
ಬಾಲಿವುಡ್‌ನ 'ಖಿಲಾಡಿ' ಅಕ್ಷಯ್ ಕುಮಾರ್ ತಮ್ಮ ಶಿಸ್ತಿನ ಜೀವನಶೈಲಿ ಮತ್ತು ಸಮಯ ಪಾಲನೆಗೆ ಹೆಸರುವಾಸಿ. ಶೂಟಿಂಗ್ ಸೆಟ್‌ಗೆ ಎಲ್ಲರಿಗಿಂತ ಮೊದಲು ಬಂದು, ಕೆಲಸ ಮುಗಿಸಿ ಮನೆಗೆ ತೆರಳೋದು ಅವರ ಕೆಲಸ. ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಅಕ್ಷಯ್ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ಅನ್ನೋದಕ್ಕೆ ಇಂಟರೆಸ್ಟಿಂಗ್ ಕಥೆಯೊಂದು ಇತ್ತೀಚೆಗೆ ಹೊರಬಿದ್ದಿದೆ. 'ತೀಸ್ ಮಾರ್ ಖಾನ್' ಸಿನಿಮಾ ಶೂಟಿಂಗ್ ವೇಳೆ ಅಕ್ಷಯ್, ಸೆಟ್‌ಗೆ ಹೋಗಿಬರಲು ಹೆಲಿಕಾಪ್ಟರ್ ಬಳಸುತ್ತಿದ್ದರಂತೆ! ಬನ್ನಿ, ಆ ಕಥೆ ಏನು ಅಂತ ನೋಡೋಣ.
ಶೂಟಿಂಗ್ ಮುಗಿದ ತಕ್ಷಣ ಹೆಲಿಕಾಪ್ಟರ್‌ನಲ್ಲಿ ಮನೆಗೆ!
ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನ ಚಾಟ್ ಶೋ ಒಂದರಲ್ಲಿ ನಿರ್ದೇಶಕಿ ಫರಾ ಖಾನ್ ಈ ಘಟನೆಯನ್ನು ಹಂಚಿಕೊಂಡಿದ್ದಾರೆ. ಈ ಶೋನಲ್ಲಿ ಅಕ್ಷಯ್ ಕುಮಾರ್, ಫರಾ ಖಾನ್, ರಾಜ್‌ಪಾಲ್ ಯಾದವ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಭಾಗವಹಿಸಿದ್ದರು. ಆಗ ಫರಾ ಖಾನ್, 'ತೀಸ್ ಮಾರ್ ಖಾನ್' ಶೂಟಿಂಗ್ ಮುಂಬೈನಿಂದ ಸುಮಾರು ಎರಡೂವರೆ ಗಂಟೆ ದೂರದಲ್ಲಿರುವ ಮಹಾರಾಷ್ಟ್ರದ ಮಾಲ್‌ಶೇಜ್‌ನಲ್ಲಿ ನಡೀತಿತ್ತು ಎಂದು ನೆನಪಿಸಿಕೊಂಡರು.
ಬೆಂಗಳೂರಿನಿಂದ ಮೈಸೂರಿಗೆ ಹೋಗುವಷ್ಟು ಸಮಯ ಅಂದುಕೊಳ್ಳಿ. ಇಡೀ ಚಿತ್ರತಂಡ ಅಲ್ಲೇ ಉಳಿದುಕೊಂಡಿತ್ತು. ಆದರೆ ಅಕ್ಷಯ್ ಕುಮಾರ್ ಮಾತ್ರ ಪ್ರತಿದಿನ ಶೂಟಿಂಗ್ ಮುಗಿಸಿ ಮನೆಗೆ ವಾಪಸ್ ಹೋಗಿ, ಮರುದಿನ ಬೆಳಗ್ಗೆ ಸರಿಯಾದ ಸಮಯಕ್ಕೆ ಸೆಟ್‌ನಲ್ಲಿ ಹಾಜರಿರುತ್ತಿದ್ದರು. ಇದನ್ನು ಕೇಳಿ ರಾಜ್‌ಪಾಲ್ ಯಾದವ್ ಅಚ್ಚರಿಪಟ್ಟು, 'ಅದು ಹೇಗೆ ಸಾಧ್ಯ?' ಎಂದು ಕೇಳಿದರು. ಆಗ ಅಕ್ಷಯ್ ನಗುತ್ತಲೇ, 'ಹೆಲಿಕಾಪ್ಟರ್‌ನಲ್ಲಿ' ಎಂದು ಉತ್ತರಿಸಿದರು.
