ಯಶ್ ಮುಂದಿನ ಚಿತ್ರ ಆದಿತ್ಯ ಧರ್ ಜೊತೆಗೆ, ರಣವೀರ್ ರೋಲ್ ಬಗ್ಗೆ ಕುತೂಹಲ, ಇದು ಚಂದ್ರಗುಪ್ತ ಮೌರ್ಯನ ಸಾಮ್ರಾಜ್ಯದ ಕಥೆ!

Gowthami K   | ANI
Published : Nov 14, 2026, 06:11 PM IST
yash ranveer singh aditya dhar

ಸಾರಾಂಶ

ಬಾಕ್ಸ್ ಆಫೀಸ್‌ನಲ್ಲಿ 1,300 ಕೋಟಿ ರೂ. ಗಳಿಸಿದ ಧುರಂಧರ್ ಚಿತ್ರದ ನಿರ್ದೇಶಕ ಆದಿತ್ಯ ಧರ್, ಯಶ್ ಮತ್ತು ರಣವೀರ್ ಸಿಂಗ್ ರನ್ನು ಒಂದೇ ಪರದೆಯಲ್ಲಿ ತರಲಿದ್ದಾರೆ. ಅಖಂಡ ಭಾರತವನ್ನು ಆಳಿದ ಮೌರ್ಯ ಸಾಮ್ರಾಜ್ಯದ ದೊರೆ ಚಂದ್ರಗುಪ್ತ ಮೌರ್ಯನ ಐತಿಹಾಸಿಕ ಜೀವನ ಆಧರಿಸಿದ ಚಿತ್ರ ಎಂದು ಗುಲ್ಲೆದ್ದಿದೆ.

'ಧುರಂಧರ್' ಚಿತ್ರ 1300 ಕೋಟಿ ಬಾಚಿಕೊಂಡು ಇತಿಹಾಸ ನಿರ್ಮಿಸಿದ ಬಳಿಕ ನಿರ್ದೇಶಕ ಆದಿತ್ಯ ಧರ್ ಮತ್ತೊಂದು ಬೃಹತ್ ಸಿನಿಮಾ ಯೋಜನೆಯತ್ತ ಗಮನ ಹರಿಸಿದ್ದಾರೆ ಎಂಬ ಸುದ್ದಿ ಬಾಲಿವುಡ್ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಚರ್ಚೆ ಹುಟ್ಟುಹಾಕಿದೆ. ಈ ಬಾರಿ ಅವರು ಭಾರತದ ಇತಿಹಾಸದ ಮಹತ್ವದ ಅಧ್ಯಾಯವೊಂದನ್ನು ತೆರೆಮೇಲೆ ಕಟ್ಟಿಕೊಡುವ ಸಿದ್ಧತೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಮೌರ್ಯ ಸಾಮ್ರಾಜ್ಯದ ಸ್ಥಾಪಕ ಚಂದ್ರಗುಪ್ತ ಮೌರ್ಯನ ಜೀವನ ಮತ್ತು ಸಾಮ್ರಾಜ್ಯ ವಿಸ್ತರಣೆಯ ಇತಿಹಾಸವನ್ನು ಸಿನೆಮಾ ಮೂಲಕ ಕಟ್ಟಿ ಕೊಡಲಿದ್ದಾರೆ ಎಂದು ಬಿಟೌನ್ ಅಂಗಳದಲ್ಲಿ ಗುಲ್ಲೆದ್ದಿದೆ.

