ್ಧ ಭಾಗ ಬಿಸಿಬಿಸಿಯಾದ ಅನ್ನ ಹಾಕಿಕೊಳ್ಳಿ. ಅದರ ಮೇಲಿನಿಂದ ಅಷ್ಟೇ ಬಿಸಿಯಾದ ದಾಲ್‌ ಹಾಕಿಕೊಳ್ಳಿ. ಈಗ ನಿಮ್ಮ ದಾಲ್ಗೊನಾ ರೈಸ್‌ ರೆಡಿ. ಇದಕ್ಕೆ ನಿಮ್ಮ ಟೇಸ್ಟ್‌ಗೆ ತಕ್ಕಂತೆ ಕೊತ್ತಂಬರಿ ಸೊಪ್ಪು ಹೆಚ್ಚಿ ಹಾಕಿಕೊಳ್ಳಬಹುದು. ಅಥವಾ ನೀರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಸೇರಿಸಿಕೊಳ್ಳಲೂ ಬಹುದು. 

ವಯಸ್ಸು 50 ಆದ ಕೂಡಲೇ ಬದಲಾಗಲಿ ಡಯಟ್

ಇದನ್ನು ಮಿಕ್ಸ್‌ ಮಾಡಿಕೊಂಡು ತಿನ್ನುವುದಕ್ಕಿಂತಲೂ, ಹೇಗೆ ದಾಲ್ಗೊನಾ ಕಾಫಿಯನ್ನು ಮೇಲಿನಿಂದ ಸ್ವಲ್ಪ ಸ್ವಲ್ಪವೇ ಡಿಕಾಕ್ಷನ್‌ ಸೇರಿಸಿಕೊಂಡು ಸವಿಯುತ್ತೀರೋ ಅದೇ ಮನಸ್ಥಿತಿಯಲ್ಲಿ ಹಾಗೇ ಸೇವಿಸಬೇಕು. ಗ್ಲಾಸಿನ ಹೊರಗಿನಿಂದ ನೋಡಿದಾಗ ಇದು ದಾಲ್ಗೊನಾ ಕಾಫಿಯ ಪಾಕದಂತೆಯೇ ಕಾಣುತ್ತದೆ. ಕಾಫಿಯಲ್ಲಿ ಅದು ಕೆಳಗೆ ಬಿಳಿ ಮೇಲೆ ಕಂದು ಕಾಫಿಯ ಕಾಂಬಿನೇಶನ್‌ ಇರುತ್ತೆ. ಇದರಲ್ಲಿ ಕೆಳಗೆ ಬಿಳಿ ಮೇಲೆ ಹಳದಿ ದಾಲ್‌ ಇರುತ್ತದೆ. ಅಷ್ಟೇ ವ್ಯತ್ಯಾಸ. ರುಚಿಯಲ್ಲಿ ದಾಲ್- ಅನ್ನಕ್ಕೂ ಅಂಥ ವ್ಯತ್ಯಾಸವೇನೂ ಆಗೊಲ್ಲ. ಪ್ಲೇಟ್‌ ಬದಲು ಗ್ಲಾಸ್‌ನಲ್ಲಿ ಸೇವಿಸುತ್ತೀರಿ ಅನ್ನುವುದು ವ್ಯತ್ಯಾಸ. 



ರುಚಿಯಲ್ಲಿ ವೈವಿಧ್ಯತೆ ಬಯಸುವವರು ಹುರಿದ ಈರುಳ್ಳಿಯನ್ನು ಇದರ ಮೇಲೆ ಚಿಮುಕಿಸಿಕೊಳ್ಳಬಹುದು. ಅಥವಾ ನಿತ್ಯದಲ್ಲಿ ಮಾಡುವ ದಾಲ್ ಅನ್ನೇ ಇನ್ನಷ್ಟು ಮಂದವಾಗಿ ಮಾಡಿ, ಪೇಸ್ಟ್ ಅಥವಾ ಗಸಿಯಂತೆ ಮಾಡಿಕೊಂಡು ಸೇವಿಸಬಹುದು. ಇದರ ಮೇಲೆ ಸ್ವಲ್ಪ ಮೊಸರು ಹಾಕಿಕೊಳ್ಳಬಹುದು. ಬಿಸಿ ಅನ್ನದ ಜೊತೆಗೆ ಕೋಲ್ಡ್‌ ಮೊಸರು ಮತ್ತು ಬಿಸಿ ದಾಲ್‌ ಒಟ್ಟು ಮಾಡಿ ಸೇವಿಸಿಕೊಳ್ಳುವುದು ಇನ್ನೊಂದು ಬಗೆ. ಸ್ವಲ್ಪ ಹುರಿದ ಸಾಸಿವೆ, ಬೆಳ್ಳುಳ್ಳಿ, ಕೆಂಪುಮೆಣಸು ಕೂಡ ಹಾಕಿಕೊಂಡರೆ ಬೇರೊಂದು ಥರದ ವೈವಿಧ್ಯ.

 ಇಂಟರ್‌ನೆಟ್‌ನ ಹೊಸ ಫೆವರೆಟ್‌ ಡ್ರಿಂಕ್‌ - ಡಾಲ್ಗೊನಾ ಕಾಫಿ! 

ದಾಲ್ಗೊನಾ ಕಾಫಿ ಎಂಬ ಹೆಸರು ಯಾಕೆ ಬಂತೋ ಗೊತ್ತಿಲ್ಲ. ಆದರೆ ಇದಕ್ಕೆ ದಾಲ್ಗೊನಾ ರೈಸ್‌ ಎಂಬ ಹೆಸರಂತೂ ಅರ್ಥಪೂರ್ಣವಾಗಿಯೇ ಇದೆ. ಯಾಕೆಂದರೆ ಇದರಲ್ಲಿ ದಾಲ್‌ ಇದೆ! ಹಾಗಾಗಿ ಇದು ದಾಲ್‌ಗೋನಾ! ಅನ್ನ ಊಟ ಮಾಡಲು ಹಠ ಮಾಡುವ ಮಕ್ಕಳಿಗೆ ಒಂದು ಗ್ಲಾಸ್‌ನಲ್ಲಿ ಇದನ್ನು ಹಾಕಿಕೊಟ್ಟು ಹೊಸ ವೆರೈಟಿ ಅಂತ ಕೊಟ್ಟು ನೋಡಿ. ಮಕ್ಕಳು ಚಪ್ಪರಿಸಿಕೊಂಡು ತಿನ್ನದಿದ್ದರೆ ಕೇಳಿ.

"
click me!