'ಛಲ ಬಿಡದ ತ್ರಿವಿಕ್ರಮ' ಎನ್ನುವ ಮಾತು ಹುಟ್ಟಿದ್ದೆಲ್ಲಿಂದ?

By Web Desk  |  First Published Nov 4, 2019, 7:20 PM IST

ಯಾರಾದರೂ ಸಿಎ ಎಕ್ಸಾಂ 10 ಬಾರಿಯಾದರೂ ಪಾಸಾಗದೆ, ಮತ್ತೆ ಅದನ್ನು ಕಟ್ಟಿ ಬರೆಯುತ್ತಿದ್ದರೆ, ಆಟದಲ್ಲಿ ನಾಲ್ಕು ಬಾರಿ ಸೋಲನುಭವಿಸಿಯೂ ಮತ್ತೆ ಗೆಲ್ಲುವ ಹಟಕ್ಕೆ ಬಿದ್ದರೆ... ಇಂಥ ಮುಂತಾದ ಸಂದರ್ಭಗಳಲ್ಲಿ- ಅಬ್ಬಾ ಇವನೊಬ್ಬ ಛಲ ಬಿಡದ ತ್ರಿವಿಕ್ರಮನೇ ಸೈ ಎನ್ನುತ್ತೇವೆ. ಆದರೆ, ಯಾರಪ್ಪಾ ಈ ತ್ರಿವಿಕ್ರಮ ಎಂಬುದೇ ಗೊತ್ತಿರುವುದಿಲ್ಲ. ಹೌದು, ಇಷ್ಟಕ್ಕೂ ಯಾರು ಈ ತ್ರಿವಿಕ್ರಮ ಗೊತ್ತೇ?


ವಿಕ್ರಮಾದಿತ್ಯ ಮತ್ತು ಬೇತಾಳದ ಕತೆ ಯಾರಿಗೆ ಗೊತ್ತಿಲ್ಲ ಹೇಳಿ ? ಒಂದು ವೇಳೆ ಕತೆ ಗೊತ್ತಿಲ್ಲವಾದರೂ ಹೆಸರಂತೂ ಕೇಳೇ ಇರುತ್ತೀರಿ. ರಾಜನೊಬ್ಬ ಹೆಗಲ ಮೇಲೆ ಬೇತಾಳವನ್ನು ಹೊತ್ತುಕೊಂಡ ಚಿತ್ರ ನೋಡಿರುತ್ತೀರಿ. ಇವನೇ ರಾಜಾ ವಿಕ್ರಮಾದಿತ್ಯ- ಛಲ ಬಿಡದ ತ್ರಿವಿಕ್ರಮ. ಅರೆ, ಯಾರು ಈ ವಿಕ್ರಮಾದಿತ್ಯ ಎಂದು ಯಾವಾಗಾದರೂ ಯೋಚಿಸಿದ್ದೀರಾ? ಈತನಿಗೆ ಛಲ ಬಿಡದ ತ್ರಿವಿಕ್ರಮ ಎನ್ನುವುದೇಕೆ? ಈ ಕತೆ ಶುರುವಾದದ್ದು ಹೇಗೆ? ಹೇಳ್ತೀನಿ ಕೇಳಿ.

