
"ಕಣ್ ಕಣ್ಣ ಸಲಿಗೆ ಈಗ ನಿಜವಾದ ದಾಂಪತ್ಯಕ್ಕೆ! ಸ್ಯಾಂಡಲ್‌ವುಡ್ ಗ್ಲಾಮರ್ ಬ್ಯೂಟಿ ಶರ್ಮಿಳಾ ಮಾಂಡ್ರೆ ಕೈ ಹಿಡಿಯಲಿರುವ ಆ 'ಮಹಾರಾಜ' ಯಾರು?"
ಒಂದು ಕಾಲದಲ್ಲಿ ಕನ್ನಡ ಸಿನಿಮಾರಂಗದಲ್ಲಿ ಮಿಂಚಿದ್ದ ನಟನಟಿಯರು ಒಬ್ಬೊಬ್ಬರಾಗಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋದು ಗೊ ತ್ತಿರೋ ಸಂಗತಿ. ಅದಿತಿ ಪ್ರಭುದೇವ, ವಸಿಷ್ಠ ಸಿಂಹ-ಹರಿಪ್ರಿಯಾ, ಡಾಲಿ ಧನಂಜಯ್ ಹೀಗೆ ಸಾಲು ಸಾಲು ತಾರೆಯರು ದಾಂಪತ್ಯಕ್ಕೆ ಕಾಲಿಟ್ಟು ಸಾಕಷ್ಟು ಕಾಲವಾಗಿದೆ. ಇದೀಗ, ಇದೇ ಸಾಲಿಗೆ ಸೇರಲಿದ್ದಾರೆ ಎಂಬ ಸುದ್ದಿ ಕೊಟ್ಟಿದ್ದಾರೆ ನಟಿ ಶರ್ಮಿಳಾ ಮಾಂಡ್ರೆ. ತನ್ನ ಸ್ನಿಗ್ಧ ಸೌಂದರ್ಯ ಮತ್ತು ಮನೋಜ್ಞ ನಟನೆಯಿಂದ ಸುಮಾರು ಒಂದೂವರೆ ದಶಕಗಳಿಂದ ಕನ್ನಡಿಗರ ಮನಗೆದ್ದಿರುವ 'ಸಜನಿ' ಶರ್ಮಿಳಾ ಮಾಂಡ್ರೆ (Sharmiela Mandre) ಈಗ ಹಸೆಮಣೆ ಏರಲು ಸಜ್ಜಾಗಿದ್ದಾರೆ!
ಕಾಲಿವುಡ್ ನಿರ್ಮಾಪಕನ ಜೊತೆ 'ಕಣ್ ಕಣ್ಣ ಸಲಿಗೆ'
ನಟಿ ಶರ್ಮಿಳಾ ಮಾಂಡ್ರೆ ಮದುವೆಯಾಗಲಿರುವ ಆ ಅದೃಷ್ಟವಂತ ಯಾರು ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಅವರು ಬೇರೆ ಯಾರೂ ಅಲ್ಲ, ತಮಿಳು ಚಿತ್ರರಂಗದ ಯಶಸ್ವಿ ನಿರ್ಮಾಪಕ ಸುಧನ್ ಸುಂದರಂ. ಇತ್ತೀಚೆಗೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ, ವಿಜಯ್ ಸೇತುಪತಿ ನಟನೆಯ 'ಮಹಾರಾಜ' ಸಿನಿಮಾವನ್ನು ನಿರ್ಮಿಸಿದ್ದು ಇದೇ ಸುಧನ್ ಸುಂದರಂ. ತೆರೆಯ ಹಿಂದೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಸುಧನ್ (Sudhan Sundaram), ಈಗ ಶರ್ಮಿಳಾ ಅವರ ಜೀವನದ 'ರಿಯಲ್ ಹೀರೊ' ಆಗಿ ಎಂಟ್ರಿ ಕೊಡುತ್ತಿದ್ದಾರೆ.
