ಸ್ಯಾಂಡಲ್‌ವುಡ್‌ಗೆ ಸೆಕೆಂಡ್ ಜನರೇಷನ್ : ಸ್ಟಾರ್ ಮಕ್ಕಳ ಎಂಟ್ರಿ

Published : Jun 07, 2019, 11:54 AM ISTUpdated : Jun 07, 2019, 11:55 AM IST
ಸ್ಯಾಂಡಲ್‌ವುಡ್‌ಗೆ ಸೆಕೆಂಡ್ ಜನರೇಷನ್ :  ಸ್ಟಾರ್ ಮಕ್ಕಳ ಎಂಟ್ರಿ

ಸಾರಾಂಶ

ಮೂರು ದಶಕಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಎರಡನೆಯ ತಲೆಮಾರು ಕಾಲಿಟ್ಟಿತು. ಇದೀಗ ಮೂರನೆಯ ತಲೆಮಾರು ಮೈ ಕೊಡವಿಕೊಂಡು ಎದ್ದು ನಿಂತಿದೆ. ರಾಜ್‌ಕುಮಾರ್, ಸುಧೀರ್, ತೂಗುದೀಪ ಶ್ರೀನಿವಾಸ್, ದೇವರಾಜ್, ಪ್ರಭಾಕರ್- ಇವರ ಮಕ್ಕಳೆಲ್ಲ ಹೆಸರಾಂತ ನಟರಾಗಿದ್ದಾರೆ. ಈಗ ಯಾರು ಬರುತ್ತಿದ್ದಾರೆ ನೋಡಿ!

ಕೆಂಡಪ್ರದಿ

ಸದ್ಯ ಹತ್ತಾರು ಮಂದಿ ಸ್ಟಾರ್ ನಟ, ನಟಿಯರ ಮಕ್ಕಳು ತಮ್ಮ ಮೊದಲ ಚಿತ್ರದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಇದು ಕತೆ ಹುಡುಕುವ ಹಂತದಿಂದ ಮೊದಲ್ಗೊಂಡು ಚಿತ್ರೀಕರಣ ಹಂತದವರೆಗೂ ಇದೆ. ದೊಡ್ಮನೆಯ ಮೂರನೇ ತಲೆಮಾರಾದ, ರಾಮ್ ಕುಮಾರ್ ಮಕ್ಕಳಾದ ಧನ್ಯ ರಾಮ್ ಕುಮಾರ್ ಸುಮನ್ ಜಾದೂಗಾರ್ ಎನ್ನುವ ಹೊಸ ನಿರ್ದೇಶಕರ ಚಿತ್ರದಲ್ಲಿ ಅಭಿನಯ ಶುರು ಮಾಡಿದ್ದಾರೆ. ಧೀರನ್ ರಾಮ್ ಕುಮಾರ್ ‘ದಾರಿ ತಪ್ಪಿದ ಮಗ’ ಎನ್ನುವ ತಾತ ಡಾ. ರಾಜ್‌ಕುಮಾರ್ ಟೈಟಲ್ ಸಿಕ್ಕಿದ್ದು, ಇದು ಅವರ ಪಾಲಿನ ಅದೃಷ್ಟವೇ ಸರಿ. ಇನ್ನೊಂದು ಪ್ಲಸ್ ಎಂದರೆ ಜಯಣ್ಣ- ಭೋಗೇಂದ್ರ ಮೊದಲ ಚಿತ್ರಕ್ಕೆ ಬಂಡವಾಳ ಹಾಕುತ್ತಿರುವುದು. ಮುಂದಿನ ವರ್ಷ ರಾಘವೇಂದ್ರ ರಾಜ್‌ಕುಮಾರ್ ಅವರ ಮತ್ತೊಬ್ಬ ಮಗ ಯುವರಾಜ್ ಕೂಡ ಹಿರಿಯ ಅಣ್ಣ ವಿನಯ್ ರಾಜ್ ಕುಮಾರ್ ರೀತಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗಲು ಸಿದ್ಧರಾಗಿದ್ದಾರೆ. ಇದರ ಮೂಲಕ ದೊಡ್ಮನೆಯ ಮೂವರ ಎಂಟ್ರಿ ಪಕ್ಕ ಆಗಿದೆ.

