ಯಬ್ಬೇ! ಜಗತ್ತಿನ ಭಯಾನಕ ಆಹಾರಗಳಿವು...

By Suvarna NewsFirst Published Jul 10, 2020, 5:34 PM IST
Highlights

ಇಲ್ಲೊಬ್ಬಾಕೆ ಜಿರಳೆಯನ್ನು ನೋಡಿದ್ರೇ ಗಾವುದ ದೂರ ಹಾರಿದ್ರೆ, ಮತ್ತೊಂದೆಡೆ ಅದೇ ಜಿರಳೆಯನ್ನು ನೋಡಿ ಬಾಯಿ ಚಪ್ಪರಿಸುವವರಿದ್ದಾರೆ. ಒಬ್ಬರಿಗೆ ಭಯಾನಕವೆನಿಸಿದ್ದು, ಮತ್ತೊಬ್ಬರಿಗೆ ಹಾಗೆನಿಸಬೇಕಿಲ್ಲ. ಹಾಗಿದ್ದೂ ಬಹುತೇಕರಿಗೆ ಭಯಾನಕ ಎನಿಸಿದ ಆಹಾರಗಳಿವು. 

ಯಾವುದಾದರೂ ಸಂಸ್ಕೃತಿಯನ್ನು ಅರಿಯೋ ಮೊದಲ ವಿಧಾನವೆಂದರೆ ಅವರ ಆಹಾರ ಪದ್ಧತಿಗಳನ್ನು ಗಮನಿಸುವುದು. ಪ್ರಪಂಚದಲ್ಲಿ ಏನೇನೆಲ್ಲ ತಿಂತಾರಪ್ಪಾ ಅಂಥ ನೋಡಿದ್ರೆ ಆಶ್ಚರ್ಯವಾಗುತ್ತೆ. ಇಲ್ಲೊಬ್ಬಾಕೆ ಜಿರಳೆಯನ್ನು ನೋಡಿದ್ರೇ ಗಾವುದ ದೂರ ಹಾರಿದ್ರೆ, ಮತ್ತೊಂದೆಡೆ ಅದೇ ಜಿರಳೆಯನ್ನು ನೋಡಿ ಬಾಯಿ ಚಪ್ಪರಿಸುವವರಿದ್ದಾರೆ. ನಾವು ಮಂಗಗಳ ಬುದ್ಧಿಮತ್ತೆ ಮೆಚ್ಚಿದರೆ, ಮತ್ತೆ ಕೆಲವರು ಅದರ ಮೆದುಳಿನ ರುಚಿಯನ್ನು ಮೆಚ್ಚುವವರಿದ್ದಾರೆ. ನಾಯಿಯನ್ನು ಮಗುವಿನಂತೆ ಪ್ರೀತಿಸುವವರು ಒಂದೆಡೆಯಾದರೆ ನಾಯಿಯ ಮಾಂಸ ನಾಲಿಗೆ ಮೇಲಿದ್ದರೇ ಪ್ರೀತಿ ಎನ್ನುವವರು ಮತ್ತೊಂದೆಡೆ. ಒಟ್ನಲ್ಲಿ ಮನುಷ್ಯನ ಬಾಯಿರುಚಿ ವೈವಿಧ್ಯದಷ್ಟೇ ವಿಚಿತ್ರ ಕೂಡಾ. 

ಒಬ್ಬರಿಗೆ ಭಯಾನಕವೆನಿಸಿದ್ದು, ಮತ್ತೊಬ್ಬರಿಗೆ ಹಾಗೆನಿಸಬೇಕಿಲ್ಲ. ಹಾಗಿದ್ದೂ ಬಹುತೇಕರಿಗೆ ಭಯಾನಕ ಎನಿಸಿದ ಆಹಾರಗಳಿವು. ಇವುಗಳಲ್ಲಿ ಕೆಲವು ನೋಡಲು ಭಯಾನಕವಾಗಿದ್ದರೆ ಮತ್ತೆ ಕೆಲವು ಆರೋಗ್ಯಕ್ಕೆ ಹಾನಿಕಾರಕವಾಗಿವೆ.

ನಿಮ್ಮ ಬ್ಲಡ್‌ ಗ್ರೂಪ್‌ಗೆ ತಕ್ಕ ಆಹಾರ ಯಾವುದು ನಿಮಗೆ ಗೊತ್ತಾ?

ಟ್ಯೂನಾ ಐಬಾಲ್ಸ್
ಟ್ಯೂನಾ ಮೀನಿನ ಕಣ್ಣುಗಳು ಗೋಲಿಯಂತೆ ದೊಡ್ಡದಾಗಿ ಫಳಫಳಿಸುತ್ತವೆ. ಅಂಥ ಕಣ್ಣುಗಳನ್ನೇ ಕಿತ್ತು ಉಪ್ಪು ಹುಳಿ ಖಾರ ಹಾಕಿ ತಿನ್ನುತ್ತಾರೆ ಜಪಾನಿಗರು. ಇವುಗಳಲ್ಲಿ ಒಮೆಗಾ 3 ಫ್ಯಾಟಿ ಆ್ಯಸಿಡ್ ಹೆಚ್ಚಿರುತ್ತದೆಂಬುದೇನೋ ಸರಿ, ಆದರೆ, ತಟ್ಟೆಯನ್ನು ನೋಡಿದರೇ ಯಾರಿಗಾದರೂ ಹೆದರಿ ಹೌಹಾರುವಂತಾಗುವುದು ಸುಳ್ಳಲ್ಲ. 

