ಮನೆಗೆ ಜಂಕ್ ಆಹಾರ ತಂದು ಸ್ಟೋರ್ ಮಾಡುವುದನ್ನು ಬಿಟ್ಟು ಬಿಡಿ. ಫ್ರಿಡ್ಜ್‌ನಲ್ಲಿ ಹಣ್ಣುಗಳು, ತರಕಾರಿ, ಡ್ರೈ ಫ್ರೂಟ್ಸ್ ಇಂಥವಷ್ಟನ್ನೇ ಇಡಿ. ಸಾಮಾನ್ಯವಾಗಿ ನಾವು ಹತ್ತಿರದಲ್ಲಿ ಏನು ಸಿಗುತ್ತದೋ ಅದನ್ನೇ ತಿನ್ನಲು ಆಯ್ಕೆ ಮಾಡಿಕೊಳ್ಳುತ್ತೀವಿ. ಹಾಗಾಗಿ, ಹಸಿವಾದಾಗ, ಏನಾದರೂ ತಿನ್ನಬೇಕೆನಿಸಿದಾಗ ಆರೋಗ್ಯವಂತ ಆಹಾರವಷ್ಟೇ ದೇಹ ಸೇರಲು ಶುರುವಾಗುತ್ತದೆ.
ಸ್ಮೋಕಿಂಗ್, ಕುಡಿತದಂತೆ ಜಂಕ್ ಫುಡ್ ಕೂಡಾ ಅಡಿಕ್ಷನ್ ಆಗಬಲ್ಲದು. ಅದೇ ಕಾರಣಕ್ಕೆ ಜಂಕ್ ತಿನ್ನಬಾರದು ಎಂದುಕೊಂಡಷ್ಟೂ ಅದರ ಕ್ರೇವಿಂಗ್ ಹೆಚ್ಚುವುದು. ಲಾಕ್‌ಡೌನ್ ಆಗುವವರೆಗೂ ಪ್ರತಿದಿನ ಹೊರಗೆ ಜಂಕ್ ತಿನ್ನಲು ಹೋಗುತ್ತಿದ್ದವರಿಗೆಲ್ಲ ಈಗ ನಾಲಿಗೆ ತುರಿಸಲಾರಂಭಿಸಿದೆ. ಸಂಜೆಯಾದರೆ ಸಾಕು, ಜಂಕ್‌ನ ಸೆಳೆತ ಆರಂಭವಾಗುತ್ತದೆ. ಇದಕ್ಕೆ ಕಾರಣ ಜಂಕ್ ಫುಡ್‌ನಲ್ಲಿ ಇರುವ ಫ್ಯಾಟ್, ಶುಗರ್, ಸಾಲ್ಟ್ ಜೊತೆಗೆ ಅಡಿಟಿವ್ಸ್. ಇವುಗಳು ಹಸಿವಾದಾಗ ಮಾತ್ರವಲ್ಲ, ವ್ಯಕ್ತಿಗೆ ಹೊಟ್ಟೆ ತುಂಬಿದ್ದರೂ ತನ್ನನ್ನು ತಿನ್ನುವಂತೆ ಸೆಳೆಯುತ್ತವೆ.
