ಈ ರಾಶಿಯವರಿಗೆ ಗುರು ಬಲ ಬಂದಾಯ್ತು, ಕೂಡಿ ಬಂದಿದೆ ಕಂಕಣ ಭಾಗ್ಯ!

By Web Desk  |  First Published Nov 5, 2019, 12:01 PM IST

ಜಾತಕದಲ್ಲಿ ಗುರು ಬಲವಿದ್ದರೆ ಜೀವನದಲ್ಲಿ ಒಳ್ಳೆಯದಾಗುತ್ತದೆ, ಎಂಬ ನಂಬಿಕೆ ಇದೆ. ಇದೀಗ ಈ ನಾಲ್ಕು ರಾಶಿಗಳಿಗೆ ಗುರು ಪ್ರವೇಶಿಸುತ್ತಿದ್ದು, ಯಾರಿಗೆ, ಯಾವ ಫಲ ಎಂಬುದನ್ನು ನೋಡಿಕೊಳ್ಳಿ...


ಶ್ರೀಕಂಠ ಶಾಸ್ತ್ರಿ

ಗುರುವಿನ ಮಹತ್ವ :

Tap to resize

Latest Videos

ಜ್ಯೋತಿಷ ಶಾಸ್ತ್ರದ ಪಿತಾಮಹ ವರಾಹ ಮಿಹಿರರು ಉಲ್ಲೇಖಿಸುವಂತೆ ಜ್ಯೋತಿಷ ಶಾಸ್ತ್ರದಲ್ಲಿ ಒಂದು ಪ್ರಸಿದ್ಧ ವಾಣಿ ಇದೆ :‘‘ ಜೀವೋ ಜ್ಞಾನ ಸುಖೇ ’’ಅಂತ. ಹಾಗಂದರೆ ಈ ಬ್ರಹ್ಮಾಂಡವನ್ನೇ ಆಳುವ ಕಾಲಪುರುಷನಿಗೆ ಜ್ಞಾನ ಹಾಗೂ ಸುಖಗಳ ಅರಿವು ನೀಡುವ ಶಕ್ತಿಯಾಗಿ ನಿಂತಿದ್ದಾನೆ ಗುರು ಗ್ರಹ. ತನ್ಮೂಲಕ ಆ ಗುರು ನಮ್ಮ ಜ್ಞಾನ ಹಾಗೂ ಸುಖಗಳ ಪ್ರತಿನಿಧಿಯೂ ಆಗಿದ್ದಾನೆ.

ಮನುಷ್ಯ ಜೀವನದಲ್ಲಿ ಸುಖಿಯಾಗಿರಬೇಕು.ಆತ ಸುಖವಾಗಿರಬೇಕಿದ್ದರೆ ಯಾವ ಕೊರತೆಯೂ ಇರಬಾರದು.ಇಂಥ ಸುಖವನ್ನು ಕಂಡುಕೊಳ್ಳಲಿಕ್ಕೆ ಮನುಷ್ಯನಿಗೆ ಜ್ಞಾನ ಬೇಕು. ಈ ಸುಖ ಹಾಗೂ ಅರಿವು ಎರಡನ್ನೂ ನಮ್ಮ ಅನುಭವಕ್ಕೆ ತಂದುಕೊಡುವ ಗ್ರಹವೇ ಗುರುಗ್ರಹ. ಹೀಗಾಗಿ ಗುರುಗ್ರಹಕ್ಕೆ  ಜ್ಯೋತಿಷ ಶಾಸ್ತ್ರದಲ್ಲಿ ಶ್ರೇಷ್ಠ ಸ್ಥಾನವಿದೆ. ‘‘ಬೃಹಸ್ಪತಿ: ಶ್ರೇಷ್ಠ ಮತಿ:’’ಅಂತ ಕರೀತಾರೆ. ಅಂದರೆ ಗುರುವು ಶ್ರೇಷ್ಠ ಬುದ್ಧಿಯನ್ನು ಹೊಂದಿರುವಾತ ಎಂದು. 

