ಕೆಲವು ಹೊಸ ವಸ್ತುಗಳನ್ನು ಖರೀದಿಸಿದಾಗ ಆಗುವ ಆನಂದ, ಅವುಗಳನ್ನು ಮತ್ತೆ ಮಾರಲು ಹೋದಾಗ ಮಾಯವಾಗುತ್ತದೆ. ಅಂಥ ವಸ್ತುಗಳ ಮೇಲೆ ಹಣ ಹಾಕುವಾಗ ಹೆಚ್ಚು ಸಲ ಯೋಚಿಸಿ.
ನಾವು ಖರೀದಿಸಿದ ಎಲ್ಲ ವಸ್ತುಗಳು ಬೆಲೆಯೂ ವರ್ಷಗಳ ಕಾಲವೂ ಹಾಗೇ ಇರುವಂತಿದ್ದರೆ ಏನಾಗುತ್ತಿತ್ತು? ನಮ್ಮ ಸಂಪೂರ್ಣ ಆರ್ಥಿಕತೆಯೇ ಕುಸಿಯುತ್ತಿತ್ತು. ಆದರೆ ಒಮ್ಮೆ ಖರೀದಿಸಿ ಬಳಸಲು ಶುರು ಮಾಡಿದ ಕೂಡಲೇ ಕೆಲವು ವಸ್ತುಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ನಾವು ಅತ್ಯಮೂಲ್ಯ ಎಂದು ಖರೀದಿಸಿದ ಕೆಲವು ಬಗೆಯ ವಸ್ತುಗಳ ಮೌಲ್ಯವು ಎಷ್ಟು ಬೇಗನೆ ಕುಸಿಯುತ್ತದೆ ಎಂಬುದನ್ನು ಇಲ್ಲಿ ನೋಡಿ. ಇಂಥವುಗಳನ್ನು ಖರೀದಿಸುವ ಮುನ್ನ ಹತ್ತು ಬಾರಿ ಯೋಚನೆ ಮಾಡಿ. ಇವುಗಳನ್ನು ಇನ್ವೆಸ್ಟ್‌ಮೆಂಟ್ ಎಂದು ಭಾವಿಸಿ ಖರೀದಿಸಲು ಮುಂದಾಗಲೇಬೇಡಿ.
ಕಂಪ್ಯೂಟರ್ (Computer)
ಕಂಪ್ಯೂಟರ್ ಉಪಕರಣದ ಮೇಲೆ ಹಣ ಹಾಕುವುದು ಹೂಡಿಕೆಯಲ್ಲ. ಇದು ಒಂದು ವಾರಕ್ಕೆ ತನ್ನ ಮೌಲ್ಯದ 2%ನಷ್ಟು ಕಳೆದುಕೊಳ್ಳುತ್ತದೆ. ಈ ಸವಕಳಿಗೆ ಪ್ರಮುಖ ಕಾರಣ ಟೆಕ್ನಾಲಜಿ ಬೆಳವಣಿಗೆ. ಬಿಡಿ ಭಾಗಗಳು ಅಗ್ಗವಾಗುತ್ತವೆ. ಡೆವಲಪರ್‌ಗಳು ಹೆಚ್ಚು ಶಕ್ತಿಶಾಲಿ ಸಿಸ್ಟಮ್‌ಗಳನ್ನು, ಸಾಫ್ಟ್‌ವೇರ್ ಅನ್ನು ಸೃಷ್ಟಿಸುತ್ತಾರೆ. ಹತ್ತು ವರ್ಷ ಹಿಂದೆ ನೀವು ಖರೀದಿಸಿದ ಕಂಪ್ಯೂಟರ್ ಇಂದು ಬರೀ ಪೇಪರ್‌ವೈಟ್‌ಗೆ ಸಮಾನ. ಲ್ಯಾಪ್‌ಟಾಪ್‌ಗಳು ಡೆಸ್ಕ್‌ಟಾಪ್‌ಗಳಿಗಿಂತ ಹೆಚ್ಚಿನ ಮೌಲ್ಯವನ್ನು ಉಳಿಸಿಕೊಳ್ಳುತ್ತವೆ.
