ರಾಗಿ ತಿಂದೋನಿಗೆ ರೋಗವಿಲ್ಲ ಅನ್ನೋ ಮಾತು ಕೇಳಿರ್ತೀರಿ. ಆದ್ರೆ ಈ ಮಾತು ಯಾಕೆ ಹೇಳ್ತಾರೆ ಅಂತ ಗೊತ್ತಾಗ್ಬೇಕಂದ್ರೆ ರಾಗಿಯಿಂದ ಆರೋಗ್ಯಕ್ಕೆ ಅದೆಷ್ಟೆಲ್ಲ ಲಾಭಗಳಿವೆ ಎಂದು ತಿಳ್ಕೋಬೇಕು.
ರಾಗಿ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ನಂಬರ್ ಒನ್. ಜಗತ್ತಿನ ರಾಗಿ ಉತ್ಪಾದನೆಯ ಶೇ.58ರಷ್ಟು ರಾಗಿ ನಮ್ಮ ದೇಶವೊಂದರಲ್ಲೇ ಉತ್ಪತ್ತಿಯಾಗುತ್ತದೆ. ಆದರೂ, ರಾಗಿಯ ಪೋಷಕಸತ್ವಗಳ ಕುರಿತು, ಆರೋಗ್ಯ ಲಾಭಗಳ ಕುರಿತು ಕೆಲವೇ ಭಾರತೀಯರಿಗೆ ಗೊತ್ತಿರುವುದು ದುರದೃಷ್ಟಕರ. ನೀವು ಕೂಡಾ ರಾಗಿಯ ವಿಷಯದಲ್ಲಿ ಅಲ್ಪಜ್ಞಾನಿಗಳಾಗಿದ್ದಲ್ಲಿ, ಇನ್ನು ಮುಂದೆ ಅದನ್ನು ಬಳಸಲು ಕಾರಣಗಳನ್ನು ನಾವು ನೀಡುತ್ತೇವೆ.
1. ಕ್ಯಾಲ್ಶಿಯಂ ಕಣಜ
ಕ್ಯಾಲ್ಶಿಯಂ ವಿಷಯಕ್ಕೆ ಬಂದರೆ ಬೇರಾವ ಧಾನ್ಯವೂ ರಾಗಿಯ ಹತ್ತಿರಕ್ಕೂ ಬರಲು ಸಾಧ್ಯವಿಲ್ಲ. ಆಸ್ಟಿಯೋಪೋರೋಸಿಸ್ ಬರದಂತೆ ನೋಡಿಕೊಳ್ಳುವಲ್ಲಿ, ಮೂಳೆ, ಹಲ್ಲುಗಳ ಸದೃಢತೆಗೆ ಕ್ಯಾಲ್ಶಿಯಂ ಅತ್ಯಗತ್ಯ. ಹಾಗಾಗಿ, ಕ್ಯಾಲ್ಶಿಯಂ ಮಾತ್ರೆ ತಗೊಳ್ಳುವ ಬದಲಿಗೆ ಪ್ರತಿದಿನ ರಾಗಿ ಅಂಬಲಿ ಕುಡಿಯುವುದು ಉತ್ತಮ. ರೊಟ್ಟಿ, ದೋಸೆ, ಚಪಾತಿ ಮುಂತಾದವುಗಳಲ್ಲಿ ಕೂಡಾ ರಾಗಿ ಹಿಟ್ಟನ್ನು ಸೇರಿಸಬಹುದು. ಮಕ್ಕಳ ಆಹಾರದಲ್ಲಿ ರಾಗಿ ಹೆಚ್ಚಾಗಿ ಸೇರಿಸಿದರೆ ಬೆಳವಣಿಗೆ ಹಂತದಲ್ಲಿ ಹೆಚ್ಚು ಲಾಭ ಕೊಡುತ್ತದೆ.
2. ತೂಕ ಇಳಿಕೆಗೆ ಸಹಕಾರಿ
ಅನ್ನ ತಿಂದರೆ ದಪ್ಪಗಾಗುತ್ತೇವೆಂದು ಅದನ್ನು ದೂರವಿಡುವವರು ನೀವಾದರೆ ಬದಲಿಗೆ ರಾಗಿಯ ಬಳಕೆ ಹೆಚ್ಚಿಸಿ. ಎಲ್ಲ ಧಾನ್ಯಗಳಿಗಿಂತ ಅತಿ ಕಡಿಮೆ ನ್ಯಾಚುರಲ್ ಫ್ಯಾಟ್ ರಾಗಿಯಲ್ಲಿದೆ. ಅದರಲ್ಲೂ ಇದು ಅನ್‌ಸ್ಯಾಚುರೇಟೆಡ್ ರೂಪದಲ್ಲಿರುವುದರಿಂದ ಗೋಧಿ ಹಾಗೂ ಅಕ್ಕಿಯ ಬದಲಿಯಾಗಿ ಬಳಸುವುದರಿಂದ ತೂಕ ಇಳಿಕೆಗೆ ಸಹಕಾರಿ. ಇದರಲ್ಲಿರುವ ಟ್ರಿಪ್ಟೋಫ್ಯಾನ್ ಎಂಬ ಅಮೈನೋ ಆ್ಯಸಿಡ್ ಹಸಿವು ಕಡಿಮೆ ಮಾಡುತ್ತದೆ.
