ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ರಾವ್ ಕಾಂಬಿನೇಷನ್‌ನಲ್ಲಿ ಬರಲಿರುವ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಮಾ ರಸಿಕರನ್ನು ಭಾವ-ಬಂಧನಗಳಲ್ಲಿ ಕಟ್ಟಿಹಾಕಿದೆ.
ಬೆಂಗಳೂರು (ಆ.17): ಸಮುದ್ರ, ಪ್ರೀತಿ, ಹುಡುಗಿ.. ಬಹುಶಃ ರಕ್ಷಿತ್ ಸಿನಿಮಾದಲ್ಲಿ ಇರುವಂಥ ಗಾಢ ಭಾವನೆಗಳು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಟ್ರೇಲರ್‌ನಲ್ಲೂ ಕಾಣಿಸಿದೆ. ಪ್ರೀತಿ, ನೋವು, ಭಾವನೆಗಳ ಬಂಧ ಇವೆಲ್ಲದರ ಗಾಢ ಮುಖ ಸಿನಿಮಾದಲ್ಲಿ ಧಾರಾಳವಾಗಿ ಸಿಗಬಹುದು ಎನ್ನುವುದು 3.14 ನಿಮಿಷದ ಟ್ರೇಲರ್‌ನಲ್ಲಿ ಖಂಡಿತಾ ವ್ಯಕ್ತವಾಗುತ್ತದೆ. ಇದು ಸಿನಿಮಾವಲ್ಲ, ಒಂದು ಕವನ ಎಂದು ರಕ್ಷಿತ್ ಶೆಟ್ಟಿ ಹೇಳಿರುವುದು ಈ ಸಿನಿಮಾದ ಪ್ರತಿ ಫ್ರೇಮ್‌ನಲ್ಲೂ ಕಾಣುತ್ತದೆ. ಟ್ರೇಲರ್‌ನಲ್ಲಿ ಪದೇ ಪದೇ ಕಾಣಿಸುವ ನೀಲಿ ಬಣ್ಣದ ನೂಲು, ಅದರ ಬೆನ್ನಿಗೆ ಕಾಣುವ ಅಚ್ಚ ನೀಲಿಯ ಸಮುದ್ರ.. ಇವೆಲ್ಲವನ್ನೂ ಕಂಡಾಗ ಹೇಮಂತ್ ರಾವ್, ರಕ್ಷಿತ್ ಶೆಟ್ಟಿಗೆ ನೀಲಿ ಬಣ್ಣದ ನೂಲಿನಿಂದ ಸಮುದ್ರವನ್ನು ಹೊಲಿಯುವ ಕೆಲಸ ಕೊಟ್ಟಿದ್ದಾರೆ ಅನ್ನೋದು ಸ್ಪಷ್ಟವಾಗಿ ಕಾಣುತ್ತದೆ. 'ಕತ್ತೆ' ಎನ್ನುವ ಪದದೊಂದಿಗೆ ಆರಂಭವಾಗುವ ಟ್ರೇಲರ್ ಅದೇ ಪದದೊಂದಿಗೆ ಅಂತ್ಯವಾಗುವಾಗ ಖಂಡಿತವಾಗಿ ನಮ್ಮ ಮನಸ್ಸಿನಲ್ಲೂ ಸಮುದ್ರದ ನೂರು ಅಲೆಗಳು ಬಡಿದಂಥ ಭಾವವಾಗುತ್ತದೆ. ಟ್ರೇಲರ್‌ನ ಪ್ರತಿ ಫ್ರೇಮ್‌ನಲ್ಲೂ ಭಾವನೆ, ಪ್ರೀತಿಯನ್ನು ಕಟ್ಟಿಡುವ ಕೆಲಸವನ್ನು ಹೇಮಂತ್ ರಾವ್ ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ.