'ಜನುಮದ ಜೋಡಿ' ಕನಕ ಈಗ ಹೀಗಿದ್ದಾರೆ ನೋಡಿ!

 

ಆದಿತ್ಯ ಶಶಿ ಕುಮಾರ್ ‘ಮೊಡವೆ’ ಚಿತ್ರದ ಮೂಲಕ ಬರುತ್ತಿದ್ದು, ಹೊಸ ನಿರ್ಮಾಪಕರು, ನಿರ್ದೇಶಕರು ಇವರ ಬೆನ್ನಿಗೆ ನಿಂತಿದ್ದಾರೆ. ಡ್ಯಾನ್ಸ್ ಮತ್ತು ಆ್ಯಕ್ಟಿಂಗ್ ಹೇಳಿಕೊಡಲು ಸ್ವತಃ ಶಶಿ ಕುಮಾರ್ ಇರುವಾಗ ಆದಿತ್ಯಗೆ ಇದು ಒಳ್ಳೆಯ ಸ್ಟಾರ್ಟ್ ಒದಗಿಸಿಕೊಡಲೂಬಹುದು. ಇನ್ನು ಜೈ ಜಗದೀಶ್ ಮತ್ತು ವಿಜಯ ಲಕ್ಷ್ಮಿ ಸಿಂಗ್ ಮಕ್ಕಳಾದ ವೈನಿಧಿ, ವೈಸಿರಿ, ವೈಭವಿ ಮೂವರೂ ಒಟ್ಟಿಗೆ ‘ಯಾನ’ ಚಿತ್ರದ ಮೂಲಕ ಬರುತ್ತಿದ್ದಾರೆ. ಇದಕ್ಕೆ ಹರೀಶ್ ಶೇರಿಗಾರ್ ಮತ್ತು ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು ಬಂಡವಾಳ ಹೂಡುತ್ತಿದ್ದು, ಕಿಚ್ಚ ಸುದೀಪ್ ಈ ಮೂವರಿಗೂ ಶುಭ ಹಾರೈಸಿ ಸ್ಯಾಂಡಲ್‌ವುಡ್‌ಗೆ ಸ್ವಾಗತ ಮಾಡಿಕೊಂಡಿದ್ದೂ ಆಗಿದೆ. ಶ್ರುತಿ-ಮಹೇಂದ್ರ ಮಗಳು ಗೌರಿ ಶ್ರುತಿ ಮತ್ತು ಸುಧಾರಾಣಿ ಮಗಳು ನಿಧಿ ಸುಧಾರಾಣಿ ಹೊಸ ಕತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ತಮ್ಮ ಮಗಳ ಮೊದಲ ಚಿತ್ರದ ಎಂಟ್ರಿ ಹೇಗಿರಬೇಕು ಎನ್ನುವ ಆಸೆಯನ್ನು ಇಬ್ಬರ ತಾಯಂದಿರೂ ಹೊಂದಿದ್ದು, ತಕ್ಕ ಕತೆ, ನಿರ್ಮಾಣ ಸಂಸ್ಥೆ, ನಿರ್ದೇಶಕರು ಸಿಕ್ಕರೆ ಮುಂದಿನ ವರ್ಷವೇ ಈ ಇಬ್ಬರ ಎಂಟ್ರಿ ನಿರೀಕ್ಷಿತ. ಮತ್ತೊಂದು ದಿಕ್ಕಿನಲ್ಲಿ ನಿರ್ದೇಶಕ ರಘು ಕೋವಿ ಮಲೆಯಾಳಂನ ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್ ಅವರನ್ನು ಕನ್ನಡಕ್ಕೆ ಕರೆತರುವಲ್ಲಿ ಯಶ ಕಂಡಿದ್ದು, ಇವರಿಗೆ ಜೊತೆಯಾಗಿ ನಟ, ಶಾಸಕ ಕುಮಾರ್ ಬಂಗಾರಪ್ಪ ಅವರ ಮಗ ಅರ್ಜುನ್ ಕುಮಾರ್ ಬಂಗಾರಪ್ಪ ಅಥವಾ ರವಿಚಂದ್ರನ್ ಮಗ ವಿಕ್ಕಿ ರವಿಚಂದ್ರನ್ ಅವರನ್ನು ನಾಯಕರನ್ನಾಗಿ ಮಾಡಿಕೊಳ್ಳುವ ಇರಾದೆ ಹೊಂದಿದ್ದಾರೆ.

