ಆಧುನಿಕ ಇಕೋ ಫ್ರೆಂಡ್ಲಿ ಐಡಿಯಾಗಳು; ನೀವು ಟ್ರೈ ಮಾಡಿ!

By Kannadaprabha News  |  First Published Jun 5, 2020, 9:22 AM IST

The environment is where we all meet; where all have a mutual interest; it is the one thing all of us share


1. ಬಿಸಾಡಿದರೆ ಶಾಪ, ಬಳಸಿದರೆ ವರ

Tap to resize

Latest Videos

ಪ್ಲಾಸ್ಟಿಕ್‌ ಪ್ಲಾಸ್ಟಿಕ್‌.. ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್‌. ಪರಿಸರಕ್ಕೆ ಪ್ಲಾಸ್ಟಿಕ್‌ನಿಂದ ಆಗುತ್ತಿರುವ ಅಪಾಯವನ್ನು ಅಂದಾಜು ಮಾಡಿದರೆ ಮೈ ನಡುಗುತ್ತದೆ, ಭವಿಷ್ಯ ಹೇಗಪ್ಪಾ ಎನ್ನಿಸುತ್ತದೆ. ಆದರೆ ಹೀಗೆ ಅಂದುಕೊಳ್ಳುತ್ತಾ ಸುಮ್ಮನೆ ಕುಳಿತರೆ ಉಪಯೋಗವುಂಟೆ? ಅದಕ್ಕೆ ಬದಲಾಗಿ ಪರಿಹಾರವನ್ನು ಕಂಡುಕೊಳ್ಳಬೇಕು. ಆ ಕೆಲಸವನ್ನು ನಮ್ಮ ನೆರೆಯ ತಮಿಳುನಾಡಿನ ಮದುರೈ ನಿವಾಸಿ ರಾಜ್‌ಗೋಪಾಲ್‌ ವಾಸುದೇವನ್‌ ಮಾಡಿದ್ದಾರೆ. ಅವರು ವೇಸ್ಟ್‌ ಪ್ಲಾಸ್ಟಿಕ್‌ನಿಂದ ರಸ್ತೆ ನಿರ್ಮಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಗಿಡ ನೆಟ್ಟು ಪರಿಸರ ದಿನ ಆಚರಿಸಿದ ಯುವ ಸಂಸದ ತೇಜಸ್ವಿ

ತ್ಯಾಗರಾಜನ್‌ ಯೂನಿವರ್ಸಿಟಿಯ ರಸಾಯನಶಾಸ್ತ್ರ ಪ್ರಾಧ್ಯಾಪಕರಾದ ಇವರು ಲ್ಯಾಬ್‌ನಲ್ಲಿ ಸತತವಾಗಿ ಹಲವು ಪ್ರಯೋಗಗಳನ್ನು ಮಾಡಿ ಬಳಸಿದ ಪ್ಲಾಸ್ಟಿಕ್‌ ಅನ್ನು ಟಾರ್‌ ಆಗಿ ಪರಿವರ್ತನೆ ಮಾಡಿ ಅದರಿಂದ ರಸ್ತೆ ನಿರ್ಮಾಣ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಇದು ಅತ್ಯಂತ ಕಡಿಮೆ ಖರ್ಚಿನ ಮತ್ತು ಹೆಚ್ಚು ಬಾಳಿಕೆ ಬರುವ ರೋಡ್‌ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು ಅವರ ವಾದ. ಇದು ದೇಶಾದ್ಯಂತ ಸಮರ್ಥವಾಗಿ ಜಾರಿಗೆ ಬಂದದ್ದೇ ಆದಲ್ಲಿ, ನಮ್ಮ ಪರಿಸರ ಪ್ಲಾಸ್ಟಿಕ್‌ ಮುಕ್ತವಾಗುವುದು, ರಸ್ತೆಗಳ ಉದ್ದ, ಸಾಮರ್ಥ್ಯವೂ ಹೆಚ್ಚುವುದು. ಪರಿಸರಕ್ಕೆ ಶಾಪವಾಗಿರುವ ಪ್ಲಾಸ್ಟಿಕ್‌ ವರವಾಗಿ ಬದಲಾಗುವುದು.

