ಕುಚ್ಚಲಕ್ಕಿಯಲ್ಲಿರುವ ಆರೋಗ್ಯದ ಗುಟ್ಟು ಅರಿತರೆ ಬೇಕಿಲ್ಲ ಬೇರೆ ಮದ್ದು!

By Suvarna News  |  First Published Dec 27, 2019, 12:17 PM IST

ಕರಾವಳಿ ಭಾಗದಲ್ಲಿ ಹೆಚ್ಚಾಗಿ ಬಳಸಲ್ಪಡುವ ಕುಚ್ಚಲಕ್ಕಿ ನೋಡಲು ಬಿಳಿ ಅಕ್ಕಿಯಷ್ಟು ಆಕರ್ಷಕವಾಗಿಲ್ಲದಿರಬಹುದು. ಆದರೆ, ಆರೋಗ್ಯದ ಹಿತದೃಷ್ಟಿಯಿಂದ ನೋಡುವುದಾದರೆ ಇದು ಬಿಳಿ ಅಕ್ಕಿಗಿಂತ ಶ್ರೇಷ್ಠವಾದದ್ದು. ಕುಚ್ಚಲಕ್ಕಿ ಅನೇಕ ಪೌಷ್ಟಿಕಾಂಶಗಳ ಆಗರವಾಗಿದ್ದು, ನಿಯಮಿತ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.


ಬಿಳಿ ಅಕ್ಕಿಯನ್ನು ಸಾಕಷ್ಟು ಪಾಲಿಷ್ ಮಾಡುವುದರಿಂದ ಅದರಲ್ಲಿರುವ ಪೋಷಕಾಂಶಗಳು ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿರುತ್ತವೆ. ಆದರೆ, ಕುಚ್ಚಲಕ್ಕಿ ಹೆಚ್ಚು ಪಾಲಿಷ್‍ಗೆ ಒಳಗಾಗುವುದಿಲ್ಲ. ಇದರಿಂದಾಗಿ ಅಕ್ಕಿಯಲ್ಲಿ ಆರೋಗ್ಯಕಾರಿಯಾದ ಪೋಷಕಾಂಶಗಳು ಹಾಗೆಯೇ ಉಳಿದುಕೊಂಡಿರುತ್ತವೆ. 

ಪೋಷಕಾಂಶಗಳ ಕಣಜ: ಕುಚ್ಚಲಕ್ಕಿಯಲ್ಲಿರುವ ಪೌಷ್ಟಿಕಾಂಶಗಳು ಒಂದಾಎರಡಾ? ದೇಹಕ್ಕೆ ಅತ್ಯಗತ್ಯವಾದ ಖನಿಜಾಂಶಗಳಾದ ಮ್ಯಾಂಗನೀಸ್, ಐರನ್, ಝಿಂಕ್, ಫಾಸ್ಫರಸ್, ಕ್ಯಾಲ್ಸಿಯಂ, ಸೆಲೆನಿಯಮ್, ಮೆಗ್ನೇಷಿಯಂ ಹಾಗೂ ಪೊಟ್ಯಾಷಿಂ ಇದರಲ್ಲಿವೆ. ವಿಟಮಿನ್ ಬಿ1, ಬಿ2, ಬಿ3, ಬಿ6, ವಿಟಮಿನ್ ಇ, ವಿಟಮಿನ್ ಕೆ ಕೂಡ ಕುಚ್ಚಲಕ್ಕಿಯಲ್ಲಿವೆ. ಇದು ಪ್ರೋಟೀನ್, ಫೈಬರ್ ಹಾಗೂ ಫ್ಯಾಟಿ ಆಸಿಡ್‍ಗಳÀ ಆಗರವೂ ಆಗಿದೆ.

