ಯುದ್ಧದ ಹಿನ್ನೆಲೆಯಲ್ಲಿ ನಡೆಯುವ ಭಾವಸ್ಪರ್ಶಿ ಚಿತ್ರ 'ಸಿಗ್ನಲ್‌ ಮ್ಯಾನ್‌ 1971': ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರದರ್ಶನ

By Kannadaprabha News  |  First Published Mar 26, 2023, 6:21 AM IST

ಪ್ರಕಾಶ್‌ ಬೆಳವಾಡಿ, ವೆಂಕಟೇಶ್‌ ಪ್ರಸಾದ್‌, ರಾಜೇಶ್‌ ನಟರಂಗ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ‘ಸಿಗ್ನಲ್‌ಮ್ಯಾನ್‌-1971’ ಚಿತ್ರ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಏಷಿಯನ್‌ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಸ್ಪರ್ಧಿಸಿರುವ ಈ ಚಿತ್ರದ ಕುರಿತ ಒಳನೋಟಗಳು ಇಲ್ಲಿವೆ.


ಖ್ಯಾತ ನಿರ್ದೇಶಕ ಶಿವರುದ್ರಯ್ಯ ಅವರ ಸಾರಥ್ಯದಲ್ಲಿ ಮೂಡಿ ಬಂದಿರುವ ‘ಸಿಗ್ನಲ್‌ಮ್ಯಾನ್‌-1971’ ಚಿತ್ರದ್ದು ವಿಶೇಷ, ವಿಭಿನ್ನ ಮತ್ತು ರೋಚಕ ಕತೆ. ಯುದ್ಧ, ಭಾವನಾತ್ಮಕ ನೆನಪುಗಳು, ಮಾನವೀಯತೆ, ಭೂತ ಮತ್ತು ವರ್ತಮಾನದ ಕಾಲಗಳು... ಹೀಗೆ ಹಲವು ತಿರುವುಗಳಲ್ಲಿ ಸಂಚರಿಸಿ ನೋಡುಗನ ಮನಸ್ಸಿಗೆ ಆಪ್ತವಾಗಿ ನಾಟುವ ಪಕ್ಕಾ ದೇಸಿ ಕಥಾ ದೃಶ್ಯ. ಹಿಂದೂಸ್ಥಾನ್‌ ಮುಕ್ತ ಮೀಡಿಯ ಎಂಟರ್‌ಟೇನರ್ಸ್‌ ಸಂಸ್ಥೆ ಮೂಲಕ ಉದ್ಯಮಿ ಗಣೇಶ್‌ ಪ್ರಭು ನಿರ್ಮಿಸಿರುವ ಈ ಚಿತ್ರದಲ್ಲಿ ಪ್ರಬುದ್ಧ ನಟ ಪ್ರಕಾಶ್‌ ಬೆಳವಾಡಿ, ರಂಗಭೂಮಿಯ ವೆಂಕಟೇಶ್‌ ಪ್ರಸಾದ್‌, ಪ್ರತಿಭಾವಂತ ಕಲಾವಿದ ರಾಜೇಶ್‌ ನಟರಂಗ ಮುಂತಾದವರ ಬಹು ದೊಡ್ಡ ತಾರಾಗಣ ಇದೆ. 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಏಷ್ಯನ್‌ ಚಿತ್ರಗಳ ಸ್ಪರ್ಧಾ ವಿಭಾಗಕ್ಕೆ ಆಯ್ಕೆ ಆಗಿರುವ ‘ಸಿಗ್ನಲ್‌ಮ್ಯಾನ್‌-1971’ ಚಿತ್ರಕ್ಕೆ ಪ್ರೇರಣೆ ಆಂಗ್ಲ ಲೇಖಕ ಚಾರ್ಲ್ಸ್ ಡಿಕನ್ಸ್‌ ಬರೆದಿರುವ ‘ಸಿಗ್ನಲ್‌ ಮ್ಯಾನ್‌’ ಕತೆ. ಅಂದರೆ ಈ ಕತೆಯನ್ನು ಸ್ಫೂರ್ತಿಯಾಗಿಟ್ಟುಕೊಂಡ ‘ಸಿಗ್ನಲ್‌ಮ್ಯಾನ್‌-1971’ ಚಿತ್ರವನ್ನು ಕನ್ನಡದ ನೆಲಕ್ಕೆ ತಕ್ಕಂತೆ ರೂಪಿಸಿರುವುದು ವಿಶೇಷ. ಅಂದಹಾಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾರ್ಚ್‌ 26 ಹಾಗೂ 29ರಂದು ಈ ಚಿತ್ರ ಪ್ರದರ್ಶನವಾಗಲಿದೆ.