2. ಈ ಆಲದ ಮರದಲ್ಲಿದೆ ವಿಶಿಷ್ಟಸಂದೇಶ

 

ಪಶ್ವಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ ಒಂದು ಬೃಹತ್ತಾದ ಆಲದ ಮರವಿದೆ. ಪ್ರಪಂಚದ ಅತ್ಯಂತ ಹಳೆಯ, ಬೃಹತ್ತಾದ ಮರಗಳಲ್ಲಿ ಇದಕ್ಕೂ ಸ್ಥಾನವುಂಟು. 14,500 ಚದರ ಮೀಟರ್‌ ಸುತ್ತಳತೆ ಹೊಂದಿರುವ ಈ ವೃಕ್ಷ ಬರೋಬ್ಬರಿ 4.67 ಎಕರೆ ಪ್ರದೇಶದಲ್ಲಿ ಹಬ್ಬಿದೆ. ಅಂದರೆ ಸುಮಾರು ಒಂದು ಕ್ರಿಕೆಟ್‌ ಸ್ಟೇಡಿಯಂನಷ್ಟುಸುತ್ತಳತೆ ಇದರದ್ದು. 250ಕ್ಕೂ ಅಧಿಕ ವಸಂತಗಳನ್ನು ಕಂಡಿರುವ ಈ ಆಲದ ಮರ ಇಂಡಿಯನ್‌ ಪೋಸ್ಟ್‌ ಸ್ಟಾಂಪ್‌ನಲ್ಲಿಯೂ ಜಾಗ ಪಡೆದಿದೆ. ಅಲ್ಲದೇ ನೂರಾರು ಬಗೆ ಪ್ರಾಣಿ, ಪಕ್ಷಿಗಳಿಗೆ ಆಶ್ರಯ ನೀಡಿದೆ. ಸುತ್ತಮುತ್ತಲ ಪ್ರದೇಶದ ವಾತಾವರಣವನ್ನು ಸಮತೋಲದಲ್ಲಿ ಇಡುವಲ್ಲಿ ಇದರ ಪಾತ್ರ ಗಣನೀಯವಾದದ್ದು. ನೋಡಿ ಒಂದು ಆಲದ ಮರ ಬೆಳೆದು ನಿಂತು ಪರಿಸರಕ್ಕೆ ಹೇಗೆಲ್ಲಾ ಪೂರಕವಾಗಿ ಕೆಲಸ ಮಾಡುತ್ತಿದೆ. ಅದು ಯಾರು ನೆಟ್ಟಸಸಿಯೋ ತಿಳಿಯದು. ಆದರೆ ಈಗದು ಬೃಹತ್‌ ಮರವಾಗಿ, ನೆರಳಾಗಿದೆ. ಯಾರಿಗೆ ಗೊತ್ತು, ನೀವು ನೆಟ್ಟಸಸಿಯು ಮುಂದೊಂದು ದಿನ ಹೀಗೆಯೇ ಆಗಬಹುದು. ಅದಾಗದಿದ್ದರೂ ಕನಿಷ್ಠ ಹತ್ತು ಮಂದಿಗಾದರೂ ನೀವು ನೆಟ್ಟಸಸಿ ಉಪಯೋಗ ಮಾಡಿಯೇ ಮಾಡುತ್ತದೆ. ಹಾಗಾಗಿ ಒಂದೊಂದು ಸಸಿ ನೆಡುವ ಸಂಕಲ್ಪ ಮಾಡಿದರೆ ಚೆಂದವಲ್ಲವೇ.