ಆದರೆ, ಜಂಕ್ ಹಾಗೂ ಸಕ್ಕರೆಯಿಂದ ತುಂಬಿದ ಆಹಾರಗಳು ವ್ಯಕ್ತಿಯ ಉತ್ಪಾದಕತೆಯನ್ನು ಕಡಿಮೆ ಮಾಡುತ್ತವೆ. ಸೋಮಾರಿತನ ಹೆಚ್ಚಿಸುತ್ತವೆ. ನಿದ್ದೆಗೆಳೆಯುತ್ತವೆ. ಜೊತೆಗೆ ಆರೋಗ್ಯವನ್ನೂ ಕೆಡಿಸುತ್ತವೆ. ಜಂಕ್ ಆಹಾರವನ್ನು ಡಯಟ್‌ನಿಂದ ಹೊರಗಿಡುವುದು ಕಷ್ಟವೇ. ಆದರೆ ಅಸಾಧ್ಯವಲ್ಲ. ನೀವು ಜಂಕ್ ಫುಡ್ ಲವರ್ ಆಗಿದ್ದಲ್ಲಿ ಈ ಕೆಲವೊಂದು ಟ್ಯಾಕ್ಟಿಕ್‌ಗಳು ಈ ಚಟದಿಂದ ಹೊರಬರಲು ನಿಮಗೆ ಸಹಾಯ ಮಾಡಬಹುದು. ಆದರೆ, ಅವನ್ನು ಪ್ರತಿದಿನ ನೀವು ಅಭ್ಯಾಸ ಮಾಡಬೇಕು. ಜಂಕ್ ಫುಡ್ ದ್ವೇಷಿಸುವಂತೆ ಮೆದುಳಿಗೆ ತರಬೇತಿ ನೀಡುವುದು ಹೇಗೆ ಎಂದು ತಿಳಿದುಕೊಳ್ಳಿ.
ನಿಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳಿ.
ಎಲ್ಲಕ್ಕಿಂತ ಮೊದಲು ನಿಮ್ಮ ಯೋಚನಾ ವಿಧಾನವನ್ನು ಅರ್ಥ ಮಾಡಿಕೊಳ್ಳಿ. ನಿಮಗೆ ಸಕ್ಕರೆಯ ಆಹಾರಗಳ ಚಟವೋ ಅಥವಾ ಫಾಸ್ಟ್ ಪುಡ್‌ಗಳ ಬಯಕೆಯೋ, ಫ್ರೈಸ್ ಇಷ್ಟವೋ, ಶೇಕ್ಸ್ ಇಷ್ಟವೋ ಎಂಬುದನ್ನು ಮೊದಲು ಯೋಚಿಸಿ ಕಂಡುಕೊಳ್ಳಿ. ಒಮ್ಮೆ ಇದಕ್ಕೆ ಉತ್ತರ ಸಿಕ್ಕಿದರೆ ಅಂಥ ಆಹಾರದಿಂದ ದೂರವುಳಿಯುವತ್ತ ಮುಖ ಮಾಡುವುದು ಸುಲಭವಾಗುತ್ತದೆ. ಇದರ ಮೊದಲ ಹೆಜ್ಜೆಯಾಗಿ ಮನೆಗೆ ಜಂಕ್ ಆಹಾರ ತಂದು ಸ್ಟೋರ್ ಮಾಡುವುದನ್ನು ಬಿಟ್ಟು ಬಿಡಿ. ಫ್ರಿಡ್ಜ್‌ನಲ್ಲಿ ಹಣ್ಣುಗಳು, ತರಕಾರಿ, ಡ್ರೈ ಫ್ರೂಟ್ಸ್ ಇಂಥವಷ್ಟನ್ನೇ ಇಡಿ. ಸಾಮಾನ್ಯವಾಗಿ ನಾವು ಹತ್ತಿರದಲ್ಲಿ ಏನು ಸಿಗುತ್ತದೋ ಅದನ್ನೇ ತಿನ್ನಲು ಆಯ್ಕೆ ಮಾಡಿಕೊಳ್ಳುತ್ತೀವಿ. ಹಾಗಾಗಿ, ಹಸಿವಾದಾಗ, ಏನಾದರೂ ತಿನ್ನಬೇಕೆನಿಸಿದಾಗ ಆರೋಗ್ಯವಂತ ಆಹಾರವಷ್ಟೇ ದೇಹ ಸೇರಲು ಶುರುವಾಗುತ್ತದೆ. ಇನ್ನು ಕಚೇರಿಯ ಹತ್ತಿರವೇ ಇಂಥ ಜಂಕ್ ಫುಡ್ ಸಿಗುತ್ತಿದ್ದರೆ, ನೀವು ಕಚೇರಿಗೆ ಹೋಗುವ ದಾರಿ ಬದಲಿಸುವುದು ಒಳಿತು. ಇವೆಲ್ಲಕ್ಕಿಂತ ಮೊದಲು ಮನೆಯಲ್ಲಿರುವ ಜಂಕ್ ಆಹಾರವನ್ನೆಲ್ಲ ಹೊರ ಹಾಕುವುದು ಮುಖ್ಯ.