ಲೈಂಗಿಕತೆ-ಋತುಸ್ರಾವ-ಮಾತೃಯೋನಿ ಸ್ವರೂಪಿ ದೇವಿಗಿಲ್ಲಿ ಪೂಜೆ

Tap to resize

Latest Videos

undefined

ಈ ರಾಜಾ ವಿಕ್ರಮಾದಿತ್ಯ ಕ್ರಿಸ್ತಪೂರ್ವದಲ್ಲಿ ಉಜ್ಜಯಿನಿಯ ಆಡಳಿತ ನೋಡಿಕೊಳ್ಳುತ್ತಿದ್ದ. ಆತನ ಶೌರ್ಯ, ಧೈರ್ಯ ಹಾಗೂ ಬುದ್ಧಿವಂತಿಕೆ ದೇಶದುದ್ದಗಲಕ್ಕೂ ಖ್ಯಾತಿ ಪಡೆದಿತ್ತು. ಒಮ್ಮೆ ವಿಕ್ರಮಾದಿತ್ಯನ ಆಸ್ಥಾನಕ್ಕೆ ದೂರದಿಂದ ಸನ್ಯಾಸಿಯೊಬ್ಬರು ಬರುತ್ತಾರೆ. ಅವರು ರಾಜನಿಗೆ ಕಾಣಿಕೆಯಾಗಿ ಕಾಡು ಮಾವಿನ ಹಣ್ಣೊಂದನ್ನು ಕೊಡುತ್ತಾರೆ. ಅದನ್ನು ರಾಜನ ಪರವಾಗಿ ತೆಗೆದುಕೊಂಡ ಮಂತ್ರಿಯು, ಅರೆ ಇದನ್ನು ಕೊಡಲು ಅಷ್ಟು ದೂರದಿಂದ ಬರಬೇಕಿತ್ತೇ ಎಂದು ಭಾವಿಸುತ್ತಾರೆ. ಆದರೆ, ಸನ್ಯಾಸಿಯ ಬಳಿ ಕೊಡಲು ಇದಕ್ಕಿಂತ ಹೆಚ್ಚಿನದೇನಿರಲು ಸಾಧ್ಯವೆಂದು ಸುಮ್ಮನಾಗುತ್ತಾರೆ.

ರುದ್ರಾಕ್ಷಿ ಧರಿಸುವುದರಿಂದ ಏನು ಪ್ರಯೋಜನ?

ಆದರೆ, ಆ ಸನ್ಯಾಸಿ ಈ ಕಾಡುಹಣ್ಣನ್ನು ಪ್ರತಿದಿನವೂ ಆಸ್ಥಾನಕ್ಕೆ ತಂದುಕೊಡುತ್ತಿರುತ್ತಾರೆ. ಮಂತ್ರಿಯು ಅದನ್ನೆಲ್ಲ ರಾಜನಿಗೆ ಬಂದ ಉಡುಗೊರೆಯೆಂದು ಅಲ್ಲೇ ಒಂದು ನೆಲಮಾಳಿಗೆಗೆ ಎಸೆಯುತ್ತಿರುತ್ತಾನೆ. ಒಂದು ದಿನ ಈ ಹಣ್ಣನ್ನು ಮಂತ್ರಿಯು ಅರಮನೆ ಬಳಿ ಕಂಡ ಮಂಗವೊಂದರ ಕೈಗೆ ಕೊಡುತ್ತಾನೆ. ಅದು ಹಣ್ಣನ್ನು ಕಚ್ಚುತ್ತಿದ್ದಂತೆಯೇ ಅದರೊಳಗೆ ದೊಡ್ಡ ವಜ್ರದ ಹರಳೊಂದಿರುತ್ತದೆ. ಅದನ್ನು ನೋಡಿದ ರಾಜ ಹಾಗೂ ಮಂತ್ರಿ ಇಬ್ಬರೂ ಆಶ್ಚರ್ಯಚಕಿತರಾಗಿ, ಇಷ್ಟು ದಿನ ಕಾಡುಹಣ್ಣನ್ನು ಎಸೆದಲ್ಲಿಗೆ ಹೋಗುತ್ತಾರೆ. ಕೊಳೆತ ಹಣ್ಣಿನ ರಾಶಿಯ ನಡುವೆ ವಜ್ರಗಳು ಕಣ್ಣು ಕೋರೈಸುತ್ತಿವೆ. ಇದರಿಂದ ಈತ ಸಾಮಾನ್ಯ ಸನ್ಯಾಸಿಯಲ್ಲ ಎಂದು ಅರಿತು ವಿಕ್ರಮಾದಿತ್ಯನು ಸನ್ಯಾಸಿಯನ್ನು ಮಾತನಾಡಿಸುತ್ತಾನೆ. 