3. ಟ್ರೀ ಗಣೇಶ ಟ್ರೀ ಗಣೇಶ ಟ್ರೀ ಗಣೇಶ ಎನ್ನಿರೋ

ಮುಂಬೈನ ದತ್ತಾತ್ರಿ ಎಂಬುವರ ತಲೆಯಲ್ಲಿ ಒಂದು ಐಡಿಯಾ ಹುಟ್ಟುತ್ತದೆ. ಇದು ಗೌರಿ, ಗಣೇಶ ಹಬ್ಬಕ್ಕೆ ಸಂಬಂಧಿಸಿದ್ದು. ಮುಂಬೈನಲ್ಲಿ ಗಣೇಶನ ಹಬ್ಬ ಮುಗಿದ ಮೇಲೆ ಅಲ್ಲಿನ ಪ್ರಮುಖ ಕೆರೆಗಳು, ಸಮುದ್ರದ ತೀರಗಳು ರಾಸಾಯನಿಕ ಗಣೇಶ ಮೂರ್ತಿಗಳಿಂದ ತುಂಬಿ ಪರಿಸರಕ್ಕೆ, ಜಲಚರಗಳಿಗೆ ಹಾನಿ ಮಾಡುವುದು ಸಾಮಾನ್ಯ ಎನ್ನುವಂತೆ ಆಗಿಬಿಟ್ಟಿದೆ. ಇದನ್ನು ತಪ್ಪಿಸುವುದಕ್ಕಾಗಿಯೇ ಜೈವಿಕ ಗಣೇಶ ಮೂರ್ತಿಗಳ ಬಳಕೆಗೆ ಉತ್ತೇಜನ ನೀಡಲಾಯಿತು. ಹಲವರು ಅದನ್ನು ಬೆಂಬಲಿಸಿದರು ಕೂಡ. ಆ ಹೊತ್ತಿನಲ್ಲಿಯೇ ದತ್ತಾತ್ರಿ ಅವರು ‘ಟ್ರೀ ಗಣೇಶ’ ಎನ್ನುವ ನವೀನ ಐಡಿಯಾ ಮಾಡಿದ್ದು. ಇದೇನೆಂದರೆ ಸಂಪೂರ್ಣ ಜೈವಿಕವಾಗಿ, ಜೇಡಿ ಮಣ್ಣಿನಲ್ಲಿ ಗಣೇಶ ಮೂರ್ತಿಯನ್ನು ನಿರ್ಮಾಣ ಮಾಡುವುದು, ಅದರ ತಳದಲ್ಲಿ ಉತ್ಕೃಷ್ಟವಾದ ವಿವಿಧ ರೀತಿಯ ಬೀಜಗಳನ್ನು ಸೇರಿಸುವುದು. ಗಣೇಶ ಮೂರ್ತಿಯ ಪೂಜೆ ಎಲ್ಲಾ ಮುಗಿದು ಅದನ್ನು ವಿಸರ್ಜನೆ ಮಾಡಿದಾಗ ನೀರಿನಲ್ಲಿ ಸೇರಿದ ಆ ಬೀಜಗಳು ಮೊಳಕೆಯೊಡೆದು ಸಸಿಯಾಗುತ್ತವೆ. ಅದೇ ಜೇಡಿ ಮಣ್ಣನ್ನು ಬಳಸಿಕೊಂಡು ಬೆಳೆಯುತ್ತವೆ. ಇನ್ನು ಚಿಕ್ಕ ಚಿಕ್ಕ ಮೂರ್ತಿಯನ್ನು ಮನೆಯಲ್ಲಿಯೇ ವಿಸರ್ಜನೆ ಮಾಡುವ ವ್ಯವಸ್ಥೆ ಇದ್ದರೆ ಮೂರ್ತಿಯ ಒಳಗೆ ತುಳಸಿ ಗಿಡದ ಬೀಜ, ವಿವಿಧ ಹೂವಿನ ಬೀಜಗಳು, ತರಕಾರಿ ಬೀಜಗಳನ್ನು ಸೇರಿಸಬಹುದು. ಇದರಿಂದ ಗಣೇಶನ ಆರಾಧನೆ, ವಿಸರ್ಜನೆಯೂ ಆಗುತ್ತದೆ, ಇಷ್ಟದ ಗಿಡವನ್ನು ಬೆಳೆದುಕೊಂಡ ಹಾಗೆಯೂ ಆಗುತ್ತದೆ. ಪರಿಸರವೂ ಆರೋಗ್ಯಕರವಾಗಿ ಇರುತ್ತದೆ.

4. ಮನೆಯಲ್ಲೇ ತಯಾರಿಸಿ ಮಣ್ಣಿನ ಎ.ಸಿ.

 