ಬಲ್ಲ ಮೂಲಗಳ ಪ್ರಕಾರ, ಈ ಜೋಡಿಯ ನಿಶ್ಚಿತಾರ್ಥ ಜೂನ್ 25ರಂದು ಅತ್ಯಂತ ಸರಳವಾಗಿ, ಕೇವಲ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ನಿಶ್ಚಿತಾರ್ಥ ಸರಳವಾಗಿದ್ದರೂ, ಮದುವೆ ಮಾತ್ರ ಅತ್ಯಂತ ಅದ್ಧೂರಿಯಾಗಿ ತಮಿಳುನಾಡು ಅಥವಾ ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ಇದೆ. ಸದ್ಯಕ್ಕೆ ಈ ಬಗ್ಗೆ ಶರ್ಮಿಳಾ ಆಗಲಿ ಅಥವಾ ಸುಧನ್ ಆಗಲಿ ಅಧಿಕೃತ ಮುದ್ರೆ ಒತ್ತಿಲ್ಲವಾದರೂ, ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಆಗಲೇ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.
2007ರಲ್ಲಿ 'ಸಜನಿ' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಶರ್ಮಿಳಾ, ಅಂದಿನಿಂದ ಇಂದಿನವರೆಗೆ ತನ್ನ ಬೇಡಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ನವಗ್ರಹ' ಚಿತ್ರದಲ್ಲಿ ಶರ್ಮಿಳಾ ಅವರ ನಟನೆ ಮತ್ತು 'ಕಣ್ ಕಣ್ಣ ಸಲಿಗೆ' ಹಾಡು ಇಂದಿಗೂ ಎವರ್‌ಗ್ರೀನ್. ಇತ್ತೀಚೆಗೆ ದರ್ಶನ್ ಅವರ 'ಡೆವಿಲ್' ಚಿತ್ರದಲ್ಲೂ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಮಿಂಚಿದ್ದರು. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿರುವ ಶರ್ಮಿಳಾ, ಈಗ ಪರಭಾಷೆಯ ನಿರ್ಮಾಪಕನನ್ನೇ ವರಿಸುತ್ತಿರುವುದು ವಿಶೇಷ.
ನಟಿಯಾಗಿ ಮಾತ್ರವಲ್ಲ, ನಿರ್ಮಾಪಕಿಯಾಗಿಯೂ ಸೈ!
ಶರ್ಮಿಳಾ ಕೇವಲ ಕ್ಯಾಮೆರಾ ಮುಂದೆ ನಿಲ್ಲುವ ನಟಿಯಲ್ಲ, ಅವರು ಕ್ಯಾಮೆರಾ ಹಿಂದೆ ಬಂಡವಾಳ ಹೂಡುವ ಧೈರ್ಯವಂತ ನಿರ್ಮಾಪಕಿಯೂ ಹೌದು. ಈಗಾಗಲೇ ಕನ್ನಡ ಮತ್ತು ತಮಿಳಿನ ಕೆಲವು ಸಿನಿಮಾಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ. ಹೀಗಿರುವಾಗ, ಸಿನಿಮಾ ಕ್ಷೇತ್ರದವರನ್ನೇ ಮದುವೆಯಾಗುತ್ತಿರುವುದು ಅವರ ವೃತ್ತಿಜೀವನಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ ಎಂಬುದು ಸಿನಿಮಾ ಪಂಡಿತರ ಲೆಕ್ಕಾಚಾರ.
ಆದರೆ ಅಭಿಮಾನಿಗಳಲ್ಲಿ ಈಗ ಒಂದೇ ಪ್ರಶ್ನೆ ಕಾಡುತ್ತಿದೆ. ಮದುವೆಯ ನಂತರ ಶರ್ಮಿಳಾ ಮಾಂಡ್ರೆ ಬಣ್ಣದ ಲೋಕಕ್ಕೆ ಗುಡ್‌ಬೈ ಹೇಳ್ತಾರಾ? ಅಥವಾ ನಟನೆಯನ್ನು ಮುಂದುವರಿಸುತ್ತಾರಾ? ಸುಧನ್ ಸುಂದರಂ ಮತ್ತು ಶರ್ಮಿಳಾ ಅವರ ಈ ಹೊಸ ಇನ್ನಿಂಗ್ಸ್ ಸುಖಮಯವಾಗಿರಲಿ ಎಂದು ಆಶಿಸೋಣ. ಅಧಿಕೃತ ಘೋಷಣೆಗಾಗಿ ಇಡೀ ಸ್ಯಾಂಡಲ್‌ವುಡ್ ಕಾದು ಕುಳಿತಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.