ನಟಿ ಅಮೂಲ್ಯ ಜೊತೆಗೆ ಮೈಸೂರು ಮಾರ್ಕೆಟ್‌ನಲ್ಲಿ ಕಂಡ 'ಪ್ರೇಮದ ಊರಲಿ' ನಟ ಶ್ರೀರಾಮ್! ವಿಡಿಯೋ ವೈರಲ್

Published : Nov 24, 2026, 09:39 PM IST
premada oorali actor shriram new movie with amulya

ಸಾರಾಂಶ

ಪ್ರೇಮದ ಊರಲಿ ಒಂದೇ ಒಂದು ಹಿಟ್ ಸಿನಿಮಾ ಕೊಟ್ಟ ನಟ ಶ್ರೀರಾಮ್‌ಗೆ ಅದೃಷ್ಟ ಖುಲಾಯಿಸಿದೆ. ಚಲುವಿನ ಚಿತ್ತಾರ ಸೇರಿ ಕನ್ನಡ ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದ್ದ ನಟಿ ಅಮೂಲ್ಯ ಅವರು ನಟ ಶ್ರೀರಾಮ್ ಅವರ ಹೊಸ ಸಿನಿಮಾಗೆ ಹೀರೋಯಿನ್ ಆಗಿದ್ದಾರೆ. ಶೂಟಿಂಗ್ ಮಾಡುತ್ತಿದ್ದ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಣ್ಣ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾದ 'ಪ್ರೇಮದ ಊರಲಿ' ಸಿನಿಮಾದ ರಾಜ್ಯಾದ್ಯಂತ ಭಾರೀ ಯಶಸ್ಸು ಕಂಡಿದೆ. ಈ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸಂಚಲನ ಮೂಡಿಸಿರುವ ನಟ ಶ್ರೀರಾಮ್ ಈಗ ತಮ್ಮ ಮುಂದಿನ ಚಿತ್ರದಲ್ಲಿ ಚಂದನವನದ ಚಲುವಿನ ಚಿತ್ತಾರದ ನಟಿ ಅಮೂಲ್ಯ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ, ಸದ್ಯ ಮೈಸೂರಿನಲ್ಲಿ ಈ ಹೊಸ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ಶೂಟಿಂಗ್ ಸೆಟ್‌ನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ರೈತನ ಪಾತ್ರದಿಂದ 'ಮನೆ ಮಗ'ನಾದ ಶ್ರೀರಾಮ್:

‘ಪ್ರೇಮದ ಊರಲಿ’ ಸಿನಿಮಾದಲ್ಲಿ ರೈತನ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸುವ ಮೂಲಕ ನಟ ಶ್ರೀರಾಮ್ ಇಡೀ ಕರ್ನಾಟಕದ ಜನತೆಯ ‘ಮನೆ ಮಗ’ನಾಗಿ ಮನಗೆದ್ದಿದ್ದಾರೆ. ಈ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಅವರಿಗೆ ಸಿನಿಮಾ ಆಫರ್‌ಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳದೆ, ಅಳೆದು ತೂಗಿ ಉತ್ತಮ ಕಥೆಗಳನ್ನು ಮಾತ್ರ ಶ್ರೀರಾಮ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಶಂಕರ್ ನಾಗ್, ಪ್ರಭಾಸ್‌ಗೆ ಹೋಲಿಕೆ!

ಇತ್ತೀಚೆಗೆ ‘ಪ್ರೇಮದ ಊರಲಿ’ ಸಕ್ಸಸ್ ಕಾರ್ಯಕ್ರಮಕ್ಕೆ ಹೋದಾಗ ಅಭಿಮಾನಿಗಳು ಶ್ರೀರಾಮ್ ಅವರನ್ನು ಕಂಡು "ನೀವು ನೋಡಲು ದಿಗ್ಗಜ ಶಂಕರ್ ನಾಗ್ ಅವರಂತೆಯೇ ಇದ್ದೀರಿ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ, ಆಂಧ್ರಪ್ರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿನ ಜನರು "ನೀವು ಥೇಟ್ ಪ್ರಭಾಸ್ ತರಹವೇ ಕಾಣಿಸುತ್ತೀರಿ" ಎಂದು ಹೋಲಿಕೆ ಮಾಡಿ ಅಟ್ಟಕ್ಕೇರಿಸಿದ್ದರು. ಇಷ್ಟೆಲ್ಲಾ ಪ್ರಶಂಸೆ ಮತ್ತು ಹೋಲಿಕೆಗಳನ್ನು ಅತ್ಯಂತ ಸಾವಧಾನದಿಂದ ಹಾಗೂ ವಿನಯದಿಂದ ಸ್ವೀಕರಿಸಿರುವ ಶ್ರೀರಾಮ್, ಸದ್ಯ ಸಂಪೂರ್ಣ ಗಮನವನ್ನು ತಮ್ಮ ಮುಂದಿನ ಸಿನಿಮಾಗಳತ್ತ ನೆಟ್ಟಿದ್ದಾರೆ.