ಮಣ್ಣಲ್ಲಿ ಮಡಿಕೆ ಮಾಡುವುದು ಕಂಡಿರುತ್ತೀರಿ. ಮಡಿಕೆಯಲ್ಲಿ ಇಟ್ಟತಂಪು ನೀರನ್ನು ಕುಡಿದು ಕೂಲ್‌ ಆಗಿರುತ್ತೀರಿ. ಆದರೆ ಮಣ್ಣಲ್ಲಿ ಎ.ಸಿ. (ಏರ್‌ ಕಂಡೀಷನರ್‌) ಮಾಡಿರುವುದನ್ನು ಕಂಡಿದ್ದೀರಾ? ಹೀಗೊಂದು ಪ್ರಯತ್ನವನ್ನು ದೆಹಲಿಯ ಮೋನಿಷ್‌ ಎನ್ನುವವರು ಮಾಡಿದ್ದಾರೆ. ಈ ಪ್ರಯೋಗವನ್ನು ನೀವೂ ಮಾಡಬಹುದು. ಕೊಳವೆ ಆಕಾರದಲ್ಲಿ ಐದು ಆರು ಅಡಿಗಳ, ಐದಾರು ಇಂಚು ಸುತ್ತಳತೆಯಲ್ಲಿ ಮಣ್ಣಿನಲ್ಲಿ ಮಡಿಕೆ ಮಾಡುವ ಹಾಗೆಯೇ ಕೊಳವೆಗಳನ್ನು ತಯಾರು ಮಾಡಿಕೊಳ್ಳುವುದು. ಅವುಗಳನ್ನು ಚಿತ್ರದಲ್ಲಿ ತೋರಿಸಿರುವಂತೆ ಒಂದರ ಮೇಲೆ ಒಂದರಂತೆ ಜೋಡಿಸಿ, ಅವುಗಳ ಮೇಲೆ ನೀರು ಒಸರುವಂತೆ ನೋಡಿಕೊಳ್ಳುವುದು. ಹೀಗೆ ಮಾಡಿದಾಗ ಕೊಳವೆಯ ಮೂಲಕ ಹಾದು ಬರುವ ಗಾಳಿಯು ತಂಪಾಗುತ್ತದೆ. ಹೀಗೆ ತಂಪಾದ ಗಾಳಿಯನ್ನು ದೊಡ್ಡ ದೊಡ್ಡ ಕೊಳವೆಗಳ ಮೂಲಕ ಕಚೇರಿ, ಮನೆಗಳಿಗೆ ಸರಬರಾಜು ಮಾಡುವ ವ್ಯವಸ್ಥೆ ಮಾಡಿಕೊಂಡರೆ ನ್ಯಾಚುರಲ್‌ ಎ.ಸಿ. ಸಿದ್ಧ. ಇದು ಆರಂಭದಲ್ಲಿ ಸಣ್ಣ ಪ್ರಮಾಣದ ಸಂಪನ್ಮೂಲ ಕೇಳುತ್ತದೆ ಬಿಟ್ಟರೆ ಮಿಕ್ಕಂತೆ ಲೈಫ್‌ ಲಾಂಗ್‌ ಫ್ರೀ ಮೆಂಟೆನೆನ್ಸ್‌. ಅದರೊಂದಿಗೆ ತಾಜಾ ಗಾಳಿ ನಮ್ಮದಾದರೆ ಪರಿಸರಕ್ಕೂ ಇದರಿಂದ ಯಾವುದೇ ರೀತಿಯ ಅಪಾಯ ಇಲ್ಲ.

ಸ್ಟ್ರಾಂಗ್ ಹೆಲ್ದಿ ಹೇರ್‌ಗೆ ಮನೆಯಲ್ಲೇ ನ್ಯಾಚುರಲ್‌ ಕೇರ್‌ ಹೀಗಿರಲಿ!

5. ಪುನರ್ಬಳಕೆ ವಸ್ತುಗಳಿಂದ ಮನೆ ನಿರ್ಮಾಣ

 

ಬೆಂಗಳೂರಿನಲ್ಲಿ ಜಿ.ವಿ. ದಾಶರಥಿ ಎನ್ನುವರ ಮನೆ ನೋಡಿದರೆ ಖುಷಿಯಾಗುತ್ತೆ. ಅಲ್ಲೊಂದು ಸುತ್ತು ಸುತ್ತಾಡಿ ಬರಬೇಕು ಎನ್ನಿಸುತ್ತೆ. ಕಾರಣ ಇಡೀ ಮನೆ ನಿರ್ಮಾಣವಾಗಿರುವುದು ಮರಗಳಿಂದ, ಪುನರ್‌ ಬಳಕೆ ಮಾಡಬಹುದಾದ ವಸ್ತುಗಳಿಂದ. ಸುಮಾರು 15 ಲಕ್ಷ ರುಪಾಯಿ ವೆಚ್ಚದ ಈ ಮನೆ ಪರಿಸರದೊಂದಿಗೆ ಬದುಕಬೇಕು ಎನ್ನುವವರಿಗೆ ಬೆಸ್ಟ್‌ ಆಯ್ಕೆ. ಸುತ್ತಲೂ ತೆರೆದ ಬಾಗಿಲುಗಳು, ಮರದ ಮೆಟ್ಟಿಲು, ಎಲ್ಲಿ ನೋಡಿದರಲ್ಲಿ ಸಂಪೂರ್ಣ ಪುನರ್‌ ಬಳಕೆ ಮಾಡಬಹುದಾದ ವಸ್ತುಗಳಿಂದ ಮಾಡಿದ ವಸ್ತುಗಳು. ಇದೆಲ್ಲದ್ದರಿಂದಾಗಿ ಮನೆಗೊಂದು ಸುಂದರ ವಿನ್ಯಾಸ ದೊರೆತಿದೆ. ಜೊತೆಗೆ ಮನಸ್ಸಿಗೆ ಹಿತ ಉಂಟು ಮಾಡುವ ವಾತಾವರಣವೂ ನಿರ್ಮಾಣವಾಗಿದೆ. ನೀವೂ ಮನಸ್ಸು ಮಾಡಿದರೆ ಕಡಿಮೆ ಬೆಲೆಯಲ್ಲಿ ಮನಸ್ಸಿಗೊಪ್ಪುವ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬಹುದು.

