ಟಿಫಿನ್ ಬಾಕ್ಸ್ ಕಳೆದುಹೋಗಿದ್ದಕ್ಕೆ ತೆಂಡೂಲ್ಕರ್ ಪತ್ನಿ ಅಂಜಲಿ ಇ-ಮೇಲ್, ಕನ್ನಡತಿ ಟೀಚರ್ ಶಾಕ್!

Published : Nov 24, 2026, 09:13 PM IST
Anjali Tendulkar Akshata Ganesh Sara Tendulkar

ಸಾರಾಂಶ

"ನಿಮ್ಮ ಬ್ಯುಸಿ ಶೆಡ್ಯೂಲ್‌ನಲ್ಲಿ ನಾನು ನಿಮಗೆ ತೊಂದರೆ ಕೊಡುತ್ತಿದ್ದೇನೆ ಎಂದು ಬೇಸರ ಮಾಡಿಕೊಳ್ಳಬೇಡಿ. ಆದರೆ, ಮಕ್ಕಳಿಗೆ ಒಂದು ವಿಚಾರ ಸ್ಪಷ್ಟವಾಗಿ ಗೊತ್ತಾಗಬೇಕು. ಯಾವುದೇ ವಸ್ತುವಾದರೂ ಅದು ನಮಗೆ ಸುಲಭವಾಗಿ ಸಿಗಬಾರದು; ಪ್ರತಿಯೊಂದಕ್ಕೂ ಅದರದೇ ಆದ ಬೆಲೆ ಇರುತ್ತದೆ. ಮುಂದೇನು ಇತ್ತು ಇಮೇಲ್‌ನಲ್ಲಿ?

‘ಕೋಟ್ಯಂತರ ರೂಪಾಯಿ ಆಸ್ತಿ ಇದ್ರೂ, ಕೇವಲ ಒಂದು ಟಿಫಿನ್ ಬಾಕ್ಸ್ ಕಳೆದುಹೋಗಿದ್ದಕ್ಕೆ ಟೀಚರ್‌ಗೆ ಮೇಲ್ ಮಾಡಿದ್ದ ಅಂಜಲಿ ತೆಂಡೂಲ್ಕರ್! ಅಂದು ಆ ಮೇಲ್ ನೋಡಿ ಶಾಕ್ ಆದ ಕನ್ನಡದ ನಟಿಗೆ, ಮುಂದಿನ ಸಾಲುಗಳನ್ನು ಓದಿದಾಗ ಅರ್ಥವಾಗಿದ್ದೇನು?’

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ 'ಅಂತರಪಟ' ಧಾರಾವಾಹಿಯಲ್ಲಿ ನಾಯಕನ ತಾಯಿಯ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದಿರುವ ನಟಿ ಅಕ್ಷತಾ ಗಣೇಶ್ (Akshata Ganesh), ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ವೃತ್ತಿಯಲ್ಲಿ ಒಬ್ಬ ಶಿಕ್ಷಕಿಯಾಗಿದ್ದರು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಅದೂ ಸಾಮಾನ್ಯ ಶಾಲೆಯಲ್ಲ, ಮುಕೇಶ್ ಅಂಬಾನಿ ಒಡೆತನದ ಪ್ರತಿಷ್ಠಿತ ಶಾಲೆಯಲ್ಲಿ ಅವರು ಇಂಗ್ಲಿಷ್ ಹಾಗೂ ಕ್ಲಾಸ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು! ದೇಶದ ಅತ್ಯಂತ ಶ್ರೀಮಂತರು ಹಾಗೂ ಸೆಲೆಬ್ರಿಟಿಗಳ ಮಕ್ಕಳು ಓದುತ್ತಿದ್ದ ಆ ಶಾಲೆಯಲ್ಲಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಕೂಡ ವ್ಯಾಸಂಗ ಮಾಡುತ್ತಿದ್ದರು. 8, 9 ಮತ್ತು 10ನೇ ತರಗತಿಯಲ್ಲಿ ಸಾರಾ ಅವರಿಗೆ ಅಕ್ಷತಾ ಅವರೇ ಕ್ಲಾಸ್ ಟೀಚರ್ ಆಗಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಅಕ್ಷತಾ ಗಣೇಶ್ ಅವರು, ಅಂಜಲಿ ತೆಂಡೂಲ್ಕರ್ (Anjali Tendulkar) ಕಳುಹಿಸಿದ್ದ ಆ ಒಂದು ಇ-ಮೇಲ್‌ನ ರೋಚಕ ಹಾಗೂ ಪ್ರತಿಯೊಬ್ಬ ಪೋಷಕರಿಗೂ ಪಾಠವಾಗುವಂತಹ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

