ಶುರುವಾಗಲಿದೆ ಅಣ್ಣ ತಂಗಿಯ ಬಾಂಧವ್ಯ ಸಾರುವ 'ರಕ್ಷಾ ಬಂಧನ'!

By Web DeskFirst Published Jul 22, 2019, 9:48 AM IST
Highlights

ಅಣ್ಣತಂಗಿಯ ಕತೆಗಳು ಎವರ್‌ಗ್ರೀನ್‌. ಕನ್ನಡ ಸಿನಿಮಾಗಳಲ್ಲಂತೂ ಇದು ಸುಪ್ರಸಿದ್ಧ. 1958ರಲ್ಲಿ ಡಾ. ರಾಜ್‌ಕುಮಾರ್‌ ಅಭಿನಯಿಸಿರುವ ಅಣ್ಣತಂಗಿ ಸಿನಿಮಾವಾಗಲೀ 2005ರಲ್ಲಿ ತೆರೆಕಂಡ ಶಿವರಾಜ್‌ಕುಮಾರ್‌- ರಾಧಿಕಾ ಜೋಡಿಯ ಅಣ್ಣತಂಗಿ ಸಿನಿಮಾವಾಗಲೀ, ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿರುವಂಥ ಚಿತ್ರಗಳೇ. ಈ ನಡುವೆ ಇದೇ ಎಳೆಯನ್ನು ಸಾರುವ ಹತ್ತು ಹಲವು ಸಿನಿಮಾಗಳು ಬಂದು ಹೋಗಿವೆ. ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಜನರನ್ನು ರಂಜಿಸಿರುವಂಥವೇ.

ಸಿನಿಮಾದಲ್ಲಿ ಜನಪ್ರಿಯವಾಗಿರುವ ಈ ಕತೆಯನ್ನು ಕಿರುತೆರೆಗೆ ತಂದಿರುವ ಉದಾಹರಣೆಗಳು ಕಡಿಮೆ. ಅಣ್ಣನ ಸುಖ ಸಂತೋಷಕ್ಕಾಗಿ ಸದಾ ಹಂಬಲಿಸುವ ತಂಗಿ, ತಂಗಿಯ ಶ್ರೇಯಸ್ಸಿಗಾಗಿ ಹಾತೊರೆಯುವ ಅಣ್ಣ, ಒಬ್ಬರಿಗೊಬ್ಬರ ಮಾಡುವ ತ್ಯಾಗ, ಈ ಮಧ್ಯೆ ಉಂಟಾಗುವ ನೋವು, ನಲಿವು- ಇವೆಲ್ಲವೂ ಟೆಲಿವಿಷನ್‌ ಧಾರಾವಾಹಿಗೆ ಹೇಳಿ ಮಾಡಿಸಿದಂಥ ದೃಶ್ಯಗಳು. ವೀಕ್ಷಕರಿಗೆ ಸದಾ ಏನಾದರೂ ಹೊಸತನ್ನು ಕೊಡಲು ಹಂಬಲಿಸುವ ಕಲರ್ಸ್‌ ಕನ್ನಡದ ತಂಡ ಇದೀಗ ರಕ್ಷಾಬಂಧನ’ ಎನ್ನುವ ಆಕರ್ಷಕ ಅಣ್ಣತಂಗಿ ಕತೆಯನ್ನು ಸಿದ್ಧಪಡಿಸಿದೆ.

'ಪದ್ಮಾವತಿ' ಜಪ ಮಾಡಿದ್ಲು ಪದ್ದು; ಹುಡುಗರು ಜಪ ಮಾಡಿದ್ದು ಇವರದ್ದು!