3. ಹೈ ಫೈಬರ್
ಅಕ್ಕಿಗೆ ಹೋಲಿಸಿದರೆ, ರಾಗಿಯಲ್ಲಿ ಫೈಬರ್ ಅಧಿಕವಾಗಿರುತ್ತದೆ. ಇದರಿಂದಾಗಿ ರಾಗಿ ಜೀರ್ಣಕಕ್ರಿಯೆಗೂ ಸಹಕಾರಿ, ಮಲಬದ್ಧತೆ ತಡೆಯುತ್ತದೆ ಜೊತೆಗೆ ಹೆಚ್ಚು ಕಾಲ ನಿಮ್ಮನ್ನು ಫುಲ್ ಆಗಿಡುತ್ತದೆ. ಲೆಸಿಥಿನ್ ಹಾಗೂ ಮಿಥಿಯೋನಿನ್ ಅಮೈನೋ ಆ್ಯಸಿಡ್‌ಗಳು ಕೊಲೆಸ್ಟೆರಾಲ್ ಕಡಿಮೆ ಮಾಡಿ, ಲಿವರ್‌ನಲ್ಲಿ ಹೆಚ್ಚು ಫ್ಯಾಟ್ ಶೇಖರವಾಗದಂತೆ ನೋಡಿಕೊಳ್ಳುತ್ತದೆ.
4. ಸಕ್ಕರೆ ಮಟ್ಟ ನಿರ್ವಹಣೆ
ಮುಂಚೆಯೇ ಹೇಳಿದಂತೆ ಹೈ ಪಾಲಿಫಿನಾಲ್ ಹಾಗೂ ಹೈ ಫೈಬರ್ ಇರುವುದರಿಂದ ಮತ್ತೊಂದು ಉಪಯೋಗವಿದೆ. ಅದೆಂದರೆ ಡಯಾಬಿಟಿಕ್ ರೋಗಿಗಳು ಯಾವುದೇ ಯೋಚನೆಯಿಲ್ಲದೆ ರಾಗಿ ಮೇಲೆ ನಂಬಿಕೆ ಇಡಬಹುದು. ಪ್ರತಿದಿನದ ಆಹಾರದಲ್ಲಿ ರಾಗಿಯ ಬಳಕೆಯಿಂದ ಟೈಪ್ 2 ಡಯಾಬಿಟೀಸನ್ನು ತಡೆಯಬಹುದು ಕೂಡಾ.
5. ಅನೀಮಿಯಾ ವಿರುದ್ಧ ಹೋರಾಟ
ಭಾರತೀಯ ಮಹಿಳೆಯರು ಹಾಗೂ ಮಕ್ಕಳಲ್ಲಿ ಅನೀಮಿಯಾ ಸಾಮಾನ್ಯ ಸಮಸ್ಯೆಯಾಗಿದೆ. ರಾಗಿಯಲ್ಲಿ ಕಬ್ಬಿಣಾಂಶ ಅತ್ಯಧಿಕವಾಗಿದ್ದು, ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆ ಇರುವವರು, ನಿಶ್ಯಕ್ತಿಯಿಂದ ಬಳಲುವವರು ರಾಗಿಯ ಸೇವನೆ ಹೆಚ್ಚಿಸಬೇಕು. ವಿಟಮಿನ್ ಸಿಯು ದೇಹದಲ್ಲಿ ಐರನ್ ಅಂಶ ಸೆಳೆದುಕೊಳ್ಳಲು ಸಹಕಾರಿ. ಒಮ್ಮೆ ರಾಗಿಯನ್ನು ಮೊಳಕೆ ಬರಿಸಿದಿರಾದರೆ ವಿಟಮಿನ್ ಸಿ ಮಟ್ಟ ಅದರಲ್ಲಿ ಹೆಚ್ಚುತ್ತದೆ. ಇದರಿಂದ ರಕ್ತಕ್ಕೆ ಹೆಚ್ಚು ಐರನ್ ಸೇರುತ್ತದೆ. ವಿಟಮಿನ್ ಸಿ ಕೂಡಾ ಸಿಗುತ್ತದೆ.
6. ನ್ಯಾಚುರಲ್ ರಿಲ್ಯಾಕ್ಸಂಟ್
ರಾಗಿಯಲ್ಲಿರುವ ಅಧಿಕ ಅಮೈನೋ ಆ್ಯಸಿಡ್ ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳು ದೇಹವನ್ನು ರಿಲ್ಯಾಕ್ಸ್ ಮಾಡುತ್ತವೆ. ಹಾಗಾಗಿ, ಆತಂಕ, ನಿದ್ರಾಹೀನತೆ, ತಲೆನೋವು, ಖಿನ್ನತೆಯಂಥ ಸಮಸ್ಯೆಗಳನ್ನು ರಾಗಿಯಿಂದ ಹೊಡೆದೋಡಿಸಬಹುದು.