ಸಾರಾ ಟಿಫಿನ್ ಬಾಕ್ಸ್ ಕಳೆದುಕೊಂಡಾಗ ಬಂದ ಆ ಅನಿರೀಕ್ಷಿತ ಇ-ಮೇಲ್!

ಸಚಿನ್ ಮತ್ತು ಅಂಜಲಿ ಇಬ್ಬರೂ ಮಕ್ಕಳ ಶಿಕ್ಷಣದ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದರೂ, ಶಾಲೆಯ ದೈನಂದಿನ ಆಗುಹೋಗುಗಳನ್ನು ಅಂಜಲಿ ತೆಂಡೂಲ್ಕರ್ ಅವರೇ ಖುದ್ದಾಗಿ ನೋಡಿಕೊಳ್ಳುತ್ತಿದ್ದರು. ಒಮ್ಮೆ ಸಾರಾ ತೆಂಡೂಲ್ಕರ್ ಶಾಲೆಯಲ್ಲಿ ತಮ್ಮ ಟಿಫಿನ್ ಬಾಕ್ಸ್ (ಊಟದ ಡಬ್ಬಿ) ಕಳೆದುಕೊಂಡು ಮನೆಗೆ ಹೋಗಿದ್ದರು. ಮರುದಿನವೇ ಕ್ಲಾಸ್ ಟೀಚರ್ ಅಕ್ಷತಾ ಅವರಿಗೆ ಅಂಜಲಿ ತೆಂಡೂಲ್ಕರ್ ಕಡೆಯಿಂದ ಒಂದು ಇ-ಮೇಲ್ ಬಂತು!

ಅದರಲ್ಲಿ, "ಸಾರಾ ತನ್ನ ಟಿಫಿನ್ ಬಾಕ್ಸ್ ಅನ್ನು ಶಾಲೆಯಲ್ಲೇ ಬಿಟ್ಟುಬಂದಿದ್ದಾಳೆ, ದಯವಿಟ್ಟು ಕ್ಲಾಸ್‌ನಲ್ಲಿ ಎಲ್ಲಾದರೂ ಇದೆಯೇ ಎಂದು ನೋಡಿ ಅವಳಿಗೆ ಹುಡುಕಿಕೊಳ್ಳಲು ಹೇಳಿ" ಎಂದು ಬರೆಯಲಾಗಿತ್ತು. ಆ ಮೇಲ್ ನೋಡಿದ ತಕ್ಷಣ ಅಕ್ಷತಾ ಅವರಿಗೆ ಅಕ್ಷರಶಃ ಆಶ್ಚರ್ಯವಾಯಿತು! "ಇಷ್ಟು ದೊಡ್ಡ ಕೋಟ್ಯಾಧಿಪತಿಗಳು, ಕೇವಲ ಒಂದು ಸಣ್ಣ ಟಿಫಿನ್ ಬಾಕ್ಸ್‌ಗಾಗಿ ನನಗೆ ಮೇಲ್ ಮಾಡಿದ್ದಾರಲ್ಲ, ಇದೆಂಥಾ ವಿಚಿತ್ರ?" ಎಂದು ಅಕ್ಷತಾ ಮನಸ್ಸಿನಲ್ಲೇ ಅಂದುಕೊಂಡರಂತೆ.

ಇ-ಮೇಲ್‌ನ ಮುಂದಿನ ಸಾಲುಗಳನ್ನು ಓದಿದಾಗ ಅಕ್ಷತಾ ಅವರಿಗೆ ಸಿಕ್ಕ ದೊಡ್ಡ ಪಾಠ!