ಚಿತ್ರದ ಕತೆ ಏನು?: ಅದು ಡಿಸೆಂಬರ್‌ 1971. ಭಾರತ ಪೂರ್ವ ಪಶ್ಚಿಮ ಗಡಿಯುದ್ದಕ್ಕೂ ಭಾರತ ಮತ್ತು ಪಾಕಿಸ್ತಾನ ಯುದ್ಧದ ಭೀಕರ ಛಾಯೆ ಆವರಿಸಿಕೊಂಡಿರುತ್ತದೆ. ಅಮೆರಿಕದ ಅಧ್ಯಕ್ಷ ನಿಕ್ಸನ್‌ ಆದೇಶದ ಮೇರೆಗೆ ಬಂಗಾಳ ಕೊಲ್ಲಿಯಲ್ಲಿ ಅಮೇರಿಕ ನೌಕಾಪಡೆ ಲಂಗರು ಹಾಕಿ ಭಾರತದ ಮೇಲೆ ಯಾವುದೇ ಕ್ಷಣದಲ್ಲಿ ಬೇಕಾದರೂ ಯುದ್ಧ ಮಾಡುವ ಸನ್ನಾಹದಲ್ಲಿರುತ್ತದೆ. ಇದೇ ಸಮಯದಲ್ಲಿ ಯುವ ಛಾಯಾಗ್ರಾಹಕ ರಾಜಶೇಖರ್‌ ಪ್ರಾಕೃತಿಕ ಸೌಂದರ್ಯವನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಪಶ್ಚಿಮಘಟ್ಟದ ನಿರ್ಜನ ಪ್ರದೇಶಗಳಲ್ಲಿ ಅಲೆಯುತ್ತಿದ್ದಾಗ ರೈಲ್ವೇ ಸಿಗ್ನಲ್‌ಮ್ಯಾನ್‌ ಆಗಿ ಕೆಲಸ ಮಾಡುತ್ತಿರುವ ಬಾಲು ಎಂಬುವವರ ಪರಿಚಯ ಆಗುತ್ತದೆ. ಬಾಲುವಿನ ತಳಮಳ, ಒಂಟಿತನ, ಭೂತಕಾಲದ ನೆನಪುಗಳು ಯುದ್ಧದ ವಾತಾವರಣದ ಹಿನ್ನೆಲೆಯಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತವೆ. ಸೈನಿಕರನ್ನು ಹೊತ್ತು ಸಾಗಬೇಕಾದ ರೈಲುಗಳ ಕತೆಯೂ ಅನಾವರಣಗೊಳ್ಳುತ್ತದೆ. ರೈಲ್ವೇ ಸಿಗ್ನಲ್‌ಮ್ಯಾನ್‌ ಬಾಲು ಹಾಗೂ ಛಾಯಾಗ್ರಾಹ ರಾಜಶೇಖರ್‌ ಭೇಟಿಯ ನಂತರ ಏನಾಗುತ್ತದೆ ಎಂಬುದು ಚಿತ್ರದ ಕತೆ.

Tap to resize

Latest Videos

undefined

ಮೋಹಕ ತಾರೆ ರಮ್ಯಾಗೆ ಪ್ರಾಣ ಕಂಟಕ ಎದುರಾಗಿತ್ತಾ? ಏನದು ಘಟನೆ?