3 ಕೋಟಿ ಬಜೆಟ್, 100 ಕೋಟಿ ಗಳಿಕೆ:

ಕೇವಲ 3 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡು ಹೊಸ ಇತಿಹಾಸ ಸೃಷ್ಟಿಸಿದೆ. ರಾಜ್ಯಾದ್ಯಂತ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ 50 ದಿನಗಳ ಹೌಸ್‌ಫುಲ್ ಪ್ರದರ್ಶನ ಕಂಡಿರುವ ಈ ಚಿತ್ರ, ಇದೀಗ ಅಮೆಜಾನ್ ಪ್ರೈಮ್ ವಿಡಿಯೋ (Amazon Prime Video) ಒಟಿಟಿಯಲ್ಲೂ ಸ್ಟ್ರೀಮ್ ಆಗುತ್ತಿದ್ದು, ಡಿಜಿಟಲ್ ವೇದಿಕೆಯಲ್ಲೂ ಪ್ರೇಕ್ಷಕರ ಮನಗೆಲ್ಲುತ್ತಿದೆ.

 ಮಗು ಹೊತ್ತು ತರಕಾರಿ ಖರೀದಿಸಿದ ಅಮೂಲ್ಯ: ವಿಡಿಯೋ ವೈರಲ್!

ಸದ್ಯ ನಟ ಶ್ರೀರಾಮ್ ಅವರು ಮೈಸೂರಿನಲ್ಲಿ ತಮ್ಮ ಹೊಸ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ‘ಚೆಲುವಿನ ಚಿತ್ತಾರ’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ನಟಿ ಅಮೂಲ್ಯ ಅವರು ಮದುವೆ ಹಾಗೂ ಮಕ್ಕಳ ಆರೈಕೆಯ ಬಳಿಕ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಭರ್ಜರಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು, ಶ್ರೀರಾಮ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ಮೈಸೂರು ಮಾರುಕಟ್ಟೆಯಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ವೇಳೆ, ನಟಿ ಅಮೂಲ್ಯ ಅವರು ಥೇಟ್ ಸಾಮಾನ್ಯ ಕುಟುಂಬದ ಗೃಹಿಣಿಯಂತೆ ಮಗುವನ್ನು ಹೆಗಲ ಮೇಲೆ ಹೊತ್ತುಕೊಂಡು ತರಕಾರಿ ಖರೀದಿಸಲು ಬಂದಿರುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ನೈಜವಾಗಿ ಮೂಡಿಬಂದಿರುವ ಈ ಶೂಟಿಂಗ್ ದೃಶ್ಯವನ್ನು ಯಾರೋ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆ ವಿಡಿಯೋ ಈಗ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ‘ಪ್ರೇಮದ ಊರಲಿ’ ಹೀರೋ ಮತ್ತು ‘ಚೆಲುವಿನ ಚಿತ್ತಾರ’ ನಟಿಯ ಹೊಸ ಕಾಂಬಿನೇಷನ್ ನೋಡಲು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ತನ್ನ ಜೀವ ಹೋದರೂ ನಾಲ್ವರ ಬಾಳಿಗೆ ಬೆಳಕಾದ ಹಾಸನ ರಘು; ಸಚಿವ ಯು.ಟಿ. ಖಾದರ್ ಮೆಚ್ಚುಗೆ
Bigg Bossನಿಂದ ಶುರುವಾದ ಲವ್​ಸ್ಟೋರಿ, 2 ವರ್ಷದಲ್ಲಿ ಮುರಿದು ಬಿತ್ತು! ಮತ್ತೊಂದು ತಾರಾ ಜೋಡಿ ಬ್ರೇಕಪ್​