ಪ್ರಿಯಾ ಪಾತ್ರದಲ್ಲಿ ನಟಿಸಿರುವ ರುಕ್ಷ್ಮಿಣಿ ವಸಂತ್ ಅವರ ಸ್ಪಷ್ಟ ಕನ್ನಡದೊಂದಿಗೆ 'ಕತ್ತೆ.. ಮೊನ್ನೆ ಎಷ್ಟು ಒಳ್ಳೆ ಕನಸು ಬಿತ್ತು ಗೊತ್ತಾ..' ಎನ್ನುವ ಸಾಲಿನೊಂದಿಗೆ ಆರಂಭವಾಗುವ ಟ್ರೇಲರ್‌ನ ಬೆನ್ನಲ್ಲಿಯೇ ಬರುವ ಆ ಸೌಮ್ಯ ಕಣ್ಣುಗಳು ನಿಜಕ್ಕೂ ನಾಯಕ-ನಾಯಕಿ ಮುಂದೆ ಎದುರಿಸುವ ಎಲ್ಲಾ ಸಂಕಷ್ಟಗಳ ಉದಾಹರಣೆಯಾಗಿ ಕಾಣುತ್ತದೆ. ನಾಯಕಿ ಶಂಖವನ್ನು ರಕ್ಷಿತ್ ಶೆಟ್ಟಿ ಕಿವಿಯ ಸಮೀಪ ಇಟ್ಟು ಅವರಿಬ್ಬರ ಪ್ರೇಮವನ್ನು ಸವಿಯುವ ಹೊತ್ತಿಗಾಗಲೇ ಯಾರೋ ಮೈದಬ್ಬಿಸಿ ಏಳಿಸಿದಂತೆ ಭಾಸವಾಗುತ್ತದೆ. ರಕ್ಷಿತ್ ಸ್ವತಃ ಅಕ್ಷರಶಃ ಆ ಭಾವವನ್ನು ಇಲ್ಲಿ ತುಂಬಿದಿದ್ದಾರೆ. ನಾಯಕ ನಾಯಕಿ ನಡುವೆ ವಿಧಿ ಆಡುವ ಆಟಗಳ ಸಣ್ಣ ಪರಿಚಯ ಈ ಹೊತ್ತಿಗಾಗಲೇ ಸಿಗುತ್ತದೆ.
'ನೀ ನನ್ನ ಕತ್ತೆಯಾಗೋಕು ಮುಂಚೆ ನನ್ನ ಖುಷಿಗೋಸ್ಕರ ಹಾಡುತ್ತಿದ್ದೆ... ಇವಾಗ ನಿಂಗೋಸ್ಕರ ಹಾಡಬೇಕು ಅಂತಾ ಅನಿಸ್ತಾ ಇದೆ..' ಎನ್ನುವ ಸಾಲುಗಳು ಕೇಳುವಾಗ ಇವರಿಬ್ಬರ ಹಿಂದಿನ ಪರಿಚಯಗಳು ಪ್ರತಿ ಫ್ರೇಮ್‌ನಲ್ಲೂ ಕಾಣುತ್ತದೆ. ರಕ್ಷಿತ್ ಹಾಗೂ ರುಕ್ಷ್ಮಿಣಿ ವಸಂತ್ ಪ್ರತಿ ಫ್ರೇಮ್‌ನಲ್ಲೂ ಆಗತಾನೆ ಚಿಗುರಿದ ಎಲೆಗಳಂತೆ ಕಾಣುತ್ತಾರೆ. 'ನೀನು ನನ್ನ ಸಮುದ್ರ..' ಎಂದು ಹೇಳಿ ಮುಗಿಸುವಾಗ ಟ್ರೇಲರ್‌ನ ಇನ್ನೊಂದು ಮಜಲು ಆರಂಭವಾಗುತ್ತದೆ.