ಆದರೆ, ಆ ಇ-ಮೇಲ್‌ನ ಮುಂದಿನ ಸಾಲುಗಳನ್ನು ಓದಿದಾಗ ಅಕ್ಷತಾ ಅವರ ಅಭಿಪ್ರಾಯವೇ ಬದಲಾಗಿಹೋಯಿತು! ಅಂಜಲಿ ತೆಂಡೂಲ್ಕರ್ ಮುಂದುವರಿದು ಬರೆದಿದ್ದೇನೆಂದರೆ— "ನಿಮ್ಮ ಬ್ಯುಸಿ ಶೆಡ್ಯೂಲ್‌ನಲ್ಲಿ ನಾನು ನಿಮಗೆ ತೊಂದರೆ ಕೊಡುತ್ತಿದ್ದೇನೆ ಎಂದು ಬೇಸರ ಮಾಡಿಕೊಳ್ಳಬೇಡಿ. ಆದರೆ, ಮಕ್ಕಳಿಗೆ ಒಂದು ವಿಚಾರ ಸ್ಪಷ್ಟವಾಗಿ ಗೊತ್ತಾಗಬೇಕು. ಯಾವುದೇ ವಸ್ತುವಾದರೂ ಅದು ನಮಗೆ ಸುಲಭವಾಗಿ ಸಿಗಬಾರದು; ಪ್ರತಿಯೊಂದಕ್ಕೂ ಅದರದೇ ಆದ ಬೆಲೆ ಇರುತ್ತದೆ. ಆ ಬೆಲೆಯನ್ನು ಅವರು ಗೌರವಿಸಬೇಕು ಮತ್ತು ಅದಕ್ಕಾಗಿ ಶ್ರಮಪಡಬೇಕು.

ಇದೊಂದು ಶಿಸ್ತು. ಅವಳು ಟಿಫಿನ್ ಬಾಕ್ಸ್ ಕಳೆದುಕೊಂಡಿದ್ದಾಳೆ, ಅವಳೇ ಅದನ್ನು ಹುಡುಕಿಕೊಂಡು ಬರಬೇಕು."ಈ ಪ್ರಬುದ್ಧ ಮಾತುಗಳನ್ನು ಓದಿ ಅಂಜಲಿ ಅವರ ಪೋಷಣೆಯ ರೀತಿಗೆ ಮನಸೋತ ಅಕ್ಷತಾ, ತಕ್ಷಣವೇ ಸಾರಾ ಅವರಿಗೆ ಆ ಟಿಫಿನ್ ಬಾಕ್ಸ್ ಹುಡುಕಲು ಹೇಳಿ, ಅದನ್ನು ವಾಪಸ್ ಕೊಡಿಸುವಲ್ಲಿ ಯಶಸ್ವಿಯಾದರು.

ಇದು ಜೋಡೆತ್ತು ಬಗ್ಗೆ ಅಲ್ಲ, ರಾಮಾಯಣದ 'ರಾವಣ' ಯಶ್ ನೋಡಿ ಸುಮಲತಾ ಅಂಬರೀಷ್ ಈಗ ಹೇಳಿರೋ ಮಾತು!

ಪಿಟಿಎಂ (PTM) ಸಭೆಯಲ್ಲಿ ಅಂಜಲಿ ಹೇಳಿದ ಹೃದಯಸ್ಪರ್ಶಿ ಮಾತು!

