ಕೇರಳ ಸ್ಟೋರಿ ನೋಡಲ್ಲ, ಈ ಚಿತ್ರದ ಸಕ್ಸಸ್‌ ಡೇಂಜರಸ್‌ ಟ್ರೆಂಡ್‌: ನಾಸಿರುದ್ದೀನ್‌ ಶಾ!

By Santosh NaikFirst Published Jun 1, 2023, 9:56 PM IST
Highlights

ಸುದೀಪ್ತೋ ಸೇನ್ ನಿರ್ದೇಶನದ ದಿ ಕೇರಳ ಸ್ಟೋರಿ ಯಶಸ್ಸಿನ ಬಗ್ಗೆ ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್‌ ಶಾ ಮಾತನಾಡಿದ್ದಾರೆ. ಈ ವರ್ಷದ ಅತಿದೊಡ್ಡ ಹಿಟ್‌ ಚಿತ್ರ ಇದಾಗಿದ್ದರೂ, ಇದರ ಸಕ್ಸಸ್‌ ಅಪಾಯಕಾರಿಯಾದ ಟ್ರೆಂಡ್‌ ಸೃಷ್ಟಿ ಮಾಡುತ್ತಿದೆ ಎಂದಿದ್ದಾರೆ.
 

ಮುಂಬೈ (ಜೂ.1): ಭಾರತೀಯ ಚಿತ್ರರಂಗದ ಅತ್ಯುತ್ತಮ ಕಲಾವಿದರ ಪೈಕಿ ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್‌ ಶಾ ಕೂಡ ಒಬ್ಬರು. ಅದಲ್ಲದೆ, ತಮ್ಮ ಮನಸ್ಸಿನಲ್ಲಿರಯವ ಮಾತುಗಳನ್ನು ಮುಕ್ತವಾಗಿ ತೆರೆದಿಡುವ ನಟರ ಪೈಕಿ ಒಬ್ಬರು. ಒಟಿಟಿ ಶೋ 'ತಾಜ್‌: ರೀಜನ್‌ ಆಫ್‌ ರಿವೇಂಜ್‌' ಪ್ರಮೋಷನ್‌ನ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮಾತಿಗೆ ಸಿಕ್ಕ ನಾಸಿರುದ್ದೀನ್‌ ಶಾ, ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ಶೋನಲ್ಲಿ ಅಕ್ಬರ್‌ನ ಮಾತ್ರ ಮಾಡುತ್ತಿರುವ ನಾಸಿರುದ್ದೀನ್‌ ಶಾ, ಇತ್ತೀಚೆಗೆ ಅದಾ ಶರ್ಮ ಮುಖ್ಯಭೂಮಿಕೆಯಲ್ಲಿದ್ದ ಹಾಗೂ ಸುದೀಪ್ತೋ ಸೆನ್‌ ನಿರ್ದೇಶನದ ಸೂಪರ್‌ ಹಿಟ್‌ ಚಿತ್ರ ಕೇರಳ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಕೇರಳ ಸ್ಟೋರಿ ಈ ವರ್ಷದ ಸೂಪರ್‌ ಹಿಟ್‌ ಚಿತ್ರವಾಗಿದ್ದು, ಈಗಾಗಲೇ ಗಳಿಕೆಯಲ್ಲಿ 200 ಕೋಟಿಯ ಗಡಿ ದಾಟಿದೆ. ಕೇರಳ ಸ್ಟೋರಿ ಚಿತ್ರದ ಯಶಸ್ಸು ಹಾಗೂ ಅದರ ಟ್ರೆಂಡ್‌ ಬಗ್ಗೆ ಮಾತನಾಡಿದ ನಾಸಿರುದ್ದೀನ್‌ ಶಾ, 'ಮೌಲ್ಯಯುತ ಚಿತ್ರಗಳಾದ ಭೀಡ್‌, ಅಫ್ವಾಹ್‌, ಫರಾಜ್‌ನಂಥ ಚಿತ್ರಗಳೂ ಮೂರೂ ಬಾಕ್ಸ್‌ಆಫೀಸ್‌ನಲ್ಲಿ ಸೋಲು ಕಂಡಿವೆ. ಈ ಚಿತ್ರಗಳನ್ನು ನೋಡಲು ಯಾರೂ ಕೂಡ ಥಿಯೇಟರ್‌ಗೆ ಹೋಗಲಿಲ್ಲ. ಆದರೆ, ನಾನು ಈವರೆಗೂ ನೋಡದ ಕೇರಳ ಸ್ಟೋರಿ ಚಿತ್ರವನ್ನು ನೋಡಲು ಥಿಯೇಟರ್‌ಗೆ ಸೇರಿದ್ದಾರೆ. ನಾನು ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಓದಿರುವ ಕಾರಣ, ನನಗೆ ಈ ಚಿತ್ರ ನೋಡಲು ಇಷ್ಟವಿಲ್ಲ' ಎಂದು ಹೇಳಿದ್ದಾರೆ.

