
‘ಮಂಜುಮ್ಮೆಲ್ ಬಾಯ್ಸ್’ ಖ್ಯಾತಿಯ ಮಲಯಾಳಂ ನಿರ್ದೇಶಕ ಚಿದಂಬರಂ ಹಾಗೂ ‘ಕಾಂತಾರ’ ಸ್ಟಾರ್ ರಿಷಬ್ ಶೆಟ್ಟಿ ಇದೇ ಮೊದಲ ಬಾರಿಗೆ ಕೈಜೋಡಿಸುತ್ತಿದ್ದಾರೆ. ವಿಶೇಷವೆಂದರೆ, ಈ ಇಬ್ಬರು ಒಂದಲ್ಲ, ಬರೋಬ್ಬರಿ ಎರಡು ಸಿನಿಮಾಗಳಿಗಾಗಿ ಒಟ್ಟಿಗೆ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ. ಈ ಪೈಕಿ ಮೊದಲ ಸಿನಿಮಾ ಕನ್ನಡದ ಸ್ಪೋರ್ಟ್ಸ್ ಡ್ರಾಮಾ ಆಗಿರಲಿದೆ.
ಈ ಸಿನಿಮಾವನ್ನು ನಿರ್ಮಾಪಕ ಶಿಬು ತಮೀನ್ಸ್ ನಿರ್ಮಿಸಲಿದ್ದು, ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಆರಂಭಗೊಂಡಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ ಆರಂಭದಲ್ಲೇ ಸಿನಿಮಾದ ಚಿತ್ರೀಕರಣ ಶುರು ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.
ರಿಷಬ್-ಚಿದಂಬರಂ ಸಿನಿಮಾಗೆ ಶಿಬು ತಮೀನ್ಸ್ ಬಂಡವಾಳ
ಶಿಬು ತಮೀನ್ಸ್ ಅವರು ತಮ್ಮ ಥಮೀನ್ಸ್ ಫಿಲ್ಮ್ಸ್ ಹಾಗೂ ಎಚ್‌ಆರ್ ಪಿಕ್ಚರ್ಸ್ ಬ್ಯಾನರ್‌ಗಳ ಅಡಿಯಲ್ಲಿ ಹಲವು ಗಮನಾರ್ಹ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಮಲಯಾಳಂನಲ್ಲಿ ‘ಎಬಿಸಿಡಿ: ಅಮೆರಿಕನ್-ಬಾರ್ನ್ ಕನ್‌ಫ್ಯೂಸ್ಡ್ ದೇಸಿ’, ‘ಜಾಕ್ ಡ್ಯಾನಿಯಲ್ಸ್’, ‘ಮುರ’ ಸೇರಿದಂತೆ ಸಿನಿಮಾಗಳನ್ನು ನಿರ್ಮಿಸಿರುವ ಅವರು, ತಮಿಳಿನಲ್ಲಿ ‘ಪುಲಿ’, ‘ಇರು ಮುಗನ್’ ಹಾಗೂ ‘ವೀರ ಧೀರ ಸೂರನ್’ ಸಿನಿಮಾಗಳಿಗೂ ಬಂಡವಾಳ ಹೂಡಿದ್ದಾರೆ.
ಚಿದಂಬರಂ ಮತ್ತು ರಿಷಬ್ ಶೆಟ್ಟಿ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಈ ಬಹುನಿರೀಕ್ಷಿತ ಸಿನಿಮಾದ ಬಗ್ಗೆ ಮತ್ತಷ್ಟು ಮಾಹಿತಿಗಳು ಮುಂದಿನ ದಿನಗಳಲ್ಲಿ ಹೊರಬೀಳಲಿವೆ ಎಂದು ಮೂಲಗಳು ತಿಳಿಸಿವೆ.
‘ಮಂಜುಮ್ಮೆಲ್ ಬಾಯ್ಸ್’ ಮೂಲಕ ಸಂಚಲನ ಸೃಷ್ಟಿಸಿದ್ದ ಚಿದಂಬರಂ
ಚಿದಂಬರಂ 2021ರಲ್ಲಿ ‘ಜಾನ್.ಇ.ಮ್ಯಾನ್’ (Jan.E.Man) ಸಿನಿಮಾದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಬಳಿಕ ‘ಮಂಜುಮ್ಮೆಲ್ ಬಾಯ್ಸ್’ ಮೂಲಕ ಭರ್ಜರಿ ಯಶಸ್ಸು ಕಂಡು ದೇಶಾದ್ಯಂತ ಗಮನ ಸೆಳೆದರು.
‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾದ ಅದ್ಭುತ ಯಶಸ್ಸಿನ ಬಳಿಕ ಚಿದಂಬರಂ ಬಾಲಿವುಡ್‌ನ ಫ್ಯಾಂಟಮ್ ಸ್ಟುಡಿಯೋಸ್‌ಗಾಗಿ ಹಿಂದಿ ಸಿನಿಮಾವೊಂದನ್ನು ನಿರ್ದೇಶಿಸಲಿದ್ದಾರೆ ಎಂಬ ಘೋಷಣೆ ಕೂಡ ಆಗಿತ್ತು. ಆದರೆ ಆ ಪ್ರಾಜೆಕ್ಟ್ ಕುರಿತು ಇದುವರೆಗೆ ಯಾವುದೇ ಹೆಚ್ಚಿನ ಅಪ್‌ಡೇಟ್ ಹೊರಬಂದಿಲ್ಲ.
ಮತ್ತೊಂದೆಡೆ, ರಿಷಬ್ ಶೆಟ್ಟಿ ಸದ್ಯ ನಿರ್ದೇಶಕ ಪ್ರಶಾಂತ್ ವರ್ಮಾ ಅವರ ‘ಜೈ ಹನುಮಾನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಪೌರಾಣಿಕ ಚಿತ್ರವನ್ನು ಪೂರ್ಣಗೊಳಿಸಿದ ಬಳಿಕ ಅವರು ಚಿದಂಬರಂ ನಿರ್ದೇಶನದ ಈ ಹೊಸ ಪ್ರಾಜೆಕ್ಟ್‌ಗೆ ಕೈಜೋಡಿಸುವ ನಿರೀಕ್ಷೆಯಿದೆ.
ಇನ್ನು ‘ಕಾಂತಾರ’ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಜನಪ್ರಿಯತೆ ಪಡೆದಿರುವ ರಿಷಬ್ ಶೆಟ್ಟಿ ಹಾಗೂ ‘ಮಂಜುಮ್ಮೆಲ್ ಬಾಯ್ಸ್’ ಮೂಲಕ ತಮ್ಮದೇ ನಿರ್ದೇಶನದ ಛಾಪು ಮೂಡಿಸಿರುವ ಚಿದಂಬರಂ ಮೊದಲ ಬಾರಿಗೆ ಒಂದಾಗುತ್ತಿರುವುದು ಸಹಜವಾಗಿಯೇ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಅದರಲ್ಲೂ ಇವರ ಕಾಂಬಿನೇಷನ್‌ನಲ್ಲಿ ಮೊದಲ ಚಿತ್ರವೇ ಕನ್ನಡದ ಸ್ಪೋರ್ಟ್ಸ್ ಡ್ರಾಮಾ ಆಗಿರುವುದು ಮತ್ತಷ್ಟು ವಿಶೇಷ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.