ನಂತರ ಶಾಲೆಯಲ್ಲಿ ನಡೆದ ಪೋಷಕರು-ಶಿಕ್ಷಕರ ಸಭೆಯಲ್ಲಿ (PTM) ಭೇಟಿಯಾದಾಗ, ಅಂಜಲಿ ತೆಂಡೂಲ್ಕರ್ ಅವರು ಟಿಫಿನ್ ಬಾಕ್ಸ್ ಹುಡುಕಿಸಿಕೊಟ್ಟಿದ್ದಕ್ಕಾಗಿ ಅಕ್ಷತಾ ಅವರಿಗೆ ವಿಶೇಷವಾಗಿ ಧನ್ಯವಾದ ತಿಳಿಸಿದರು. "ಒಂದು ವೇಳೆ ಆ ಟಿಫಿನ್ ಬಾಕ್ಸ್ ಕಳೆದುಹೋಯಿತು ಎಂದು ಸುಮ್ಮನೆ ಬಿಟ್ಟುಬಿಟ್ಟರೆ, ನಾಳೆ ಅವಳು ಇನ್ನೇನೋ ಕಳೆದುಕೊಂಡು ಬರುತ್ತಾಳೆ, ಎಲ್ಲೋ ಬಿಸಾಕುತ್ತಾಳೆ. ಹಾಗಾಗಬಾರದು. ನಾವು ಶಾಲೆಗೆ ಏನನ್ನು ತೆಗೆದುಕೊಂಡು ಹೋಗುತ್ತೇವೆಯೋ ಅದನ್ನು ವಾಪಸ್ ತರಬೇಕು ಎನ್ನುವ ಜವಾಬ್ದಾರಿ ಅವಳಿಗೆ ಇರಬೇಕು. ಜೊತೆಗೆ ಜೀವನದಲ್ಲಿ ನಮಗೆ ಸಿಕ್ಕಿರುವ ಸೌಲಭ್ಯಗಳ ಬಗ್ಗೆ ಕೃತಜ್ಞತೆ (Gratitude) ಇರಬೇಕು" ಎಂದು ಅಂಜಲಿ ವಿವರಿಸಿದರು.

ಕೋಟ್ಯಂತರ ರೂಪಾಯಿ ಆಸ್ತಿ ಇರುವ ತೆಂಡೂಲ್ಕರ್ ಕುಟುಂಬಕ್ಕೆ ಅಂತಹ ಸಾವಿರಾರು ಟಿಫಿನ್ ಬಾಕ್ಸ್‌ಗಳನ್ನು ಕೊಳ್ಳುವ ಶಕ್ತಿ ಇತ್ತು. ಆದರೆ, ವಸ್ತುವಿನ ಬೆಲೆ ಕೇವಲ ಹಣದಲ್ಲಿಲ್ಲ, ಅದರ ಹಿಂದಿರುವ ಶಿಸ್ತು ಮತ್ತು ಜವಾಬ್ದಾರಿಯಲ್ಲಿದೆ ಎಂಬುದನ್ನು ಹಣದ ಅಹಂಕಾರವಿಲ್ಲದೆ ಮಗಳಿಗೆ ಕಲಿಸಿದ ಅಂಜಲಿ ತೆಂಡೂಲ್ಕರ್ ಅವರ ಈ ನಡೆ, ಇಂದಿನ ಪ್ರತಿಯೊಬ್ಬ ಪೋಷಕರಿಗೂ ಒಂದು ಶ್ರೇಷ್ಠ ಮಾದರಿಯಾಗಿದೆ.

ಕೃಪೆ- ವಿವಿಧ ವಿಸ್ಮಯ (ಫೇಸ್‌ಬುಕ್ ಪೇಜ್)

'ಪ್ರೇಮದ ಊರಲಿ' ನಂಟು.. ಲಲಿತಾ ಬೆಂಗಳೂರಿಗೆ, ಜೈ ಎಲ್ಲಿರೋದು? ಬದಲಾಗುತ್ತಾ ಬದುಕು, ಶುರು ಯಾವತ್ತು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಪ್ರೇಮದ ಊರಲಿ' ನಂಟು.. ಲಲಿತಾ ಬೆಂಗಳೂರಿಗೆ, ಜೈ ಎಲ್ಲಿರೋದು? ಬದಲಾಗುತ್ತಾ ಬದುಕು, ಶುರು ಯಾವತ್ತು?
ಈ ಮದುವೆ ಸುದ್ದಿ ಕ್ಯಾನ್ಸಲ್ ಮಾಡ್ಕೊಳ್ಳಿ.. ಸಾರಾ ತೆಂಡೂಲ್ಕರ್ & ರಾಜ್‌ವೀರ್ ಡಿಯೋಲ್ ಆಪ್ತರು ಏನಂದ್ರು ಗೊತ್ತಾ?