ಇನ್ನು ಯಾವತ್ತೇ ಆಗಲಿ, ಗೆಳೆಯರೊಂದಿಗೆ ಹೊರ ಹೋಗುವಾಗ ಫಾಸ್ಟ್ ಫುಡ್ ದೊರಕುವ ಸ್ಥಳಗಳನ್ನು ಬಿಟ್ಟು ಬೇರೆ ಜಾಗಗಳನ್ನೇ ಮೀಟಿಂಗ್ ಪಾಯಿಂಟ್ ಆಗಿ ಗುರುತಿಸಿಕೊಳ್ಳಿ. ಇದರಿಂದ ಗೆಳೆಯರ ಒತ್ತಾಯಕ್ಕೆ ಚಟಕ್ಕೆ ಮರಳುವುದು ತಪ್ಪುತ್ತದೆ.
ಗೇಮ್ ಪ್ಲ್ಯಾನ್
ಜೀವನದ ಎಲ್ಲ ವಿಷಯಗಳಲ್ಲೂ ಗೇಮ್ ಪ್ಲ್ಯಾನ್ ಕೆಲಸ ಮಾಡುತ್ತದೆ. ನಿಮ್ಮ ಮನಸ್ಸಿನಲ್ಲಿ ಏನೇನು ಮಾಡಬೇಕು ಎಂಬ ಕುರಿತ ಚಿತ್ರಣವೊಂದಿದ್ದರೆ, ಸುಮ್ಮನೆ ಟಕ್ಕಂಥ ಮನಸ್ಸಿಗೆ ಬಂದ ಕೂಡಲೇ ತೋಚಿದ್ದನ್ನು ಮಾಡುವುದು ತಪ್ಪುತ್ತದೆ. ಹಾಗಾದರೆ ತಿನ್ನುವ ವಿಷಯದಲ್ಲಿ ನಿಮ್ಮ ಗೇಮ್ ಪ್ಲ್ಯಾನ್ ಏನಿರಬೇಕು? ಮೊದಲಿಗೆ ಅಂಗಡಿಗೆ ಹೋಗುವಾಗ ಮನೆಗೆ ಏನೇನು ದಿನಸಿ ತರಬೇಕೆಂದು ಪಟ್ಟಿ ಮಾಡಿಕೊಳ್ಳಿ. ಇದರಿಂದ ಡೋನಟ್ಸ್, ತಂಪು ಪಾನೀಯಗಳು ಇತ್ಯಾದಿಗಳನ್ನು ಮನೆಗೆ ತರುವುದು ತಪ್ಪುತ್ತದೆ. ಸಾಮಾನ್ಯವಾಗಿ ಅಂಗಡಿಗಳಲ್ಲಿ ಜೋಡಣೆಯೇ ಗ್ರಾಹಕ ಅಗತ್ಯಕ್ಕಿಂತ ಹೆಚ್ಚಿನದನ್ನು, ಅಗತ್ಯವಲ್ಲದ್ದನ್ನು ಖರೀದಿಸಲು ಪ್ರೇರೇಪಿಸುವಂತೆ ಇರುತ್ತದೆ. ಇದನ್ನು ಅರಿತಿದ್ದರೆ ಈ ಗಾಳಕ್ಕೆ ಸಿಕ್ಕಿಕೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು.