ಇದಕ್ಕೂ ಹೆಚ್ಚು ವಿಶೇಷ ಎಂದರೆ ಈ ಮಹತ್ವಾಕಾಂಕ್ಷೆಯ ಸಿನಿಮಾದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಇಬ್ಬರು ಜನಪ್ರಿಯ ನಟರನ್ನು ಈ ಸಿನೆಮಾದಲ್ಲಿ ಹಾಕಿಕೊಂಡು ಯಾವ ಪಾತ್ರಗಳನ್ನು ಇವರಿಬ್ಬರಿಗೆ ನೀಡಬಹುದು ಎಂಬುದೇ ಅಭಿಮಾನಿಗಳಲ್ಲಿ ಹುಟ್ಟುಹಾಕಿರುವ ಕುತೂಹಲ. ಆದರೆ, ಈ ಬಗ್ಗೆ ಚಿತ್ರತಂಡದಿಂದ ಆಗಲಿ ನಿರ್ದೇಶಕನಿಂದಾಗಲಿ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಸಿನಿಮಾ ಭರ್ಜರಿ ಯಶಸ್ಸು ಕಂಡ ಬಳಿಕ ಅವರ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿತ್ತು. ಈಗ ಅವರು ಭಾರತದ ಇತಿಹಾಸವನ್ನು ತೆರೆದಿಡಲು ಅಖಂಡ ಭಾರತದ ನಾಲ್ಕು ದಿಕ್ಕುಗಳನ್ನು ಆಳಿದ ಮೌರ್ಯ ಸಾಮ್ರಾಜ್ಯದ ಕಿಂಗ್ ಚಂದ್ರಗುಪ್ತ ಮತ್ತು ಆತನ ಗುರು ಚಾಣಕ್ಯ(ಕೌಟಿಲ್ಯ)ನ ಬಗ್ಗೆ ಸಿನೆಮಾ ಮಾಡುತ್ತಿದ್ದಾರೆ. ಭಾರತದ ಪ್ರಾಚೀನ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿರುವ ಚಂದ್ರಗುಪ್ತ ಮೌರ್ಯನ ಬದುಕನ್ನು ಆಧುನಿಕ ಸಿನಿಮಾ ತಂತ್ರಜ್ಞಾನ ಮತ್ತು ಅದ್ದೂರಿ ದೃಶ್ಯಗಳ ಮೂಲಕ ಪ್ರೇಕ್ಷಕರ ಮುಂದೆ ತರುವ ಉದ್ದೇಶ ನಿರ್ದೇಶಕರಿಗಿದೆ ಎಂಬುದು ಬಲವಾಗಿ ಎದ್ದಿರುವ ಊಹಾಪೋಹ.

ಚಂದ್ರಗುಪ್ತ ಮೌರ್ಯನ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ?

