ಎಸ್ಪಿಬಿಯವರು ಯಾವಾಗಲೂ ಹೇಳ್ತಿದ್ದ ಮಾತು, 'ಶಾಸ್ತ್ರೀಯ ಸಂಗೀತಕ್ಕೆ ನಾಲ್ಕಾರು ಶಬ್ದ ಸಾಕು. ಆದರೆ ಸಿನಿಮಾ ಸಂಗೀತಕ್ಕೆ ಪ್ರಾದೇಶಿಕ ಭಾಷೆ ಆತ್ಮ. ಅದನ್ನು ಕಾಪಾಡಬೇಕು'
ಬೆಂಗಳೂರು (ಸೆ. 26): ಕನ್ನಡ ಚಿತ್ರರಂಗ ಒಂದು ಸಂಕಷ್ಟದ ಸನ್ನಿವೇಶ ಎದುರಿಸುತ್ತಿದ್ದ ಸಮಯದಲ್ಲಿ ನಮಗೆ ಸಿಕ್ಕವರು ಎಸ್.ಪಿ. ಬಾಲಸುಬ್ರಹ್ಮಣ್ಯಂ. ನಾನು ಇವತ್ತು ಬೆಳಗ್ಗಿನಿಂದ ಬಹಳ ಚಿಂತಿಸುತ್ತಿದ್ದದ್ದು ಎಸ್. ಜಾನಕಿ ಅವರ ಬಗೆಗೆ. ಎಸ್‌ಪಿಬಿ ಅವರು ಭೌತಿಕ ಶರೀರ ತೊರೆದ ಈ ಹೊತ್ತು ಆ ಅಮ್ಮನ ಸಂಕಟ ಹೇಗಿರಬಹುದು ಅನ್ನುವುದು ನನ್ನನ್ನು ಯೋಚನೆಗೀಡು ಮಾಡಿತ್ತು.
ಯಾವುದೋ ಸಂಗೀತ ಸ್ಪರ್ಧೆಯಲ್ಲಿ ಹಾಡುತ್ತಿದ್ದ ಹುಡುಗನ ದನಿಯಲ್ಲಿ ಮೊದಲ ಸಲ ದೈವಿಕತೆ ಕಂಡವರು ಅವರು. ಆಮೇಲೆ ಆ ಹುಡುಗನ ಬಗ್ಗೆ ವಿವರ ಸಂಗ್ರಹಿಸಿ, ಅವನಿಗೆ ಅವಕಾಶ ಸಿಗುವಂತೆ ನೋಡಿಕೊಂಡು, ಆತನ ಬೆಳವಣಿಗೆ ಕಂಡು ಹಿಗ್ಗಿದ ಮಾತೃಜೀವ ಜಾನಕಿ ಅವರದ್ದು. ಇವತ್ತು ಮಗುವನ್ನು ಕಳೆದುಕೊಂಡ ಅವರಿಗೆ ದುಃಖ ಭರಿಸೋದು ಸಾಧ್ಯವೇ..
ಹಾಗೆ ನೋಡಿದರೆ ಎಸ್‌ಪಿಬಿ ಅವರಿಗೆ ಸಿಕ್ಕ ಅವಕಾಶಗಳು ಬೇರೆಯವರಿಗೆ ಸಿಗಲಿಲ್ಲ. ಸಿಕ್ಕ ಅವಕಾಶವನ್ನು ಅವರು ಬಳಸಿಕೊಂಡಂತೆ ಉಳಿದವರು ಬಳಸಿಕೊಂಡಿಲ್ಲ. ಅವರಿಗೆ ಒಂದು ಕೊರಗಿತ್ತು. ‘ನನಗೆ ತೆಲುಗು, ತಮಿಳಿನಲ್ಲಿ ರಾಷ್ಟ್ರ ಪ್ರಶಸ್ತಿ ಬಂದಿದೆ. ಕನ್ನಡದಲ್ಲಿ ಬಂದಿಲ್ಲ’ ಅಂತ ಕೊರಗುತ್ತಿದ್ದರು. ಆ ಹೊತ್ತಿಗೆ ಚಿಂದೋಡಿ ಲೀಲಾ ಹಾಗೂ ಬಂಗಾರೇಶ್ ಅವರು ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಸಿನಿಮಾ ಮಾಡಲು ಮುಂದೆ ಬಂದರು. ನನಗೆ ಸಂಗೀತ ಮಾಡಲು ಹೇಳಿದರು. ಆದರೆ ಹಿಂದೂಸ್ತಾನಿ ಸಂಗೀತದ ಬಗ್ಗೆ ಅಷ್ಟಾಗಿ ಸಂಗೀತ ಜ್ಞಾನ ಇಲ್ಲದ ನಾನು, ‘ಅಜ್ಜಾ, ಇದಕ್ಕೆ ನಾ ಯೋಗ್ಯ ಅಲ್ಲ’ ಅಂದೆ.