ಹೌದು, ಸಾಮಾನ್ಯವಾಗಿ ಮಳಿಗೆಗಳಲ್ಲಿ ಪ್ರೋಸೆಸ್ಡ್ ಹಾಗೂ ಪ್ಯಾಕೇಜ್ಡ್ ಆಹಾರಗಳನ್ನು ಕಣ್ಣಿಗೆ ಕುಕ್ಕುವಂತೆ ಇಟ್ಟಿರುತ್ತಾರೆ. ಆದರೆ, ಮಳಿಗೆಗೆ ಹೋಗುವ ಮುನ್ನವೇ ನೀವು ಇದಕ್ಕೆ ಮರುಳಾಗದಂತೆ, ಕೇವಲ ತಾಜಾ ಆಹಾರ ಪದಾರ್ಥಗಳನ್ನು ತರುವುದಾಗಿ ಮನಸ್ಸಿಗೆ ಬುದ್ಧಿವಾದ ಹೇಳಿಕೊಂಡು ಹೋಗಿ. ಇನ್ನು ಮನೆಯಲ್ಲಿ ವಾರದ ಅಡುಗೆ ಪ್ಲ್ಯಾನ್ ಬರೆದಿಟ್ಟುಕೊಳ್ಳಿ. ಮೂರು ಹೊತ್ತು ಅಲ್ಲದೆ, ಮಧ್ಯೆ ಮಧ್ಯೆ ತಿನ್ನಬೇಕಾದ ಸ್ನ್ಯಾಕ್ಸ್‌ಗಳನ್ನೂ ಪ್ಲ್ಯಾನ್ ಮಾಡಿ ಬರೆದಿಟ್ಟುಕೊಂಡು ಅದರಂತೆ ನಡೆದರೆ ಜಂಕ್ ದೇಹ ಸೇರಲು ಆಸ್ಪದವೇ ಇರುವುದಿಲ್ಲ.
ಫಿಟ್ನೆಸ್
ಯಾವುದಾದರೂ ಫಿಟ್ನೆಸ್ ಕ್ಲಾಸ್‌ಗೆ ಸೇರಿಕೊಂಡರೆ ಅಥವಾ ಸ್ಪೋರ್ಟ್ಸ್‌ನಲ್ಲಿ ತೊಡಗಿಕೊಂಡರೆ ಜಂಕ್ ಬಿಟ್ಟು ಮಸಲ್ ಬೆಳೆಸುವಂಥ, ಬೊಜ್ಜು ತಾರದಂಥ ಆಹಾರ ಸೇವಿಸುವ ವಿಷಯವೇ ಪದೇ ಪದೆ ಚರ್ಚೆಗೆ, ಯೋಚನೆಗೆ ಬರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚುತ್ತದೆ. ಫಿಟ್ನೆಸ್ ಮೇಲಿನ ಒಲವು ಹೆಚ್ಚಿದಂತೆಲ್ಲ ಆಹಾರದ ಆಯ್ಕೆ ಸರಿಯಾಗಿದ್ದರೆ ಸೌಂದರ್ಯ, ಸಂತೋಷ ಹಾಗೂ ಆರೋಗ್ಯ ಹೆಚ್ಚುತ್ತದೆ ಎಂಬ ರಿಮೈಂಡರ್ ದಿನೇ ದಿನೇ ಮನಸ್ಸಿಗೆ ಬರುತ್ತದೆ. ಇದರಿಂದ ಜಂಕ್ ಪ್ರೀತಿ ಕಡಿಮೆಯಾಗುತ್ತದೆ.
ಹೆಚ್ಚು ಅಗಿಯಿರಿ, ಕಡಿಮೆ ತಿನ್ನಿರಿ
ಹೆಚ್ಚು ಕಾಲ ತಿನ್ನಲು ತೆಗೆದುಕೊಂಡಷ್ಟೂ ನೀವು ಕಡಿಮೆ ತಿನ್ನುವಿರಿ ಎಂಬುದು ನಿಮಗೆ ಗೊತ್ತೇ? ಜಂಕ್ ಆಗಲಿ ಅಥವಾ ಬೇರೆಯೇ ಆಹಾರವಾಗಲಿ, ಹೆಚ್ಚು ಹೊತ್ತು ಆಹಾರವನ್ನು ಅಗಿಯುತ್ತಿದ್ದರೆ ತಿನ್ನುವ ಪದಾರ್ಥದ ಕ್ವಾಂಟಿಟಿ ಕಡಿಮೆಯಾಗುತ್ತದೆ. ತಿನ್ನಲು ಶುರು ಮಾಡಿ 20 ನಿಮಿಷವಾಗಿದ್ದರೆ ಹೊಟ್ಟೆ ಫುಲ್ ಎಂಬ ಸಿಗ್ನಲ್ ಕಳುಹಿಸುತ್ತದೆ. ಹಾಗಾಗಿ, ಯಾವುದನ್ನಾದರೂ ಬಾಯಿಗೆ ಹಾಕಿಕೊಂಡಾಗ ಹೆಚ್ಚು ಹೊತ್ತು ಅದನ್ನು ಅಗಿಯಿರಿ.