6. ಚಿಂದಿ ಬಟ್ಟೆಯಿಂದ ಚಂದನೆಯ ಡ್ರೆಸ್‌

ನೂರಾರು ಬಣ್ಣಗಳು ಒಂದುಗೂಡಲಿ, ನಾವೆಲ್ಲಾ ಆಡಬೇಕಪ್ಪಾ ಒಂದೇ ಗೂಡಲ್ಲಿ ಎನ್ನುವುದು ಕನ್ನಡದ ಸಿನಿಮಾ ಒಂದರ ಹಾಡು. ಈ ಹಾಡಿನಂತೆಯೇ ನೂರಾರು ಬಣ್ಣಗಳನ್ನು ಒಂದೇ ಗೂಡಲ್ಲಿ ಸೇರಿಸಿಯೂ ಪರಿಸರದ ಸಂರಕ್ಷಣೆ ಮಾಡಬಹುದು. ಅದು ಹೇಗೆಂದರೆ, ಹಲವು ಬಣ್ಣದ ಸಣ್ಣ ಸಣ್ಣ ಬಟ್ಟೆಗಳನ್ನು ಸೇರಿಸಿ ಅದಕ್ಕೊಂದಷ್ಟುಸೃಜನಶೀಲತೆ ಸೇರಿಸಿ ವಸ್ತ್ರಗಳನ್ನು ತಯಾರು ಮಾಡಿದರೆ ಆಯಿತು. ಪರಿಸರವೂ ಉಳಿದಹಾಗೆ, ನಮಗೆ ಡ್ರೆಸ್‌ಗಳೂ ಸಿಕ್ಕ ಹಾಗೆ. ಇದನ್ನು ಈಗ ಫ್ಯಾಷನ್‌ ಲೋಕ ಮಾಡುತ್ತಿದೆ. ಚೂರು ಚೂರು ಬಟ್ಟೆಗಳನ್ನು ಒಟ್ಟಾಗಿಸಿ ಅದನ್ನು ಚೆಂದದ ಹೊಸ ಡ್ರೆಸ್‌ ಆಗಿ ತಯಾರು ಮಾಡಿ ಮಾರಾಟ ಮಾಡುತ್ತಿದೆ. ಅದೇ ರೀತಿ ನೀವೂ ಮನೆಯಲ್ಲಿಯೇ ಮಾಡಬಹುದು. ಇದಕ್ಕೆ ಒಂದಷ್ಟುಸಮಯ, ಕ್ರಿಯಾಶೀಲತೆ ಇದ್ದರೆ ಸಾಕು. ದೇಶದಲ್ಲಿ ಒಂದು ದಿನಕ್ಕೆ ಸುಮಾರು 1.5 ಲಕ್ಷ ಯೂನಿಟ್‌ ಬಟ್ಟೆಗಳು ತಯಾರಾಗುತ್ತವೆ. ಇದರಲ್ಲಿ ಸುಮಾರು 45 ಸಾವಿರ ಮೀಟರ್‌ನಷ್ಟುಬಟ್ಟೆಚಿಂದಿ ಚಿಂದಿಯಾಗಿ ವ್ಯರ್ಥವಾಗುತ್ತಿದೆ. ಒಂದು ಡ್ರೆಸ್‌ ರೆಡಿ ಮಾಡಬೇಕಿದ್ದರೆ ಈ ರೀತಿ ಕಟಿಂಗ್‌ ಮಾಡುವುದು ಅನಿವಾರ್ಯವಾದರೂ ಅದನ್ನು ಬೇರೆ ಉಪಯೋಗಕ್ಕೆ ಬಳಕೆ ಮಾಡಿಕೊಳ್ಳುವುದು ಪರಿಸರದ ದೃಷ್ಟಿಯಿಂದಲೂ ಜಾಣ ನಡೆ. ಕಡೆಗೆ ಏನೂ ಹೊಸತು ಹೊಳೆಯದೇ ಇದ್ದರೂ ಹೀಗೆ ಉಳಿಸ ಚಿಂದಿ ಬಟ್ಟೆಗಳಿಂದ ಒಂದು ಚಂದನೆಯ ತಲೆದಿಂಬನ್ನು ತಯಾರಿ ಮಾಡಿಕೊಳ್ಳಲು ಅಡ್ಡಿ ಇಲ್ಲ ಅಲ್ಲವೇ. ಅಲ್ಲಿಗೆ ತಲೆಗೂ ಆಧಾರ, ಪರಿಸರಕ್ಕೂ ನಿರಾಳ.