Tap to resize

Latest Videos

ಆರೋಗ್ಯಕ್ಕೆ ಎನರ್ಜಿ ಡ್ರಿಂಕ್: ಕುಚ್ಚಲಕ್ಕಿ ಅನೇಕ ಕಾಯಿಲೆಗಳನ್ನು ಹೋಗಲಾಡಿಸುವ ಜೊತೆಗೆ ಅವುಗಳನ್ನು ನಿಯಂತ್ರಣದಲ್ಲಿಡಲು ನೆರವು ನೀಡುತ್ತದೆ. ಸರಳವಾಗಿ ಹೇಳಬೇಕೆಂದರೆ ಕುಚ್ಚಲಕ್ಕಿ ನಮ್ಮ ದೇಹಕ್ಕೆ ಎನರ್ಜಿ ಡ್ರಿಂಕ್‍ನಂತೆ ಶಕ್ತಿ ಒದಗಿಸುವ ಜೊತೆಗೆ ರೋಗಗಳ ವಿರುದ್ಧ ಹೋರಾಡುವ ಸಾಮಥ್ರ್ಯವನ್ನು ನೀಡುತ್ತದೆ.

ಸಕ್ಕರೆಕಾಯಿಲೆ ನಿಯಂತ್ರಣ: ಸಕ್ಕರೆ ಕಾಯಿಲೆಯಿರುವವರು ಕುಚ್ಚಲಕ್ಕಿ ಅನ್ನವನ್ನು ಊಟ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಬಹುದು. ಕುಚ್ಚಲಕ್ಕಿಯಲ್ಲಿ ಗ್ಲೈಸೆಮಿಕ್ ಪ್ರಮಾಣ ಕಡಿಮೆಯಿರುವ ಕಾರಣ ಇನ್ಸುಲಿನ್ ಉತ್ಪಾದನೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇಂಟರ್‍ನ್ಯಾಷನಲ್ ಜರ್ನಲ್ ಆಫ್ ಫುಡ್ ಸೈನ್ಸ್ ಆಂಡ್ ನ್ಯುಟ್ರಿಷನ್‍ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಕುಚ್ಚಲಕ್ಕಿಯಲ್ಲಿ ಫೈಟಿಕ್ ಆಸಿಡ್, ಫೈಬರ್ ಹಾಗೂ ಅಗತ್ಯ ಪಾಲಿಪೆನಾಲ್ಸ್ ಹೇರಳವಾಗಿವೆ. ಬಿಳಿ ಅಕ್ಕಿಗೆ ಹೋಲಿಸಿದರೆ ಇದರಲ್ಲಿರುವ ಸಂಕೀರ್ಣ ಕಾರ್ಬೋಹೈಡ್ರೇಟ್ ಸಕ್ಕರೆಯು ನಿಧಾನವಾಗಿ ಬಿಡುಗಡೆಗೊಳ್ಳುವಂತೆ ಮಾಡುತ್ತದೆ. ಅಮೆರಿಕದ ಡಯಾಬಿಟೀಸ್ ಅಸೋಷಿಯೇಷನ್ ಕೂಡ ಸಕ್ಕರೆ ಕಾಯಿಲೆಯಿರುವವರು ಬಿಳಿ ಅಕ್ಕಿಗಿಂತ ಕುಚ್ಚಲಕ್ಕಿ ಅನ್ನವನ್ನು ಸೇವಿಸುವುದು ಉತ್ತಮವೆಂದು ಹೇಳಿದ್ದಾರೆ. ಇದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ಸ್, ಫೈಬರ್ ಹಾಗೂ ಮಿನರಲ್ಸ್ ಕೂಡ ಸಿಗುತ್ತವೆ ಎಂಬ ಸಲಹೆಯನ್ನು ಅವರು ನೀಡಿದ್ದಾರೆ. 

ಹೃದಯದ ಮಿತ್ರ: ಕುಚ್ಚಲಕ್ಕಿಯಲ್ಲಿ ಸೆಲೆನಿಯಂ ಹೇರಳವಾಗಿದ್ದು, ಇದು ಹೃದಯದ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.  ಅಧಿಕ ರಕ್ತದೊತ್ತಡ ಸೇರಿದಂತೆ ಅನೇಕ ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಗುವ ಎಂಡ್ರೋಕ್ರೈನ್ ಪ್ರೋಟೀನ್ ಆಂಜಿಯೋಟೆನ್ಷಿನ್ 2ರ ವಿರುದ್ಧ ಹೋರಾಡಬಲ್ಲ ಘಟಕವೊಂದು ಕುಚ್ಚಲಕ್ಕಿಯಲ್ಲಿದೆ.

