ನಾನು ಪ್ರೇಮಪತ್ರ ಬರೆಯುತ್ತಿದ್ದಾಗ ನಾನು ಪದೇ ಪದೇ ಕೋಟ್ ಮಾಡುತ್ತಿದ್ದದ್ದು ಅವರ ಹಾಡಿನ ಸಾಲುಗಳನ್ನು. ಆಗ ಪ್ರೇಮಪತ್ರ ರಸ ತುಂಬಿಕೊಳ್ಳುತ್ತಿತ್ತು. ನಮ್ಮ ಪ್ರೀತಿಗೆ, ನೋವಿಗೆ, ದುಃಖಕ್ಕೆ, ಸಿಟ್ಟಿಗೆ, ಸಂಕಟಕ್ಕೆ ಒದಗಿಬರುತ್ತಿದ್ದ ಹಾಡುಗಳವು.
ನಾನು ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ತೆಲುಗಿನಲ್ಲಿ ‘ಅನ್ನಯ್ಯ’ ಅಂತ ಕರೀತಿದ್ದೆ. ಅಂದರೆ ಕನ್ನಡದ ‘ಅಣ್ಣಯ್ಯ’ ಅಂತ ಅರ್ಥ. ನಾನು ‘ಎಂದೂ ಮರೆಯದ ಹಾಡು’ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗ ಎಸ್‌ಪಿಬಿ ಅದರಲ್ಲಿ ಹಾಡುತ್ತಿದ್ದರು. ಒಮ್ಮೆ ನನ್ನ ಹತ್ತಿರ ಬಂದು ಸೊಂಟ ಮುಟ್ಟಿನೋಡಿ, ‘ರಿವಾಲ್ವರ್ ಇಟ್ಟುಕೊಂಡಿದ್ದೀಯಾ?’ ಅಂತ ಪ್ರಶ್ನಿಸಿದ್ರು. ಅಂದರೆ, ನಿನ್ನ ಬಗ್ಗೆ ನೀನು ಕಾಳಜಿ ತೆಗೆದುಕೊಳ್ತಿದ್ದೀಯಾ ಎಂಬರ್ಥದಲ್ಲಿ, ನನ್ನ ಬಗ್ಗೆ ಅಂಥಾ ಅಕ್ಕರೆ ಅವರದು.
ನಾನು ಪ್ರೇಮಪತ್ರ ಬರೆಯುತ್ತಿದ್ದಾಗ ನಾನು ಪದೇ ಪದೇ ಕೋಟ್ ಮಾಡುತ್ತಿದ್ದದ್ದು ಅವರ ಹಾಡಿನ ಸಾಲುಗಳನ್ನು. ಆಗ ಪ್ರೇಮಪತ್ರ ರಸ ತುಂಬಿಕೊಳ್ಳುತ್ತಿತ್ತು. ನಮ್ಮ ಪ್ರೀತಿಗೆ, ನೋವಿಗೆ, ದುಃಖಕ್ಕೆ, ಸಿಟ್ಟಿಗೆ, ಸಂಕಟಕ್ಕೆ ಒದಗಿಬರುತ್ತಿದ್ದ ಹಾಡುಗಳವು. ತೆಲುಗಿನಲ್ಲಿ ಅವರು ಹಾಡಿದ ‘ಮೆರಿಪುಲ ಮೆರಿಚಾವೂ.. ’ ಹಾಡನ್ನೇ ತೆಗೆದುಕೊಂಡರೆ, ‘ನೀನು ಮಿಂಚಿನಂತೆ ಹೊಳೆದೆ.... ಕಣ್ತೆರೆದು ನೋಡುವಷ್ಟರಲ್ಲಿ ನಿನ್ನೆಗಳಲ್ಲಿ ಸೇರಿಹೋದೆ’ ಎಂಬರ್ಥದ ಅದ್ಭುತ ಸಾಲುಗಳವು.
ಬೆಂಗಳೂರು ಎಂದರೆ ಎಸ್‌ಪಿಬಿಗೆ ಅಚ್ಚುಮೆಚ್ಚು
ಒಮ್ಮೆ ಮೈಸೂರಿನಲ್ಲಿ ಎಸ್‌ಪಿಬಿ ಹಾಡುಗಳ ಕಾರ್ಯಕ್ರಮ ಇತ್ತು. ಸಚಿವ ರಾಮದಾಸ್ ಅವರೂ ಅಲ್ಲಿದ್ದರು. ನಾನು ಅವರ ಬಳಿ ಹೋಗಿ ಹೇಳಿದೆ- ‘ನಾಚ್ಕೆ ಆಗಲ್ವಾ ನಿಮ್‌ಗೆ, ಅಷ್ಟುದೊಡ್ಡ ಗಾಯಕ ಎಸ್‌ಪಿಬಿ ಅವರಿಗೊಂದು ಸೈಟ್ ಕೊಡಿಸೋದಕ್ಕಾಗಲ್ವಾ?.’ ಇದಾಗಿ ಒಂದು ತಿಂಗಳಿಗೆಲ್ಲ ಅವರಿಗೆ ನಿವೇಶನ ಮಂಜೂರಾಯ್ತು. ಸ್ವತಃ ರಾಮದಾಸ್ ಅವರೇ ನನಗೆ ಈ ವಿಚಾರ ತಿಳಿಸಿದ್ರು.
ಮುಂದೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ನನಗೂ ಪ್ರಶಸ್ತಿ ಬಂದಿತ್ತು. ನಾನು ಹೋದಾಗ ಎಸ್‌ಪಿಬಿ ಹಿಂದಿನ ಸಾಲಿನಲ್ಲಿ ಕೂತಿದ್ದರು. ನಾನು ಅವರ ಕೈ ಹಿಡಿದುಕೊಂಡು ಹೋಗಿ ಮುಂದಿನ ಸಾಲಿನಲ್ಲಿ ಕೂರಿಸಿದೆ. ಪ್ರಶಸ್ತಿ ತಗೊಂಡು ಬಂದ ಮೇಲೂ ಬಹಳ ವಿನಯದಿಂದ ಮಾತನಾಡಿದರು.
ಅವರೊಬ್ಬ ವಿವಾದಾತೀತ ವ್ಯಕ್ತಿ. ವೆರಿ ಕ್ಲೀನ್. ಹೆಣ್ಮಕ್ಕಳನ್ನು ಬಹಳ ಗೌರವಿಸುತ್ತಿದ್ದರು. ಅವರಿಗೆ ಬಡತನ ಗೊತ್ತಿತ್ತು. ಮಾನವೀಯತೆ ಯಾವತ್ತೂ ಇರುತ್ತಿತ್ತು. ಇಳಯರಾಜ ಬಗ್ಗೆ ಎಷ್ಟುಪ್ರೀತಿ ಅಂದರೆ ಅವರು ಬೆಳಗ್ಗೆ ಒಂದು ಹೊತ್ತಿಗೆ ಹೊರಗೆ ಬಂದು ನಿಲ್ಲುತ್ತಿದ್ದರು, ಸ್ವಲ್ಪ ಹೊತ್ತಿಗೇ ಇಳಯರಾಜ ಕಾರು ಆ ಹಾದಿಯಾಗಿ ಹೋಗುತ್ತಿತ್ತು.
ಮೊನ್ನೆ ಮೊನ್ನೆ ಅವರು ಆಸ್ಪತ್ರೆಯ ಬೆಡ್ ಮೇಲೆ ಲೋಕದ ಅರಿವಿಲ್ಲದೇ ಮಲಗಿದ್ದಾಗ ಇಳಯರಾಜ ಜೋರಾಗಿ ಕರೀತಿದ್ರು, ‘ಎದ್ ಬಾರೋ, ಅದೆಷ್ಟುಹೊತ್ತು ಮಲಗುತ್ತೀಯಾ?.’ ಇಳಯ ರಾಜ ಅಂದರೆ ಸಂಗೀತದ ಗಂಧರ್ವ, ಅವರ ಸರಿಸಮಕ್ಕೆ ಹಾಡಬಲ್ಲ ಮತ್ತೊಬ್ಬ ಗಂಧರ್ವ ಎಸ್‌ಪಿಬಿ.
ಕನ್ನಡದಲ್ಲಿ ಕಲ್ಪನಾ ಅಭಿನಯದ ‘ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ..’ ಎಂಬ ಕನ್ನಡ ಹಾಡಿದೆ. ಅದನ್ನು ತೆಲುಗಿನಲ್ಲಿ ಎಸ್‌ಪಿ ಹಾಡಿದರು. ಅದೆಷ್ಟುಅದ್ಭುತ ಗಾಯನ ಅಂದರೆ ನನ್ನಂಥವರ ತಲೆಯಲ್ಲಿ ಆ ಹಾಡೇ ಪರ್ಮನೆಂಟಾಗಿ ನಿಂತುಬಿಟ್ಟಿತು.
ಅವರು ರಫಿಯ ದೊಡ್ಡ ಅಭಿಮಾನಿ. ರಫಿಯ ಗುಂಗು ಅವರನ್ನು ಆವರಿಸಿತ್ತು.
ಈ ಕೋವಿಡ್ ಕರುಣೆ ಇಲ್ಲದ್ದು. ಒಬ್ಬ ವ್ಯಕ್ತಿ ವೆಂಟಿಲೇಟರ್‌ಗೆ ಹೋದ ಅಂದರೆ ಸಾವಿನ ಸೂಚನೆ. ಆದರೆ ಅವರು ಅದರ ಮುಂದಿನ ಹಂತ ಎಕ್ಮೋಗೆ ಹೋಗಿಯೂ ಬದುಕಿ ಬಂದ್ರು. ಒಂದು ಹಂತದಲ್ಲಿ ಬೋನ್ ಮ್ಯಾರೋ ಮಾಡಿದ್ರು. ಆಗ ರಕ್ತ ಬರಬಾರದು. ಅಸ್ತಿಮಜ್ಜೆ ಮಾತ್ರ ತೆಗೀಬೇಕು. ಇವ್ರಿಗೆ ರಕ್ತ ಬಂದಿತ್ತು. ಹಾಗಾದ್ರೆ ಆಸೆ ತೀರಿದ ಹಾಗೆ. ನನಗಿದು ಹೇಗೆ ಗೊತ್ತು ಅಂದರೆ ನನ್ನ ಅಮ್ಮನೂ ಹೀಗೇ ತೀರ್ಕೊಂಡಿದ್ರು.
- ರವಿ ಬೆಳಗೆರೆ