ಎಸ್‌ಪಿಬಿ ಪ್ರೀತಿಯ ಶಿಷ್ಯಂದಿರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಭಾವುಕರಾಗಿದ್ದು ಹೀಗೆ
ಆಗ ಗುರುಗಳು, ‘ಅಜ್ಜನ ಆಶೀರ್ವಾದ ನಿನ್ ಮೇಲಿದೆ, ನಿನ್ನಿಂದ ಇದು ಆಗ್ತದೆ’ ಅಂದರು. ಈ ಮ್ಯೂಸಿಕಲ್ ಸಿನಿಮಾದಲ್ಲಿ ಎಸ್‌ಪಿಬಿ ಅವರೇ ಹಾಡಬೇಕು ಅಂತಾಯ್ತು. ಆದರೆ ಎಸ್‌ಪಿಸಿ ನನಗೆ ಹಿಂದೂಸ್ತಾನಿ ಬರಲ್ಲ, ನಾನು ಹಾಡೋದು ಕಷ್ಟಅಂದರು. ಆರು ತಿಂಗಳಾದ್ರೂ ಡೇಟ್ ಕೊಡಲಿಲ್ಲ. ಇತ್ತ ಬಂಗಾರೇಶ್ ಒತ್ತಡ ಹೆಚ್ಚಾಗುತ್ತಿತ್ತು. ಕೊನೆಗೆ ಎಸ್‌ಪಿಬಿ ಬದಲಿಗೆ ಹರಿಹರನ್ ಕರೆತಂದು ಹಾಡಿಸುತ್ತೇನೆ ಅಂತ ಬಂಗಾರೇಶ್ ಬಳಿ ಹೇಳಿದೆ. ಆಗ ಅವರು, ‘ನೀನು ಹರಿಹರನಾದ್ರೂ ಕರೆಸು, ದಾವಣಗೆರೆಯನ್ನಾದ್ರೂ ಕರೆಸು, ಈ ಸಿನಿಮಾದಲ್ಲಿ ಮಾತ್ರ ಬಾಲು ಅವರೇ ಹಾಡಬೇಕು’ ಅಂದರು.
ತಾಯಿ ನೆನೆಸಿಕೊಂಡು ಹಾಡ್ತಿದ್ದರು
ಕೊನೆಗೆ ಎಸ್‌ಪಿಬಿ ಅವರಿಗೆ ಕರೆ ಮಾಡಿ ಅವರಿದ್ದಲ್ಲೇ ಹೋದೆ. ಹಾಗೇ ಏರ್‌ಪೋರ್ಟ್ ದಾರಿಯಲ್ಲಿ ಕಾರಿನಲ್ಲಿ ಕೂತು ಅವರ ಬಳಿ ಹಾಡುಗಳ ಬಗ್ಗೆ ಕೇಳಿದೆ. ಆಗ ಅವರು ಹೇಳಿದ ಮಾತು ಕೇಳಿ ನಿಬ್ಬೆರಗಾಗುವ ಸರದಿ ನನ್ನದು. ಅವರು ಒಂದೊಂದು ಹಾಡನ್ನೂ 50 ಲೂಪ್ ರೆಕಾರ್ಡ್ ಮಾಡಿದ್ದರು, ಹಾಡಿನ ಸಣ್ಣ ಸಣ್ಣ ಡೀಟೈಲ್‌ಗಳನ್ನೂ ಮತ್ತೆ ಮತ್ತೆ ತಿದ್ದಿದ್ದರು. ಕೊನೆಗೂ ಆ ಸಿನಿಮಾಕ್ಕೆ ಹಾಡಿದರು. ಆದರೆ ರೆಕಾರ್ಡಿಂಗ್ ರೂಮ್‌ಗೆ ನಮ್ಮನ್ಯಾರನ್ನೂ ಸೇರಿಸಿಕೊಳ್ಳಲಿಲ್ಲ. ನೀವೇನಾದ್ರೂ ಕರೆಕ್ಷನ್ ಹೇಳಿದ್ರೆ ನನಗೆ ಕಷ್ಟಆಗುತ್ತೆ ಅಂತ ಅವರಿಗೆ ಸಂಕೋಚ. ಕೊನೆಗೆ ಸಂಜೆಯವರೆಗೂ ಹಾಡಿ ಫೈನಲ್ ಮಾಡಿದ್ರು. ಅವರ ತಾಯಿ ಹೆಸರು ಶಕುಂತಲಾ. ಅವರನ್ನು ನೆನೆಸ್ಕೊಂಡು ಹಾಡುತ್ತಿದ್ದ ರೀತಿ ನನಗೆ ಈಗಲೂ ನೆನಪಿದೆ.