ನೀವು ಇಷ್ಟು ದಿನ ಕೊಡುಗೆ ಕೊಟ್ಟರೂ ನನಗೆ ತಿಳಿಯಲಿಲ್ಲ, ನಾನೆಂಥ ಅಜ್ಞಾನಿ ಎಂದು ವಿಕ್ರಮ ಹೇಳಲು ಸನ್ಯಾಸಿಯು, "ಅರಿವು ಇಲ್ಲದಿದ್ದರೆ ಜೀವನವೂ ಹೀಗೆಯೇ ಆಗುತ್ತದೆ" ಎನ್ನುತ್ತಾರೆ. 
ಆ ಬಳಿಕ ಸನ್ಯಾಸಿಯ ಮಾತುಗಳಿಂದ ಪ್ರೇರಿತನಾದ ರಾಜ, ಅವರು ಹೇಳಿದಂತೆ ಕೇಳಲು ಒಪ್ಪುತ್ತಾನೆ.

ರಾಜನು ಧೈರ್ಯವಂತ, ಬುದ್ದಿವಂತ ಹಾಗೂ ಸಾಹಸಿ ಎಂದು ತಿಳಿದೇ ಆತನನ್ನು ಹುಡುಕಿಕೊಂಡು ಬಂದಿದ್ದ ಸನ್ಯಾಸಿಯು ಆ ವೇಷದಲ್ಲಿದ್ದ ವಾಮಾಚಾರಿಯಾಗಿರುತ್ತಾನೆ. ಇದನ್ನೇ ಬಳಸಿಕೊಂಡು, "ನೀನು ವೀರ ಎಂಬುದು ಗೊತ್ತಿತ್ತು. ಆದರೆ, ವರ್ತಮಾನಕ್ಕೆ ಎಚ್ಚೆತ್ತುಕೊಳ್ಳಲಿ ಎಂದು ನಾನು ಕಾಯುತ್ತಿದ್ದೆ, ಈಗ ಎರಡೂ ಘಟಿಸಿದೆ" ಎನ್ನುತ್ತಾ, ಅಮಾವಾಸ್ಯೆ ಸಂಜೆಯ ವೇಳೆಗೆ ಸ್ಮಶಾನದತ್ತ ಬರಲು ಹೇಳುತ್ತಾರೆ. ಮಧ್ಯರಾತ್ರಿ ವಿಕ್ರಮಾದಿತ್ಯ ಸ್ಮಶಾನಕ್ಕೆ ಹೋದಾಗ, ತಾಂತ್ರಿಕ ಮಂಡಲ ಬರೆದು ತಾಂತ್ರಿಕ ವಿದ್ಯೆಯಲ್ಲಿ ತೊಡಗಿದ್ದ ವಾಮಾಚಾರಿಯು, ರಾಜನಿಗೆ ದೂರದ ಮರವೊಂದರಲ್ಲಿ ನೇತಾಡುತ್ತಿರುವ ಹೆಣವನ್ನು ಹೊತ್ತು ತರಲು ಹೇಳುತ್ತಾರೆ. ಜೊತೆಗೆಯೇ, ಇದು ಬಹಳ ಎಚ್ಚರದಿಂದ ಮಾಡಬೇಕಾದ ಕೆಲಸವೆಂದೂ, ಹಾಗೆ ಹೆಣ ಹೊತ್ತು ತರುವಾಗ ಮಧ್ಯೆ ಅಪ್ಪಿತಪ್ಪಿಯೂ ಬಾಯಿ ಬಿಚ್ಚುವಂತಿಲ್ಲ ಎಂದು ಕಟ್ಟಪ್ಪಣೆ ಮಾಡುತ್ತಾರೆ. 