ರಾಜ್ ಮೊಮ್ಮಗಳಿಗೆ ಸಿನಿಮಾ ಅವಕಾಶ ಸಿಕ್ಕಿದ್ದು ಹೀಗೆ!

ಇದು ಸಾಧ್ಯವಾದರೆ ಇವರಿಬ್ಬರಲ್ಲಿ ಒಬ್ಬರಿಗೆ ಮುಂದಿನ ವರ್ಷವೇ ಶುಭಾರಂಭ. ರಕ್ಷಿತಾ ತಮ್ಮ ರಾಣಾ ಅಭಿಷೇಕ್ ಕೂಡ ತಮ್ಮ ಭಾವ ಜೋಗಿ ಪ್ರೇಮ್ ನೇತೃತ್ವದಲ್ಲಿ ‘ಏಕ್ ಲವ್ ಯಾ’ ಚಿತ್ರದ ಮೂಲಕ ಗ್ರ್ಯಾಂಡ್ ಎಂಟ್ರಿ ಪಡೆಯುತ್ತಿದ್ದಾರೆ. ನಿರೀಕ್ಷೆ ಹೆಚ್ಚು, ಅವಕಾಶವೂ ಹೆಚ್ಚು ಹೀಗೆ ಸ್ಟಾರ್ ಮಕ್ಕಳು ಎನ್ನುವ ಲೇಬಲ್ ಇಟ್ಟುಕೊಂಡು ಬರುವವರಿಗೆ ಅವಕಾಶಗಳು ಹೆಬ್ಬಾಗಿಲಿನ ರೀತಿ ಇರುತ್ತವೆ. ಅದೇ ವೇಳೆಯಲ್ಲಿ ನಿರೀಕ್ಷೆಗಳ ಮಹಾಪೂರವೂ ಸಹಜ. ಸಿಕ್ಕುವ ಶ್ರೀಮಂತ ಅವಕಾಶವನ್ನು ಬಳಸಿಕೊಂಡು ಸುಂದರ ಚಿತ್ರ ಮಾಡುವುದೇ ಇವರ ಮುಂದೆ ಇರುವ ದೊಡ್ಡ ಸವಾಲು. ಹಾಗೆ ನೋಡಿದರೆ ಕಳೆದ ವರ್ಷ ಮತ್ತು ಈ ವರ್ಷ ಇಲ್ಲಿಯ ವರೆಗೆ ಬಂದ ಯಾವ ಸ್ಟಾರ್ ಮಕ್ಕಳೂ ಕೂಡ ಅಷ್ಟು ಗಟ್ಟಿಯಾಗಿ ನಿಂತೇ ಇಲ್ಲ.