7. ತಿನ್ನಬಹುದಾದ ಪ್ಲೇಟ್‌, ಲೋಟ, ಚಮಚ!

ಹೋಟೆಲ್‌ ಎಂದಮೇಲೆ ಅಲ್ಲಿ ಗ್ಲಾಸ್‌, ಸ್ಟ್ರಾ, ಬೌಲ್‌, ಸ್ಪೂನ್‌ ಇದೆಲ್ಲಾ ಮಾಮೂಲಿ. ಈಗೀಗ ಯೂಸ್‌ ಆ್ಯಂಡ್‌ ಥ್ರೋಗಳ ಸಂಖ್ಯೆ ಹೆಚ್ಚಾಗಿ, ಪರಿಸರಕ್ಕೂ ಇದರಿಂದ ತೊಂದರೆ. ಇದಕ್ಕೆ ಪರಿಹಾರ ಎಂಬಂತೆ ನಮ್ಮ ಬೆಂಗಳೂರಿನಲ್ಲಿ ಹೊಸ ಬಗೆಯ ಪ್ರಯೋಗವೊಂದನ್ನು ಎಡಿಬಲ್‌ಪ್ರೋ ಸಂಸ್ಥೆಯ ಶೈಲಾ ಗುರುದತ್‌ ಅವರು ಮಾಡಿದ್ದಾರೆ. ಅದು ಸಾಕಷ್ಟುಮೆಚ್ಚುಗೆ ಪಡೆದಿದೆ, ಪರಿಸರದ ಮತ್ತು ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಇದು ಸೂಪರ್‌. ಈಟೆಬಲ್‌ ಕಟ್ಲೆರಿ, ಅಂದರೆ ಹೋಟೆಲ್‌ಗಳಲ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ಸ್ಪೂನ್‌, ಬೌಲ್‌, ಸ್ಟ್ರಾ, ಗ್ಲಾಸ್‌ಗಳೆಲ್ಲವನ್ನೂ ವಿವಿಧ ಬಗೆಯ ಹಣ್ಣುಗಳು, ತರಕಾರಿಗಳಿಂದ ತಯಾರು ಮಾಡುವುದು. ಇದು ಪಕ್ಕಾ ನ್ಯಾಚುರಲ್‌ ಆ್ಯಂಡ್‌ ಹೆಲ್ತಿ. ದಾಳಿಂಬೆ, ನಿಂಬೆ, ಕಿತ್ತಳೆ, ಟಮೋಟೋ, ಖರ್ಚೂರ 60ಕ್ಕೂ ಹೆಚ್ಚು ಫ್ಲೇವರ್‌ಗಳಲ್ಲಿ ಕಟ್ಲೆರಿಗಳನ್ನು ತಯಾರು ಮಾಡಿರುವ ಶೈಲಾ ಆ್ಯಂಡ್‌ ಟೀಮ್‌ ಇವುಗಳಲ್ಲಿಯೇ ಗ್ರಾಹಕರಿಗೆ ಸೂಪ್‌, ಐಸ್‌ಕ್ರೀಂ, ಟೀ, ಕಾಫಿ, ವಿವಿಧ ಬಗೆಯ ಭೋಜನಗಳನ್ನು ನೀಡುತ್ತಾರೆ. ಇವೆಲ್ಲವನ್ನೂ ಸವಿದಾದ ಮೇಲೆ ಆ ಕಟ್ಲೆರಿಗಳ ಸವಿಯನ್ನೂ ನೋಡಬಹುದು. ಇದು ಇದರ ವಿಶೇಷ. ನೀವೂ ಮನೆಯಲ್ಲಿ ಈ ಬಗೆಯ ಪ್ರಯೋಗಗಳನ್ನು ಮಾಡಬಹುದು.