ಸ್ಮಾರ್ಟ್‌ಫೋನ್‌ಗಳು (Smartphones)
ಸ್ಮಾರ್ಟ್‌ಫೋನ್‌ಗಳು ಬೆಲೆಯ ವಿಚಾರದಲ್ಲಿ ನೀವು ಖರೀದಿಸುವಾಗ ಮಾತ್ರ ಸ್ಮಾರ್ಟ್ ಆಗಿರುತ್ತವೆ. ಎರಡು ವರ್ಷಕ್ಕೊಮ್ಮೆ ಸ್ಮಾರ್ಟ್‌ಫೋನ್‌ಗಳು ಆಧುನಿಕಗೊಳ್ಳುತ್ತವೆ. ಆದ್ದರಿಂದ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ಖರೀದಿ ಉಚಿತವಲ್ಲ. ಆದರೆ ಆಪಲ್ ಉತ್ಪನ್ನಗಳು ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಮೌಲ್ಯವನ್ನು ಕಾಯ್ದುಕೊಂಡಿವೆ. ಆಪಲ್ ಐಫೋನ್‌ಗಳು ಖರೀದಿಸಿದ ನಂತರದ ಮೊದಲ ವರ್ಷದಲ್ಲಿ ತಮ್ಮ ಟ್ರೇಡ್-ಇನ್ ಮೌಲ್ಯದ ಸುಮಾರು 17%ನಷ್ಟು ಕಳೆದುಕೊಳ್ಳುತ್ತವೆ ಮತ್ತು ಆಂಡ್ರಾಯ್ಡ್ ಫೋನ್‌ಗಳು ಸುಮಾರು 33%ನಷ್ಟು ಕಳೆದುಕೊಳ್ಳುತ್ತವೆ. ನಾಲ್ಕು ವರ್ಷಗಳ ನಂತರ, ಐಫೋನ್ ತನ್ನ ಮೌಲ್ಯದ ಸುಮಾರು 66%ನಷ್ಟು ಮತ್ತು ಆಂಡ್ರಾಯ್ಡ್‌ಗಳು ಸುಮಾರು 81%ನಷ್ಟು ಕಳೆದುಕೊಳ್ಳುತ್ತವೆ. ಅದರ ನಂತರ ಈ ಫೋನ್‌ಗಳು ನಿಷ್ಪ್ರಯೋಜಕ.
ಆಟಿಕೆಗಳು (Toys)
ಜನ ಸಾಮಾನ್ಯವಾಗಿ ತಮ್ಮ ಮಕ್ಕಳಿಗೆ ಹೊಸ ಆಟದ ವಸ್ತುಗಳನ್ನೇ ಖರೀದಿಸುತ್ತಾರೆ. ಬಳಸಿದ್ದನ್ನು ಎಂದೂ ಖರೀದಿಸಲು ಬಯಸುವುದಿಲ್ಲ. ಇದರಿಂದಲೇ, ಬಳಸಿದ ಆಟಿಕೆಗಳ ಮೌಲ್ಯ ಸೊನ್ನೆ ಎಂದು ಊಹಿಸಬಹುದು. ಕೆಲವು ವಿಂಟೇಜ್ ಆಟಿಕೆಗಳು, ಮರದ ಆಟಿಕೆಗಳು ಬೆಲೆ ಉಳಿಸಿಕೊಳ್ಳುತ್ತವೆ. ಆದರೆ ಪ್ಲಾಸ್ಟಿಕ್ ಆಟಿಕೆಗಳಿಗೆ ಯಾವ ಬೆಲೆಯೂ ಇಲ್ಲ. ಯಾವ ಆಟಿಕೆ ಕಾಲಾನಂತರದಲ್ಲಿ ಮೌಲ್ಯದಲ್ಲಿ ಹೆಚ್ಚಾಗುತ್ತದೆ, ಯಾವುದು ಆಗುವುದಿಲ್ಲ ಎಂಬುದನ್ನು ನಿರ್ಧರಿಸುವುದು ಕಷ್ಟ. ಆದ್ದರಿಂದ ಆ ಹಣವನ್ನು ಶಿಕ್ಷಣ ನಿಧಿಯಲ್ಲಿಡುವುದು ಸೂಕ್ತ.
ಎಲೆಕ್ಟ್ರಾನಿಕ್ ವಸ್ತುಗಳು (Electronic Goods)
ಸ್ಟ್ರೀಮಿಂಗ್ ಸಾಧನಗಳು, ಟ್ಯಾಬ್ಲೆಟ್‌ಗಳು, ಮಾನಿಟರ್‌ಗಳು, ಸ್ಪೀಕರ್‌ಗಳು, ಬಾಹ್ಯ ಹಾರ್ಡ್ ಡ್ರೈವ್‌ಗಳು ಮತ್ತು ಇಯರ್‌ಫೋನ್‌ನಂಥ ಸಣ್ಣಪುಟ್ಟ ಗ್ಯಾಜೆಟ್‌ಗಳು ನೀವು ಖರೀದಿಸಿದ ಮೊದಲ ವರ್ಷದಲ್ಲೇ ಶೇ.೫೦ರಷ್ಟು ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಸ್ಮಾರ್ಟ್ ವಾಚ್‌ಗಳು ಮೊದಲ ವರ್ಷದಲ್ಲಿ ಅವುಗಳ ಮೌಲ್ಯದ ಸುಮಾರು 41%ನಷ್ಟು ಕಳೆದುಕೊಳ್ಳುತ್ತವೆ. ಹೆಡ್‌ಫೋನ್‌ಗಳು ಅವುಗಳ ಮೌಲ್ಯದ 44%ನಷ್ಟು ಕಳೆದುಕೊಳ್ಳುತ್ತವೆ. ಅಪಮೌಲ್ಯೀಕರಣವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಹೋಗುತ್ತದೆ.
ಆನ್‌ಲೈನ್ ಕೆಲಸ ಮಾಡುತ್ತಾ ಕೋಟ್ಯಾಧಿಪತಿಯಾದ ಹಳ್ಳಿಯ ಬಡ ಯುವಕ!
ಡೈಮಂಡ್ ಆಭರಣಗಳು (Daimond Jewellery)
ವಜ್ರದ ಆಭರಣಗಳು ತಮ್ಮ ಮೌಲ್ಯವನ್ನು ಹಿಡಿದಿಟ್ಟುಕೊಳ್ಳುತ್ತವೆ ಅಥವಾ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತವೆ ಎಂದು ಭಾವಿಸುತ್ತೀರಾ? ಇಲ್ಲ. ಡೈಮಂಡ್ ಎಂಗೇಜ್‌ಮೆಂಟ್ ರಿಂಗ್‌ಗಳು ಮತ್ತು ಇತರ ವಜ್ರದ ಆಭರಣಗಳು ನೀವು ಅವುಗಳನ್ನು ಮರುಮಾರಾಟ ಮಾಡುವಾಗ ಅವುಗಳ ಮೌಲ್ಯದ 80%ವರೆಗೆ ಕಳೆದುಕೊಳ್ಳುತ್ತವೆ. ವಿಶೇಷವಾಗಿ ನೀವು ಅವುಗಳನ್ನು ಚಿಲ್ಲರೆಯಾಗಿ ಖರೀದಿಸಿದರೆ, ಮಾರ್ಕ್‌ಅಪ್‌ಗಳು 200%ವರೆಗೆ ಹೋಗಬಹುದು. ವಜ್ರಗಳ ದುಬಾರಿ ಬೆಲೆ ಮಾರುಕಟ್ಟೆಯ ಹೈಪ್ ಅಷ್ಟೇ. ವಜ್ರಗಳು ಎಂದಿಗೂ ಉತ್ತಮ ಹೂಡಿಕೆ ಆಗಿರುವುದಿಲ್ಲ.
ವಿಡಿಯೋ ಗೇಮ್‌ಗಳು (Video Games)
ನೀವು ವಿಡಿಯೋ ಗೇಮ್ ಖರೀದಿಸಿ ಅಂಗಡಿಯಿಂದ ಆಚೆಗೆ ಕಾಲಿಟ್ಟ ತಕ್ಷಣ ವೀಡಿಯೊ ಗೇಮ್‌ಗಳು ತಮ್ಮ ಹೆಚ್ಚಿನ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ನೀವು ಅವುಗಳನ್ನು ಓಪನ್ ಮಾಡದೇ ಇಟ್ಟರೂ ಸಹ. ಹಳೆಯ ಆಟಗಳು ಕಾಲಾಂತರದಲ್ಲಿ ಮೌಲ್ಯ ಹೆಚ್ಚಿಸಿಕೊಳ್ಳುವುದು ಅಸಂಭವ. FandomSpot ಕಳೆದ 21 ವರ್ಷಗಳಿಂದ ಮಾರಾಟವಾದ 40ಕ್ಕೂ ಹೆಚ್ಚು ಬಗೆಯ ವೀಡಿಯೊ ಗೇಮ್‌ಗಳಲ್ಲಿ ಏಳು ಮಾತ್ರ ಅವುಗಳು ಬಿಡುಗಡೆಯಾದಾಗ ಇದ್ದದ್ದಕ್ಕಿಂತ ಹೆಚ್ಚು ಮೌಲ್ಯದ್ದಾಗಿದೆ ಎಂದು ಕಂಡುಹಿಡಿದಿದೆ.
