
ನಿಮ್ಮ ವಾರ್ಡ್ರೋಬನ್ನೊಮ್ಮೆ ತೆಗೆದು ನೋಡಿ- ನಿಮ್ಮ ಬಳಿ ಇರುವ ಅತಿ ಕಾಸ್ಟ್ಲಿ ಬಟ್ಟೆಗೆ ಎಷ್ಟು ಕೊಟ್ಟಿದ್ದೀರಿ? ಸಾವಿರ? 10 ಸಾವಿರ? 50 ಸಾವಿರ? ಓಕೆ, ಬಹುಷಃ ಅವು ನಿಮ್ಮ ಮದುವೆಯ ವಸ್ತ್ರಗಳಿರಬೇಕು. ಅದು ಅಷ್ಟೆಲ್ಲ ದುಬಾರಿಯಾಗಲು ಏನು ಕಾರಣ? ಅದರ ವಿನ್ಯಾಸವೇ? ಬಳಸಿದ ಮೆಟೀರಿಯಲ್ಲೇ? ಕ್ವಾಲಿಟಿಯೇ?
ಹಾಗಿದ್ದರೆ ಜಗತ್ತಿನಲ್ಲೇ ಅತಿ ದುಬಾರಿಯಾದ ಬಟ್ಟೆಗಳ ಗುಣಮಟ್ಟ ಹೇಗಿರಬಹುದು, ಅವುಗಳ ವಿನ್ಯಾಸ, ಮೆಟೀರಿಯಲ್ ಎಂಥದಿರಬಹುದು, ಅದರ ತಯಾರಿಗೆ ಹಾಕಿದ ಪ್ರಯತ್ನ ಎಷ್ಟಿರಬಹುದು, ಇಷ್ಟಕ್ಕೂ ಅವುಗಳ ಬೆಲೆಯಾದರೂ ಎಷ್ಟಿರಬಹುದು ಎಂದು ಊಹಿಸಿದ್ದೀರಾ? ಇಲ್ಲಿವೆ ನೋಡಿ ಜಗತ್ತಿನ ಅತಿ ದುಬಾರಿ ಬಟ್ಟೆಗಳು.
ಕೇಟ್ ಮಿಡಲ್ಟನ್‌ಳ ವೆಡ್ಡಿಂಗ್ ಡ್ರೆಸ್- $388,000
ರಾಜ ಮನೆತನದವರು ಈ ಜಗತ್ತಿನ ಅತಿ ದುಬಾರಿ ಬಟ್ಟೆಗಳನ್ನು ಧರಿಸುತ್ತಾ ಬಂದಿರುವುದು ಎಲ್ಲರಿಗೂ ಗೊತ್ತೇ ಇದೆ. ಇದಕ್ಕೊಂದು ಅತ್ಯುತ್ತಮ ಉದಾಹರಣೆ ಬ್ರಿಟಿಶ್ ರಾಜ ಮನೆತನದ ಪ್ರಿನ್ಸ್ ವಿಲಿಯಂರನ್ನು ವಿವಾಹವಾಗುವಾಗ ಕೇಟ್ ಮಿಡಲ್ಟನ್ ಧರಿಸಿದ್ದ ಡ್ರೆಸ್. ಇದರ ಬೆಲೆ ಬರೋಬ್ಬರಿ $388,000 ಅಂದರೆ, ಹತ್ತಿರತ್ತಿರ 3 ಕೋಟಿ ರುಪಾಯಿಗಳು! ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಗಳ ಪಕ್ಕಾ ಮಿಕ್ಸ್‌ಚರ್‌ನಂತಿದ್ದ ಈ ಉಡುಗೆ ನೋಡಿದವರೆಲ್ಲ ವಾವ್ ಎಂದು ಉದ್ಘರಿಸಿದ್ದರೆ ಅಚ್ಚರಿಯಿಲ್ಲ.