ಪಫರ್ ಫಿಶ್
ಫುಗು ಎಂದೂ ಕರೆಸಿಕೊಳ್ಳುವ ಈ ಪಫರ್‌ಫಿಶ್ ಪಾರದರ್ಶಕವಾಗಿದ್ದು, ಸ್ವಚ್ಛ ಸುಂದರವಾಗಿ ಕಾಣುತ್ತದೆ. ರುಚಿಯೂ ಸಾಧಾರಣವೇ. ಆದರೂ ಜಪಾನಿಗರಿಗಿದಿಷ್ಟ. ಇದನ್ನು ಭಯಾನಕಗೊಳಿಸಿದ್ದೇನೆಂದರೆ, ಇದು ಬಹಳ ವಿಷಕಾರಿ ಎಂಬುದು. ಹೌದು, ತಿಂದವರನ್ನು ಸಾಯಿಸುವಷ್ಟು ವಿಷ ಇದರಲ್ಲಿದೆ. ಹಾಗಿದ್ದೂ ಜಪಾನಿಗರು ಇದಕ್ಕಾಗಿ ಜೀವ ಬಿಡುವುದೇಕೋ ಅರಿಯದು. 

ಕಾಟ್ಸು ಇಕಾ ಓಡೋರಿ-ಡಾನ್
ಆಕ್ಟೋಪಸ್‌ನಂತೆ ಚಿತ್ರವಿಚಿತ್ರವಾಗಿರುವ ಮೀನು ಸ್ಕ್ವಿಡ್. ಜಪಾನ್‌ನಲ್ಲಿ ಕಾಟ್ಸು ಇಕಾ ಓಡೋರಿ-ಡಾನ್ ಎಂಬ ಖಾದ್ಯವೊಂಜನ್ನು ತಯಾರಿಸುತ್ತಾರೆ. ಅದರಲ್ಲಿ ಅನ್ನ ಅಥವಾ ನೂಡಲ್ಸ್ ಮೇಲೆ ಜೀವಂತ ಸ್ಕ್ವಿಡ್ ಮೀನನ್ನು ಇಡುತ್ತಾರೆ. ಮೇಲಿನಿಂದ ಸಾಸ್ ಹಾಕಿದಾಗ ಇದರ ಸ್ನಾಯುಗಳು ಉಪ್ಪಿಗೆ ಪ್ರತಿಕ್ರಿಯಿಸಿ, ಅದರಲ್ಲಿ ಈಜುವುದೋ, ಒದ್ದಾಡುವುದೋ ಮಾಡುತ್ತಿರುತ್ತವೆ. ಇದನ್ನು ತಿಂದಾಗ ಕತ್ತನ್ನು ಒತ್ತಿದಂಥ ಅನುಭವವಾಗಬಹುದು. 

ಹುರಿದ ಜೇಡ
ಕಾಂಬೋಡಿಯನ್ನರ ಫೇವರೇಟ್ ರೆಸಿಪಿ ಇದು. ಜೇಡಗಳನ್ನು ಹುರಿದು ಅದಕ್ಕೆ ಹರ್ಬ್ಸ್ ಹಾಕಿ ನೂಡಲ್ಸ್ ಅಥವಾ ಅನ್ನದ ಮೇಲೆ ಹರವಿ ಕೊಡುತ್ತಾರೆ. ಈ ಜೇಡಗಳು ಹೊರಗಿನಿಂದ ಕರುಂ ಕುರುಂ ಎಂದರೆ ಒಳಗೆ ಅಂಟಂಟಾಗಿರುತ್ತವೆ. 

ಎಸ್ಕಮೋಲ್ಸ್
ಕರಿಯ ದೊಡ್ಡ ಇರುವೆಗಳ ಮೊಟ್ಟೆಗಳೇ ಎಸ್ಕಮೋಲ್ಸ್. ಮೆಕ್ಸಿಕೋದಲ್ಲಿ ಇದನ್ನು ಟ್ಯಾಕೋಸ್ ಒಳಗಿಟ್ಟು ಖಾದ್ಯ ತಯಾರಿಸುತ್ತಾರೆ. 

