‘ಗುಲ್ಟು’ ಸಿನಿಮಾ ಬಳಿಕ ಗುಲ್ಟುನವೀನ್ ಎಂದೇ ಕರೆಸಿಕೊಳ್ಳುತ್ತಿರುವ ನವೀನ್ ಶಂಕರ್ ಇದೀಗ ‘ಮೂಲತಃ ನಮ್ಮವರೇ’ ಅನ್ನುವ ಸಿನಿಮಾಕ್ಕೆ ಹೀರೋ. ಹೊಯ್ಸಳ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಲ್ಕೈದು ಚಿತ್ರ ಕೈಯಲ್ಲಿದೆ. ಸಿನಿಮಾ, ಆಯ್ಕೆ, ಆದ್ಯತೆಗಳ ಬಗ್ಗೆ ಈ ಪ್ರಯೋಗಶೀಲ ನಟನ ಮಾತು.
ಪ್ರಿಯಾ ಕೆರ್ವಾಶೆ
ಗುಲ್ಟುಸಿನಿಮಾ ಬಳಿಕ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಈಗ ಮತ್ತೆ ಬ್ಯುಸಿ ಆದಂಗಿದೆ?
undefined
ಹೌದು. ಗುಲ್ಟುಮೊದಲ ಚಿತ್ರ ಬಿಡುಗಡೆಯಾಗಿ ವರ್ಷಗಳ ಬಳಿಕ ಎರಡನೇ ಚಿತ್ರ ‘ಧರಣಿ ಮಂಡಲ ಮಧ್ಯದೊಳಗೆ’ ಕಳೆದ ವಾರ ಬಿಡುಗಡೆಯಾಯ್ತು. ಕಾರಣ ನಾನೊಂದು ಪೊಲಿಟಿಕಲ್ ಥ್ರಿಲ್ಲರ್ ಕಥೆಯ ಸಿನಿಮಾ ಒಪ್ಕೊಂಡಿದ್ದೆ. ಅದಕ್ಕಾಗಿ 80 ಕೆಜಿ ತೂಕ ಏರಿಸಿಕೊಂಡಿದ್ದೆ. ಉದ್ದ ಕೂದಲು ಬೆಳೆಸಿದ್ದೆ. ಬಾಡಿ ಟಾನ್ಸ್‌ಫರ್ಮೇಶನ್ ಮಾಡಿದ್ದ ಕಾರಣ ಆ ಸಮಯದಲ್ಲಿ ಬೇರೆ ಚಿತ್ರಗಳಲ್ಲಿ ನಟಿಸೋದಕ್ಕಾಗಿಲ್ಲ. ದುರಾದೃಷ್ಟವಶಾತ್ ಆ ಚಿತ್ರ ಟೇಕಾಫ್ ಆಗಿಲ್ಲ. ಆ ನಂತರ ನಾಲ್ಕೈದು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ.
ಈಗ ಕಥೆ ಹೇಳೋಕೆ ಬರುವವರು ನಿಮ್ಮಿಂದ ಏನು ನಿರೀಕ್ಷಿಸುತ್ತಾರೆ?
ಅವರಿಗೆ ಭುಜದ ಮೇಲೆ ಕಥೆ, ಸಿನಿಮಾ ಹೊರೋರು ಬೇಕು. ದೊಡ್ಡ ಹೀರೋಗೆ ಕಥೆ ಹೇಳೋಕೆ ಹೊರಟವರು ಅವರ ಸಂಭಾವನೆ ಭರಿಸಲಾಗದೇ ನನ್ನ ಬಳಿ ಬಂದವರೂ ಇದ್ದಾರೆ. ಹೊಸ ತಂಡಗಳಲ್ಲಿ ಕೆಲಸ ಮಾಡೋದು ನನಗೆ ಖುಷಿ ಕೊಡುತ್ತೆ. ಒದ್ದಾಟದಲ್ಲಿರುತ್ತಾರೆ, ಹಸಿವಿರುತ್ತೆ. ತಪ್ಪಿದ್ರೂ, ಎಡವಿದ್ರೂ ಪ್ರಾಮಾಣಿಕತೆ ಇರುತ್ತೆ. ಅದು ನನಗಿಷ್ಟ.
ನೀವು ಯಾವ ಬಗೆಯ ಪಾತ್ರಗಳ ಬೇಟೆಯಲ್ಲಿದ್ದೀರಿ?