ಪುಸ್ತಕಗಳು (Books)
ಪುಸ್ತಕಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತವೆ, ಇದು ವಿಚಿತ್ರ. ಪುಸ್ತಕಗಳಲ್ಲಿದ್ದ ಅಕ್ಷರಗಳೇನೂ ಸವೆಯುವುದಿಲ್ಲ ನಿಜ. ಆದರೆ ಪುಸ್ತಕಗಳು ಖರೀದಿಸಿದ ನಂತರ ಅಪಾರವಾಗಿ ಸವಕಳಿಯಾಗುವ ಮೌಲ್ಯದ ಉತ್ಪನ್ನಗಳು. ಕಾಲಾನಂತರದಲ್ಲಿ ಇವುಗಳ ಬೆಲೆ ಹೆಚ್ಚಾಗುವ ಸಾಧ್ಯತೆಯಿಲ್ಲ. ಜನಪ್ರಿಯ ಪೇಪರ್‌ಬ್ಯಾಕ್‌ಗಳು ನಿಷ್ಪ್ರಯೋಜಕ. ಬಳಸಿದ ಪುಸ್ತಕ ಮಳಿಗೆಗಳು ಸಾಮಾನ್ಯವಾಗಿ ಅವುಗಳಿಗೆ ಏನನ್ನೂ ನೀಡುವುದಿಲ್ಲ. ಅಸಾಧಾರಣ ಸ್ಥಿತಿಯಲ್ಲಿರುವ, ಅಪರೂಪದ ಮತ್ತು ಕೆಲವು ರೀತಿಯಲ್ಲಿ ಮುಖ್ಯವಾದ ಮೊದಲ ಆವೃತ್ತಿಗಳು ಮಾತ್ರ ಹೆಚ್ಚಿನ ಮೌಲ್ಯವನ್ನು ಹೊಂದಿರುತ್ತವೆ. ಉದಾಹರಣೆಗೆ ಬೈಬಲ್, ಶೇಕ್ಸ್‌ಪಿಯರ್‌ನ ಮೊದಲ ಆವೃತ್ತಿ ಹೀಗೆ.
ಕಾರುಗಳು (Cars)
ಹೊಸ ಕಾರನ್ನು ನೀವು ಮಳಿಗೆಯಿಂದ ಹೊರಗೆ ತಂದ ಕೂಡಲೇ ಅದರ ಮೌಲ್ಯದ ಸುಮಾರು 10%ನಷ್ಟು ಕಳೆದುಕೊಳ್ಳುತ್ತದೆ. ಮೊದಲ ವರ್ಷದ ನಂತರ ಅದರ ಮೌಲ್ಯದ ಕಾಲು ಭಾಗ ಮತ್ತು ಐದು ವರ್ಷಗಳಲ್ಲಿ ಅದರ ಮೌಲ್ಯದ ಸುಮಾರು 60%ನಷ್ಟು ಕಳೆದುಹೋಗಿರುತ್ತದೆ. ಆದರೆ ಇತ್ತೀಚಿನ ಪೂರೈಕೆ ಸರಪಣಿ ಮತ್ತು ಇತರ ಕೋವಿಡ್ ಕಾಲದ ಸಮಸ್ಯೆಗಳಿಂದಾಗಿ ಇದು ಸ್ವಲ್ಪ ಬದಲಾಗಿದೆ. ಬಳಸಿದ ಕಾರುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. U.S. ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ, ಉಪಯೋಗಿಸಿದ ಕಾರುಗಳು ಮತ್ತು ಟ್ರಕ್‌ಗಳ ಬೆಲೆ ಸೂಚ್ಯಂಕ ಜನವರಿ 2021ರಿಂದ ಜನವರಿ 2022ರವರೆಗೆ 40.5%ರಷ್ಟು ಏರಿಕೆಯಾಗಿದೆ. ಹಾಗಾಗಿ ನೀವು ಕಳೆದ ಐದು ವರ್ಷಗಳಲ್ಲಿ ಹೊಸ ಕಾರನ್ನು ಖರೀದಿಸಿದ್ದರೆ, ಅದನ್ನು ಮಾರಾಟ ಮಾಡಲು ಇದು ಉತ್ತಮ ಸಮಯ. ಅದಕ್ಕಿಂತ ಹಳೆಯದು ಪ್ರಯೋಜನವಿಲ್ಲ.
ಐಕಿಯ ಜನಜಾತ್ರೆ... ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್