ಬಣ್ಣಗಳು ಹಾಗೂ ಪರಿಸರಕ್ಕೆ ಗಮನ ವಹಿಸಿ
ಸಾಮಾನ್ಯವಾಗಿ ಮ್ಯಾಕ್‌ಡೊನಾಲ್ಡ್ ಸೇರಿದಂತೆ ಬಹುತೇಕ ಜಂಕ್ ಫುಡ್ ಅಡ್ಡೆಗಳು ಸುತ್ತಮುತ್ತ ಕೆಂಪು, ಹಳದಿ, ಆರೆಂಜ್ ಬಣ್ಣಗಳಿರುವಂತೆ ನೋಡಿಕೊಳ್ಳುತ್ತವೆ. ಈ ಬಣ್ಣಗಳು ಸುಳ್ಳು ಸುಳ್ಳೇ ಹಸಿವು ಹೆಚ್ಚಿಸಿ ಹೆಚ್ಚು ತಿನ್ನುವಂತೆ ಪ್ರೇರೇಪಿಸುತ್ತವೆ. ಹಾಗಾಗಿ, ನೀವು ತಿನ್ನುವ ಸ್ಥಳಗಳಲ್ಲಿ ಬಣ್ಣಗಳು ತಿಳಿವರ್ಣ ಇರುವಂತೆ ನೋಡಿಕೊಳ್ಳಿ. ನೀವು ಬಳಸುವ ಪಾತ್ರೆ ವಸ್ತುಗಳು ಸಾಧಾರಣವಾಗಿರಲಿ. ಇನ್ನೊಂದು ಐಡಿಯಾ ಎಂದರೆ ಸಣ್ಣ ತಟ್ಟೆಯಲ್ಲಿ ಊಟ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸ್ವಲ್ಪ ಹಾಕಿಕೊಂಡಾಗಲೂ ತುಂಬಿದಂತೆ ಭಾಸವಾಗುತ್ತದೆ.
ಹೆಚ್ಚು ತಿಳಿದಷ್ಟೂ ಕಡಿಮೆ ತಿನ್ನುತ್ತೀರಿ
ಜಂಕ್ ಫುಡ್ ಹೇಗೆ ತಯಾರಿಸುತ್ತಾರೆ, ಅವುಗಳಿಂದ ಆರೋಗ್ಯಕ್ಕೆ ಹೇಗೆ ಹಾನಿಯಾಗುತ್ತದೆ ಎಂಬುದರ ಕುರಿತ ಹೆಚ್ಚು ಹೆಚ್ಚು ವಿಡಿಯೋಗಳನ್ನು ನೋಡಿ. ಕಾಲಿನಲ್ಲಿ ಮೆಟ್ಟಿ ಪಾನಿಪೂರಿ ಹಿಟ್ಟು ಮಾಡುವುದು, ಟಾಯ್ಲೆಟ್ ಪಕ್ಕದಲ್ಲೇ ಬೇಕರಿ ಐಟಂ ತಯಾರಿಸುವುದು, ತಟ್ಟೆಗಳನ್ನು ಸರಿಯಾಗಿ ತೊಳೆಯದೆ ಬಳಸುವುದು, ಯಾವುಯಾವುದೋ ರಾಸಾಯನಿಕಗಳನ್ನು ಬಳಸಿ ಬಣ್ಣ ಬರುವಂತೆ ಮಾಡುವುದು ಮುಂತಾದವನ್ನು ನೋಡುವಾಗ ನಿಧಾನವಾಗಿ ಆ ಜಂಕ್ ಆಹಾರಗಳ ಬಗ್ಗೆ ವಾಕರಿಕೆ ಬರದಿದ್ದರೆ ಕೇಳಿ.