101 ವರ್ಷಗಳ ಹಿಂದೆ ಸಮಾಧಿಯಾದ ಶಿರಡಿ ಸಾಯಿ ಬಾಬಾರಿಗೆ ನಮಿಸುತ್ತಾ

ಬೃಹಜ್ಜಾತಕದಲ್ಲಿ ಉಲ್ಲೇಖಿಸಿದಂತೆ ‘‘ಹೋರಾಸ್ವಾಮಿ ಗುರುಜ್ಞವೀಕ್ಷಿತಯುತಾನಾನ್ಯೈಶ್ಚ ವೀರ್ಯೋತ್ಕಟಾ ಭವತಿ’’ ಎಂಬ ಭದ್ರ ಬಲವನ್ನು ಕೊಡುತ್ತಾನೆ ಈ ಗುರು.ಹಾಗಂದರೆ ಒಬ್ಬರ ಜಾತಕದಲ್ಲಿ ಅವರ ರಾಶಿಯನ್ನೋ, ಅಥವಾ ಲಗ್ನವನ್ನೋ ಗುರುಗ್ರಹ ನೋಡಿದರೆ, ಅಥವಾ ಸೇರಿದ್ದರೆ ಆ ವ್ಯಕ್ತಿ  ಅತ್ಯಂತ ಬಲಿಷ್ಠ ವ್ಯಕ್ತಿಯಾಗುತ್ತಾನೆ. ಹೀಗಾಗಿ ಜಾತಕದಲ್ಲಿ ಗುರು ಗ್ರಹಕ್ಕೆ ಯಾರಿಗೂ ಇಲ್ಲದ ಪ್ರಾಶಸ್ತ್ಯವನ್ನ ಕೊಟ್ಟಿದ್ದಾರೆ. ಅಷ್ಟೇ ಯಾಕೆ ನಮ್ಮ ಮನೆಯಲ್ಲಿ ಒಂದು ಮಂಗಳಕಾರ್ಯ ನಡೆಯಬೇಕಿದ್ದರೆ ಗುರುಬಲ ಅತ್ಯವಶ್ಯಕ, ಅದರಲ್ಲೂ ವಿವಾಹ, ಉಪನಯನದಂಥ ಕಾರ್ಯಕ್ರಮಗಳಿಗೆ ಗುರುಬಲವೇ ಜೀವಬಲ. ಇಂಥ ಗುರು ಈಗ ಸ್ಥಾನಬದಲಾವಣೆ ಮಾಡಿದ್ದಾನೆ. ಇಷ್ಟು ದಿನ ವೃಶ್ಚಿಕ ರಾಶಿಯಲ್ಲಿದ್ದ ಗುರು ಈಗ ಧನಸ್ಸು ರಾಶಿಯನ್ನು ಪ್ರವೇಶ ಮಾಡಿದ್ದಾನೆ. 
 
ಗುರುವಿನ ಫಲ ಯಾವಾಗ..?

ಒಂದು ಗ್ರಹ ಸ್ಥಾನ ಬದಲಾವಣೆ ಮಾಡಿದ ಕೂಡಲೆ ಫಲ ಕೊಟ್ಟುಬಿಡುತ್ತದೆ ಎಂಬುದು ಕೇವಲ ಕಲ್ಪನೆಯಾಗುತ್ತದೆ.ಒಂದು ಗ್ರಹ ಫಲ ಕೊಡಬೇಕಿದ್ದರೆ ಆ ಗ್ರಹಕ್ಕೆ ಬಲವಿರಬೇಕು.ಅಂದರೆ ಆ ಗ್ರಹ ತನ್ನ ಸ್ವಂತ ಮನೆಯಲ್ಲೋ, ತನ್ನ ಉಚ್ಚರಾಶಿಯಲ್ಲೋ, ತನ್ನ ಮೂಲ ತ್ರಿಕೋಣ ರಾಶಿಯಲ್ಲೋ ಇರಬೇಕು. ಅದನ್ನು ಸ್ಥಾನ ಬಲವೆಂದು ಕರೆಯುತ್ತಾರೆ. ಈಗ ಗುರು ಪ್ರವೇಶವಾಗುತ್ತಿರುವುದು ಧನಸ್ಸು ರಾಶಿಗೆ. ಧನಸ್ಸು ರಾಶಿ ಗುರುವಿನ ಸ್ವಂತ ಮನೆ. ಅಲ್ಲದೆ ಮೂಲ ತ್ರಿಕೋಣ ಸ್ಥಾನವೂ ಹೌದು.( ಪ್ರಾರಂಭದ 10 ಅಂಶ ( ಡಿಗ್ರಿ ) ಮೂಲ ತ್ರಿಕೋಣ ನಂತರದ 20 ಡಿಗ್ರಿ ಸ್ವಕ್ಷೇತ್ರವಾಗಿದೆ. ) ಹೀಗಾಗಿ ಗುರುವಿಗೆ ಸಂಪೂರ್ಣಬಲ ಬಂದಿದೆ. ಬಲ ಬಂದಿದೆ ಆದರೆ ಶಾಸ್ತ್ರದ ಪ್ರಕಾರ ಗುರು ತನ್ನ ಫಲವನ್ನು ಕೊಡಲಿಕ್ಕೆ ಇನ್ನೂ ಕೆಲವು ದಿನಗಳಕಾಲ ಹೋಗಬೇಕು. ಯಾಕೆಂದರೆ ಅದಕ್ಕೊಂದು ಆಧಾರವನ್ನು ಕೊಡುತ್ತಾರೆ ಪಿತಾಮಹ ವರಾಹಮಿಹಿರರು.

ಕೈ ತುಂಬಾ ದುಡ್ಡು ಇರ್ಬೇಕಂದ್ರೆ ಹೀಗೆ ಮಾಡಿ!