ಒಂದೋ ಗೋಧಿ, ಇಲ್ಲ ಅನ್ನ, ಎರಡೂ ಒಟ್ಟಿಗೆ ಒಳ್ಳೇದಲ್ಲನೆನಪಿಡಿ

ಬೊಜ್ಜಿಗೆ ಶತ್ರು: ಆಧುನಿಕ ಆಹಾರ ಪದ್ಧತಿಯ ಅತಿದೊಡ್ಡ ಕೊಡುಗೆ ಬೊಜ್ಜು. ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವಯಸ್ಕರ ತನಕ ಎಲ್ಲರನ್ನೂ ಇದು ಕಾಡುತ್ತಿದೆ. ಬೊಜ್ಜಿನ ಸಮಸ್ಯೆ ಹೊಂದಿರುವವರು ಕುಚ್ಚಲಕ್ಕಿ ಅನ್ನವನ್ನು ಸೇವಿಸುವುದರಿಂದ ತೂಕವನ್ನು ನಿಯಂತ್ರಣದಲ್ಲಿಡಬಹುದು. ದೇಹದ ಬಿಎಂಐ ಹಾಗೂ ಬೊಜ್ಜನ್ನು ತಗ್ಗಿಸುವಲ್ಲಿ ಕುಚ್ಚಲಕ್ಕಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದನ್ನು ಅಧ್ಯಯನವೊಂದು ದೃಢಪಡಿಸಿದೆ.

ಮಿದುಳಿನ ರಕ್ಷಕ: ಮಿದುಳು ಹಾಗೂ ನರ ಮಂಡಲದ ಸಮರ್ಪಕ ಕಾರ್ಯನಿರ್ವಹಣೆಗೆ ಕುಚ್ಚಲಕ್ಕಿ ಸಹಕಾರಿಯಾಗಿದೆ. ಇದರಲ್ಲಿರುವ ಬಿ ವಿಟಮಿನ್ಸ್, ಮ್ಯಾಂಗನೀಸ್ ಮತ್ತು ಮೆಗ್ನೇಷಿಯಂ ಮಿನರಲ್ಸ್‍ಗಳು ದೇಹದಲ್ಲಿ ಕ್ಯಾಲ್ಸಿಯಂನ ಚಟುವಟಿಕೆಯನ್ನು ಸಮತೋಲನದಲ್ಲಿಡುವ ಮೂಲಕ ನರ ಹಾಗೂ ಸ್ನಾಯುಗಳನ್ನು ನಿಯಂತ್ರಿಸಲು ನೆರವು ನೀಡುತ್ತವೆ. ಕುಚ್ಚಲಕ್ಕಿಯಲ್ಲಿರುವ ವಿಟಮಿನ್ ಇ ಕೂಡ ಅನೇಕ ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. 

ಖಿನ್ನತೆ ಬಾರದಂತೆ ತಡೆ: ಉದ್ವೇಗ, ಖಿನ್ನತೆ ಹಾಗೂ ಒತ್ತಡವನ್ನು ತಗ್ಗಿಸಬಲ್ಲ ಅಮಿನೋ ಆಸಿಡ್ಸ್ ಕುಚ್ಚಲಕ್ಕಿಯಲ್ಲಿವೆ. ಇವು ಉದ್ವೇಗದ ವಿರುದ್ಧ ಹೋರಾಡುವ ಮೂಲಕ ಖಿನ್ನತೆ ಸೇರಿದಂತೆ ಅನೇಕ ಮನೋರೋಗಗಳು ಕಾಡದಂತೆ ರಕ್ಷಣೆ ಒದಗಿಸುತ್ತವೆ.

ಜೀರ್ಣಕ್ರಿಯೆ ಪ್ರಚೋದಕ: ಪ್ರತಿದಿನ ಕುಚ್ಚಲಕ್ಕಿ ಅನ್ನವನ್ನು ಊಟ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ಫೈಬರ್ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಅಲ್ಲದೆ, ಫೈಬರ್ ಇರುವ ಕಾರಣದಿಂದ ಕುಚ್ಚಲಕ್ಕಿ ಅನ್ನವನ್ನು ಸೇವಿಸಿದ ಬಳಿಕ ಬಹು ಸಮಯದವರಿಗೆ ಹೊಟ್ಟೆ ತುಂಬಿರುವ ಅನುಭವವಾಗುತ್ತದೆ.

