
ಭಾರತೀಯ ಆಹಾರದಿಂದ ಏಷ್ಯನ್, ಯೂರೋಪಿಯನ್ ಆಹಾರದವರೆಗೆ ಎಲ್ಲಕ್ಕೂ ಈರುಳ್ಳಿಯೊಂದು ಸೇರಿಸಿದರೆ ಸಾಕು, ರುಚಿ ಪ್ಲಸ್ ಪ್ಲಸ್ ಆಗುತ್ತದೆ. ಇದರ ಪರಿಮಳ ಹಾಗೂ ರುಚಿ ಆಹಾರದ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಭಾರತದಲ್ಲಿ ಇದನ್ನು ಎಲ್ಲ ಆಹಾರಕ್ಕೆ ಬಳಕೆ ಮಾಡುವುದರೊಂದಿಗೆ ಹಸಿಯಾಗಿ ತಿಂದು ಸಹ ರುಚಿ ಸವಿಯುತ್ತಾರೆ. ಇದನ್ನು ಔಷಧಿಯಾಗಿ ಬಳಕೆ ಮಾಡುವುದು ಸಹ ನಡೆದುಕೊಂಡು ಬಂದಿದೆ. ಚಳಿಗಾಲದಲ್ಲಿ ಈರುಳ್ಳಿಯ ಬಳಕೆಯಿಂದ ಹಲವಾರು ಆರೋಗ್ಯ ಲಾಭಗಳಿವೆ.
ಈರುಳ್ಳಿ ರಸದಲ್ಲಿ ಅಡಗಿದೆ ಸ್ಕಿನ್ ಮತ್ತು ಕೂದಲಿನ ಆರೋಗ್ಯದ ಗುಟ್ಟು !
ಈರುಳ್ಳಿಯನ್ನು ಅಷ್ಟೊಂದು ಆರೋಗ್ಯಕರವಾಗಿಸುವುದೇನು?
ಈರುಳ್ಳಿಯಲ್ಲಿರುವ ಫ್ಲೇವನಾಯ್ಡ್ಸ್ ಇದನ್ನು ಉತ್ತಮ ಪೌಷ್ಟಿಕಾಂಶಗಳ ಮೂಲವಾಗಿಸುತ್ತದೆ. ಆದರೆ, ಈರುಳ್ಳಿಯ ಹಲವು ಲೇಯರ್ ತೆಗೆಯುವುದರಿಂದ ಫ್ಲೇವನಾಯ್ಡ್ಸ್ ಕಡಿಮೆಯಾಗಿ ಪೌಷ್ಟಿಕಾಂಶವೂ ಕಡಿಮೆಯಾಗುತ್ತದೆ. ಫ್ಲೇವನಾಯ್ಡ್ಸ್ ಹೊರತಾಗಿ ಈರುಳ್ಳಿಯಲ್ಲಿ ಕಾರ್ಬ್ಸ್, ಫೈಬರ್, ಶುಗರ್, ಫ್ಯಾಟ್ ಎಲ್ಲವೂ ಇವೆ.
ರೋಗ ನಿರೋಧಕ
ಈರುಳ್ಳಿಯಲ್ಲಿರುವ ಫೈಟೋಕೆಮಿಕಲ್ಸ್ ಕಾರಣ, ಇದು ವಿಟಮಿನ್ ಸಿಯ ಉತ್ತಮ ಮೂಲವಾಗಿದೆ. ಆದರೆ, ಈರುಳ್ಳಿಯನ್ನು ಹಸಿಯಾಗಿ ಸೇವಿಸಿದಾಗ ಮಾತ್ರ ಈ ವಿಟಮಿನ್ ಸಿ ಲಾಭ ಸಿಗುತ್ತದೆ. ಫೈಟೋಕೆಮಿಕಲ್ಸ್ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಹಾಗಾಗಿಯೇ, ಚಳಿಗಾಲದಲ್ಲಿ ಹೆಚ್ಚುವ ಕಾಯಿಲೆಗಳನ್ನು ದೂರವಿಡಲು ಇದು ಸಹಾಯಕ.
