ಬಂಗಾಳಿ ಮಹಿಳೆಯರ ಸೌಂದರ್ಯದ ಬಗ್ಗೆ ನೀವು ಹಲವು ಬಾರಿ ಕೇಳಿರಬೇಕು. ಆದರೆ ನೀವು ಅವರ ಉಡುಗೆ ತೊಡುಗೆಯನ್ನು ನೋಡಿದರೆ, ಅದು ಇತರರಿಗಿಂತ ಭಿನ್ನವಾಗಿರುತ್ತದೆ. ದುರ್ಗಾ ಪೂಜೆಯಂತಹ ಸಂದರ್ಭಗಳಲ್ಲಿ ಇಲ್ಲಿನ ಮಹಿಳೆಯರು ಕೆಂಪು ಬಣ್ಣದ ಬಾರ್ಡರ್ ಇರುವ ಬಿಳಿ ಸೀರೆಯನ್ನು ಧರಿಸುತ್ತಾರೆ. ಆದರೆ ಈ ಸೀರೆಯ ಅರ್ಥ ಮತ್ತು ಅದರ ಬಣ್ಣದ ಬಗ್ಗೆ ಗೊತ್ತಾ?.
ಪ್ರತಿಯೊಂದು ಬಟ್ಟೆಗೂ ಒಂದು ಇತಿಹಾಸವಿದೆ. ಅಂದಹಾಗೆ ಜನರು ಕೆಲವು ಸಂದರ್ಭಗಳಲ್ಲಿ ಮಾತ್ರ ವಿಶೇಷ ಬಟ್ಟೆಗಳನ್ನು ಧರಿಸುತ್ತಾರೆ. ಉದಾಹರಣೆಗೆ, ಬಂಗಾಳಿ ಮಹಿಳೆಯರು ಬಂಗಾಳಿ ಪೂಜೆಯ ಸಮಯದಲ್ಲಿ ಖಂಡಿತವಾಗಿಯೂ ಕೆಂಪು ಬಣ್ಣದ ಬಾರ್ಡರ್ ಇರುವ ಬಿಳಿ ಸೀರೆಗಳನ್ನು ಧರಿಸುತ್ತಾರೆ. ಈ ಸೀರೆ ಸಿಂಪಲ್ ಆಗಿರೋದು ಮಾತ್ರವಲ್ಲ, ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಈ ಬಣ್ಣ ಮತ್ತು ಉಡುಗೆ ಕೇವಲ ಸೌಂದರ್ಯಕ್ಕೆ ಸಂಬಂಧಿಸಿಲ್ಲ. ಇದರ ಹಿಂದೆ ವರ್ಷಗಳಷ್ಟು ಹಳೆಯ ಕಥೆಯಿದೆ. ಅದೇನೆಂದು ನೋಡೋಣ ಬನ್ನಿ...
ವಾಸ್ತವವಾಗಿ, ಕೆಂಪು ಬಾರ್ಡರ್ ಹೊಂದಿರುವ ಬಿಳಿ ಬಣ್ಣದ ಸೀರೆ ಯಾವುದೇ ಸಾಮಾನ್ಯ ಸೀರೆಯಂತೆ ಅಲ್ಲ. ಈ ಎರಡೂ ಬಣ್ಣಗಳ ಹಿಂದೆ ಆಳವಾದ ಅರ್ಥವಿದೆ. ಇದೇ ಕಾರಣಕ್ಕಾಗಿ ಬಂಗಾಳಿ ಮಹಿಳೆಯರು ವರ್ಷಗಳಿಂದ ಅವುಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಈ ಸೀರೆ ಏಕೆ ವಿಶೇಷವಾಗಿದೆ ಎಂದು ನೋಡುವುದಾದರೆ ಬಂಗಾಳಿ ಸೀರೆಗಳನ್ನು ಲಾಲ್ ಪಾಡ್ ಸೀರೆ ಎಂದು ಕರೆಯಲಾಗುತ್ತದೆ. ವರ್ಷಗಳ ಹಿಂದೆ, ಇದನ್ನು ಬಂಗಾಳದಲ್ಲಿ ಹತ್ತಿ ಮತ್ತು ರೇಷ್ಮೆಯಿಂದ ತಯಾರಿಸಲಾಗುತ್ತಿತ್ತು. ಕುಶಲಕರ್ಮಿಗಳು ಸ್ವತಃ ತಮ್ಮ ಕೈಗಳಿಂದ ಇದನ್ನು ತಯಾರಿಸುತ್ತಿದ್ದರು. ಈ ಸೀರೆ ಸ್ವಾತಂತ್ರ್ಯ ಚಳವಳಿಯಲ್ಲಿಯೂ ಒಂದು ಪಾತ್ರವನ್ನು ವಹಿಸಿತು. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ನಿರಾಕರಿಸುವ ಮೂಲಕ ಸಾಂಪ್ರದಾಯಿಕ ಉಡುಪನ್ನು ಉತ್ತೇಜಿಸಲಾಯಿತು. ಮಹಿಳೆಯರು ಈ ಸೀರೆಯನ್ನು ಧರಿಸುವ ಮೂಲಕ ತಮ್ಮ ಭಾರತೀಯ ಗುರುತನ್ನು ತೋರಿಸುತ್ತಿದ್ದರು.