ಸರಿಯೆಂದು ವಟವೃಕ್ಷದತ್ತ ಹೋಗಿ ಅಲ್ಲಿ ನೇತಾಡುತ್ತಿದ್ದ ಹೆಣವನ್ನು ಕೆಳಗಿಳಿಸಲು ಅದು ಜೋರಾಗಿ ನಕ್ಕುಬಿಡುತ್ತದೆ. ಒಮ್ಮೆ ಬೆದರಿದ ವಿಕ್ರಮಾದಿತ್ಯ ಕ್ಷಣದಲ್ಲೇ ಧೈರ್ಯ ತಂದುಕೊಂಡು, ಯಾಕೆ ನಗುತ್ತಿರುವುದೆಂದು ವಿಚಾರಿಸುತ್ತಾನೆ. ಆಗ ಹೆಣವು ಘಕ್ಕೆಂದು ಮರಕ್ಕೆ ಹಿಂದಿರುಗಿ, ನೀನು ಮಾತನಾಡಿದರೆ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಮಾತನಾಡದಿದ್ದರೆ ಮಾತ್ರ ನಿನ್ನಿಂದ ಈ ಕೆಲಸ ಸಾಧ್ಯ, ಮಾತನಾಡಿದರೆ ನಾನು ಮರಕ್ಕೆ ಹಿಂತಿರುಗುತ್ತೇನೆ ಎನ್ನುತ್ತದೆ. 

ಆದರೆ, ಆ ಕ್ಷಣ ಸುಮ್ಮನಿರುವುದು ಕಷ್ಟ. ಅಮವಾಸ್ಯೆಯ ಕಗ್ಗತ್ತಲ ರಾತ್ರಿ ದಟ್ಟ ಕಾಡಿನ ನಡುವೆ ಹೆಣ ಹೊತ್ತು ಹೋಗಬೇಕೆಂದರೆ ಮಂತ್ರವನ್ನೋ, ಜೋರಾಗಿ ಹಾಡನ್ನೋ ಹೇಳುತ್ತಿದ್ದರೆ ಧೈರ್ಯ ಹೆಚ್ಚುತ್ತದೆ ಎಂಬುದು ವಿಕ್ರಮಾದಿತ್ಯನ ಯೋಚನೆ. ಆದರೂ ಆತ ಹೆಣ ಹೇಳಿದ ಮಾತಿಗೆ ಒಪ್ಪಿ, ಮತ್ತೆ ಹೆಣವನ್ನು ಕೆಳಕ್ಕೆ ಬೀಳಿಸಿ ಹೆಗಲಿಗೆ ನೇತು ಹಾಕಿಕೊಂಡ. ಈ ಸಂದರ್ಭದಲ್ಲಿ ಬೇತಾಳವು ದಾರಿ ಸರಾಗವಾಗಿ ಸಾಗುವಂತಾಗಲು ನಾನು ಕತೆ ಹೇಳುತ್ತೇನೆ ಎನ್ನುತ್ತಾ ತನ್ನ ಕತೆ ಆರಂಭಿಸುತ್ತದೆ. ಬಹಳ ಆಸಕ್ತಿಕರ ಕತೆಯಾದರೂ ವಿಕ್ರಮಾದಿತ್ಯ ಮಧ್ಯದಲ್ಲಿ ಹೂಂ, ಹಾಂ ಎನ್ನುವಂತಿಲ್ಲ. ಮೌನವಾಗಿಯೇ ಕೇಳಿಸಿಕೊಳ್ಳಬೇಕು.

ಸಪ್ತಮಾತೆಯರು ಮನ ಸೋತ ಹಾಸನಾಂಬೆ ಕ್ಷೇತ್ರ ಮಹಿಮೆ!