ಚೆನ್ನೈ ಹೋಟೆಲ್‌ಗಳಲ್ಲಿ ಈಗ ಬಾಳೆ ಎಲೆ ಊಟ!

8. ಹಸಿರೇ ಮದುವೆಯ ಉಸಿರು

ಗ್ರೀನ್‌ ವೆಡ್ಡಿಂಗ್‌: ಹೀಗೊಂದು ಟ್ರೆಂಡ್‌ ಶುರುವಾಗಿದೆ. ಇಡೀ ಮದುವೆಯನ್ನು ನೈಸರ್ಗಿಕವಾಗಿ, ಪರಿಸರಕ್ಕೆ ಪೂರಕವಾಗಿ ಮಾಡುವುದು ಇದರ ಮೂಲ ಉದ್ದೇಶ. ಲಗ್ನ ಪತ್ರಿಕೆಯಿಂದ ಆರಂಭವಾಗಿ ಆರತಕ್ಷತೆ ವರೆಗೂ ಎಲ್ಲವೂ ನೇಜರ್‌ ಫ್ರೆಂಡ್ಲಿ. ಎಲ್ಲಿಯೂ ಪ್ಲಾಸ್ಟಿಕ್‌ ಬಳಕೆ ಇಲ್ಲ, ರಾಸಾಯನಿಕಗಳ ಸ್ಪರ್ಶವಿಲ್ಲ, ಅತಿಯಾದ ಆಡಂಬರವಿಲ್ಲ. ಹಾಗೆಂದು ಯಾವುದಕ್ಕೂ ಕಡಿಮೆ ಇಲ್ಲದ ಮದುವೆ ಇದು. ಎಲ್ಲಾ ರೀತಿಯ ಸಂಪ್ರದಾಯ, ಸಡಗರ ಇದ್ದೇ ಇರುತ್ತದೆ. ಜೊತೆಗೆ ಪರಿಸರ ಕಾಳಜಿ ಇರುತ್ತದೆ. ಈಗಂತೂ ಕೊರೋನಾ ಹಾವಳಿ ಇದೆ. ಗ್ರ್ಯಾಂಡ್‌ ಆಗಿ ಮದುವೆ ಆಗುವುದು ಕಷ್ಟ. ಇಂತಹ ವೇಳೆಯಲ್ಲಿ ಮದುವೆಯಾಗುವ ಜೋಡಿಗಳು ಈ ಗ್ರೀನ್‌ ವೆಡ್ಡಿಂಗ್‌ ಕಾನ್ಸೆಪ್ಟ್‌ ಅವಡಿಸಿಕೊಳ್ಳಬಹುದು.