ನಾಜಿ ಜರ್ಮನಿಗೆ ಹೋಲಿಸಿದ ಶಾ: ಕೇರಳ ಸ್ಟೋರಿ ಚಿತ್ರದ ಯಶಸ್ಸನ್ನು ಅಪಾಯಕಾರಿ ಟ್ರೆಂಡ್‌ ಎಂದು ನಾಸಿರುದ್ದೀನ್‌ ಶಾ ಕರೆದಿದ್ದಾರೆ. ಅದಲ್ಲದೆ, ಈ ಟ್ರೆಂಡ್‌ಅನ್ನು ನಾಜಿ ಜರ್ಮನಿಗೆ ಅವರು ಹೋಲಿಕೆ ಮಾಡಿದ್ದಾರೆ. 'ಒಂದು ಹಂತದಲ್ಲಿ ಇದು ಅಪಾಯಕಾರಿ ಟ್ರೆಂಡ್‌. ಇದರಲ್ಲಿ ಯಾವುದೇ ಅನುಮಾನವಿಲ್ಲ. ಅದರೊಂದಿಗೆ ನಾವು ಹಿಟ್ಲರ್‌ ಇದ್ದ ಸಮಯದ ನಾಜಿ ಜರ್ಮನಿಯ ರೀತಿ ಸಾಗುತ್ತಿದ್ದೇವೆ. ನಿರ್ಮಾಪಕರು ಹಾಗೂ ನಿರ್ದೇಶಕರು  ಸಹ ಆಯ್ಕೆ ಮಾಡಲ್ಪಟ್ಟವರು ಸುಪ್ರೀಂ ಲೀಡರ್‌ ಬಗ್ಗೆ ಹೊಗಳುತ್ತಾ, ಆತ ದೇಶವಾಸಿಗಳಿಗಾಗಿ ಮಾಡಿದ ಕಾರ್ಯಗಳನ್ನು ಹೊಗಳುತ್ತಾ, ಯಹೂದಿ ಸಮುದಾಯದ ಮೇಲೆ ಆಕ್ರಮಣ ಮಾಡಲಾಗಿತ್ತು. ಆ ಸಮಯದಲ್ಲಿ ಜರ್ಮನಿಯಲ್ಲಿ ಸಾಕಷ್ಟು ಸಿನಿಮಾ ನಿರ್ದೇಶಕರು ದೇಶವನ್ನು ತೊರೆದರು. ಹಾಲಿವುಡ್‌ಗೆ ಬಂದು ಅಲ್ಲಿ ಚಿತ್ರಗಳನ್ನು ಮಾಡಿದರು. ಅದೇ ರೀತಿಯ ಕಥೆ ಇಲ್ಲಿಯೂ ಆಗುತ್ತಿದೆ. ಒಂದೋ ಬಲಭಾಗದಲ್ಲಿ ಇರಿ, ತಟಸ್ಥರಾಗಿರಿ ಅಥವಾ ಸರ್ಕಾರದ ಪರವಾಗಿರಿ ಎನ್ನುವ ಸ್ಥಿತಿ ನಿರ್ಮಾಣವಾಗಿದೆ' ಎಂದಿದ್ದಾರೆ.