‘ಸೀತಾವಲ್ಲಭ’ ಗುಬ್ಬಿಯ ನೀವು ನೋಡಿರದ ಫೋಟೋಗಳಿವು

ಚಿತ್ರರಂಗದ ಬೆಂಬಲ: ತಮ್ಮ ಮಕ್ಕಳು, ಮೊಮ್ಮಕ್ಕಳು, ಸ್ನೇಹಿತರ ಮಕ್ಕಳು ಚಿತ್ರರಂಗಕ್ಕೆ ಬರುತ್ತಿದ್ದಾರೆ ಎಂದರೆ ಅವರನ್ನು ಕೆಂಪು ಹಾಸು ಹಾಸಿ ಸ್ವಾಗತ ಮಾಡಿಕೊಳ್ಳಲು ಇಡೀ ಸ್ಯಾಂಡಲ್‌ವುಡ್ ನಿಂತಿರುತ್ತದೆ. ಯಾವ ನಿರ್ದೇಶಕ ಉತ್ತಮ ಆಯ್ಕೆ? ನಿರ್ಮಾಪಕರು ಯಾರಾದರೆ ಒಳಿತು? ಕತೆ ಹೇಗಿರಬೇಕು? ಪಾತ್ರ ಹೇಗಿರಬೇಕು? ಎಂಬುದೆಲ್ಲವನ್ನೂ ಹೆಜ್ಜೆ ಹೆಜ್ಜೆಗೂ ಹೇಳಿಕೊಡಲು ಸಾಕಷ್ಟು ಮಂದಿ ಇರುತ್ತಾರೆ. ಇದರ ಜೊತೆಗೆ ಬಾಲ್ಯದಿಂದಲೂ ಸಿನಿಮಾ ನೋಡುತ್ತಾ, ಸಿನಿಮಾದ ಭಾಗವಾಗಿಯೇ ಬೆಳೆದು ಬರುವ ಅಡ್ವಾಂಟೇಜ್ ಕೂಡ ಇವರ ಪಾಲಿಗಿರುತ್ತದೆ. ಪ್ರತಿಭಾನ್ವಿತ ತಂಡ, ಒಳ್ಳೆಯ ಕತೆಯನ್ನು ಆಯ್ಕೆ ಮಾಡಿಕೊಡಲು ಪೋಷಕರೂ ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಹೀಗಾಗಿ ಸಹಜವಾಗಿಯೇ ಇವರ ಮೇಲೆ ನಿರೀಕ್ಷೆ ಅಪಾರವಾಗಿಯೇ ಇರುತ್ತದೆ.

ಸೂಕ್ತ ತಯಾರಿ ಇದ್ದರೆ ಸಾಕು: ಈ ಹೊಸ ತಲೆಮಾರಿಗೆ ಹಿನ್ನೆಲೆಯಲ್ಲಿ ನಿಂತು ಎಲ್ಲವನ್ನೂ ಮಾಡಿಕೊಡಲು ತಂದೆ-ತಾಯಿಗಳು ಒತ್ತಾಸೆಯಾಗಿ ನಿಂತಿರುವುದರಿಂದ ಕೇವಲ ತಮ್ಮ ಮೇಲೆ ಇರುವ ನಿರೀಕ್ಷೆಯನ್ನು ಈಡೇರಿಸುವುದಷ್ಟೇ ಸವಾಲಾಗಿರುತ್ತದೆ. ಇದಕ್ಕೆ ಬೇಕಾದ ಸೂಕ್ತ ತಯಾರಿ ಮಾಡಿಕೊಂಡರೆ ಸಾಕು. ಅವಕಾಶಕ್ಕಾಗಿ ನಿರ್ದೇಶಕರು, ನಿರ್ಮಾಪಕರ ಮನೆ ಬಾಗಿಲು ಸುತ್ತುವ, ತಮ್ಮದೇ ಖರ್ಚಿನಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು, ಸಿಕ್ಕಷ್ಟಕ್ಕೇ ತೃಪ್ತಿ ಹೊಂದುವ ಅನಿವಾರ್ಯತೆ ಇವರಿಗೆ ಇರುವುದಿಲ್ಲ. ನಟನೆ, ಡ್ಯಾನ್ಸ್, ಫೈಟ್ ಹೀಗೆ ಎಲ್ಲಾ ವಿಭಾಗದಲ್ಲೂ ಸೂಕ್ತ ತಯಾರಿ ಮಾಡಿಕೊಂಡರೆ ಇವರು ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಕಂಡುಕೊಳ್ಳಲು ಸಾಕಷ್ಟು ಅವಕಾಶಗಳು ಇದ್ದೇ ಇವೆ.

ಮುಸ್ತಫನ ರಾಣಿ ‘ಪುಲಿಮಣಿ’ ಚಾರ್ಮಿಂಗ್ ಫೋಟೋಸ್!

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2025ರ IMDbಯ ಟಾಪ್ 10 ಜನಪ್ರಿಯ ಚಿತ್ರಗಳ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್ ಪರಿಮಳ
The Devil Movie: ಏನ್ರೀ ಹವಾ ಇದು... ಗಿಲ್ಲಿ ನಟ ಎಣ್ಣೆಯಲ್ಲಿ ಮುಖ ತೊಳ್ಕೊಂಡಿದ್ದಾರೆ ಎಂದ ವೀಕ್ಷಕರು