" ದಿನಕರ ರುಧಿರೌ ಪ್ರವೇಶ ಕಾಲೇ ಗುರು ಬೃಗುಜೌ ಭವನಸ್ಯ ಮಧ್ಯಯಾತೌ
ರವಿಸುತ ಶಶಿನೌ ವಿನರ್ಗಮಸ್ಥೌ ಶಶಿತನಯ: ಫಲದಸ್ತು ಸಾರ್ವಕಾಲಂ "

ಜ್ಯೋತಿಷದಲ್ಲಿ ಈ ಸೂತ್ರ ಪ್ರಧಾನವಾಗಿದೆ. ಇದರ ಆಧಾರದ ಮೇಲೆಯೇ ಗ್ರಹಗಳು ಫಲಕೊಡುವ ಕಾಲವನ್ನು ನಿರ್ಣಯಿಸಬೇಕಾಗುತ್ತದೆ. ಈ ಸೂತ್ರ ವಿವರಿಸುವ ಹಾಗೆ ಕೆಲವು ಗ್ರಹಗಳು ಒಂದು ರಾಶಿಯನ್ನು ಪ್ರವೇಶ ಮಾಡಿದ ಕೂಡಲೇ ಫಲಕೊಡಲಿಕ್ಕೆ ಸಮರ್ಥವಾಗಿರುತ್ತವೆ. ಇನ್ನೂ ಕೆಲವು ಕಾಲಾನಂತರದಲ್ಲಿ ಫಲ ಕೊಡಲಿಕ್ಕೆ ಯೋಗ್ಯವಾಗುತ್ತವೆ. ಅವುಗಳನ್ನ ಅರಿಯದೇ ಫಲವನ್ನು ಹೇಳುವುದು ಕಷ್ಟವಾಗುತ್ತದೆ. ಹಾಗಾದರೆ ಯಾವ ಗ್ರಹಗಳು ಯಾವಾಗ ಫಲ ಕೊಡುತ್ತವೆ ಎಂಬುದು ನಮಗೆ ಅರ್ಥವಾಗಬೇಕು. ಮೇಲಿನ ಸೂತ್ರವೇ ವಿವರಿಸುವ ಹಾಗೆ ರಾಶಿಯನ್ನು ಪ್ರವೇಶ ಮಾಡಿದ ತಕ್ಷಣವೇ ಫಲಕೊಡುವ ಗ್ರಹಗಳೆಂದರೆ ರವಿ ಹಾಗೂ ಕುಜರು.

ಇನ್ನೂ ಕೆಲವು ಗ್ರಹಗಳು ಭವನಸ್ಯ ಮಧ್ಯಯಾತೌ ಅಂದರೆ, ರಾಶಿಯ ಮಧ್ಯಭಾಗದಲ್ಲಿ ಫಲವನ್ನು ಕೊಡುತ್ತಾರೆ, ಹಾಗೆ ರಾಶಿಯ ಮಧ್ಯಭಾಗದಲ್ಲಿ ಫಲ ಕೊಡುವ ಗ್ರಹಗಳು ಗುರು ಹಾಗೂ ಶುಕ್ರರು. ಇನ್ನೂ ಕೆಲವು ರಾಶಿಯ ಕೊನೆಯ ಭಾಗದಲ್ಲಿ ಫಲವನ್ನು ಕೊಟ್ಟು ಮುಂದಿನ ರಾಶಿಗೆ ಹೋಗಲಿವೆ. ಆ ಗ್ರಹಗಳೆಂದರೆ ಶನಿ ಹಾಗೂ ಚಂದ್ರರು. ಇನ್ನು ಬುಧ ಗ್ರಹ ಮಾತ್ರ ಎಲ್ಲ ಕಾಲದಲ್ಲೂ ಅಂದರೆ ರಾಶಿಯ ಪ್ರವೇಶದಿಂದ ಹಿಡಿದು ಮತ್ತೊಂದು ರಾಶಿಗೆ ಹೋಗುವವರೆಗೆ ಎಲ್ಲ ಸಮಯದಲ್ಲೂ ಫಲಕೊಡುತ್ತಾನೆ ಅಂತ. 

ರಾಶಿಯ ಮಧ್ಯ ಭಾಗ ಎಂದರೇನು..?