9.ಉಡುಗೊರೆ ಒಬ್ಬರಿಗೆ, ಲಾಭ ಜಗತ್ತಿಗೆ

ಒಂದು ಗಿಫ್ಟ್‌ ಅನ್ನು ಒಬ್ಬರಿಗೆ ಕೊಡಬಹುದು. ಅಥವಾ ಜೋಡಿಯಾಗಿದ್ದರೆ ಇಬ್ಬರಿಗೂ ಸೇರಿಸಿ ನೀಡಬಹುದು. ಆದರೆ ಬಹಳಷ್ಟುವೇಳೆಯಲ್ಲಿ ಏಕಕಾಲಕ್ಕೆ ನಾವು ನೀಡುವ ಉಡುಗೊರೆ ಇಬ್ಬರಿಗೆ ಮತ್ತು ಅದಕ್ಕೂ ಅಧಿಕ ಮಂದಿಗೆ ಸಂತೋಷ ತರುತ್ತದೆ, ದೀರ್ಘಾವಧಿಯಲ್ಲಿ ಅನುಕೂಲ ಮಾಡಿಕೊಡುತ್ತದೆ ಎನ್ನುವುದಾದರೆ ನೀವು ಅಂತಹುದೇ ಗಿಫ್ಟ್‌ ನೀಡುತ್ತೀರಿ ಅಲ್ಲವೇ. ಹೌದು, ಯಾರೇ ಆದರೂ ಕಡಿಮೆ ಬೆಲೆಯಲ್ಲಿ ಇಂತಹ ಬಹುಪಯೋಗಿ ಗಿಫ್ಟ್‌ ಒಂದಿದ್ದರೆ ಅದನ್ನೇ ನೀಡುತ್ತಾರೆ. ಅದಕ್ಕೆ ಮಾಡಬೇಕಾದದ್ದು ಸಿಂಪಲ್‌. ನೇಚರ್‌ ಫ್ರೆಂಡ್ಲಿ ಗಿಫ್ಟ್‌ ನೀಡುವುದು. ಉದಾ: ಬಣ್ಣ ಬಣ್ಣದ ಸೀಡ್‌ ಬಾಲ್‌, ಬೀಜಗಳಿರುವ ಗ್ರೀಟಿಂಗ್‌ ಕಾರ್ಡ್ಸ್, ಮರು ಬಳಕೆ ಮಾಡಬಹುದಾದ ವಸ್ತುಗಳು. ಹೀಗೆ ಅನುಕೂಲಕರ ಗಿಫ್ಟ್‌ಗಳನ್ನು ನೀಡಿದರೆ ಅದು ಅವರಿಗೂ ಸಂತೋಷ ತರುತ್ತದೆ, ಜೊತೆಗೆ ಪರಿಸರಕ್ಕೂ ಉಪಯೋಗಿ.

10.ವೇಸ್ಟ್‌ ಬಾಟಲ್‌ಗಳಿಂದ ತಾರಸಿ ತೋಟ

ಶಿಲೆಯಲ್ಲಿಯೇ ಕಲೆಯನ್ನು ಅರಳಿಸುವ ಮನುಷ್ಯನಿಗೆ ತನ್ನ ಸುತ್ತಲೂ ಇರುವ ಬೇಡದ ವಸ್ತುಗಳನ್ನು ಬಳಸಿ ಕಲೆಯ ಜೊತೆಗೆ ಸೌಂದರ್ಯವನ್ನೂ, ಪರಿಸರ ಪ್ರೇಮವನ್ನೂ ಮೆರೆಯುವುದು ಕಷ್ಟದ ಮಾತಲ್ಲ. ಮನೆಗೆ ತಂದ ಕೂಲ್‌ ಡ್ರಿಂಕ್ಸ್‌ನ ತ್ಯಾಜ್ಯ ಬಾಟಲ್‌, ಐಸ್‌ಕ್ರೀಂ, ಒಡೆದು ಹೋದ ಕಾಫಿ ಮಗ್‌, ಹಳೆಯದಾದ ಪೀಠೋಪಕರಣ ಹೀಗೆ ಮನೆಯಲ್ಲಿ ಬೇಡವೆಂದು ಮೂಲೆ ಸೇರಿದ ವಸ್ತುಗಳು ಸಾಕಷ್ಟುಇರುತ್ತವೆ. ಇವುಗಳನ್ನು ನೋಡುತ್ತಲೇ ಅಯ್ಯೋ ಕಸದ ರಾಶಿ ಎಂದುಕೊಳ್ಳದೇ ಇವುಗಳಿಂದು ಒಂದು ರೂಪ ಕೊಟ್ಟು, ಅದರೊಳಗೊಂದಷ್ಟುಮಣ್ಣು ಹಾಕಿ, ಬೀಜ ಬಿತ್ತಿ, ತಾರಸಿಯ ಮೇಲೆ, ಮನೆಯ ಮುಂದೆ ಇಟ್ಟರೆ ಅಲ್ಲಿ ಹಸಿರು ಹುಟ್ಟುತ್ತದೆ. ಪರಿಸರಕ್ಕೂ ಇದರಿಂದ ಅನುಕೂಲ ಆಗುತ್ತದೆ. ಈ ರೀತಿಯ ಪ್ರಯೋಗಗಳನ್ನು ಈಗಾಗಲೇ ಸಾಕಷ್ಟುಮಂದಿ ತಮ್ಮ ಮನೆಗಳಲ್ಲಿ ಮಾಡಿ ಯಶ ಕಂಡಿದ್ದಾರೆ.

click me!