
17 ವರ್ಷದ ಬಾಲಕಿಯೊಬ್ಬಳು ಕೂದಲು ನೇರಗೊಳಿಸುವ ಅರ್ಥಾರ್ ಹೇರ್ ಸ್ಟ್ರೇಟನಿಂಗ್ (hair straightening) ಮಾಡಿಕೊಂಡ ಬಳಿಕ ತೀವ್ರ ಅಸ್ವಸ್ಥಕ್ಕೆ ಒಳಗಾದ ಬಳಿಕ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಅವಳ ಮೂತ್ರಪಿಂಡ ವೈಫಲ್ಯದ ಪತ್ತೆಯಾಯಿತು. ಇದಕ್ಕೂ ಮೊದಲು ಇದೇ ರೀತಿ ಆರೋಗ್ಯವಂತೆ ಮಹಿಳೆಯೊಬ್ಬರಲ್ಲಿ ಹೀಗೆಯೇ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿತ್ತು. ಇದರ ಬೆನ್ನತ್ತಿ ಹೋದ ವೈದ್ಯರಿಗೆ ಇದೇ ರೀತಿ ಹಿಂದೆಯೂ ಕೆಲವು ಮಹಿಳೆಯರಲ್ಲಿ ಆಗಿದ್ದು ಕಂಡು ಬಂದಿತು. ಇದಾದ ಬಳಿಕ ಸಂಶೋಧನೆ ನಡೆಸಿದಾಗ ತಿಳಿದುಬಂದದ್ದು ಏನೆಂದರೆ, ಇವರೆಲ್ಲರ ಈ ಸಮಸ್ಯೆಗೆ ಕಾರಣ ಇವರೆಲ್ಲ ಕೂದಲನ್ನು ಸ್ಟ್ರೇಟ್ ಮಾಡಿಸಿಕೊಳ್ಳಲು ಸಲೂನ್ಗೆ ಹೋಗಿದ್ದರು ಎನ್ನುವುದು!
ಈ ಘಟನೆ ನಡೆದಿರುವುದು ಇಸ್ರೇಲ್ನಲ್ಲಿ. ಹಾಗೆಂದು ಬೇರೆ ದೇಶದವರು ನಮ್ಮದಲ್ಲ ಬಿಡಿ ಎನ್ನುವಂತಿಲ್ಲ. ಏಕೆಂದರೆ ಫ್ಯಾಷನ್ ಲೋಕದಲ್ಲಿ ಆಮದು-ರಫ್ತು ಎಲ್ಲವೂ ಮಾಮೂಲು. ಇಂಥ ಸಾಧನಗಳು ವಿದೇಶಗಳಿಗೂ ರಫ್ತಾಗುವ ಕಾರಣ, ಎಲ್ಲಾ ದೇಶಗಳ ಸಲೂನ್ಗಳಲ್ಲಿಯೂ ಇವು ಕಾಣಸಿಗುತ್ತದೆ. ಇವರೆಲ್ಲರಲ್ಲಿಯೂ ವಾಂತಿ, ತಲೆತಿರುಗುವಿಕೆ ಮತ್ತು ತೀವ್ರ ತಲೆನೋವಿನ ಸಂಗತಿಯನ್ನು ಕಂಡ ವೈದ್ಯರು ಹೀಗೆ ದಾಖಲಾದ ಮಹಿಳೆಯರ ಬಗ್ಗೆ ವಿಚಾರಿಸಿದಾಗ ಕಂಡು ಬಂದದ್ದೇ ಈ ಹೇರ್ ಸ್ಟ್ರೇಟನರ್ ಕುರಿತು.
ಇದಾದ ಬಳಿಕ, ಅಲ್ಲಿಯ ಮೂತ್ರಪಿಂಡ ಶಾಸ್ತ್ರ ಸಂಸ್ಥೆಯ ಮುಖ್ಯಸ್ಥರಾದ ಪ್ರೊ. ಲಿಂಡಾ ಶವಿತ್ ಮತ್ತು ಸಂಸ್ಥೆಯ ವೈದ್ಯ ಡಾ. ಅಲೋನ್ ಬೆನಾಯಾ ಅವರು ಅಧ್ಯಯನ ವರದಿಯನ್ನು ಪ್ರಕಟಿಸಿದ್ದಾರೆ. 14 ರಿಂದ 58 ವರ್ಷ ವಯಸ್ಸಿನ ಮಹಿಳೆಯರು ಯಾವುದೇ ಆಧಾರವಾಗಿರುವ ವೈದ್ಯಕೀಯ ಪರಿಸ್ಥಿತಿಗಳಿಲ್ಲದೆ ತೀವ್ರ ಮೂತ್ರಪಿಂಡ ವೈಫಲ್ಯದಿಂದ ದೇಶಾದ್ಯಂತ ತುರ್ತು ವಿಭಾಗಗಳಿಗೆ ಆಗಮಿಸಿದ 26 ಪ್ರಕರಣಗಳನ್ನು ದಾಖಲಿಸಿದೆ ಎಂದು ತಿಳಿಸಿದ್ದಾರೆ.