ಅಲ್ಲಿಗೆ ಗುರು ಗ್ರಹ ಪ್ರವೇಶವಾದ ಕೂಡಲೇ ಸಂಪೂರ್ಣ ಫಲವನ್ನು ಕೊಡುವುದಿಲ್ಲ ರಾಶಿಯ ಮಧ್ಯಭಾಗದಲ್ಲಿ ತನ್ನ ಫಲವನ್ನು ಕೊಡಲಿಕ್ಕೆ ಸಂಪೂರ್ಣ ಬಲಿಷ್ಠನಾಗಿರುತ್ತಾನೆ. ರಾಶಿಯ ಮಧ್ಯ ಭಾಗ ಅಂದರೆ ಒಂದು ರಾಶಿಗೆ 30 ಅಂಶ. ಆ 30 ಅಂಶಗಳನ್ನ ಮೂರು ಭಾಗ ಮಾಡಿದರೆ ಅದನ್ನೇ ದ್ರೇಕ್ಕಾಣ ಅಂತಾರೆ. ಮೊದಲ ಹತ್ತು ದ್ರೇಕ್ಕಾಣಗಳನ್ನು ಕಳೆದು 11 ನೇ ದ್ರೇಕ್ಕಾಣ ದಿಂದ 20 ನೇ ದ್ರೇಕ್ಕಾಣದ ಭಾಗವನ್ನೇ ರಾಶಿಯ ಮಧ್ಯಭಾಗ ಅಂತ ಕರೀತಾರೆ. ಹಾಗಾಗಿ ಗುರು ಆ ಮಧ್ಯ ದ್ರೇಕ್ಕಾಣಕ್ಕೆ ಬರಲಿಕ್ಕೆ ಇನ್ನೂ ಕೆಲ ದಿನಗಳು ಬೇಕು. ಹಾಗಂತ ಫಲವಿಲ್ಲ ಅಂತಲ್ಲ. ಫಲವಿದೆ ಸಂಪೂರ್ಣ ಫಲ ಬರಲಿಕ್ಕೆ ಕಾಯಬೇಕು ಅಷ್ಟೆ. 

ಯಾವ ರಾಶಿಗೆ ಯಾವ ಫಲ..?

ಮೇಷ : ಗುರು ಗ್ರಹವು ಇಷ್ಟು ದಿನ ಅಷ್ಟಮ ಸ್ಥಾನದಲ್ಲಿದ್ದು ಆರೋಗ್ಯದಲ್ಲಿ ತೊಡಕು, ಪ್ರಯಾಣದಲ್ಲಿ ತೊಡಕು, ಮಂಗಳಕಾರ್ಯಗಳಿಗೆ ಅಡ್ಡಿ ಮಾಡುತ್ತಿದ್ದ. ಆದರೆ ಈಗ ಗುರುವು ಭಾಗ್ಯ ಸ್ಥಾನಕ್ಕೆ ಬಂದಿದ್ದಾನೆ. ಭಾಗ್ಯೇಶೇ ಭಾಗ್ಯ ಭಾವಸ್ಥೇ ಬಹುಭಾಗ್ಯ ಸಮನ್ವಿತ: ಅಂದರೆ ಭಾಗ್ಯ ಸ್ಥಾನದ ಗುರು ಸೌಭಾಗ್ಯಗಳನ್ನು ವೃದ್ಧಿ ಮಾಡುತ್ತಾನೆ, ಅದೃಷ್ಟ ಹರಿದುಬರಲಿದೆ. ತಂದೆ-ಮಕ್ಕಳಲ್ಲಿ ಹೊಂದಾಣಿಕೆ ವೃದ್ಧಿಯಾಗಲಿದೆ. ಇಷ್ಟು ದಿನ ವಿವಾಹಾದಿ ಶುಭಕಾರ್ಯಗಳಿಗೆ ಕಂಟಕವಿತ್ತು ಈಗ ಹಾಗಲ್ಲ ಯಾವುದೇ ಶುಭ ಕೆಲಸಗಳನ್ನು ನಿರಾತಂಕವಾಗಿ ಮಾಡಬಹುದು. ಅತ್ಯಂತ ಶುಭಫಲವನ್ನು ಕಾಣುತ್ತೀರಿ ಸಂಶಯ ಬೇಡ.  ಪ್ರಾರಂಭದಲ್ಲಿ ಈ ಫಲವು ಕೊಂಚ ಮಟ್ಟಿಗಿದ್ದು ನಂತರದಲ್ಲಿ ಸಮೃದ್ಧವಾಗಲಿದೆ.

ನಂಬಿದವರನೆಂದೂ ಬಿಡದ ಶೃಂಗೇರಿ ಶಾರದಾಂಬೆ; ತಿಳಿಯಬನ್ನಿ ಮಹಾತ್ಮೆಯ!

ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ, ನಾಗ ದೇವರ ಆರಾಧನೆ ಮಾಡಿ.

ವೃಷಭ: ಗುರು ಇಷ್ಟು ದಿನಗಳ ಕಾಲ ಸಪ್ತಮದಲ್ಲಿದ್ದು ಈಗ ಅಷ್ಟಮಕ್ಕೆ ಹೋಗಿದ್ದಾನೆ. ರಂಧ್ರೇಷೇ ಮೃತ್ಯು ಭಾವಸ್ಥೆ ಜಾತೋ ದೀರ್ಘಾಯುಷಾಯುತ: ಎನ್ನುತ್ತಾರೆ. ಆರೋಗ್ಯ ಸಮಸ್ಯೆಗಳು ದೂರಾಗುತ್ತವೆ. ಕಷ್ಟಗಳು ದೂರಾಗುತ್ತವೆ, ಆದರೆ ಯಾವುದೇ ಶುಭ ಕಾರ್ಯಗಳಿಗೆ ಚಾಲನೆ ಇರುವುದಿಲ್ಲ, ನೀವು ಕೈಗೊಳ್ಳುವ ಪ್ರಯಾಣಗಳಲ್ಲಿ ಎಚ್ಚರವಿರಬೇಕು, ದಾಂಪತ್ಯ ಜೀವನದಲ್ಲಿ ಸ್ವಲ್ಪ ಸಮಾಧಾನವಿರಬೇಕು. ದುಡುಕು ನಿರ್ಧಾರಗಳನ್ನು ಕೈಗೊಳ್ಳಬೇಡಿ.