ಫರಾ ಕಾಲೆಳೆದರು, ಅಕ್ಷಯ್ ತಿರುಗೇಟು ಕೊಟ್ಟರು
ಫರಾ ಖಾನ್ ನಗುತ್ತಾ, 'ಒಬ್ಬ ನಟ ಹೆಲಿಕಾಪ್ಟರ್ ಅನ್ನು ಟ್ಯಾಕ್ಸಿಯಂತೆ ಬಳಸಿದ್ದನ್ನು ನಾನು ಮೊದಲ ಬಾರಿಗೆ ನೋಡಿದ್ದು ಆಗಲೇ' ಎಂದು ತಮಾಷೆ ಮಾಡಿದರು. ಆದರೆ, ಅಕ್ಷಯ್ ಯಾವಾಗಲೂ ಸಮಯಕ್ಕೆ ಸರಿಯಾಗಿ ಸೆಟ್‌ನಲ್ಲಿ ಇರುತ್ತಿದ್ದರು ಎಂಬುದನ್ನು ಒಪ್ಪಿಕೊಂಡರು. ಬೆಳಗ್ಗೆ 8 ಗಂಟೆಗೆ ಶೂಟಿಂಗ್ ಅಂದರೆ, ಅಕ್ಷಯ್ 7:45ಕ್ಕೇ ಲೊಕೇಶನ್‌ನಲ್ಲಿ ರೆಡಿಯಾಗಿರುತ್ತಿದ್ದರಂತೆ.
ಇದಕ್ಕೆ ಅಕ್ಷಯ್ ಕುಮಾರ್ ತಮಾಷೆಯಾಗಿ, 'ಅದಕ್ಕೇನಂತೆ, ನಾನೇ ಆ ಸಿನಿಮಾದ ನಿರ್ಮಾಪಕ' ಎಂದರು. ತಕ್ಷಣ ಫರಾ ಖಾನ್, 'ನಾನೂ ನಿರ್ಮಾಪಕಿ ಆಗಿದ್ದೆ, ನನ್ನ ದುಡ್ಡು ತಿಂದ' ಎಂದು ಕಾಲೆಳೆದರು. ಅದಕ್ಕೆ ಅಕ್ಷಯ್, 'ಈ ಸಿನಿಮಾದಿಂದ ಅತಿ ಹೆಚ್ಚು ದುಡ್ಡು ಮಾಡಿದ್ದೇ ನೀನು' ಎಂದು ತಿರುಗೇಟು ನೀಡಿದರು.
'ತೀಸ್ ಮಾರ್ ಖಾನ್' ಗಳಿಕೆ ಎಷ್ಟಿತ್ತು?
ಬಿಡುಗಡೆಯಾದಾಗ 'ತೀಸ್ ಮಾರ್ ಖಾನ್' ಚಿತ್ರಕ್ಕೆ ವಿಮರ್ಶಕರಿಂದ ಅಷ್ಟೇನೂ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆದರೆ, ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಸುಮಾರು 45 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ, ವಿಶ್ವಾದ್ಯಂತ ಸುಮಾರು 102 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಮುಖ್ಯಭೂಮಿಕೆಯಲ್ಲಿದ್ದರು. ಇವರ ಜೊತೆಗೆ ಅಕ್ಷಯ್ ಖನ್ನಾ, ರಾಜ್‌ಪಾಲ್ ಯಾದವ್, ರಘು ರಾಮ್, ರಾಜೀವ್ ಲಕ್ಷ್ಮಣ್, ಅಲಿ ಅಸ್ಗರ್, ಸಚಿನ್ ಖೇಡೇಕರ್, ಮುರಳಿ ಶರ್ಮಾ, ಅಪರಾ ಮೆಹ್ತಾ ಮತ್ತು ಆರ್ಯ ಬಬ್ಬರ್ ಅವರಂತಹ ಕಲಾವಿದರು ನಟಿಸಿದ್ದರು. ಸಲ್ಮಾನ್ ಖಾನ್, ಅನಿಲ್ ಕಪೂರ್, ಫರಾ ಖಾನ್ ಮತ್ತು ಚಂಕಿ ಪಾಂಡೆ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.