ಕಾಸು ಮಾರ್ಝು
ಇಟಲಿಯ ಸರ್ಡೇನಿಯಾ ದ್ವೀಪದಲ್ಲಿ ಕುರಿಯ ಹಾಲಿನಿಂದ ತಯಾರಿಸಿದ ಚೀಸ್‌ ಬಳಸಿ ಕಾಸು ಮಾರ್ಝುವನ್ನು ತಯಾರಿಸಲಾಗುತ್ತದೆ. ಇದರಲ್ಲಿ ಕೀಟದ ಜೀವಂತ ಲಾರ್ವೆ ಇರುತ್ತದೆ. ಈ ಕೀಟವು ಚೀಸನ್ನು ಹುದುಗುಬರಿಸುತ್ತದೆ. ಇದನ್ನು ತಿಂದಾಗ ಹೊಟ್ಟೆ ನೋವು, ಸಂಕಟ, ವಾಂತಿ, ಬೇಧಿ ಮುಂತಾದವು ಕಾಣಿಸಿಕೊಳ್ಳುತ್ತದೆ. ಸಧ್ಯ ಈ ಆಹಾರ ಪದಾರ್ಥವನ್ನು ನಿಷೇಧಿಸಲಾಗಿದೆ. 

ಟೂನಾ
ಟ್ಯೂನಾವನ್ನು ಬಹುತೇಕ ಎಲ್ಲ ಕಡೆ ಸೇವಿಸುತ್ತಾರೆ. ಆದರೆ, ಸಂಶೋಧನೆಗಳ ಪ್ರಕಾರ ಟ್ಯೂನಾ ಸೇವನೆ ವಿಷಕಾರಿಯಾಗಿದೆ. ಏಕೆಂದರೆ, ಮಾಲಿನ್ಯದ ಕಾರಣದಿಂದ ನೀರು ಸೇರಿದ ಪಾದರಸವನ್ನು ಈ ಮೀನುಗಳ ಮಾಂಸ ಹಿಡಿದಿಟ್ಟುಕೊಳ್ಳುತ್ತದೆ. ಈ ಪಾದರಸವು ಮನುಷ್ಯರ ನರಮಂಡಲಕ್ಕೆ ಅಪಾಯಕಾರಿಯಾಗಿದೆ. ಹಾಗಾಗಿ, ಇಂಥ ಟ್ಯೂನಾ ಸೇವಿಸಿದರೆ ಹಲವಾರು ಮಾನಸಿಕ ಸಮಸ್ಯೆಗಳು ಎದುರಾಗುವ ಜೊತೆಗೆ, ಬುದ್ಧಿಶಕ್ತಿ ಕೊರತೆ, ಮರೆವು ಇತ್ಯಾದಿ ಸಮಸ್ಯೆಗಳು ತಲೆದೋರುತ್ತವೆ. 

ಸನ್ನಾಕ್ಜಿ
ಕೊರಿಯಾದ ಒಂದು ಬಗೆಯ ಆಹಾರ ಇದಾಗಿದ್ದು, ಜೀವಂತವಾಗಿರುವ ಆಕ್ಟೋಪಸ್ ಮರಿಯಿಂದ ಇದನ್ನು ತಯಾರಿಸುತ್ತಾರೆ. ಅದಕ್ಕೆ ಸಾಸಿವೆ ಎಣ್ಣೆ ಹಾಗೂ ಕಾಳುಗಳನ್ನು ಬಳಸಿ ರುಚಿ ಹೆಚ್ಚಿಸುತ್ತಾರೆ. ಆದರೆ, ಆಕ್ಟೋಪಸ್‌ನ ಸಕ್ಷನ್ ಕ್ಯಾಪ್ಗಳು ಇನ್ನೂ ಎಚ್ಚರವಿದ್ದು, ತಿಂದವರ ಗಂಟಲನ್ನು ಒತ್ತಿ ಹಿಡಿವ ಇಲ್ಲವೇ ಏರ್‌ಪೈಪನ್ನು ಮುಚ್ಚಿಬಿಡುವ ಸಾಧ್ಯತೆಗಳಿರುತ್ತವೆ. 

ಯೋಗ್ಯ ಆಹಾರದಿಂದ ಹೊಳೆಯುವ ಕಣ್ಣುಗಳ ಆರೋಗ್ಯ!

ಮಂಗದ ಮೆದುಳು
ಚೀನಾದಲ್ಲಿ ಮಂಗಗಳ ಮೆದುಳಿಗೆ ಭಾರಿ ಬೇಡಿಕೆ. ಆದರೆ, ಇದನ್ನು ತಿನ್ನುವುದು ವಿಚಿತ್ರವಷ್ಟೇ ಅಲ್ಲ, ಅಪಾಯಕಾರಿ ಕೂಡಾ. ಇದನ್ನು ಸೇವಿಸುವುದರಿಂದ ಕ್ರೂಯೆಟ್‌ಫೆಟ್- ಜಾಕೋಬ್ ಎಂಬ ಕಾಯಿಲೆ ಬರಬಹುದು. ಇದರಿಂದ ನರಮಂಡಲಕ್ಕೆ ಹಾನಿಯಾಗಿ ಸಂಪೂರ್ಣ ಮರೆವು, ಕುರುಡುತನ, ಖಿನ್ನತೆ, ಸಾವು ಎಲ್ಲವೂ ಸಂಭವಿಸಬಹುದು. 
 

click me!