ಪರಿಹಾರ : ಗುರು ಚರಿತ್ರೆ ಓದಿ

ಮಿಥುನ: ಈಗ ನಿಮ್ಮ ರಾಶಿಗೆ ಶುಭ ಕಾಲ. ಮಂಗಳಮಯ ದಿನಗಳು ನಿಮ್ಮ ಮುಂದೆ ಹರಡಿವೆ. ವಿವಾಹ-ಉಪನಯನಗಳಿಗೆ ಚಾಲನೆ ಸಿಗಲಿದೆ, ದಾರೇಶೇ ಸಪ್ತಮೇ ಭಾವೇ ಜಾತೋ ದಾರಾ ಸುಖಾನ್ವಿತ: ಹೆಂಡತಿಗೆ ಗಂಡ, ಗಂಡನಿಗೆ ಹೆಂಡತಿ ಪರಸ್ಪರ ಸಾಮರಸ್ಯದಿಮದಿರುತ್ತಾರೆ, ಮಿತ್ರರಲ್ಲಿ ಅನ್ಯೋನ್ಯತೆ, ಸುಖ ಸಮೃದ್ಧವಾಗುತ್ತದೆ. ಹೊಸ ಹೊಸ ಸ್ನೇಹಗಳ ಬೆಸುಗೆಯಾಗುತ್ತದೆ. ವ್ಯಾಪಾರಗಳಲ್ಲಿ ಹೊಂದಾಣಿಕೆ, ಹೆಚ್ಚಿನ ಆದಾಯವಿರಲಿದೆ. ವಿದೇಶ ಪ್ರಯಾಣ ಇತ್ಯಾದಿ ಶುಭ ಫಲಗಳಿದ್ದಾವೆ.

ಪರಿಹಾರ: ಲಕ್ಷ್ಮೀ ನರಸಿಂಹ ಪ್ರಾರ್ಥನೆ ಮಾಡಿ.

ವಿದೇಶಕ್ಕೆ ತೆರಳಲು ವೀಸಾ ಸಿಕ್ತಾ ಇಲ್ವಾ? ಇಲ್ಲಿ ಹರಕೆ ತೀರಿಸಿ

ಕಟಕ: ನಿಮ್ಮ ರಾಶಿಯಿಂದ ಆರನೇ ಮನೆಗೆ ಪ್ರವೇಶ ಮಾಡಿರುವ ಗುರುವಿನಿಂದ ಷಷ್ಠೇಶೇ ರಿಪು ಭಾವಸ್ಥೇ ವೈರಂ ಸ್ವಜಾತಿ ಮಂಡಲಾತ್ ಎಂಬಂತೆ ತನ್ನ ಬಂಧುವರ್ಗದವರಲ್ಲಿ ಕೊಂಚ ಅಸಮಧಾನಗಳುಂಟಾಗುತ್ತವೆ, ಆಪ್ತರೂ ಕೂಡ ಕೊಂಚ ಮುನಿಸಿಕೊಳ್ಳುತ್ತಾರೆ, ಮಾತನಾಡುವಾಗ ಎಚ್ಚರಿಕೆ ಬೇಕಾಗುತ್ತದೆ, ಆಹಾರ ವ್ಯತ್ಯಾಸವಾಗಿ ರೋಗ ಸಂಭವವಾಗಬಹುದು, ಗುರುಬಲ ಕಳೆದು ಹೋಗುತ್ತದೆ, ನಿಮ್ಮ ಶತ್ರುಗಳಿಂದ ಪಾಠಕಲಿಯುವ ದಿನವಾಗಳ

