ಅಂಗೈಯಲ್ಲೇ ತುಪ್ಪದ ಶುದ್ಧತೆ ಪರೀಕ್ಷಿಸಬಹುದು;ಹೀಗ್ ಮಾಡಿ!

By Web DeskFirst Published Nov 28, 2019, 3:15 PM IST
Highlights

ತುಪ್ಪ ಶುದ್ಧವಾಗಿದ್ದಾಗ ಅದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಅಲ್ಲದೆ, ಅರ್ಧ ಸಾವಿರದಷ್ಟು ಬೆಲೆ ಬಾಳುವ ಕೆಜಿ ತುಪ್ಪವನ್ನು ಕೊಂಡು, ಅದರಲ್ಲಿ  ಅರ್ಧದಷ್ಟು ಹಣವನ್ನು ಕಲಬೆರಕೆಗೇ ಸುರಿದಿದ್ದೇವೆಂದರೆ ಖೇದವಾಗದಿರುತ್ತದೆಯೇ? ಅದಕ್ಕಾಗಿಯೇ ಬಾಟಲ್‌ ಟೆಸ್ಟ್‌ನಿಂದ  ಹಿಡಿದು ಅಂಗೈ ಪರೀಕ್ಷೆವರೆಗೆ ತುಪ್ಪವನ್ನು ಪರೀಕ್ಷಿಸಲು ಹಲವು ಸಿಂಪಲ್ ವಿಧಾನಗಳಿವೆ. ಇವನ್ನು ಬಳಸಿ ನಿಮ್ಮ ಮನೆಯ ತುಪ್ಪ ನಿಜವಾಗಿಯೂ ತುಪ್ಪವೇ ಅಥವಾ ಎಣ್ಣೆ, ಡಾಲ್ಡಾ ಮಿಕ್ಸ್  ಮಾಡಿದ ಕಲಬೆರಕೆಯೇ ಪರೀಕ್ಷಿಸಿ.  

ಎಲ್ಲ ಮನೆಯ ಅಡುಗೆಮನೆಗಳಲ್ಲಿ ತುಪ್ಪಕ್ಕೊಂದು ಪ್ರಮುಖ ಸ್ಥಾನವಿದೆ. ಕೆಲ ಮನೆಯಲ್ಲಿ ಮುದ್ದಿನ ಮಗನಿಗೆ, ವಿಶೇಷ  ಅತಿಥಿಗಳಿಗೆ  ಮಾಡುವ ಸಿಹಿಯಲ್ಲಿ ಮಾತ್ರ  ಒಳ್ಳೆಯ ತುಪ್ಪ ಬಳಸುತ್ತಾರೆಂದರೆ ಇದು ಹೆಚ್ಚಿನ ಪ್ರೀತಿಯ ಸಂಕೇತ ಕೂಡಾ. ವೆಜಿಟೇಬಲ್ ಆಯಿಲ್ ಹುಟ್ಟುವ  ಮುನ್ನ ಎಲ್ಲ ಮನೆಗಳಲ್ಲಿ ತುಪ್ಪವನ್ನೇ ಅಡುಗೆಗಳಿಗೆ ಬಳಸಲಾಗುತ್ತಿತ್ತು. ಆಗ ಬಹುತೇಕ ಮನೆಗಳಲ್ಲಿ ಕೊಟ್ಟಿಗೆ, ಒಂದು ರಾಶಿ ಹಸುಗಳು ಇದ್ದೇ ಇರುತ್ತಿದ್ದವು. ಆದರೆ ಈಗ  ಹಾಗಲ್ಲ. ಕೊಟ್ಟಿಗೆಗಳೇ ಮರೆಯಾಗುತ್ತಿರುವ ದಿನಗಳಲ್ಲಿ ಹಾಲು, ತುಪ್ಪದ ಬೆಲೆ ಗಗನಕ್ಕೇರಿದೆ. ಹಾಗಾಗಿ, ತುಪ್ಪ ಬಳಸುವಾಗ ಲೆಕ್ಕ ಹಾಕಲೇಬೇಕಾಗುತ್ತದೆ. ವಿಶೇಷ ದಿನಗಳಿಗಾಗಿ ಇದು ಮೀಸಲಾಗಿದೆ. 