ಸದ್ಯ ‘ಟಾಕ್ಸಿಕ್’ ಮತ್ತು ‘ರಾಮಾಯಣ’ದಂತಹ ಪ್ಯಾನ್-ಇಂಡಿಯಾ ಸಿನಿಮಾಗಳಲ್ಲಿ ನಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರನ್ನು, ಅಖಂಡ ಭಾರತದ ಸ್ಥಾಪಕ ‘ಚಂದ್ರಗುಪ್ತ ಮೌರ್ಯ’ನ ಪಾತ್ರಕ್ಕಾಗಿ ಸಂಪರ್ಕಿಸಲಾಗಿದೆ ಎಂದು ಊಹಾಪೋಹ ಬಲವಾಗಿದೆ. ಮತ್ತೊಂದೆಡೆ, ‘ಧುರಂಧರ್’ ಚಿತ್ರದ ಮೂಲಕ ಆದಿತ್ಯ ಧರ್ ಜೊತೆ ಭರ್ಜರಿ ಯಶಸ್ಸು ಕಂಡಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಕೂಡ ಈ ಬೃಹತ್ ಯೋಜನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ನಟ ರಣವೀರ್ ಸಿಂಗ್ ಗೆ ಚಂದ್ರಗುಪ್ತ ಮೌರ್ಯನ ಗುರು ಚಾಣಕ್ಯನ ಪಾತ್ರವನ್ನು ನೀಡಬಹುದು ಎಂದು ಹೇಳಲಾಗುತ್ತಿದೆ. ಇನ್ನೊಂದು ವರದಿ ಪ್ರಕಾರ ಚಿತ್ರದ ಪ್ರಮುಖ ಪಾತ್ರವಾದ ಚಾಣಕ್ಯನ ಪಾತ್ರಕ್ಕೆ ಕಾಲಿವುಡ್‌ನ ಖ್ಯಾತ ನಟ ವಿಜಯ್ ಸೇತುಪತಿ ಅವರ ಹೆಸರು ಕೇಳಿಬರುತ್ತಿದ್ದು, ಬಾಲಿವುಡ್ ನಟ ಅಕ್ಷಯ್ ಖನ್ನಾ ಕೂಡ ಈ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ನಿರ್ದೇಶಕ ಆದಿತ್ಯ ಧರ್ 2027ರ ಮಾರ್ಚ್ ತಿಂಗಳಿನಲ್ಲಿ ಈ ಚಿತ್ರದ ಮುಹೂರ್ತ ನಡೆಸಲು ಸಿದ್ದತೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಮೌರ್ಯ ಸಾಮ್ರಾಜ್ಯದ ವೈಭವ ಮತ್ತು ಇತಿಹಾಸವನ್ನು ತೆರೆಯ ಮೇಲೆ ತರುವ ಈ ಬೃಹತ್ ಆಕ್ಷನ್ ಡ್ರಾಮಾವನ್ನು ಸದ್ಯ ‘ಚಂದ್ರಗುಪ್ತ ಮೌರ್ಯ’ ಅಥವಾ ‘ಆರ್ಯವರ್ತ’ ಎಂಬ ತಾತ್ಕಾಲಿಕ ಶೀರ್ಷಿಕೆಗಳ ಅಡಿಯಲ್ಲಿ ಚರ್ಚಿಸಲಾಗುತ್ತಿದೆಯಂತೆ. ಒಂದು ವೇಳೆ ಈ ಜೋಡಿ ಒಂದಾದರೆ, ‘ಕೆಜಿಎಫ್’ ಚಿತ್ರದ ‘ರಾಕಿ’ ಮತ್ತು ‘ಪದ್ಮಾವತ್’ ಚಿತ್ರದ ‘ಖಿಲ್ಜಿ’ಯ ಅಮೋಘ ಎನರ್ಜಿಯನ್ನು ಒಂದೇ ಸಿನಿಮಾದಲ್ಲಿ ನೋಡುವ ಸುವರ್ಣಾವಕಾಶ ಅಭಿಮಾನಿಗಳಿಗೆ ಸಿಗಲಿದೆ. ಈ ಕಲ್ಪನೆಯೇ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ. ಅಧಿಕೃತ ಮಾಹಿತಿ ಹೊರಬೀಳುವವರೆಗೂ ಕಾಯಬೇಕಿದ್ದರೂ, ಯಶ್ ಮತ್ತು ರಣವೀರ್ ಸಿಂಗ್ ಒಟ್ಟಿಗೆ ನಟಿಸುವ ಸಾಧ್ಯತೆಯೇ ಸಿನಿಪ್ರಿಯರಲ್ಲಿ ಬೆಟ್ಟದಷ್ಟು ನಿರೀಕ್ಷೆ ಹುಟ್ಟುಹಾಕಿದೆ.

ಯಾರು ಈ ಚಂದ್ರಗುಪ್ತ?