ರಫಿ ರೀತಿಯ ಕೋಟ್ ಧರಿಸಿ ಪ್ರಶಸ್ತಿ ಸ್ವೀಕಾರ
ಮುಂದೆ ಈ ಸಿನಿಮಾದಲ್ಲಿ ಎಸ್‌ಪಿಬಿ ಹಾಡಿಗೆ ರಾಷ್ಟ್ರ ಪ್ರಶಸ್ತಿ ಬಂತು, ನನಗೂ ಬಂತು. ಆಗ ನಾನು ಯಾವ ಬಗೆಯಲ್ಲಿ ಎಕ್ಸೈಟ್ ಆಗಿದ್ದೆ ಅಂದರೆ ಜೊತೆಗೆ ಕರ್ಕೊಂಡು ಬಂದಿದ್ದ ಹೆಂಡತಿಯನ್ನೇ ಬಿಟ್ಟು ಸಮಾರಂಭದ ಒಳಹೋಗಿದ್ದೆ. ಒಳಗೆ ಎಸ್‌ಪಿಬಿ ಕೋಟ್ ಹಾಕಿಕೊಂಡು ಧ್ಯಾನಸ್ಥರಾಗಿ ಕೂತಿದ್ರು. ಅವರ ಆ ಭಂಗಿ ಕಂಡು ನನಗೆ ಭಕ್ತಿ ಬಂದು ಅವರ ಕಾಲು ಮುಟ್ಟಿನಮಸ್ಕಾರ ಮಾಡೋಣ ಅನಿಸಿತು. ಪಕ್ಕದಲ್ಲಿ ಕೂತು ಮಾತಿಗೆಳೆದೆ, ನನಗನಿಸಿದ್ದನ್ನು ಹೇಳಿದೆ. ಆಗ ಅವರು, ‘ಇದು ರಫಿ ಅವರು ಹಾಕುತ್ತಿದ್ದಂಥದ್ದೇ ಬಟ್ಟೆಯಿಂದ ನಾನು ಹೊಲಿಸಿಕೊಂಡ ಕೋಟ್. ಕನ್ನಡದ ಹಾಡಿಗೆ ಪ್ರಶಸ್ತಿ ಬಂದರೆ ರಫಿ ಅವರ ಬಟ್ಟೆಯಿಂದ ಕೋಟ್ ಮಾಡಿಸಿಕೊಂಡು ಪ್ರಶಸ್ತಿ ಸ್ವೀಕರಿಸಬೇಕು ಅನ್ನುವುದು ನನ್ನ ಕನಸಾಗಿತ್ತು’ ಅಂದರು. ರಫಿಯ ಸಾಮರಸ್ಯವನ್ನು ಮುಂದುವರಿಸುತ್ತಿರುವವರು ಬಾಲು ಅಂತ ಆ ಕ್ಷಣ ಅನಿಸಿತು.
ಎಸ್ಪಿಬಿಯವರ ಸಾಲುಗಳನ್ನಿಟ್ಟು ಪ್ರೇಮಪತ್ರ ಬರೀತಿದ್ದೆ!
ಅವರು ಯಾವಾಗಲೂ ಹೇಳ್ತಿದ್ದ ಮಾತು, ಶಾಸ್ತ್ರೀಯ ಸಂಗೀತಕ್ಕೆ ನಾಲ್ಕಾರು ಶಬ್ದ ಸಾಕು. ಆದರೆ ಸಿನಿಮಾ ಸಂಗೀತಕ್ಕೆ ಪ್ರಾದೇಶಿಕ ಭಾಷೆ ಆತ್ಮ. ಅದನ್ನು ಕಾಪಾಡಬೇಕು.
ಅಂಥಾ ಮಹನೀಯರನ್ನು ಕಳ್ಕೊಂಡಿದ್ದೀವಿ. ಅವರ ಅಂತಿಮ ದರ್ಶನವೂ ಸಾಧ್ಯವಾಗುತ್ತಿಲ್ಲ. ಇದು ದುರಂತ.
- ಹಂಸಲೇಖ