ಪರಿಹಾರ : ಅಮ್ಮನರ ದೇವಸ್ಥಾನಕ್ಕೆ ಕ್ಷೀರ ದಾನ ಹಾಗೂ ಗುರು ಚರಿತ್ರೆ ಪಠಿಸಿ

ಸಿಂಹ - ಸಂಪೂರ್ಣ ಗುರು ಬಲ ಬಂದಿದೆ, ಸುತೇಶೇ ಸುತ ಭಾವಸ್ಥೇ ಶುಭಾಢ್ಯೇ ಪುತ್ರವಾನ್ನರ: ಅಂತ ಮಕ್ಕಳಿಂದ ಸುಖ ಸಮೃದ್ಧ, ಸಮಾಧಾನವನ್ನು ಕಾಣುವ ದಿನಗಳಿದ್ದಾವೆ, ಮಕ್ಕಳ ಭವಿಷ್ಯ ಬಂಗಾರವಾಗುತ್ತದೆ, ನಿಮ್ಮ ಪ್ರತಿಭಾ ಶಕ್ತಿ ಜಾಗೃತವಾಗುತ್ತದೆ, ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ಯಶಸ್ಸು ಕಾಣಲಿದೆ, ಸ್ತ್ರೀಯರಿಗೆ ಆತಂಕದ ದಿನಗಳು ದೂರಾಗಲಿವೆ, ನಿಮ್ಮ ರಾಶಿಗೆ ಗುರು ದೃಷ್ಟಿ ಬೀಳುವುದರಿಂದ ಆರೋಗ್ಯ ಸಮೃದ್ಧವಾಗಲಿದೆ, ಅದೃಷ್ಟದ ದಿನಗಳಿದ್ದಾವೆ, ವ್ಯಾಪಾರಿಗಳಿಗೆ ಲಾಭ ಸಮೃದ್ಧವಾಗುತ್ತದೆ.

ಪರಿಹಾರ - ಶಿವನಿಗೆ ಭಸ್ಮಾಭಿಷೇಕ ಮಾಡಿಸಿ, ಶಿವ ಸಹಸ್ರನಾಮ ಪಠಿಸಿ

ಕನ್ಯಾ - ಗುರು ನಿಮ್ಮ ರಾಶಿಯಿಂದ ಸುಖ ಸ್ಥಾನಕ್ಕೆ ಬಂದಿದ್ದಾನೆ. ಸುಖೇಶೇ ಸುಖ ಭಾವಸ್ಥೇ ಮಂತ್ರೀ ಸರ್ವ ಧನಾನ್ವಿತ: ಎಂಬಂತೆ ಮಂತ್ರೀ ಪಟ್ಟ ಸಿಗಲಿದೆ, ಸುಖ ಸಮೃದ್ಧವಾಗಲಿದೆ, ವಾಹನ ಸೌಖ್ಯ, ಗೃಹ ಸೌಖ್ಯ ಮಾನಸಿಕವಾಗಿ ನೆಮ್ಮದಿ ಕಾಣುವ ದಿನಗಳಿದ್ದಾವೆ. ಉದ್ಯೋಗಿಗಳಿಗೆ ಶುಭ ಸಿದ್ದಿ ಇದೆ, ಕೆಲಸದಲ್ಲಿ ಬಡ್ತಿ, ಹೆಚ್ಚಿನ ಧನ ಸಂಪಾದನೆಗೆ ಅವಕಾಶಗಳಿದ್ದಾವೆ ಕಾರಣ ಕರ್ಮ ಸ್ಥಾನಕ್ಕೆ ಬೀಳುವ ಗುರು ದೃಷ್ಟಿಯಿಂದ ಉದ್ಯೋಗದಲ್ಲಿ ಬಡ್ತಿ, ಪ್ರಶಂಸೆಗಳು ಸಿಗಲಿವೆ.

ಪರಿಹಾರ : ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ನಿಮ್ಮ ರಾಶಿಯಿಂದ ತೃತೀಯಕ್ಕೆ ಗುರುವಿನ ಪ್ರವೇಶವಾಗಿದೆ. ಸಹಜೇ ಸಹಜಾಧೀಶೇ ಸಹೋದರ ಸುಖಾನ್ವಿತ: ಸಹೋದರರಿಂದ ಸಮಾಧಾನ, ಸಹಕಾರ, ಹೊಂದಾಣಿಕೆ ಎಲ್ಲವೂ ಸಾಧ್ಯವಾಗಲಿದೆ, ಪ್ರರಾಕ್ರಮ, ಸಾಹಸ ಕಾರ್ಯಗಳಲ್ಲಿ ಜಯ ಸಿಗಲಿದೆ, ಯೋಗ ಗುರುಗಳಿಗೆ ಶುಭ ಫಲ, ನಿಮ್ಮ ರಾಶಿಯಿಂದ ಲಾಭಕ್ಕೆ ಗುರುವಿನ ದೃಷ್ಟಿ ಇರುವ ಕಾರಣ ವ್ಯಾಪಾರಿಗಳಿಗೆ ಲಾಭ ಸಮೃದ್ಧವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸಾಮರಸ್ಯ ಹೆಚ್ಚಲಿದೆ, ಪ್ರೇಮಿಗಳಲ್ಲಿ ಪರಸ್ಪರ ಅನುರಾಗ ಹೆಚ್ಚಲಿದೆ.