ದನಾಶಾ ಗೌನ್- $1.5 ಮಿಲಿಯನ್
ದುಬಾರಿ ಉಡುಗೆ ತಯಾರಿಸಲು ಅದಕ್ಕೆ ದುಬಾರಿ ಮೆಟೀರಿಯಲ್‌ಗಳನ್ನು ಬಳಸುವುದು ಒಂದು ವಿಧಾನ. ಅಂದರೆ ರೇಶ್ಮೆ ಬಟ್ಟೆ ದುಬಾರಿತನ ಸಾಕಾಗದಿದ್ದರೆ ಅದಕ್ಕೆ ಬಂಗಾರ, ವುಕಾನಾ ವೂಲ್ ಮುಂತಾದವನ್ನು ಸೇರಿಸಿ ಇನ್ನೂ ದುಬಾರಿಯಾಗಿಸಬಹುದು. ಇಂಥ ಬಟ್ಟೆಗಳನ್ನು ತಯಾರಿಸುವಾಗ ಚಿನ್ನ, ಮುತ್ತು ಹವಳಗಳನ್ನು ಅತಿಯಾಗಿ ಎದ್ದು ಹೊಡೆಯುವಂತೆ ಸೇರಿಸದೆ, ಚೆಂದದ ಕಲಾಕೃತಿಯಂತೆ ತಯಾರಿಸುವುದು ಕೂಡಾ ಒಂದು ಕಲೆಯೇ. ಇಂಥದೊಂದು ಯಶಸ್ವೀ ಪ್ರಯತ್ನಕ್ಕೆ ಉದಾಹರಣೆಯಾಗಿದ್ದು ಮಿಯಾಮಿ ಅಂತಾರಾಷ್ಟ್ರೀಯ ಫ್ಯಾಷನ್ ವೀಕ್ 2010ನಲ್ಲಿ ಪ್ರದರ್ಶನಗೊಂಡ ದನಾಶಾ ಗೌನ್. ಬಹಳ ಕಾಸ್ಟ್ಲಿ ಮೆಟೀರಿಯಲ್ ಬಳಸಿಯೂ ಅದು ಡಾಳಾಗಿ ಕಾಣದೆ, ಕ್ಲಾಸಿಯಾಗಿ ಕಾಣುವಂತೆ ಇದನ್ನು ತಯಾರಿಸಿದ್ದು ಹೆಗ್ಗಳಿಕೆಯೇ ಸರಿ. ಈ ಬಟ್ಟೆಯ ಬೆಲೆ 1.5 ದಶಲಕ್ಷ ಡಾಲರ್‌ಗಳು.
ಪೀಕಾಕ್ ವೆಡ್ಡಿಂಗ್ ಡ್ರೆಸ್- $1.5 ಮಿಲಿಯನ್
ಈ ಬಟ್ಟೆಗೂ ದುಬಾರಿ ಮೆಟೀರಿಯಲ್‌ಗೂ ಸಂಬಂಧವಿಲ್ಲ. ಹಾಗಿದ್ದು ಕೂಡಾ ಇದು ಜಗತ್ತಿನ ದುಬಾರಿ ಡ್ರೆಸ್‍ಗಳಲ್ಲೊಂದಾಗಿರುವುದಕ್ಕೆ ಕಾರಣ, ಇದರ ವೈಶಿಷ್ಠ್ಯತೆ. ಸಂಪೂರ್ಣ ನವಿಲುಗರಿಗಳಿಂದಲೇ ಸಿದ್ಧವಾದ ಬಟ್ಟೆ ಇದು. ನವಿಲುಗರಿಗೆ ಫ್ಯಾಶನ್ ಜಗತ್ತಿನಲ್ಲಿ ದೊಡ್ಡ ಸ್ಥಾನವಿದೆ. ಇಯರಿಂಗ್ಸ್, ಸರ, ಬಳೆ, ಸೀರೆ ಹಾಗೂ ಇತರೆ ವಸ್ತ್ರಗಳಲ್ಲಿ, ಟೋಪಿ ಇತ್ಯಾದಿಗಳಲ್ಲಿ ನವಿಲುಗರಿ ಇದ್ದಾಗ, ಅದರ ವಿನ್ಯಾಸವಿದ್ದಾಗ ಅದು ಬಹಳ ಸುಂದರವಾಗಿ ಕಾಣುವ ಜೊತೆಗೆ, ನೋಡುಗರನ್ನು ಸುಲಭವಾಗಿ ಸೆಳೆಯುತ್ತದೆ. ಆ ಕಲರ್ ಕಾಂಬಿನೇಶನ್ ಬಹಳ ಸೊಗಸಾಗಿದೆ. ನವಿಲುಗರಿ ವಿನ್ಯಾಸವನ್ನು ಫ್ಯಾಶನ್ ಜಗತ್ತು ಶ್ರೀಮಂತಿಕೆ ಹಾಗೂ ಶಾಶ್ವತತೆಯ ಸಂಕೇತವಾಗಿ ನೋಡುತ್ತದೆ. ಹಾಗಾಗೇ ವಿವಾಹದ ವಸ್ತ್ರವಾಗಿ ತಯಾರಾದ ಸಂಪೂರ್ಣ ನವಿಲುಗರಿಯದೇ ಗೌನ್ ಸಿಕ್ಕಾಪಟ್ಟೆ ಕಾಸ್ಟ್ಲಿಯೂ ಆಗಿದೆ. ಇದರ ಬೆಲೆ ಒಂದೂವರೆ ದಶಲಕ್ಷ ಮಿಲಿಯನ್.
