
ವಿಭಿನ್ನ ಕಥಾಹಂದರ ಹೊಂದಿರುವ ಸುಂದರ ಸಿನಿಮಾ ‘ಪ್ರೇಮದ ಊರಲ್ಲಿ’ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಸೆಪ್ಟೆಂಬರ್ 25, 2026ರಂದು ರಾಜ್ಯಾದ್ಯಂತ ತೆರೆಕಂಡಿದ್ದು, ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಭರ್ಜರಿ ಸಕ್ಸಸ್ ಹಿನ್ನೆಲೆಯಲ್ಲಿ ಚಿತ್ರತಂಡವು ‘ಸಕ್ಸಸ್ ಮೀಟ್’ ನಡೆಸಿತ್ತು. ಈ ವೇಳೆ ಹಿರಿಯ ನಟ ರಂಗಾಯಣ ರಘು.. ಚಿತ್ರದ ಗೆಲುವಿನ ಹಿಂದಿರುವ ನೈಜ ಸತ್ಯ ಹಾಗೂ ಕಣ್ಣೀರ ಕಥೆಗಳನ್ನು ಹಂಚಿಕೊಂಡರು.
ಮನೋಜ್ ಕುಮಾರ್ (Manoj Kumar) ನಿರ್ದೇಶನ ಈ ಚಿತ್ರದಲ್ಲಿ ರಂಗಾಯಣ ರಘು ‘ನಾಗಣ್ಣ’ ಎಂಬ ಪಾತ್ರದಲ್ಲಿ ಮಿಂಚಿದ್ದಾರೆ. ನಾಯಕನಾಗಿ ಶ್ರೀ ರಾಮ್ (ಸಂತು ಪಾತ್ರ) ಮತ್ತು ನಾಯಕಿಯಾಗಿ ತಪಸ್ವಿನಿ ಪೂಣಚ್ಚ (ರುಕ್ಮಿಣಿ ಪಾತ್ರ) ಜೀವ ತುಂಬಿದ್ದಾರೆ.
ರಂಗಾಯಣ ರಘು ಮಾತನ್ನಾಡಿ.. ಚಿತ್ರದ ಬಗ್ಗೆ ಭಾರೀ ಪ್ರಶಂಸೆಯ ಕರೆಗಳು ಬರುತ್ತಲೇ ಇವೆ. ಡೈರೆಕ್ಟರ್ ಶಂಕರ್ ಗುರು, ಸಂಭಾಷಣೆಕಾರ ಕ್ರಾಂತಿ ಕುಮಾರ್, ಕಾಂತರಾಜು, ನಿರ್ದೇಶಕ ಯೋಗರಾಜ್ ಭಟ್, ನಮ್ಮ ಡಾಲಿ ಧನಂಜಯ ಸೇರಿದಂತೆ ಚಿತ್ರರಂಗದ ಹಲವರು ಕರೆ ಮಾಡಿ 'ಅಪ್ಪಾ.. ಎಂತಹ ಸಿನಿಮಾ ಕೊಟ್ಟಿದ್ದೀರಿ' ಎಂದು ಸಂಭ್ರಮಿಸುತ್ತಿದ್ದಾರೆ. ಕಡ್ಡಿಪುಡಿ ಚಂದ್ರು ಬೆಳಗ್ಗೆ 7 ಗಂಟೆಗೆಲ್ಲ ಫೋನ್ ಮಾಡಿ.. ಆಂಧ್ರದಲ್ಲಿ ತೆಲುಗಿನವರು, ಉರ್ದು ಮಾತನಾಡುವ ಯುವತಿಯರು ಚಿತ್ರದ ಬಗ್ಗೆ ಹೆಮ್ಮೆಯಿಂದ ಮಾತನಾಡಿರೋ ವಿಡಿಯೋಗಳನ್ನು ಕಳುಹಿಸುತ್ತಿದ್ದಾರೆ. ಇದು ಯಾವ ದೇವರ ಕೃಪೆಯೋ, ಯಾವ ಸಿನಿಮಾದ ಆಶೀರ್ವಾದವೋ ಗೊತ್ತಿಲ್ಲ. ಜನ ನಮ್ಮ ಕೈಹಿಡಿದಿದ್ದಾರೆ ಎಂದು ಭಾವುಕರಾದರು.
ನಮ್ಮ ನಿರ್ಮಾಪಕರ ಕಥೆ ಕೇಳಿದರೆ ಕರುಳು ಕಿವುಚುತ್ತದೆ.. ಪ್ರಶಾಂತ್ ಬನ್ ಬೇಕರಿ ಕೆಲಸ ಬಿಟ್ಟ, ರವಿ ಕೋಳಿ ಫಾರ್ಮ್ ಬಿಟ್ಟು ಸಿನಿಮಾ ಸಹವಾಸಕ್ಕೆ ಬಂದ.. ಇನ್ನು ದೇವೇಂದ್ರ ಸರ್ ಮನೆಯಲ್ಲಿದ್ದ ಅಕ್ಕನ ಬಂಗಾರದ ಒಡವೆಗಳನ್ನೆಲ್ಲಾ ಬ್ಯಾಂಕಿನಲ್ಲಿ ಅಡವಿಟ್ಟು ಸಿನಿಮಾ ಕಟ್ಟಿದರು.. ಮೊದಲಿಗೆ ಖುಷಿಯಿಂದ ಕಲಕಲ ಅಂತಿದ್ದ ನಿರ್ಮಾಪಕರು, ಸಿನಿಮಾ ಮುಗಿಯುವ ಹೊತ್ತಿಗೆ ಕಲೆಕ್ಷನ್ ಚಿಂತೆಯಲ್ಲಿ ಮುಖ ಬಾಡಿಸಿಕೊಂಡು ಕುಳಿತಿದ್ದರು. ಆದರೆ ಇಂದು ಆ ಎಲ್ಲಾ ಕಷ್ಟಗಳು ದೂರ ಆಗಿವೆ.. ಸಿನಿಮಾ ಗೆದ್ದಿದ್ದು ಎಲ್ಲರ ಮುಖದಲ್ಲೂ ನಗು ತಂದಿದೆ ಎಂದಿದ್ದಾರೆ..