ಪರಿಹಾರ : ಶ್ರೀಚಕ್ರಕ್ಕೆ ಕುಂಕುಮಾರ್ಚನೆ ಮಾಡಿ

ವೃಶ್ಚಿಕ - ಗುರುವು ನಿಮ್ಮ ರಾಶಿಯಿಂದ ಧನ ಸ್ಥಾನಕ್ಕೆ ಬಂದಿದ್ದಾನೆ. ಧನೇಶೇ ಧನಗೇ ಜಾತೋ ಧನವಾನ್, ಗರ್ವ ಸಂಯುತ: ಅಂತ. ಸಾಕಷ್ಟು ಧನ ಸಮೃದ್ಧವಾಗುತ್ತದೆ, ಹಣದ ಹೊಳೆ ಹರಿದು ಬರಲಿದೆ, ಕುಟುಂಬದಲ್ಲಿ ಶಾಂತಿ ನೆಲೆಸಲಿದೆ, ನಿಮ್ಮ ರಾಶಿಯಲ್ಲಿ ಶನಿಗೆ ಬಲ ಹೆಚ್ಚಾಗಿದೆ ಈಗ. ಮಾತಿನಲ್ಲಿ ಕಠಿಣತೆ ಇರಲಿದೆ, ಕೊಂಚ ಸಮಾಧಾನವಿರಲಿ, ಬರುವ ಹಣದಲ್ಲಿ ಮೋಸ, ವಂಚನೆಗಳಾಗುವ ಸಾಧ್ಯತೆಯೂ ಇದೆ ಎಚ್ಚರವಾಗಿರಿ, ಜನವರಿ ನಂತರ ಅತ್ಯಂತ ಶುಭಫಲ ಕಾಣಲಿದ್ದೀರಿ. ಶುಭ ಕಾಲ ಪ್ರಾರಂಭವಾಗಿದೆ, ಗುರು ಬಲ ತುಂಬಿರುವುದರಿಂದ ವಿವಾಹಾದಿ ಶುಭ ಕಾರ್ಯಗಳಿಗೆ ಚಾಲನೆ ಸಿಗುತ್ತದೆ.

ಪರಿಹಾರ : ಸುಬ್ರಹ್ಮಣ್ಯ ಕವಚ ಓದಿಕೊಳ್ಳಿ.

ಧನಸ್ಸು - ಇಷ್ಟುದಿನ ವ್ಯಯದಲ್ಲಿದ್ದ ಗುರು ಜನ್ಮಕ್ಕೇ ಬರುತ್ತಾನೆ, ಜನ್ಮದ ಗುರು ಶುಭ ಫಲವನ್ನೇ ತರಲಿದ್ದಾನೆ, ಸ್ವರ್ಕ್ಷೇ ಮಾಂಡಲಿಕೋ ನರೇಂದ್ರ ಸಚಿವ: ಸೇನಾಪತಿರ್ವಾ ಧನೀ ಎಂಬ ಆಧಾರದಂತೆ ಮಂತ್ರಿ ಪಟ್ಟ ದೊರೆಯಲಿದೆ, ನಿಮ್ಮ ಸ್ಥಾನಕ್ಕೆ ಭದ್ರತೆ ಸಿಗಲಿದೆ, ಧನ ಸಮೃದ್ಧವಾಗಲಿದೆ, ಧನಸ್ಸು ಗುರುವಿನ ಸ್ವಕ್ಷೇತ್ರವೂ ಹೌದು ಮೂಲ ತ್ರಿಕೋಣವೂ ಹೌದು. ಹೀಗಾಗಿ ವೀರ್ಯವಂತರಾಗುವ ಕಾಲ, ನಿಮ್ಮ ಆಲೋಚನೆಗಳು ಸಾಕಾರಗೊಳ್ಳಲಿವೆ, ಕಾರ್ಯ ಸಾಧನೆಗೆ ಹಿರಿಯರ ಸಹಕಾರ ಸಿಗಲಿದೆ, ನಿಮ್ಮ ಪ್ರತಿಭಾಶಕ್ತಿ ಜಾಗೃತವಾಗುತ್ತದೆ, ಜನವರಿ ನಂತರ ಹೆಚ್ಚಿನ ಶುಭಫಲಗಳಿದ್ದಾವೆ.

ಪರಿಹಾರ : ಶಿವನ ಆರಾಧನೆ ಮಾಡಿ

ಮಕರ - ಇಷ್ಟು ದಿನ ಸಂಪೂರ್ಣ ಗುರುಬಲವಿತ್ತು. ಈಗ ಆ ಬಲ ಕಳೆದುಹೋಗಿದೆ, ವ್ಯಯದ ಗುರು ಕೊಂಚ ಬೌದ್ಧಿಕ ಶ್ರಮ ಕೊಡಲಿದ್ದಾನೆ, ವ್ಯಯೇಶೇ ವ್ಯಯ ಭಾವಸ್ಥೇ ನ ಶರೀರ ಸುಖಂ ಎಂಬಂತೆ ಆರೋಗ್ಯದಲ್ಲಿ ಕೊಂಚ ಏರುಪೇರಾಗುತ್ತದೆ, ಹೆದರುವ ಅವಶ್ಯಕತೆ ಇಲ್ಲ ನಿಮ್ಮ ಸುಖ ಸ್ಥಾನಕ್ಕೆ ಗುರು ದೃಷ್ಟಿ ಇದೆ ಹಾಗಾಗಿ ಕೊಂಚ ನೆಮ್ಮದಿಯ ದಿನಗಳೂ ಇದ್ದಾವೆ, ಗಾಬರಿ ಪಡುವ ಅವಶ್ಯಕತೆ ಇಲ್ಲ. ಸ್ನೇಹ ಭಾವ ಹೆಚ್ಚಾಗಲಿದೆ, ನಿಮ್ಮ ಉದ್ಯೋಗದಲ್ಲಿ ಕೊಂಚ ಬದಲಾವಣೆಯಾಗಲಿದೆ, ಪರಿವರ್ತನಾ ದಿನಗಳಿದ್ದಾವೆ.