ಕಥೆಯನ್ನು ನಮ್ಮ ನೆಲಕ್ಕೆ ಒಗ್ಗಿಸಿದ ಪ್ರಕಾಶ್‌ ಬೆಳವಾಡಿ: 1866ರಲ್ಲಿ ಲೇಖಕ ಚಾರ್ಲ್ಸ್‌ ಡಿಕನ್ಸ್‌ ಬರೆದಿರುವ ಕತೆಯೊಂದು ಈಗ ಭಾರತ ನೆಲಕ್ಕೆ ಹೇಗೆ ಒಗ್ಗುತ್ತದೆ ಎನ್ನುವ ಸವಾಲಿನೊಂದಿಗೆ ನಿರ್ದೇಶಕ ಕೆ ಶಿವರುದ್ರಯ್ಯ ಅವರು ಪ್ರಕಾಶ್‌ ಬೆಳವಾಡಿ ಅವರನ್ನು ಭೇಟಿ ಮಾಡುತ್ತಾರೆ. ಇವರ ಭೇಟಿಯಲ್ಲಿ ಇಂಗ್ಲಿಷ್‌ ಕತೆಯನ್ನು ಕನ್ನಡ ನೆಲಕ್ಕೆ ಒಗ್ಗಿಸುವ ಕೆಲಸಕ್ಕೆ ಪ್ರಕಾಶ್‌ ಬೆಳವಾಡಿ ಒಪ್ಪುತ್ತಾರೆ. ಈ ಬಗ್ಗೆ ನಿರ್ದೇಶಕ ಕೆ ಶಿವರುದ್ರಯ್ಯ ಅವರು ಹೇಳುವುದು ಹೀಗೆ- ‘ಈ ಕತೆಯನ್ನು ಭಾರತ ದೇಶಕ್ಕೆ ತಕ್ಕ ಹಾಗೆ ಪ್ರಕಾಶ್‌ ಬೆಳವಾಡಿ ಅವರು ಹೆಣೆದು ಕೊಟ್ಟರು. 1971ರ ಕಾಲಘಟ್ಟದಲ್ಲಿ ನಡೆಯುವ ಕತೆ. ಅಂದರೆ ಆಗಷ್ಟೇ ಭಾರತ ಮತ್ತು ಪಾಕಿಸ್ತಾನ ಯುದ್ಧದ ಭೀತಿ ದೇಶದೆಲ್ಲೆಡೆ ಇರುತ್ತದೆ. ಅಂಥ ಸಮಯದಲ್ಲಿ ನಡೆಯುವ ಕತೆಯೇ ‘ಸಿಗ್ನಲ್‌ಮ್ಯಾನ್‌- 1971’. ಅದು ಪಶ್ಚಿಮ ಘಟ್ಟದ ರೈಲ್ವೆ ನಿಲ್ದಾಣ. ಆದರೆ ಅಲ್ಲಿ ರೈಲುಗಳು ನಿಲ್ಲುವುದಿಲ್ಲ. ಆ ನಿಲ್ದಾಣದಲ್ಲಿ ಬಾಲು ಎಂಬ ಸಿಗ್ನಲ್‌ಮ್ಯಾನ್‌ ಇರುತ್ತಾನೆ. ಅಂತಹ ಸುಂದರ ಪರಿಸರದಲ್ಲಿರುವ ನಿಲ್ದಾಣಕ್ಕೆ ಅನಿರೀಕ್ಷಿತವಾಗಿ ಫೋಟೋಗ್ರಾಫರ್‌ ರಾಜಶೇಖರ್‌ ಬರುತ್ತಾರೆ. ಬಾಲುವಿನ ಒಂಟಿತನ, ತಳಮಳ, ಹಿಂದಿನ ನೆನಪುಗಳು, ಯುದ್ಧದ ಭೀತಿ, ಸೈನಿಕರನ್ನು ಹೊತ್ತೊಯ್ಯುವ ರೈಲುಗಳು. ಇವೆಲ್ಲವೂ ಐದು ದಿನಗಳಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಉತ್ತಮ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ನಮ್ಮ ಚಿತ್ರ ಅದ್ದೂರಿಯಾಗಿ ಬಂದಿದೆ. ಇದು ನನ್ನ ಹನ್ನೊಂದನೇ ನಿರ್ದೇಶನದ ಚಿತ್ರ’.