ನನಗೆ ಕಾಲಿನ ಲಿಗಮೆಂಟ್ ಸಮಸ್ಯೆ ಇದೆ. ಜೊತೆಗೆ L3-L4 ಬೆನ್ನುಮೂಳೆಯ ತೊಂದರೆಯೂ ಇದೆ. ಆದರೂ ಸಿನಿಮಾಗಾಗಿ ಜೋಳದ ಹೊಲಗಳಲ್ಲಿ, ಮುಳ್ಳಿನ ಹಾದಿಗಳಲ್ಲಿ ಹೆಜ್ಜೆ ಹಾಕಿ ಕಷ್ಟಪಟ್ಟು ಶೂಟಿಂಗ್ ಮಾಡಿದೆವು. ಅಲ್ಲಿ ಕೆಲಸ ಮಾಡಿದ ಪ್ರೊಡಕ್ಷನ್ ಹುಡುಗರು, ಟೆಕ್ನಿಷಿಯನ್ಸ್‌ಗಳ ಪರಿಶ್ರಮಕ್ಕೆ ಸಿಕ್ಕ ಫಲವಿದು.. ಮಕ್ಕಳ ಮುಗ್ಧತೆ ಮತ್ತು ಹಿರಿಯರ ಆಶೀರ್ವಾದವೇ ನಮ್ಮ ಚಿತ್ರದ ಅತಿ ದೊಡ್ಡ ಶಕ್ತಿ ಎಂದು ಕೊಂಡಾಡಿದರು..
ಚಿತ್ರಕ್ಕೆ 'ಪ್ರೇಮದ ಊರಲ್ಲಿ' ಅಂತ ಹೆಸರಿಟ್ಟಿದ್ದೇ ಯೋಗಾಯೋಗ. ರವಿಚಂದ್ರನ್ ಸರ್ ಅವರ 'ಪ್ರೇಮಲೋಕ'ದಂತೆ ನಮ್ಮ ಚಿತ್ರಕ್ಕೂ 'ಪ್ರೇ' ಅಕ್ಷರ ಅದೃಷ್ಟ ತಂದಿದೆ. ಜಯಣ್ಣ-ಭೋಗಣ್ಣ ಅವರು ಜೆಸಿಬಿ ತರಹ ನಿಂತು ಥಿಯೇಟರ್‌ಗಳನ್ನು ಕೊಡಿಸಿದ್ದಾರೆ. ಕೆಆರ್‌ಜಿ ಕಾರ್ತಿಕ್ ವಿದೇಶಗಳಲ್ಲೂ ಸಿನಿಮಾ ರಿಲೀಸ್ ಮಾಡಿದ್ದಾರೆ. 150 ಸೆಂಟರ್‌ಗಳಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇನ್ನೂ 50 ಸೆಂಟರ್‌ಗಳಿಂದ ಬೇಡಿಕೆ ಬಂದಿದೆ. ಬೆಳಗ್ಗೆ 6:30ರ ಪ್ರದರ್ಶನಗಳೂ ಹೌಸ್‌ಫುಲ್ ಆಗುತ್ತಿವೆ. ಪ್ರೇಕ್ಷಕರು ನೀಡಿದ ಅಪಾರ ಪ್ರೀತಿಗೆ ನಾನು ಆಜೀವ ಪರ್ಯಂತ ಋಣಿ ಎಂದು ಧನ್ಯವಾದ ಅರ್ಪಿಸಿದರು.
ರೈತನಿಗೆ ಹೆಣ್ಣು ಕೊಡಲ್ಲ ಎನ್ನುವ ಗಂಭೀರ ವಿಚಾರವನ್ನು ಇಟ್ಟುಕೊಂಡು.. ಅದಕ್ಕೆ ಸುಂದರ ಪ್ರೇಮಕಥೆಯನ್ನು ಬೆರೆಸಿ ನಿರ್ದೇಶಕ ಮನೋಜ್ ಕುಮಾರ್ ಅದ್ಭುತವಾಗಿ ತೆರೆಗೆ ತಂದಿದ್ದಾರೆ.. ಈ ಗೆಲುವು ಕೇವಲ ನಟರದ್ದಲ್ಲ.. ಇಡೀ ಚಿತ್ರತಂಡ ಮತ್ತು ಮಾಧ್ಯಮಗಳ ಗೆಲುವು.. ಎಂದು ರಂಗಾಯಣ ರಘು ತಮ್ಮ ಮಾತನ್ನ ಮುಗಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.