ಮೌರ್ಯ ಸಾಮ್ರಾಜ್ಯದ ಸ್ಥಾಪಕ ಚಂದ್ರಗುಪ್ತ ಹುಟ್ಟಿದ್ದು ಕ್ರಿ.ಪೂ. 340 ರಲ್ಲಿ. ಆಳಿದ್ದು ಕ್ರಿಸ್ತಪೂರ್ವ 320-298 ರ ಅವಧಿಯಲ್ಲಿ. ಮೂಲತ ರಾಜ ಪರಂಪರೆಯಿಂದ ಆಳಿದ ದೊರೆಯಲ್ಲ. ಪೂರ್ವ ಭಾರತದ ಮಗಧದ ನಂದ ವಂಶಕ್ಕೆ ಸೇರಿದ ಒಬ್ಬ ರಾಜನಿಗೆ ಮುರಾ ಎಂಬ ದಾಸಿಯಲ್ಲಿ ಹುಟ್ಟಿದ ಕಾನೂನುಬಾಹಿರ ಮಗು ಎಂದು ಇತಿಹಾಸಲ್ಲಿ ಉಲ್ಲೇಖವಿದೆ. ಚಂದ್ರಗುಪ್ತನ ಜೀವನದ ಇತಿಹಾಸದಲ್ಲಿ ಪ್ರಮುಖ ಪಾತ್ರವಿರುವುದು ಅವನ ಗುರು ಚಾಣಕ್ಯನಿಗೆ. ತಕ್ಷಶಿಲೆ ವಿಶ್ವವಿದ್ಯಾಲಯದಲ್ಲಿ ಗುರುವಾಗಿದ್ದ ಕೌಟಿಲ್ಯ ಇರದಿದ್ದರೆ ಆತ ಸಾಮ್ರಾಜ್ಯ ಆಳುತ್ತಿರಲಿಲ್ಲ. ಆತನ ರಾಜಕೀಯ ಮತ್ತು ಯುದ್ಧದ ಗುರು, ಪ್ರಧಾನ ಮಂತ್ರಿ ಮತ್ತು ಮುಖ್ಯ ಸಲಹೆಗಾರ ಚಾಣಕ್ಯ. ಚಾಣಕ್ಯನನ್ನು ಕೌಟಿಲ್ಯ ಮತ್ತು ವಿಷ್ಣುಗುಪ್ತ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ನಂದ ವಂಶದ ದೊರೆ ಧನನಂದನನ್ನು ಸೋಲಿಸಿ ಮೌರ್ಯ ಸಾಮ್ರಾಜ್ಯವನ್ನು ಕಟ್ಟಲು ಚಾಣಕ್ಯನು ಚಂದ್ರಗುಪ್ತನಿಗೆ ಮಾರ್ಗದರ್ಶನ ಮತ್ತು ತಂತ್ರಗಾರಿಕೆಯನ್ನು ನೀಡಿದನು.

ಚಂದ್ರಗುಪ್ತನು ತನ್ನ ಜೀವನದ ಕೊನೆಯ ಕಾಲಗಟ್ಟದಲ್ಲಿ ಸಿಂಹಾಸನವನ್ನು ತ್ಯಜಿಸಿ ಜೈನಧರ್ಮಕ್ಕೆ ಸೇರಿ ಸಂನ್ಯಾಸಿಯಾಗಿ ಕರ್ನಾಟಕದಲ್ಲಿರುವ ಶ್ರವಣಬೆಳಗೊಳದಲ್ಲಿ ತನ್ನ ಕೊನೆಯ ದಿನಗಳನ್ನು ಕಳೆದನು ಎಂದು ನಂಬಲಾಗಿದೆ. ತನ್ನ ಜೀವನದ ಕೊನೆಯ ದಿನಗಳಲ್ಲಿ ಜೈನ ಧರ್ಮವನ್ನು ಸ್ವೀಕರಿಸಿದಾಗ ಅವರ ಧಾರ್ಮಿಕ ಗುರು ಆಚಾರ್ಯ ಭದ್ರಬಾಹು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅರ್ಧ ಚೆನ್ನೈ ಖರೀದಿಸುವಷ್ಟು ಸಂಪಾದಿಸಿದ್ದ ಕನ್ನಡದ ಹಿರಿಯ ನಟಿಗೆ ಆಸರೆಯಾಗಿದ್ದು ಚಿಲ್ಲರೆ ಹಣ: ಆಗಿದ್ದೇನು?
ಅವರಿಲ್ಲದಿದ್ದರೆ ಈ ಮಟ್ಟಕ್ಕೆ ಬರುತ್ತಿರಲಿಲ್ಲ, ಅವರೇ ನನ್ನ ಲಕ್ಕಿ ಚಾರ್ಮ್: 'ಸೀತಾ ರಾಮಂ' ನಟಿ ಹೇಳಿದ್ದು ಯಾರ ಬಗ್ಗೆ?