ನಟನೆ ಜತೆಗೆ ಬರವಣಿಗೆ ಮಾಡಿದೆ: ಈ ಚಿತ್ರದ ತೆರೆ ಮೇಲಿನ ಕೇಂದ್ರಬಿಂದು ನಟ ಪ್ರಕಾಶ್‌ ಬೆಳವಾಡಿ. ನಟನೆಗೆ ಜತೆಗೆ ಈ ಚಿತ್ರಕ್ಕೆ ಕತೆ ಬರೆದಿರುವುದು ಕೂಡ ಅವರೇ. ತೆರೆ ಹಿಂದೆ ಹಾಗೂ ತೆರೆ ಮೇಲೆ ಎರಡೂ ಪಾತ್ರಗಳನ್ನು ಮಾಡಿರುವ ಪ್ರಕಾಶ್‌ ಬೆಳವಾಡಿ ಹೇಳುವ ಮಾತುಗಳು ಇವು- ‘ನನಗೆ ಶಿವರುದ್ರಯ್ಯ ಅವರು ಈ ಕಾನ್ಸೆಪ್‌್ಟಬಗ್ಗೆ ಹೇಳಿ, ನೀವು ಅಭಿನಯಿಸಬೇಕು ಎಂದರು. ಆ ನಂತರ ನೀವೇ ಕತೆ ಕೂಡ ಬರೆಯಿರಿ ಎಂದು ಹೇಳಿದರು. ನಾನು ಈ ಕತೆಯನ್ನು ಭಾರತದ ಸೊಗಡಿಗೆ ತಕ್ಕ ಹಾಗೆ ಬರೆದಿದ್ದೇನೆ. ಊಟಿಯ ಬಳಿ ಹೆಚ್ಚು ಚಿತ್ರೀಕರಣ ನಡೆದಿದೆ. ಕೊಟ್ಟಿಗೆಹಾರ, ಚಿಕ್ಕಮಗಳೂರು, ಬೆಂಗಳೂರಿನಲ್ಲೂ ಚಿತ್ರೀಕರಣವಾಗಿದೆ. ಈ ಚಿತ್ರಕ್ಕಾಗಿ ಅದ್ದೂರಿ ಸೆಟ್‌ ನಿರ್ಮಿಸಲಾಗಿತ್ತು. ರೈಲು ಈ ಚಿತ್ರದ ಒಂದು ಭಾಗವಾಗಿತ್ತು. ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಸೊಗಸಾಗಿತ್ತು. ಇಂಗ್ಲಿಷ್‌ ಕತೆಯಿಂದ ಸ್ಫೂರ್ತಿಗೊಂಡು ಕನ್ನಡದ ಕತೆ ಬರೆಯುವುದು ಸವಾಲಾಗಿತ್ತು. ಅದನ್ನು ಇಲ್ಲಿ ಪರಿಪೂರ್ಣವಾಗಿ ನಿಭಾಯಿಸಿದ್ದೇನೆ ಅನಿಸಿದೆ’.

ಯುವ ಉದ್ಯಮಿಯ ಕನಸು: ಕನ್ನಡದಲ್ಲಿ ಸದಭಿರುಚಿಯ ಸಿನಿಮಾಗಳನ್ನು ನಿರ್ಮಿಸಬೇಕೆಂದು ಕನಸು ಹೊತ್ತ ಗಣೇಶ್‌ ಪ್ರಭು ಅವರ ಮೊದಲ ಹೆಜ್ಜೆ ಈ ‘ಸಿಗ್ನಲ್‌ಮ್ಯಾನ್‌-1971’ ಚಿತ್ರ. ಹಿಂದೂಸ್ಥಾನ್‌ ಮುಕ್ತ ಮೀಡಿಯ ಎಂಟರ್‌ಟೇನರ್ಸ್‌ ಸಂಸ್ಥೆ ಮೂಲಕ ಉದ್ಯಮಿ ಗಣೇಶ್‌ ಪ್ರಭು ನಿರ್ಮಾಪಕರಾಗಿ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ‘ನಾನು ಉದ್ಯಮಿ. ಸಿನಿಮಾ, ಕಲೆ ಹಾಗೂ ಶಿಕ್ಷಣ ಇವು ನನ್ನ ಇಷ್ಟದ ಕ್ಷೇತ್ರಗಳು. ಹೀಗಾಗಿಯೇ ನಾನು ಉದ್ಯಮದ ಜತೆಗೆ ಚಿತ್ರರಂಗಕ್ಕೂ ಬಂದಿದ್ದೇನೆ. ಉದ್ಯೋಗ ಸೃಷ್ಟಿಯ ಜತೆಗೆ ಸಿನಿಮಾಗಳನ್ನು ನಿರ್ಮಿಸಬೇಕು ಎಂಬುದು ನನ್ನ ಗುರಿ. ಈ ನಿಟ್ಟಿನಲ್ಲಿ ಹುಟ್ಟಿಕೊಂಡಿದ್ದೇ ‘ಸಿಗ್ನಲ್‌ಮ್ಯಾನ್‌ -1971’ ಸಿನಿಮಾ. ಈ ಚಿತ್ರದ ಕತೆ ನನಗೆ ತುಂಬಾ ಇಷ್ಟವಾಯಿತು. ಈ ಕಾರಣಕ್ಕೆ ಇದೇ ನನ್ನ ಮೊದಲ ನಿರ್ಮಾಣದ ಚಿತ್ರವಾಗಲಿ ಎಂದುಕೊಂಡು ನಿರ್ಮಿಸಿದ್ದೇನೆ. ಇದನ್ನು ಈಗ ಚಿತ್ರೋತ್ಸವದಲ್ಲಿ ಪ್ರದರ್ಶಿಸುತ್ತಿದ್ದೇವೆ. ಮುಂದೆ ಚಿತ್ರಮಂದಿರಗಳಲ್ಲೂ ಈ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗುತ್ತದೆ ಎಂಬುದು ನನ್ನ ನಂಬಿಕೆ’ ಎಂದು ತಮ್ಮ ಚಿತ್ರದ ಕುರಿತು ಹೇಳಿಕೊಳ್ಳುತ್ತಾರೆ ಗಣೇಶ್‌ ಪ್ರಭು.