ವೈಟ್ ಗೋಲ್ಡ್ ಡೈಮಂಡ್ ಡ್ರೆಸ್- 8.5 ದಶಲಕ್ಷ ಡಾಲರ್
ಜಪಾನೀಸ್ ಫ್ಯಾಶನ್‌ಗೆ ಬಂದರೆ ಯುಮಿ ಕಟ್ಸುರಾ ಎಂಬ ಹೆಸರೇ ಒಂದು ದಂತಕತೆ. ಬಹಳ ಚಿಕ್ಕ ವಯಸ್ಸಿನಲ್ಲೇ ಪ್ಯಾರಿಸ್‌ನಲ್ಲಿ ದುಬಾರಿ ಫ್ಯಾಶನ್ ಡಿಸೈನಿಂಗ್ ಕುರಿತು ಕಲಿತವಳು ಆಕೆ. ಆ ನಂತರದಲ್ಲಿ ತವರು ದೇಶಕ್ಕೆ ಮರಳಿ ಸತತ 5 ದಶಕಗಳ ಕಾಲ ಪಾಶ್ಚಿಮಾತ್ಯ ಶೈಲಿಯ ವೆಡ್ಡಿಂಗ್ ಡ್ರೆಸ್‌ಗೆ ಜನಪ್ರಿಯತೆ ತಂದುಕೊಟ್ಟ ಹೆಗ್ಗಳಿಕೆ ಆಕೆಯದು. ಈಗಂತೂ ಯುಮಿ ಕಟ್ಸುರ ಎಂಬುದು ಅಂತಾರಾಷ್ಟ್ರೀಯ ಹೆಸರಾಗಿದ್ದು, ಆಕೆಯ ವಿನ್ಯಾಸಗಳು ಕೇವಲ ಜಪಾನಿನಲ್ಲಲ್ಲದೆ ಅಮೆರಿಕ, ಫ್ರ್ಯಾನ್ಸ್, ಬ್ರಿಟನ್ ಮುಂತಾದೆಡೆಯೂ ಪ್ರದರ್ಶನ ಕಾಣುತ್ತವೆ. ಈಕೆಯ ತಯಾರಿಯಲ್ಲಿ ವೈಟ್ ಗೋಲ್ಡ್ ಡೈಮಂಡ್ ಡ್ರೆಸ್ ಅತಿ ದುಬಾರಿಯಾದುದು- ಅಂದರೆ ಬರೋಬ್ಬರಿ 8.5 ದಶಲಕ್ಷ ಡಾಲರ್ ವೆಚ್ಚದ್ದು. ಹೆಸರಿಗೆ ತಕ್ಕಂತೆ ವಜ್ರ, ಸಾವಿರಾರು ಮುತ್ತುರತ್ನಗಳು, ಚಿನ್ನವನ್ನು ಹೊಂದಿರುವ ಈ ಬಟ್ಟೆಗೆ ಈ ಪಾಟಿ ಬೆಲೆ ಇರುವುದರಲ್ಲಿ ಅಂಥ ಆಶ್ಚರ್ಯವೇನಿಲ್ಲ ಬಿಡಿ.
ನೈಟಿಂಗೇಲ್ ಆಫ್ ಕೌಲಾಲಂಪುರ್- 30 ದಶಲಕ್ಷ ಡಾಲರ್
ಹೆಸರಲ್ಲೇ ಒಂದು ವಿಶೇಷತೆ ಕೇಳುತ್ತದೆಯಲ್ಲವೇ? ಅಬ್ಬಬ್ಬಾ- ಈ ವಿಶೇಷತೆಯ ಬೆಲೆ ಸುಮಾರು 227 ಕೋಟಿ ರುಪಾಯಿಗಳು! ಪ್ರಸಿದ್ಧ ವಸ್ತ್ರ ವಿನ್ಯಾಸಕ ಮಲೇಶಿಯಾದ ಫೈಜಲಿ ಅಬ್ದುಲ್ಲಾರ ಸೃಷ್ಟಿ ಇದು. ಶಿಫಾನ್ ಹಾಗೂ ಸಿಲ್ಕ್ ಬಟ್ಟೆಯಿಂದ ತಯಾರಿಸಿರುವ ಈ ಡ್ರೆಸ್‌ನ ಹೊಳಪನ್ನು ಹೆಚ್ಚಿಸಿರುವುದು 751 ವಜ್ರದ ಹರಳುಗಳು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.