ಪರಿಹಾರ: ಶಿವನಿಗೆ ಗೋಧಿ ಪಾಯಸ ನೈವೇದ್ಯ ಮಾಡಿ.

ಕುಂಭ - ಸಂಪೂರ್ಣ ಗುರುಬಲವಿದೆ, ಶುಭ ಲಾಭವನ್ನೇ ತರಲಿದ್ದಾನೆ ಗುರು. ಲಾಭೇಶೇ ಲಾಭ ಭಾವಸ್ಥೇ ಲಾಭ: ಸರ್ವ ಕರ್ಮಸು ಎಂಬಂತೆ ಅತ್ಯದ್ಭುತ ಫಲವನ್ನು ಕಾಣಲಿದ್ದೀರಿ, ನೀವು ನಿರ್ವಹಿಸುವ ಎಲ್ಲ ಕಾರ್ಯಗಳಲ್ಲೂ ಜಯ ಹಾಗೂ ಲಾಭಗಳನ್ನು ಕಾಣಲಿದ್ದೀರಿ. ವ್ಯಾಪಾರಿಗಳಿಗೆ ಅಧಿಕ ಲಾಭ, ಆದಾಯದಲ್ಲಿ ಹೆಚ್ಚಳ, ಸಂಗಾತಿಯಲ್ಲಿ ಸಹಕಾರ ಹೆಚ್ಚಾಗುತ್ತದೆ, ಮಿತ್ರರಲ್ಲಿ ಪ್ರೇಮ ಭಾವ ಅರಳಲಿದೆ, ಸಹೋದರರಲ್ಲಿ ಆತ್ಮೀಯತೆ ಹೆಚ್ಚಾಗುತ್ತದೆ, ವಾಗ್ಮಿಗಳಿಗೆ ಲಾಭದ ದಿನಗಳಿದ್ದಾವೆ. ಹೊಸ ವಸ್ತು ಖರೀದಿ, ವಿದೇಶದಿಂದ ಶುಭ ವಾರ್ತೆ ಕೇಳಲಿದ್ದೀರಿ.

ಪರಿಹಾರ : ಅಶ್ವತ್ಥ  ವೃಕ್ಷಕ್ಕೆ 11 ಪ್ರದಕ್ಷಿಣೆ ಮಾಡಿ

ಮೀನ - ಉದ್ಯೋಗಿಗಳಿಗೆ ಕಾರ್ಯ ಸಿದ್ಧಿ, ಕರ್ಮೇಶೇ ರಾಜ್ಯಭಾವಸ್ಥೇ ಸರ್ವಕರ್ಮ ಪಟು: ಸುಖೀ ಎಂಬ ಆಧಾರದಂತೆ ನೀವು ನಿರ್ವಹಿಸುವ ಸರ್ವ ಕಾರ್ಯಗಳಲ್ಲೂ ಸಿದ್ಧಿಯನ್ನು ಕಾಣುತ್ತೀರಿ. ವಿದ್ಯಾರ್ಥಿಗಳಿಗೆ ಕಾಲಕ್ಕಿಂತ ಮುಂಚೆಯೇ ಶುಭ ಉದ್ಯೋಗ ಪ್ರಾಪ್ತಿ, ಸ್ತ್ರೀ - ಪುರುಷರಲ್ಲಿ ಸಾಮರಸ್ಯ ಹೆಚ್ಚಾಗಲಿದೆ, ಅನಾರೋಗ್ಯದಿಂದ ಬಳಲುತ್ತಿದ್ದವರು ಆರೋಗ್ಯದಲ್ಲಿ ಚೇತರಿಕೆ ಹೊಂದುತ್ತಾರೆ, ಧನ ಸ್ಥಾನಕ್ಕೆ ಗುರು ದೃಷ್ಟಿ ಇರುವುದರಿಂದ ಸಾಕಷ್ಟು ಹಣ ಹರಿದುಬರಲಿದೆ, ವಾಕ್ಪಟುತ್ವದಿಂದ ಕಾರ್ಯ ಸಾಧನೆ, ಪ್ರಶಂಸೆಗಳು ದೊರೆಯಲಿವೆ.

ಪರಿಹಾರ : ದುರ್ಗಾ ಪ್ರಾರ್ಥನೆ ಹಾಗೂ ಗುರು ಸೇವೆ ಮಾಡಿ

click me!