ಆತ ಬಾಯಿ ಬೆಟ್ಟರೆ ಬೇತಾಳ ಹಿಂದಿರುಗುತ್ತದೆ. ಬೇತಾಳವು ಆತನ ಬಾಯಿಂದ ಮಾತು ಬರಿಸಲು ಬಹಳಷ್ಟು ಯತ್ನಿಸುತ್ತದೆ. ಆದರೆ ವಿಕ್ರಮಾದಿತ್ಯ ಜಾಗೃತನಾಗಿಯೇ ಕತೆಯಲ್ಲಿ ತಲ್ಲೀನನಾಗಿರುತ್ತಾನೆ. ಇನ್ನೇನು ಸ್ಮಶಾನದ ಹತ್ತಿರ ಬಂದೆ ಎನ್ನುವಾಗ ಬೇತಾಳವು ತಾನು ಹೇಳಿದ ಕತೆಯನ್ನಾಧರಿಸಿ ಪ್ರಶ್ನೆಗಳನ್ನು ಹೇಳುತ್ತದೆ. ಉತ್ತರ ಹೊಳೆಯದಿದ್ದರೆ ಅಡ್ಡಿಲ್ಲ, ಉತ್ತರ ಗೊತ್ತಿದ್ದೂ ಬಾಯಿ ಮುಚ್ಚಿಕೊಂಡಿದ್ದರೆ ರಾಜನ ತಲೆ ಸಾವಿರ ಹೋಳಾಗುತ್ತದೆ ಎಂದು ಬೇತಾಳ ಹೆದರಿಸುತ್ತದೆ. 

ಉತ್ತರ ಗೊತ್ತಿದ್ದೂ ಬಾಯಿ ಮುಚ್ಚಿಕೊಂಡಿರುವುದು ಯಾವ ಬುದ್ಧಿವಂತನಿಗೂ ಕಷ್ಟ. ಹೀಗಾಗಿ, ವಿಕ್ರಮಾದಿತ್ಯ ಬೇತಾಳ ಕೇಳಿದ ಎಲ್ಲ ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡುತ್ತಾನೆ. ಆದರೆ, ಇದಕ್ಕೇ ಕಾಯುತ್ತಿದ್ದ ಬೇತಾಳ ಮಾತ್ರ ಮಾಯವಾಗಿ ತಾನಿದ್ದ ವಟವೃಕ್ಷಕ್ಕೆ ಹೋಗಿ ಸೇರಿಕೊಳ್ಳುತ್ತದೆ. 

101 ವರ್ಷಗಳ ಹಿಂದೆ ಸಮಾಧಿಯಾದ ಶಿರಡಿ ಸಾಯಿ ಬಾಬಾರಿಗೆ ನಮಿಸುತ್ತಾ

ಇದೇ ರೀತಿ 24 ಅಮವಾಸ್ಯೆಗಳಲ್ಲೂ ವಿಕ್ರಮಾದಿತ್ಯ ಆ ಬೇತಾಳವನ್ನು ಮಾಂತ್ರಿಕನ ಬಳಿ ಕರೆತರಲು ಪ್ರಯತ್ನಿಸುತ್ತಾನೆ. ಪ್ರತಿ ಬಾರಿ ಅದು ಕತೆ ಹೇಳಿ, ಪ್ರಶ್ನೆ ಕೇಳಲು ಉತ್ತರ ಹೇಳುವ ಆಸೆಯಿಂದ ಬಾಯಿ ಬಿಟ್ಟೊಡನೆ ಬೇತಾಳ ಮರಳಿ ಮರದಲ್ಲಿ ನೇತಾಡತೊಡಗುತ್ತಿರುತ್ತದೆ. ಅಂತೂ 25ನೇ ಬಾರಿ ಆತ ಕತೆ ಕೇಳಿ ಉತ್ತರ ಹೇಳಲು ಸೋಲುತ್ತಾನೆ. ನಂತರ ನಡೆದದ್ದು ಮತ್ತೊಂದೇ ಕತೆ. 
ಅದು ಬಿಡಿ, ಇದು ಕತೆ. ಈಗ ಗೊತ್ತಾಯ್ತಲ್ಲ ಹಲವು ಬಾರಿ ಸೋತರೂ ಮರಳಿ ಪ್ರಯತ್ನಿಸುವವರನ್ನು ಛಲ ಬಿಡದ ತ್ರಿವಿಕ್ರಮ ಎಂದೇಕೆ ಹೇಳುತ್ತಾರೆಂದು. 

click me!