ಕಥೆ, ಪಾತ್ರಗಳಲ್ಲಿ ಹೊಸತನ ಇರಬೇಕು. ಒಂದು ಪರಿಪೂರ್ಣ ಪಾತ್ರಕ್ಕೆ ತುಡಿಯುತ್ತಿದ್ದೇನೆ. ಕನ್ವಿನ್ಸಿಂಗ್ ಗುಣ ಪಾತ್ರಕ್ಕಿರಬೇಕು, ಸ್ಪಷ್ಟತೆ ಬೇಕು. ಇಲ್ಲೀವರೆಗೆ ಮಾಡದ ಹೊಸತೇನೋ ಅಲ್ಲಿರಬೇಕು.
ಹೊಯ್ಸಳ ಚಿತ್ರದಲ್ಲಿ ವಿಲನ್ ಪಾತ್ರ. ಯಾಕೆ ಒಪ್ಕೊಂಡಿರಿ? ಪಾತ್ರ ಹೇಗಿದೆ?
ಧನಂಜಯ ನನ್ನ ಗೆಳೆಯ. ಆತ ಈ ಪಾತ್ರದ ಬಗ್ಗೆ ಹೇಳಿದಾಗ ಭಿನ್ನವಾಗಿದೆ ಅನಿಸಿತು. ನಿರ್ಮಾಪಕ ಕಾರ್ತಿಕ್, ಇದು ನೆಗೆಟಿವ್ ಪಾತ್ರವಾದರೂ ಇದಕ್ಕೆ ನಿಮ್ಮಂಥಾ ನಟ ಬೇಕು ಅಂದರು. ಅದೊಂದು ಕೋಲ್ಡ್, ಮೃಗ ಸದೃಶ, ಸ್ಪಂದನೆಗಳೇ ಇಲ್ಲದಂಥಾ ಪಾತ್ರ. ಅಂಥವನಲ್ಲಿ ಮಾರ್ಪಾಡಾಗುತ್ತಾ ಅನ್ನೋದು ಕಥೆ. ಈ ಪಾತ್ರಕ್ಕೊಂದು ಎಥಿಕ್ಸ್ ಇದೆ ಅನಿಸ್ತು. ಉಳಿದಂತೆ ಮುಂದೆ ನೆಗೆಟಿವ್ ಪಾತ್ರ ಒಪ್ಕೊಳ್ತೀನಾ ಅಂದ್ರೆ ಅಂಥಾ ಪಾತ್ರಗಳನ್ನೇ ಮಾಡಬೇಕು ಅನ್ನೋ ಹಪಿಹಪಿಯಂತೂ ಇಲ್ಲ. ಆದರೆ ನಾನಿಲ್ಲಿವರೆಗೆ ಮಾಡಿರುವ ಪಾತ್ರಕ್ಕಿಂತ ಉತ್ತಮವಾಗಿದೆ ಅನಿಸಿದರೆ ಮಾಡ್ತೀನಿ.
Dharani Mandala Madhyadolage Review ಧರಣಿ ಮಂಡಲದಲ್ಲಿ ಪಾಪ, ಪುಣ್ಯಕೋಟಿಯ ಸಂಗಮ
ಪರ್ಫಾರ್ಮರ್ಸ್ ಅನಿಸಿಕೊಂಡೋರು ಭಾಷೆಯ ಗಡಿ ಇಟ್ಟುಕೊಳ್ಳಲ್ಲ. ನಿಮಗೆ ಬೇರೆ ಭಾಷೆ ಸಿನಿಮಾಗಳಲ್ಲಿ ನಟಿಸೋ ಆಸಕ್ತಿ ಇದೆಯಾ?
ಮೊದಲು ನಾನು ಇಲ್ಲಿ ಸಿನಿಮಾ ಮಾಡ್ಬೇಕು. ಇಲ್ಲಿನ ನನ್ನ ಚಿತ್ರಗಳನ್ನು ಅಲ್ಲಿನವರಿಗೆ ತಲುಪಿಸಬೇಕು. ಹೀಗಾಗಿ ಬೇರೆ ಭಾಷೆ ನನ್ನ ಸದ್ಯದ ಪ್ರಯಾರಿಟಿ ಅಲ್ಲ. ಮುಂದೆ ಎಂದಾದರೂ ಇದು ತಪ್ಪು ಅನಿಸಿದರೆ ತಿದ್ಕೋತೀನಿ.