ಲಾಲ್ ಪಾಡ್ ಸೀರೆಯ ಕೆಂಪು ಮತ್ತು ಬಿಳಿ ಬಣ್ಣವನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಕೆಂಪು ಬಣ್ಣವು ಶಕ್ತಿಯನ್ನು ತೋರಿಸುತ್ತದೆ. ಬಿಳಿ ಬಣ್ಣವು ಶುದ್ಧತೆ ಮತ್ತು ಸ್ತ್ರೀತ್ವದ ಸಂಕೇತವಾಗಿದೆ. ಕೆಂಪು ಮತ್ತು ಬಿಳಿ ಬಣ್ಣವು ದುರ್ಗಾ ಮಾತೆಯೊಂದಿಗೆ ಸಹ ಸಂಬಂಧಿಸಿದೆ. ಆದ್ದರಿಂದ, ದುರ್ಗಾ ಪೂಜೆಯ ಸಮಯದಲ್ಲಿ ಈ ಸೀರೆಯ ಮಹತ್ವ ಇನ್ನಷ್ಟು ಹೆಚ್ಚಾಗುತ್ತದೆ. ಈ ಶುಭ ಸಂದರ್ಭದಲ್ಲಿ ಪೆಂಡಲ್‌ನಲ್ಲಿರುವ ಹೆಚ್ಚಿನ ಮಹಿಳೆಯರು ಈ ಸೀರೆಯನ್ನು ಧರಿಸುತ್ತಾರೆ. ಕ್ಲಾಸಿಕ್ ಡ್ರೆಪ್ಡ್ ಸೀರೆ ಮತ್ತು ಬಂಗಾಳಿ ಸೀರೆಯ ಡ್ರೆಪಿಂಗ್ ನಡುವೆ ವ್ಯತ್ಯಾಸವಿದೆ.
ಮೊದಲು ಲಾಲ್ ಪಾಡ್ ಸೀರೆ ತಯಾರಿಸುವ ಪ್ರಕ್ರಿಯೆಯು ಸಂಪೂರ್ಣವಾಗಿ ನೈಸರ್ಗಿಕವಾಗಿತ್ತು. ಸೀರೆಯ ಬಿಳಿ ಭಾಗವನ್ನು ಹತ್ತಿ ಮತ್ತು ರೇಷ್ಮೆಯಿಂದ ಮಾಡಲಾಗಿತ್ತು. ಮತ್ತು, ಕೆಂಪು ಬಣ್ಣವನ್ನು ಅರಗು ಬಳಸಿ ಬಣ್ಣ ಬಳಿಯಲಾಗುತ್ತಿತ್ತು. ಆದರೆ ಕಾಲಾನಂತರದಲ್ಲಿ ಇದು ಹಾಗಲ್ಲ. ಈಗ ಈ ಸೀರೆಗಳನ್ನು ತಯಾರಿಸಲು ಕೃತಕ ಉತ್ಪನ್ನಗಳನ್ನು ಸಹ ಬಳಸಲಾಗುತ್ತದೆ. ಒಂದು ಕಾಲದಲ್ಲಿ ಈ ಸೀರೆ ತುಂಬಾ ಸರಳವಾಗಿರುತ್ತಿತ್ತು. ಮತ್ತು, ಇದನ್ನು ಶುದ್ಧ ಬಟ್ಟೆಯಿಂದ ಮಾತ್ರ ತಯಾರಿಸಲಾಗುತ್ತಿತ್ತು. ಆದರೆ ಕಾಲ ಕಳೆದಂತೆ, ಕೆಲವು ಬದಲಾವಣೆಗಳು ಬಂದವು. ಈಗ ಬಂಗಾಳಿ ಸೀರೆಗಳಲ್ಲಿ ಅನೇಕ ವಿನ್ಯಾಸಗಳು ಕಂಡುಬರುತ್ತವೆ. ಜರಿ, ಸ್ಟೋನ್ಸ್ ಮತ್ತು ಬೀಡ್ಸ್‌ನಿಂದ ಕೂಡಿದ ವಿನ್ಯಾಸವಿದೆ, ಅದು ಮೊದಲು ಇರಲಿಲ್ಲ. ಆದರೆ ಇಂದಿಗೂ ಮಹಿಳೆಯರು ಈ ಸೀರೆಯನ್ನು ಧರಿಸಲು ಇಷ್ಟಪಡುತ್ತಾರೆ.
ನೀವು ಸರಳ ಉಡುಪಿನಲ್ಲಿ ರಾಯಲ್ ಲುಕ್ ಪಡೆಯಲು ಬಯಸಿದರೆ ಕೆಂಪು ಬಾರ್ಡರ್ ಸೀರೆಯನ್ನು ಸಹ ಧರಿಸಬಹುದು. ಈ ಸೀರೆ ನಿಸ್ಸಂದೇಹವಾಗಿ ಸರಳವಾಗಿದೆ. ಚಿನ್ನದ ಆಭರಣಗಳನ್ನು ಇದರೊಂದಿಗೆ ಜೋಡಿಸಿದರೆ ಇನ್ನು ಲುಕ್ಕಾಗಿ ಕಾಣುವಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.