ಜುಲೈ 22ರಿಂದ ರಾತ್ರಿ 9.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ. ಕಾರ್ತಿಕ್‌ ಮತ್ತು ನಂದಿನಿ ಎಂಬ ಅಣ್ಣತಂಗಿಯರ ಕತೆ ಇದು. ಅಣ್ಣನ ಮದುವೆ ಮೊದಲಾಗಲಿ ಎಂದು ಬಯಸುವ ತಂಗಿ, ತಂಗಿಯ ಕಲ್ಯಾಣವಾಗದೆ ನನ್ನ ಜೀವನದಲ್ಲಿ ಏನೂ ಇಲ್ಲ ಎನ್ನುವ ಅಣ್ಣ- ಹೀಗಿರುವ ಸೋದರ ಸೋದರಿಯರ ಮದುವೆ ಅವರಿಬ್ಬರ ಜೀವನದಲ್ಲಿ ಎಂಥ ಬದಲಾವಣೆ ತರುತ್ತದೆ ಎಂಬುದೇ ಕತೆಯ ತಿರುಳು.

ಬಹಳ ದಿನಗಳ ನಂತರ ಪ್ರಖ್ಯಾತ ಹಿನ್ನೆಲೆ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು ಧಾರಾವಾಹಿಯೊಂದರ ಶೀರ್ಷಿಕೆ ಗೀತೆ ಹಾಡಿದ್ದಾರೆ. ಈ ಗೀತೆಯನ್ನು ರೋಹಿತ್‌ ಪದಕಿ ಅವರು ಬರೆದಿದ್ದಾರೆ ಹಾಗೂ ಬಿಗ್ ಬಾಸ್ , ಗಾಂಧಾರಿ ಖ್ಯಾತಿಯ ಜಗನ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ.

ಅಣ್ಣತಂಗಿಯರ ನಡುವಿನ ಮಮತೆ, ವಾತ್ಸಲ್ಯಗಳು ಮತ್ತು ಅವರ ಮದುವೆ ಪರಸ್ಪರರ ಜೀವನದಲ್ಲಿ ಯಾವ ಬದಲಾವಣೆ ತರುತ್ತದೆ ಎಂಬುದನ್ನು ತೋರಿಸುವ ಪ್ರಯತ್ನ ಇದು. ಈ ಕತೆ ವಿಶೇಷವಾಗಿ ನನಗೆ ತುಂಬಾ ಖುಷಿ ಕೊಟ್ಟಿದೆ. ಇದು ಧಾರಾವಾಹಿ ನೋಡುಗರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸ ನನ್ನದು ಎನ್ನುತ್ತಾರೆ ವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರ್‌ನ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌.

'ಕೋಟ್ಯಧಿಪತಿ'ಯಲ್ಲಿ ಐಎಎಸ್‌ ಆಕಾಂಕ್ಷಿಗೂ ಗೊತ್ತಿಲ್ಲ ಈ ಪ್ರಶ್ನೆಗೆ ಉತ್ತರ!

ಅತ್ಯುತ್ತಮ ತಾರಾಗಣ, ಎಂದಿನಂತೆ ಕಲರ್ಸ್‌ ಕನ್ನಡದ ಧಾರಾವಾಹಿಗಳಲ್ಲಿ ಕಾಣುವ ಶ್ರೇಷ್ಠ ಗುಣಮಟ್ಟ- ಹೀಗೆ ಕುಟುಂಬ ಸಮೇತ ನೋಡುವ ಧಾರಾವಾಹಿಯಾಗಿ ರಕ್ಷಾಬಂಧನ ಸಿದ್ಧವಾಗಿದೆ. ಈಗ ಕನ್ನಡ ಕಿರುತೆರೆಯಲ್ಲಿ ರಾರಾಜಿಸುತ್ತಿರವ ಕತೆಗಳಿಗಿಂತ ತೀರಾ ಭಿನ್ನವಾಗಿರುವ ಮತ್ತು ಕೌಟುಂಬಿಕ ಮೌಲ್ಯಗಳನ್ನು ಸಾರುವ ಈ ಧಾರಾವಾಹಿ ಜನ ಮೆಚ್ಚುಗೆ ಗಳಿಸುವುದರಲ್ಲಿ ಅನುಮಾನವಿಲ್ಲ,

ಹಾಗಾದರೆ ಜುಲೈ 22ರಿಂದ ರಾತ್ರಿಯ ಊಟ ಈ ಅಣ್ಣತಂಗಿಯ ಜೊತೆಗೆ!

click me!