ಸೈಫ್​ ಅಲಿಯನ್ನೇ ಮದ್ವೆಯಾಗಿದ್ದೇಕೆ? ಗುಟ್ಟು ರಟ್ಟು ಮಾಡಿದ ಕರೀನಾ ಕಪೂರ್

ಅದ್ಭುತ ತಾಂತ್ರಿಕ ತಂಡ: ದೊಡ್ಡ ಸ್ಟಾರ್‌ ನಟರ ಕಮರ್ಷಿಯಲ್‌ ಚಿತ್ರಗಳಿಗೆ ಛಾಯಾಗ್ರಾಹಣ ಮಾಡುವ ಶೇಖರ್‌ ಚಂದ್ರು ಅವರೇ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಈಗಾಗಲೇ 700ಕ್ಕೂ ಹೆಚ್ಚು ಚಿತ್ರಗಳಿಕೆ ಎಡಿಟರ್‌ ಆಗಿ ಕೆಲಸ ಮಾಡಿರುವ ಸುರೇಶ್‌ ಅರಸ್‌ ಸಂಕಲನ ಮಾಡಿದ್ದಾರೆ. ಪ್ರಖ್ಯಾತ ಗಾಯಕ, ವಯೋಲಿನ್‌ ವಾದಕ ಆಗಿರುವ, ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಮೇಚೇರಿ ಲೂಯಿ ಔಸಿಪಚ್ಚನ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈಗಾಗಲೇ 120ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಹೆಗ್ಗಳಿಕೆ ಇವರದ್ದು. ರಾಮಕೃಷ್ಣ ಮೇಕಪ್‌ ಮಾಡಿದ್ದಾರೆ. ಹೀಗೆ ನೈಪುಣ್ಯತೆಯಿಂದ ಕೂಡಿದ ಪರಿಣಿತ ತಂತ್ರಜ್ಞರ ದೊಡ್ಡ ತಂಡವೇ ಈ ಚಿತ್ರಕ್ಕೆ ಕೆಲಸ ಮಾಡಿದೆ. ಹೀಗಾಗಿ ಸಿನಿಮಾ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಎಂಬುದು ಚಿತ್ರತಂಡದ ನಂಬಿಕೆ. ಡಿಂಪಿ ಫಾದ್ಯಾ, ಮಾಲತೇಶ್‌ ಹೆಚ್‌ ವಿ, ಗೌರಿ ಪ್ರಭು, ಗಣೇಶ್‌ ಪ್ರಭು ಬಿ ವಿ, ಶಿವರುದ್ರಯ್ಯ ಕೆ, ಚಿಕ್ಕರಂಗಸ್ವಾಮಿ ಮುಂತಾದವರು ಚಿತ್ರದ ಇತರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

click me!