ಉಳಿದ ಅನ್ನ ಎಸೆಯಬೇಡಿ, ಅದರಿಂದ ರುಚಿಯಾದ ಕಟ್ಲೆಟ್ ಮಾಡಿ!

ಕೊಲೆಸ್ಟ್ರಾಲ್ ನಿಯಂತ್ರಕ: ಕುಚ್ಚಲಕ್ಕಿಯಲ್ಲಿ ನೈಸರ್ಗಿಕವಾದ ಎಣ್ಣೆಯಂಶವಿರುವ ಕಾರಣ ಇದು ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಹೀಗಾಗಿ ಕೊಲೆಸ್ಟ್ರಾಲ್ ಹೆಚ್ಚಿರುವವರು ಕೂಡ ಕುಚ್ಚಲಕ್ಕಿ ಅನ್ನವನ್ನು ಸೇವಿಸಬಹುದು. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ.

ಕ್ಯಾನ್ಸರ್ ನಿರೋಧಕ: ಕುಚ್ಚಲಕ್ಕಿ ಸ್ತನಕ್ಯಾನ್ಸರ್, ಬ್ಲಡ್ ಕ್ಯಾನ್ಸರ್ ಸೇರಿದಂತೆ ಕೆಲವು ಕ್ಯಾನ್ಸರ್‍ಗಳಿಂದ ರಕ್ಷಣೆ ಒದಗಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಹಾಗೂ ಹೇರಳವಾದ ಫೈಬರ್ ಕ್ಯಾನ್ಸರ್ ಕಾರಕಗಳ ವಿರುದ್ಧ ಹೋರಾಡುತ್ತವೆ.

ಪ್ರತಿರೋಧಕ ಶಕ್ತಿ ಹೆಚ್ಚಳ: ಈಗಾಗಲೇ ತಿಳಿಸಿರುವಂತೆ ಕುಚ್ಚಲಕ್ಕಿಯಲ್ಲಿ ಹೇರಳವಾಗಿರುವ ವಿಟಮಿನ್ಸ್, ಮಿನರಲ್ಸ್ ಹಾಗೂ ಅಗತ್ಯ ಫೆನೊಲಿಕ್ ಅಂಶಗಳು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ನೆರವು ನೀಡುತ್ತವೆ. ಇದು ದೇಹವನ್ನು ಚೆನ್ನಾಗಿ ಪೋಷಿಸುವ ಜೊತೆಗೆ ಗಾಯ ಬೇಗ ಗುಣವಾಗಲು ಹಾಗೂ ರೋಗಾಣುಗಳ ವಿರುದ್ಧ ಹೋರಾಡುವ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ.

ಮೂಳೆ ಆರೋಗ್ಯದ ರಕ್ಷಣೆ: ಕುಚ್ಚಲಕ್ಕಿಯಲ್ಲಿ ಮೆಗ್ನೇಷಿಯಂ ಹಾಗೂ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿದ್ದು, ಇವು ಮೂಳೆಗಳ ಸಂರಚನೆ ಹಾಗೂ ಆರೋಗ್ಯ ಸಂರಕ್ಷಣೆಗೆ ನೆರವು ನೀಡುತ್ತವೆ. ಅಷ್ಟೇ ಅಲ್ಲದೆ, ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದಲೂ ರಕ್ಷಣೆ ಒದಗಿಸುತ್ತವೆ.

ಬಾಣಂತಿಯರಲ್ಲಿ ಒತ್ತಡ ತಗ್ಗಿಸುತ್ತದೆ: ಯುರೋಪಿಯನ್ ಜರ್ನಲ್ ಆಫ್ ನ್ಯುಟ್ರಿಷನ್‍ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಕುಚ್ಚಲಕ್ಕಿ ಮಗುವಿಗೆ ಎದೆಹಾಲು ನೀಡುತ್ತಿರುವ ತಾಯಂದಿರಲ್ಲಿ ಕಾಣಿಸಿಕೊಳ್ಳುವ ಖಿನ್ನತೆ ಸೇರಿದಂತೆ ಮಾನಸಿಕ ತೊಂದರೆಗಳನ್ನು ದೂರ ಮಾಡುತ್ತದೆ. ಎದೆಹಾಲು ನೀಡುವ ತಾಯಂದಿರಲ್ಲಿ ಒತ್ತಡ ನಿರ್ವಹಣೆ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

click me!