ಹೊಟ್ಟೆಯ ಸಮಸ್ಯೆ
ಈರುಳ್ಳಿಯ ನಿಯಮಿತ ಸೇವನೆಯು ಖಿನ್ನತೆಯ ಲಕ್ಷಣಗಳನ್ನು ಹೊಡೆದೋಡಿಸಿ, ನಿದ್ರೆ ತರಿಸುವಲ್ಲಿ ಸಹಕಾರಿ. ಜೊತೆಗೆ, ಇದರಲ್ಲಿರುವ ಫೋಲೇಟ್‌ನಿಂದಾಗಿ ಹೊಟ್ಟೆಯ ಸಮಸ್ಯೆಗಳನ್ನು ಗುಣಪಡಿಸಿ, ಹಸಿವನ್ನು ಹೆಚ್ಚಿಸುತ್ತದೆ.
ಊಟದ ರುಚಿ ಹೆಚ್ಚಿಸುವ ಈರುಳ್ಳಿ ಉಪ್ಪಿನಕಾಯಿ!
ಮೂಗಿನಲ್ಲಿ ರಕ್ತ
ಮೂಗಿನಲ್ಲಿ ರಕ್ತ ಬರುತ್ತಿದ್ದರೆ ತಕ್ಷಣ ಚಿಕ್ಕದೊಂದು ಈರುಳ್ಳಿ ಕತ್ತರಿಸಿ ಅದರ ವಾಸನೆಯನ್ನು ಆಳವಾಗಿ ತೆಗೆದುಕೊಂಡರೆ ರಕ್ತ ಕಟ್ಟುತ್ತದೆ. ಇದಕ್ಕಾಗಿ ಮೂಗಿನ ಕೆಳಗೆ ಇದನ್ನಿಟ್ಟು ಮಲಗಿ. ಇನ್ನು ಈರುಳ್ಳಿ ರಸವನ್ನು ಸ್ವಲ್ಪ ಬಿಸಿ ಮಾಡಿ ಹಾಕುವುದರಿಂದ ಕಿವಿ ಸೋರುವಿಕೆ ಅಥವಾ ಕಿವಿನೋವು ತಡೆಯಬಹುದು.
ದಂತ ಆರೋಗ್ಯ
ಈರುಳ್ಳಿಯ ವಾಸನೆ ಉಸಿರಾಟಕ್ಕೆ ಅಂಟಿ ಕಿರಿಕಿರಿ ಮಾಡಬಹುದು. ಆದರೆ, ಇದು ಬಾಯಿಯ ಆರೋಗ್ಯವನ್ನು ಹೆಚ್ಚಿಸಬಲ್ಲದು. ಇದರ ಆ್ಯಂಟಿ ಮೈಕ್ರೋಬಿಯಲ್ ಗುಣವು ಹಲ್ಲು ಹುಳ ಹಿಡಿಯುವುದನ್ನು ತಪ್ಪಿಸಿ, ವಸಡಿನ ಸಮಸ್ಯೆಗಳನ್ನು ತಡೆಗಟ್ಟುತ್ತದೆ.
ಕ್ಯಾನ್ಸರ್ ವಿರುದ್ಧ ಫೈಟ್
ಹೌದು, ಈರುಳ್ಳಿಯು ಕ್ಯಾನ್ಸರ್ ತಡೆಯಲು ಸಹಾಯಕ. ಈರುಳ್ಳಿಯಲ್ಲಿರುವ ಕ್ವೆರ್ಸಟಿನ್ ಕ್ಯಾನ್ಸರ್ ಹತ್ತಿರಗೊಡದಂತೆ ನೋಡಿಕೊಳ್ಳುತ್ತದೆ. ಕೆಲ ಅಧ್ಯಯನಗಳ ಪ್ರಕಾರ, ಈರುಳ್ಳಿಯು ಹೊಟ್ಟೆ ಹಾಗೂ ಕೊಲೆರೆಕ್ಟಲ್ ಕ್ಯಾನ್ಸರ್ ತಡೆಯಬಲ್ಲದು.