ಸ್ಕಿನ್, ತುಟಿ ಸೌಂದರ್ಯ, ಆರೋಗ್ಯಕ್ಕೂ ದೇಸಿ ತುಪ್ಪವೆಂಬ ದಿವ್ಯೌಷಧಿ

ಅಂದ ಹಾಗೆ ತುಪ್ಪ ಹೇಗೆ  ಮಾಡುತ್ತಾರೆ ಎಂದು ಈಗಿನ ತಲೆಮಾರಿನವರಿಗೆ ತಿಳಿಯದಿರಬಹುದು. ಹಸು ಹಾಗೂ ಎಮ್ಮೆಯ ಹಾಲಿನಿಂದ ಕೆನೆ ಸಂಗ್ರಹಿಸಿ, ಆ ಕೆನೆಯನ್ನು ಕಡೆದು ಬೆಣ್ಣೆ ಮಾಡಿ ಬೆಣ್ಣೆಯನ್ನು ಚೆನ್ನಾಗಿ ಕಾಸಿ ತುಪ್ಪ ಮಾಡಲಾಗುತ್ತದೆ. ಇದು ಶೇ.99.5ರಷ್ಟು ಫ್ಯಾಟ್ ಆಗಿದ್ದು ಇದರಲ್ಲಿ ಶೇ.62ರಷ್ಟು ಸ್ಯಾಚುರೇಟೆಡ್ ಫ್ಯಾಟ್. ಫ್ಯಾಟ್ ಎಂದ  ಮಾತ್ರಕ್ಕೆ ತುಪ್ಪ ಕೆಟ್ಟದಲ್ಲ. ಆಯುರ್ವೇದದಲ್ಲಿ ತುಪ್ಪವನ್ನು ಹಲವು  ಔಷಧಿಗಳಿಗೆ ಚೆನ್ನಾಗಿ ಬಳಸುವುದೇ ಇದಕ್ಕೆ  ಸಾಕ್ಷಿ. 

ಆದರೆ ಇಂದು ಕಲಬೆರಕೆ ಎನ್ನುವುದು ಎಲ್ಲ ಆಹಾರದ ಗುಣಮಟ್ಟವನ್ನೂ ಹಾಳು ಮಾಡಿದ್ದು, ತುಪ್ಪ ಕೂಡಾ ಇದಕ್ಕೆ ಹೊರತಲ್ಲ. ಹೆಚ್ಚಿನ ಲಾಭದ ಆಸೆಗೆ ತುಪ್ಪಕ್ಕೆ ವೆಜಿಟೇಬಲ್ ಆಯಿಲ್‌ಗಳನ್ನು ಹಾಗೂ ಪ್ರಾಣಿಗಳ ಬಾಡಿ ಫ್ಯಾಟ್ ಮಿಕ್ಸ್ ಮಾಡಲಾಗುತ್ತದೆ. ನೋಟ ಅಥವಾ ಪರಿಮಳದಿಂದ ಇದನ್ನು ಗುರುತಿಸಲಾಗುವುದಿಲ್ಲ. ಹೀಗೆ ಕಲಬೆರಕೆ ತುಪ್ಪ ಪರೀಕ್ಷೆಗೆ ಕೆಲವೊಂದು ವಿಧಾನಗಳಿವೆ. ಅವನ್ನು ಬಳಸಿ ನೀವು ಹಣ ಕೊಟ್ಟಿದ್ದು  ಕಲಬೆರಕೆಗೋ, ಶುದ್ಧ ತುಪ್ಪಕ್ಕೋ ತಿಳಿದುಕೊಳ್ಳಿ.

ಸ್ಕಿನ್ ಗ್ಲೋ ಆಗಲು ದೇಸೀ ತುಪ್ಪವೆಂಬ ಮನೆ ಮದ್ದು

ಹೀಟ್ ಟೆಸ್ಟ್

ಅತಿ ಸರಳ ವಿಧಾನವಿದು. ಒಂದು ಚಮಚ ತುಪ್ಪವನ್ನು ಬಾಣಲೆಗೆ ಹಾಕಿ ಬಿಸಿ  ಮಾಡಿ. ಶುದ್ಧ ತುಪ್ಪವಾದರೆ ಅದು ತಕ್ಷಣ ಕರಗಿ ಕಂದು ಬಣ್ಣಕ್ಕೆ ತಿರುಗುತ್ತದೆ. ಕಲಬೆರಕೆಯಾದರೆ ಹೆಚ್ಚು ಸಮಯ ತೆಗೆದುಕೊಂಡು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗುತ್ತದೆ. 