ಈ ಭಾಗದಲ್ಲಿ ಕಾಣಿಸುವುದು ನಾಯಕ ನಾಯಕಿ ಎದುರಿಸುವ ಜಂಜಾಟ, ಕೋರ್ಟ್, ಜೈಲುಗಳ ಕಥೆಗಳು. ಬಡವರ ಬದುಕಿನಲ್ಲಿ ಸಿರಿವಂತರ ಚೆಲ್ಲಾಟಗಳು, ನಾಯಕ-ನಾಯಕಿ ನಡುವಿನ ಮನಸ್ತಾಪಗಳು, ಜೈಲಿನ ಮಾತುಗಳು, ನಾಯಕಿ ಕಾಣುವ ಕನಸುಗಳು, ಇವೆಲ್ಲವೂ ಕಾಣುವಾಗ ಇದೊಂದು ಮಧುರ ಅನುಭೂತಿ ನೀಡುವ ಸಿನಿಮಾ ಆಗುವ ಸ್ಪಷ್ಟತೆ ಸಿಗುತ್ತದೆ. ಚಿತ್ರದ ಪ್ರತಿ ಫ್ರೇಮ್‌ನಲ್ಲಿ ಬಳಸಿರುವ ನೀಲಿ ಬಣ್ಣ, ನೀಲಿ ಬಣ್ಣದ ನೂಲು, ಸಮುದ್ರ ಎಲ್ಲವೂ ಒಂದೊಕ್ಕೊಂದು ಮಿಳಿತವಾಗಿರುವಂತೆ ಕಾಣುತ್ತದೆ. ಇನ್ನು ನಾಯಕಿಯ ಸರಳ ಉಡುಗೆ ಪ್ರೇಕ್ಷಕರ ಮನಗೆಲ್ಲುವುದು ಖಂಡಿತ.
ರಕ್ಷಿತ್ ಶೆಟ್ಟಿ 'ಸಪ್ತಸಾಗರದಾಚೆ ಎಲ್ಲೋ...' 12 ಹಾಡುಗಳ 'ಪ್ರೇಮಲೋಕ'
ಚರಣ್ ರಾಜ್ ಮ್ಯೂಸಿಕ್ ಟ್ರೇಲರ್ ವೀಕ್ಷಿಸುವವರ ಕಾತುರತೆ ಕ್ಷಣ ಕ್ಷಣಕ್ಕೆ ಹೆಚ್ಚಿಸುತ್ತದೆ. ಅಷ್ಟು ಮನೋಜ್ಞವಾಗಿ ಅವರು ಹಿನ್ನಲೆ ಸಂಗೀತ ನೀಡಿದ್ದಾರೆ. ಛಾಯಾಗ್ರಹಣದಲ್ಲಿ ಗುರುಮೂರ್ತಿ ತಾವು ಕಂಡಿರುವ ರೀತಿಯಲ್ಲಿ ಸಮುದ್ರವನ್ನು ಜನರಿಗೆ ತೋರಿಸಿದ್ದಾರೆ. ಟ್ರೇಲರ್ ಆಧಾರದಲ್ಲಿ ಹೇಳುವುದಾದರೆ, ಚಿತ್ರ ನಿಧಾನಗತಿಯ ನಿರೂಪಣೆ ಹೊಂದಿರಬಹುದು. ಇಡೀ ಸಿನಿಮಾ ಒಂದು ಹಿತವಾದ ಅನುಭವಕ್ಕೆ, ಭಾವಲೋಕಕ್ಕೆ ಸೇರಿಸುವಂತ ಪ್ರಯತ್ನಕ್ಕೆ ಕಾರಣವಾಗಬಹುದು.
ರಕ್ಷಿತ್ ಶೆಟ್ಟಿ ಬಾಳಿನ ಹೋರಾಟ : ಗಮನ ಸೆಳೆದ ಸಪ್ತಸಾಗರದಾಚೆ ಹಾಡು!
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಸೈಡ್-ಎ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ. ಅಕ್ಟೋಬರ್ 20ಕ್ಕೆ ಸೈಡ್-ಬಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ರಕ್ಷಿತ್ ಸಿನಿಮಾದಲ್ಲಿ ನಟನೆ ಮಾಡುವುದರೊಂದಿಗೆ ನಿರ್ಮಾಣವನ್ನೂ ಮಾಡಿದ್ದಾರೆ.