ಎಲ್‌ಡಿಎಲ್ ಕಡಿಮೆ ಮಾಡುತ್ತದೆ
ದೇಹದಲ್ಲಿ ಎಲ್‌ಡಿಎಲ್ ಕಡಿಮೆ ಮಾಡುವ ಮೂಲಕ ಈರುಳ್ಳಿಯು ಹೃದಯದ ಆರೋಗ್ಯ ಹೆಚ್ಚಿಸುತ್ತದೆ. ಅದರಲ್ಲೂ ಹಸಿ ಈರುಳ್ಳಿಯನ್ನು ಪ್ರತಿನಿತ್ಯ ಸೇವಿಸಿದರೆ ಕೆಟ್ಟ ಕೊಲೆಸ್ಟೆರಾಲ್ ತಗ್ಗಿಸಬಹುದು.
ಮಳ್ಳಿ ಮಳ್ಳಿ ಮಿಂಚುಳ್ಳಿ ಈ ಈರುಳ್ಳಿ!
ಶೀತ ತಡೆಯಬಲ್ಲದು
ಮಳೆಗಾಲ, ಚಳಿಗಾಲದ ಕಾರಣದಿಂದ ಬರುವ ಶೀತ, ಕೆಮ್ಮು, ಅಲರ್ಜಿಗಳನ್ನು ಈರುಳ್ಳಿಯ ಸೇವನೆಯಿಂದ ದೂರವಿಡಬಹುದು. ಶೀತ, ಕೆಮ್ಮಾದಾಗ ಈರುಳ್ಳಿ ರಸ ತೆಗೆದು ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ನಿಮಗೆ ಅಸ್ತಮಾ ಇದ್ದರೆ ಒಂದು ಲೋಟ ನೀರಿಗೆ ಸ್ವಲ್ಪ ಈರುಳ್ಳಿ ರಸ, ಇಂಗು ಹಾಗೂ ಕಪ್ಪು ಉಪ್ಪು ಸೇರಿಸಿ ಸೇವಿಸಿ.
ಬ್ಲಡ್ ಶುಗರ್ ನಿರ್ವಹಣೆ
ಈರುಳ್ಳಿಯಲ್ಲಿರುವ ಕ್ರೋಮಿಯಂ ಇನ್ಸುಲಿನ್ ಮಟ್ಟ ನಿರ್ವಹಿಸಿ, ದೇಹದಲ್ಲಿ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಹೀಗಾಗಿ, ಮಧುಮೇಹ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು.
ಕೊಲ್ಯಾಜನ್
ಈರುಳ್ಳಿ ಸೇವನೆಯಿಂದ ತ್ವಚೆ ಹಾಗೂ ಕೂದಲ ಆರೋಗ್ಯ ಹೆಚ್ಚುತ್ತದೆ. ಇದಕ್ಕೆ ಕಾರಣ ಇದರಲ್ಲಿರುವ ಕೊಲ್ಯಾಜನ್. ಈ ಕೊಲ್ಯಾಜನ್ ಕೂದಲ ಮರುಹುಟ್ಟು ಹಾಗೂ ಚರ್ಮದ ಮೃದುತನಕ್ಕೆ ಸಹಾಯ ಮಾಡುತ್ತದೆ. ಇನ್ನು ತಲೆಯಲ್ಲಿ ಫಂಗಸ್ ಆಗಿದ್ದರೆ ಅಥವಾ ಕೂದಲು ಉದುರುತ್ತಿದ್ದರೆ ಈರುಳ್ಳಿ ರಸ ಹಾಕಿ ತಿಕ್ಕಿ ಅರ್ಧ ಗಂಟೆಯ ಬಳಿಕ ತೊಳೆಯುವುದರಿಂದ ಕೂದಲ ಉದುರುವಿಕೆ ನಿಲ್ಲುತ್ತದೆ.
ಆ್ಯಂಟಿ ಬ್ಯಾಕ್ಟೀರಿಯಲ್
ಅಧ್ಯಯನಗಳ ಪ್ರಕಾರ, ಈರುಳ್ಳಿಯು ಆ್ಯಂಟಿ ಬ್ಯಾಕ್ಚೀರಿಯಲ್ ಹಾಗೂ ಆ್ಯಂಟಿ ಇನ್ಫ್ಲಮೇಟರಿ ಗುಣಗಳನ್ನು ಹೊಂದಿದೆ. ಇದು ಅಲರ್ಜಿ ಹಾಗೂ ಇತರೆ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.