ಅಂಗೈ ಪರೀಕ್ಷೆ

ಅಂಗೈ  ಹುಣ್ಣಿಗೆ ಕನ್ನಡಿ ಬೇಕೆ ಎಂಬಂತೆ  ಕಲಬೆರಕೆ ತುಪ್ಪವನ್ನು ಅಂಗೈಗೆ  ಹಾಕಿಕೊಂಡರೆ ಅದು ಕರಗುವುದಿಲ್ಲ. ಶುದ್ಧ ತುಪ್ಪವಾದರೆ  ತಕ್ಷಣ ಅಂಗೈ ಶಾಖಕ್ಕೆ ಕರಗುತ್ತದೆ. 

ಡಬಲ್ ಬಾಯ್ಲರ್ ವಿಧಾನ

ಒಂದು ವೇಳೆ ತುಪ್ಪಕ್ಕೆ  ಕೊಬ್ಬರಿ  ಎಣ್ಣೆ ಮಿಕ್ಸ್ ಮಾಡಲಾಗಿದೆ ಎಂಬ ಅನುಮಾನವಿದ್ದರೆ, ಗ್ಲಾಸ್ ಜಾರ್‌ನಲ್ಲಿ ತುಪ್ಪ ಹಾಕಿ. ಇದನ್ನು ತೆಳ್ಳಗೆ ಬಿಸಿಯಾಗಿರುವ ನೀರಿನೊಳಗೆ ಇಡಿ. ತುಪ್ಪ ಕರಗಿದ ಬಳಿಕ ಜಾರನ್ನು ಫ್ರಿಡ್ಜ್‌ನಲ್ಲಿಡಿ. ಕಲಬೆರಕೆಯಾಗಿದ್ದರೆ ಸ್ವಲ್ಪ ಹೊತ್ತಿನ ಬಳಿಕ ಜಾರ್‌ನಲ್ಲಿ ಕೊಬ್ಬರಿ ಎಣ್ಣೆ ಹಾಗೂ ತುಪ್ಪ ಬೇರೆ ಬೇರೆ ಲೇಯರ್‌ನಲ್ಲಿ ಘನ ಆಗಿರುತ್ತದೆ. 

ಅಯೋಡಿನ್  ಟೆಸ್ಟ್

ಮೊದಲು ಅನುಮಾನವಿರುವ ತುಪ್ಪದಲ್ಲಿ ಒಂದೆರಡು ಚಮಚ ತೆಗೆದು ಬಿಸಿ ಮಾಡಿ ನೀರು  ಮಾಡಿಕೊಳ್ಳಿ. ಇದಕ್ಕೆ ಒಂದೆರಡು ಹನಿ ಅಯೋಡಿನ್ ರಸ ಹಾಕಿ. ಅಯೋಡಿನ್  ನೇರಳೆ  ಬಣ್ಣಕ್ಕೆ ತಿರುಗಿದರೆ ತುಪ್ಪಕ್ಕೆ ಸ್ಟಾರ್ಚ್ ಮಿಕ್ಸ್ ಮಾಡಲಾಗಿದೆ ಎಂದರ್ಥ.

ಬಾಟಲ್ ಟೆಸ್ಟ್

ಪಾರದರ್ಶಕ ಬಾಟಲ್ ಒಂದರಲ್ಲಿ ಒಂದು ಚಮಚ ಕರಗಿದ ತುಪ್ಪ ಹಾಕಿ. ಇದಕ್ಕೆ ಚಿಟಿಕೆ ಸಕ್ಕರೆ ಸೇರಿಸಿ. ಬಾಟಲ್ ಮುಚ್ಚಳ ಹಾಕಿ ಚೆನ್ನಾಗಿ ಶೇಕ್ ಮಾಡಿ. ಐದು ನಿಮಿಷ ಹಾಗೆಯೇ ಬಿಡಿ. ಬಾಟಲ್ ಬುಡದಲ್ಲಿ ಸ್ವಲ್ಪ ಕೆಂಪು  ಬಣ್ಣ ಬಂದಿದ್ದರೆ ತುಪ್ಪದಲ್ಲಿ ವೆಜಿಟೇಬಲ್ ಆಯಿಲ್ ಮಿಕ್ಸ್ ಆಗಿದೆ ಎಂದರ್ಥ. 

click me!