7. ಸ್ಟ್ರೋಕ್ ರಿಸ್ಕ್ ಕಡಿಮೆ
ಅಧಿಕ ರಕ್ತದೊತ್ತಡದ ಆರಂಭಿಕ ಹಂತದಲ್ಲೇ ರಾಗಿಯನ್ನು ಹೆಚ್ಚಾಗಿ ಸೇವಿಸಿದರೆ, ಹೈ ಬಿಪಿ ಬರದಂತೆ ನೋಡಿಕೊಳ್ಳಬಹುದು. ರಕ್ತದಲ್ಲಿರುವ ಕೊಲೆಸ್ಟೆರಾಲ್ ಮಟ್ಟವನ್ನೂ ನಿಯಂತ್ರಿಸಬಹುದು. ಇದರಿಂದಾಗಿ ರಕ್ತನಾಳಗಳು ಬ್ಲಾಕ್ ಆಗುವುದಿಲ್ಲ. ಇದರಿಂದಾಗಿ ಹೈಪರ್‌ಟೆನ್ಷನ್ ಹಾಗೂ ಸ್ಟ್ರೋಕ್‌ನ್ನು ಗಣನೀಯ ಮಟ್ಟದಲ್ಲಿ ತಡೆಯಬಹುದು.
8. ಗ್ಲುಟೆನ್ ಫ್ರೀ
ಸೆಲಿಯಾಕ್ ಡಿಸೀಸ್ ಇರುವವರು ಅಥವಾ ಗ್ಲುಟೆನ್ ಫ್ರೀ ಡಯಟ್ ಮಾಡುವವರು ರಾಗಿಯನ್ನು ತಮ್ಮ ದೈನಂದಿನ ಡಯಟ್‌ಗೆ ಬಳಸಬಹುದು. ಏಕೆಂದರೆ ಇದರಲ್ಲಿ ಸ್ವಲ್ಪವೂ ಗ್ಲುಟೆನ್ ಇಲ್ಲ. ಬಹುತೇಕ ಧಾನ್ಯಗಳಲ್ಲಿ ಗ್ಲುಟೆನ್ ಪ್ರಮುಖ ಪೋಷಕಸತ್ವವಾಗಿರುತ್ತದೆ. ಆದರೆ, ಈ ವಿಷಯದಲ್ಲಿ ರಾಗಿ ವಿಭಿನ್ನವಾಗಿ ನಿಲ್ಲುತ್ತದೆ.
ಆಲೂ ಪೂರಿ ಮುಂದೆ ಮೊಟ್ಟೆ, ಓಡ್ಸ್ ವೇಸ್ಟ್
9. ಅತ್ಯುತ್ತಮ ಬೇಬಿ ಫುಡ್
ದಕ್ಷಿಣ ಭಾರತದಲ್ಲಿ ಮಗು 5-6 ತಿಂಗಳಿಗೆ ಬರುವ ಹೊತ್ತಿಗೆ ಅವಕ್ಕೆ ಘನಾಹಾರವನ್ನು ರಾಗಿಯಿಂದಲೇ ಆರಂಭಿಸಲಾಗುತ್ತದೆ. ರಾಗಿಯು ಪುಟ್ಟ ಮಕ್ಕಳಿಗೆ ಕೂಡಾ ಜೀರ್ಣವಾಗುತ್ತದೆ. ಐರನ್ ಹಾಗೂ ಕ್ಯಾಲ್ಶಿಯಂ ಹೆಚ್ಚಿರುವುದರಿಂದ ಮಗುವಿಗೆ ಶಕ್ತಿ ಬರುವ ಜೊತೆಗೆ ಮೂಳೆಗಳ ಬೆಳವಣಿಗೆ ಕೂಡಾ ಚೆನ್ನಾಗಿ ಆಗುತ್ತದೆ. ಮೊಳಕೆ ಬರಿಸಿದ ರಾಗಿ ಒಣಗಿಸಿ ಪುಡಿ ಮಾಡಿಟ್ಟುಕೊಂಡು ಅದರ ಅಂಬಲಿ, ಸೆರೀ ಮಾಡಿಕೊಡುವುದು ಉತ್ತಮ.
ಇದನ್ನು ಓದಿದ್ರೆ ನೀವು ಜಂಕ್ ಫುಡ್ ಮುಟ್ಟೋಲ್ಲ
10. ಹಾಲು ಹೆಚ್ಚುತ್ತದೆ
ಎದೆಹಾಲು ಕುಡಿಸುವ ತಾಯಂದಿರು ರಾಗಿ ಸೇವಿಸುವುದರಿಂದ ಹಾಲು ಹೆಚ್ಚುತ್ತದೆ. ಜೊತೆಗೆ ಈ ಹಾಲಿನಲ್ಲಿ ಐರನ್, ಕ್ಯಾಲ್ಶಿಯಂ, ಅಮೈನೋ ಆ್ಯಸಿಡ್ಸ್ ಹೇರಳವಾಗಿದ್ದು, ಶಿಶುವಿನ ಬೆಳವಣಿಗೆಗೆ ಪೂರಕವಾಗಿರುತ್ತದೆ.