"ಇದು ಸಂಪೂರ್ಣವಾಗಿ ಆತಂಕಕಾರಿ ಸಮಯಗಳು. ಇತ್ತೀಚಿಗೆ ವಿದ್ಯಾವಂತರಲ್ಲೂ ಮುಸ್ಲಿಂ ದ್ವೇಷ ಫ್ಯಾಶನ್ ಆಗಿದೆ. ಆಡಳಿತ ಪಕ್ಷವು ಬಹಳ ಜಾಣತನದಿಂದ ಇದನ್ನು ಹಂಚಿಕೆ ಮಾಡಿದೆ. ನಾವು ಜಾತ್ಯತೀತ, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತೇವೆ, ಹಾಗಾದರೆ ನೀವು ಎಲ್ಲದಕ್ಕೂ ಧರ್ಮವನ್ನು ಏಕೆ ಪರಿಚಯಿಸುತ್ತಿದ್ದೀರಿ? ಎಂದು ಶಾ ಪ್ರಶ್ನೆ ಮಾಡಿದ್ದಾರೆ.

ಕೆಟ್ಟ ನಿರ್ದೇಶಕರ ಬಣ್ಣ ಬಯಲು ಮಾಡಿದ ‘ದಿ ಕೇರಳ ಸ್ಟೋರಿ’ ನಟಿ: ಸಿನಿಮಾ ಸೆಟ್‌ಗಳಲ್ಲಿ ಏನೆಲ್ಲಾ ನಡೆಯುತ್ತೆ ಗೊತ್ತಾ ?

ಎಲ್ಲಿಯವರೆಗೆ ದ್ವೇಷವನ್ನು ಹಂಚುತ್ತೀರಿ: ಮುಂದೊಂದು ದಿನದಲ್ಲಿ ಖಂಡಿತವಾಗಿ ಎಲ್ಲವೂ ಒಳ್ಳೆಯದೇ ಆಗುತ್ತದೆ ಎನ್ನುವ ನಂಬಿಕೆಯಲ್ಲಿ ಇರುವುದಾಗಿ ಶಾ ಹೇಳಿದ್ದಾರೆ. 'ಇನ್ನೊಂದು ಕಡೆಯಲ್ಲಿ ಹೇಳುವುದಾದರೆ, ದ್ವೇಷದ ವಾತಾವರಣದ ಬಗ್ಗೆ ಎಲ್ಲರೂ ಎಚ್ಚೆತ್ತುಕೊಂಡಿದ್ದಾರೆ. ಎಲ್ಲಿಯವರೆಗೂ ನೀವು ದ್ವೇಷವನ್ನು ಹಂಚುತ್ತೀರಿ? ನಾನು ಯೋಚಿಸುತ್ತೇನೆ ಮತ್ತು ನಂಬುತ್ತೇನೆ ಇದ್ದಕ್ಕಿದ್ದಂತೆ ನಮ್ಮೆಲ್ಲರನ್ನು ಆವರಿಸಿರುವ ರೀತಿಯಲ್ಲಿ ಅದು ಕಣ್ಮರೆಯಾಗುತ್ತದೆ. ಆದರೆ ಅದು ಶೀಘ್ರದಲ್ಲೇ ಆಗುವುದಿಲ್ಲ ಎಂದು ನಾಸಿರುದ್ದೀನ್ ಶಾ ಅಭಿಪ್ರಾಯಪಟ್ಟಿದ್ದಾರೆ.

ತುಂಬಾ ಮೂರ್ಖರಿದ್ದಾರೆ: ಕೇರಳ ಸ್ಟೋರಿ ವಿರುದ್ಧ ಕಿಡಿ ಕಾರಿದ ಕಮಲ್‌ಗೆ ನಿರ್ದೇಶಕ ಸುದೀಪ್ತೋ ಸೇನ್ ತಿರುಗೇಟು

click me!