ಕೂದಲನ್ನು ನೇರ ಮಾಡುವ ಸಾಧನಗಳಲ್ಲಿ ಗ್ಲೈಆಕ್ಸಿಲಿಕ್ ಆಮ್ಲ ಹೊಂದಿರುವುದು ಪತ್ತೆಯಾಗಿದೆ. ಗ್ಲೈಆಕ್ಸಿಲಿಕ್ ಆಮ್ಲವು ಅದರ ನೇರಗೊಳಿಸುವ ಗುಣಲಕ್ಷಣಗಳಿಗಾಗಿ ಕೆಲವು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುವ ರಾಸಾಯನಿಕವಾಗಿದೆ. ರಾಷ್ಟ್ರೀಯ ಕಾಸ್ಮೆಟೋವಿಜಿಲೆನ್ಸ್ ಯೋಜನೆಯ ಭಾಗವಾಗಿ, ಗ್ಲೈಆಕ್ಸಿಲಿಕ್ ಆಮ್ಲವನ್ನು ಹೊಂದಿರುವ ವಿವಿಧ ಕೂದಲು ನೇರಗೊಳಿಸುವ ಉತ್ಪನ್ನಗಳ ಬಳಕೆಗೆ ಸಂಬಂಧಿಸಿದ ಕೆಲವು ತೀವ್ರ ಮೂತ್ರಪಿಂಡ ವೈಫಲ್ಯದ ಪ್ರಕರಣಗಳನ್ನು ವಿಶ್ಲೇಷಿಸಿದೆ. ಇದೇ ಕಾರಣಕ್ಕೆ ಅಲ್ಲಿಯ ಆರೋಗ್ಯ ಸಚಿವಾಲಯವು ಗ್ಲೈಆಕ್ಸಿಲಿಕ್ ಆಮ್ಲವನ್ನು ಹೊಂದಿರುವ ಸೌಂದರ್ಯವರ್ಧಕ ಉತ್ಪನ್ನಗಳ ಪರವಾನಗಿಗಳನ್ನು ರದ್ದುಗೊಳಿಸಿದೆ. ಆದರೆ ಇದು ಭಾರತದಲ್ಲಿ ಉಪಯೋಗಿಸಲಾಗುತ್ತಿದೆಯೇ ಇಲ್ಲವೇ ಎನ್ನುವುದು ಸ್ಪಷ್ಟವಾಗಿಲ್ಲ.
ಇದರ ಪ್ರಯೋಗ ಮಾಡುವ ಬದಲು ತಜ್ಞರು ಕೆಲವೊಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಅದೇನೆಂದರೆ, "ಕೂದಲು ನೇರಗೊಳಿಸುವ ಉತ್ಪನ್ನಗಳನ್ನು ನೇರವಾಗಿ ನೆತ್ತಿಗೆ ಅಥವಾ ಕೂದಲಿನ ಬೇರುಗಳಿಗೆ ಅನ್ವಯಿಸದಿರುವುದು ಅತ್ಯಗತ್ಯ, ಅವುಗಳಿಂದ ಕನಿಷ್ಠ 1.5 ಸೆಂಟಿಮೀಟರ್ ದೂರವನ್ನು ಕಾಯ್ದುಕೊಳ್ಳಬೇಕು ಎಂದಿದ್ದಾರೆ. ಇದಲ್ಲದೆ, ಕೇಶ ವಿನ್ಯಾಸಕರು ತಯಾರಕರ ಸೂಚನೆಗಳ ಪ್ರಕಾರ ಮಾತ್ರ ಕಾರ್ಯನಿರ್ವಹಿಸುವಂತೆ ತಿಳಿಸಲಾಗಿದೆ. ಆದರೆ, ಈ ಸಲಹೆ, ಸೂಚನೆಗಳು ಎಷ್ಟರಮಟ್ಟಿಗೆ ಪಾಲನೆ ಆಗುತ್ತಿದೆ ಎನ್ನುವುದು ಮಾತ್ರ ಪ್ರಶ್ನಾರ್ಹವೇ ಆಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.