ಹಿರಿಯ ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ಅಲ್ಪ ಕಾಲದ ಅಸೌಖ್ಯದಿಂದ ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಬೆಂಗಳೂರು (ಡಿ.16): ಹಿರಿಯ ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ಅಲ್ಪ ಕಾಲದ ಅಸೌಖ್ಯದಿಂದ ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಸಂಗೀತ ಹಿನ್ನೆಲೆಯ ಕುಟುಂಬದಿಂದ ಬಂದಿದ್ದ ಪ್ರಭಾಕರ್ ಅವರ ತಂದೆ ಪಂಡಿತ್ ಬಿ.ಎನ್.ಪಾರ್ಥಸಾರಥಿ ನಾಯ್ಡು ಸಂಗೀತ ವಿದ್ವಾಂಸ. 70ರ ದಶಕದಲ್ಲಿ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ಮನೋರಂಜನ್, 800ಕ್ಕೂ ಹೆಚ್ಚು ಸಂಗೀತ ಆಲ್ಬಂ ಹೊರ ತಂದಿದ್ದರು.
‘ಚಮತ್ಕಾರ’, ‘ನ್ಯಾಯಕ್ಕಾಗಿ ಸವಾಲ್’, ‘ಜನ ಮೆಚ್ಚಿದ ಮಗ’, ‘ಗಿಳಿಬೇಟೆ’, ‘ನನಗೂ ಹೆಂಡ್ತಿ ಬೇಕು’, ‘ಅಶೋಕ ಚಕ್ರ’, ‘ನೀನೆ ನನ್ನ ಜೀವ’ ಮೊದಲಾದ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. ‘ತರ್ಲೆ ನನ್ಮಗ’, ‘ಸೀತಾ ಆಂಜನೇಯ’ ಮೊದಲಾದ ಚಿತ್ರಗಳಲ್ಲಿ, ‘ಕಂಡಕ್ಟರ್ ಕರಿಯಪ್ಪ’ ಧಾರಾವಾಹಿಯಲ್ಲಿ ನಟಿಸಿದ್ದರು. ಹಿನ್ನೆಲೆ ಗಾಯಕರಾಗಿಯೂ ಗುರುತಿಸಿಕೊಂಡಿದ್ದರು. ಮನೋರಂಜನ್ ಹೆಸರಿನ ತಂಡ ಕಟ್ಟಿಕೊಂಡು ಅನೇಕ ಕಾರ್ಯಕ್ರಮ ನೀಡಿದ್ದರು. ಕಾರ್ತಿಕ ದೀಪ ಸೇರಿದಂತೆ ಕೆಲವು ಧಾರಾವಾಹಿಗಳ ಶೀರ್ಷಿಕೆ ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದರು.
undefined
ಟಾಲಿವುಡ್ ನಟ ಮಹೇಶ್ ಬಾಬು ತಾಯಿ ಇಂದಿರಾ ದೇವಿ ನಿಧನ
90ರ ದಶಕದಲ್ಲಿ ಆದರ್ಶ ಫಿಲಂ ಇನ್ಸ್‌ಟಿಟ್ಯೂಟ್‌ನಲ್ಲಿ ಶಿಕ್ಷಕರಾಗಿದ್ದರು. 2003ರಲ್ಲಿ ಶ್ರುತಿಲಯ ಇನ್ಸ್‌ಟಿಟ್ಯೂಟ್ ಆಫ್ ಮ್ಯೂಸಿಕ್ ಮೂಲಕ ಆಸಕ್ತರಿಗೆ ಸಂಗೀತ ತರಬೇತಿ ನೀಡುತ್ತಿದ್ದರು. ಭಕ್ತಿ, ಜಾನಪದ, ದೇಶಭಕ್ತಿ ಗೀತೆಗಳಿಗೂ ಸಂಗೀತ ಸಂಯೋಜಿಸಿದ್ದರು. ತೆಲುಗು ಸಿನಿಮಾ ರಂಗದಲ್ಲಿ ಪ್ರಭಾಕರ ನಾಯ್ಡು ಎಂದು ಗುರುತಿಸಿಕೊಂಡಿದ್ದರು. ಲಹರಿ ರೆಕಾರ್ಡಿಂಗ್, ಟಿ ಸೀರೀಸ್, ಸರೆಗಮ ಮೊದಲಾದ ರೆಕಾರ್ಡಿಂಗ್ ಕಂಪನಿಗಳಲ್ಲೂ ಕೆಲಸ ಮಾಡಿದ್ದರು. ಮನೋರಂಜನ್ ಪ್ರಭಾಕರ್ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.