ಸೋನು ನಿಗಮ್ ಅವರು ತಮ್ಮ ಮಧುರ ಧ್ವನಿಯ ಮೂಲಕ ಜನರ ನೆಚ್ಚಿನ ಗಾಯಕರಾಗಿದ್ದಾರೆ. ಸದ್ಯ ಅವರು ಕಷ್ಟದ ದಿನಗಳನ್ನು ಎದುರಿಸುತ್ತಿದ್ದರೂ ಸಹ, ತಮ್ಮ ಕೆಲಸದಿಂದ ಯಾವುದೇ ವಿರಾಮ ತೆಗೆದುಕೊಂಡಿಲ್ಲ. ಇತ್ತೀಚೆಗೆ ಅವರು ವಿಡಿಯೋ ಒಂದನ್ನು ಮಾಡುವ ಮೂಲಕ ಅಭಿಮಾನಿಗಳಿಗೆ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ತಮಗೆ ನರಗಳ ಗಂಭೀರ ಕಾಯಿಲೆ (Nerve Disease) ಇರುವುದಾಗಿ ಮತ್ತು ಇದರಿಂದ ತೀವ್ರ ನೋವು ಹಾಗೂ ತೊಂದರೆಯನ್ನು ಅನುಭವಿಸುತ್ತಿರುವುದಾಗಿ ತಿಳಿಸಿದ್ದಾರೆ. ಈ ಕಾಯಿಲೆಯಿಂದಾಗಿ ಅವರು ಕಳೆದ ಕೆಲವು ವಾರಗಳಿಂದ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದು, ಇದು ಸುಲಭವಾಗಿಲ್ಲ. ಹಲವು MRI ಮತ್ತು CT ಸ್ಕ್ಯಾನ್‌ಗಳನ್ನು ಮಾಡಿಸಿಕೊಂಡಿದ್ದು, ಚಿಕಿತ್ಸೆಯ ಭಾಗವಾಗಿ ಔಷಧಿಗಳನ್ನೂ ತೆಗೆದುಕೊಳ್ಳುತ್ತಿದ್ದಾರೆ. ಜೊತೆಗೆ ನೋವಿನಿಂದ ಕೂಡಿದ ಫಿಸಿಯೋಥೆರಪಿಯನ್ನೂ ಮಾಡಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಸೋನು ನಿಗಮ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಈ ಮಾಹಿತಿ ನೀಡಿದ್ದಾರೆ. ಇದರ ಕ್ಯಾಪ್ಷನ್‌ನಲ್ಲಿ '13 ಜೂನ್ ಮುಂಬೈ' ಎಂದು ಬರೆದು, ಬ್ಯಾಂಡೇಜ್ ಇರುವ ಹೃದಯದ ಇಮೋಜಿಯನ್ನು ಹಾಕಿದ್ದಾರೆ. ವಿಡಿಯೋದಲ್ಲಿ ಅವರು ಕುರ್ಚಿಯೊಂದರ ಮೇಲೆ ಕುಳಿತಿದ್ದು, ಫಾರ್ಮಲ್ ಶರ್ಟ್‌ನ ಕೆಲವು ಗುಂಡಿಗಳನ್ನು ಬಿಚ್ಚಿದ್ದಾರೆ. ಇದರಿಂದ ಅವರ ಕುತ್ತಿಗೆಯ ಬಳಿ ಹಾಕಿರುವ ಬ್ಯಾಂಡೇಜ್ ಸ್ಪಷ್ಟವಾಗಿ ಕಾಣಿಸುತ್ತಿದೆ. ವಿಡಿಯೋದಲ್ಲಿ ಮಾತನಾಡುತ್ತಾ, "ನನ್ನ ಕುತ್ತಿಗೆಯ ಭಾಗದ ನರಗಳು ಬ್ಲಾಕ್ ಆಗಿವೆ. ಕಳೆದ ಒಂದು ವಾರದಿಂದ ನಾನು MRI, CT ಸ್ಕ್ಯಾನ್ ಮತ್ತು ಫಿಸಿಯೋಥೆರಪಿಯ ನೋವನ್ನು ಅನುಭವಿಸುತ್ತಿದ್ದೇನೆ. ಈಗ ಪೇನ್‌ಕಿಲ್ಲರ್ ತೆಗೆದುಕೊಳ್ಳುತ್ತಿದ್ದು, ಇದರಿಂದ ನನ್ನ ಗಂಟಲು ಕೂಡ ಸ್ವಲ್ಪ ಭಾರವಾಗಿದೆ. ಸುಮಾರು ಒಂದು ತಿಂಗಳು 10 ದಿನಗಳ ನಂತರ ಇಂದು ನಾನು ಲೈವ್ ಪರ್ಫಾರ್ಮೆನ್ಸ್ ನೀಡುತ್ತಿದ್ದೇನೆ. ಹಾಗಾಗಿ ಇಂದು ನನ್ನ ಆತ್ಮವಿಶ್ವಾಸ ಸ್ವಲ್ಪ ಕಡಿಮೆಯಿದೆ. ಆದರೆ ನರಗಳನ್ನು ರಿಲ್ಯಾಕ್ಸ್ ಮಾಡಲು ತೆಗೆದುಕೊಳ್ಳುತ್ತಿರುವ ಔಷಧಿಗಳ ಪರಿಣಾಮ ಗಂಟಲಿನ ಮೇಲೂ ಆಗುತ್ತಿದೆ. ಪರವಾಗಿಲ್ಲ, ದೇವರು ನನಗೆ ವೇದಿಕೆಯ ಮೇಲೆ ಶಕ್ತಿ ನೀಡಲಿ" ಎಂದು ಕುತ್ತಿಗೆಯ ಕಡೆಗೆ ಕೈ ತೋರಿಸುತ್ತಾ ಹೇಳಿದ್ದಾರೆ.
ಈ ಪರಿಸ್ಥಿತಿಯಿಂದಾಗಿ ಅವರು ಸತತವಾಗಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ಚಿಕಿತ್ಸೆಯ ಸಮಯದಲ್ಲಿ ಅವರಿಗೆ ನೀಡಲಾದ ಮಸಲ್-ರಿಲ್ಯಾಕ್ಸೆಂಟ್ (ಸ್ನಾಯು ಸಡಿಲಗೊಳಿಸುವ) ಔಷಧಿಗಳು ಅವರ ಗಂಟಲಿನ ಮೇಲೂ ಪ್ರಭಾವ ಬೀರಿವೆ. ಲೈವ್ ಪರ್ಫಾರ್ಮೆನ್ಸ್ ನೀಡಲು ಸಿದ್ಧರಾಗುತ್ತಿರುವ ಯಾವುದೇ ಗಾಯಕನಿಗೆ ಇದು ಕಳವಳಕಾರಿ ಸಂಗತಿಯಾಗಿದೆ. ಆದರೂ ಸೋನು ನಿಗಮ್ ಅವರು ತಮ್ಮ ಕಮಿಟ್‌ಮೆಂಟ್‌ಗೆ ಬದ್ಧರಾಗಿದ್ದು, ಮುಂಬೈನಲ್ಲಿ ನಿಗದಿಯಾಗಿದ್ದ ತಮ್ಮ ಶೋ ಅನ್ನು ರದ್ದುಗೊಳಿಸದೆ ನೋವಿನ ನಡುವೆಯೂ ಹಾಡಲು ನಿರ್ಧರಿಸಿದ್ದಾರೆ.
ಸೋನು ನಿಗಮ್ ಅವರಿಗೆ 19 ನೇ ವಯಸ್ಸಿನಲ್ಲಿ ಗುಲ್ಶನ್ ಕುಮಾರ್ ಅವರ ಮೂಲಕ ಮೊದಲ ಬ್ರೇಕ್ ಸಿಕ್ಕಿತು. ನಂತರ ಅವರು 1995 ರಲ್ಲಿ 'ಸ ರಿ ಗ ಮ' ಕಾರ್ಯಕ್ರಮ ನಡೆಸಿಕೊಟ್ಟರು. 1990 ರ ದಶಕದ ಆರಂಭದಲ್ಲಿ ಸ್ಟೇಜ್ ಶೋಗಳ ಮೂಲಕ ವೃತ್ತಿಜೀವನ ಆರಂಭಿಸಿದ ಅವರು, 'ಓ ಆಸ್ಮಾನ್ ವಾಲೆ ಜಮೀನ್ ಪರ್ ಉತರ್ ಕೆ ದೇಖ್' ಹಾಡಿನ ಮೂಲಕ ಹಿಂದಿ ಸಿನಿಮಾಗಳಲ್ಲಿ ಪ್ಲೇಬ್ಯಾಕ್ ಸಿಂಗರ್ ಆಗಿ ಪದಾರ್ಪಣೆ ಮಾಡಿದರು. ಅವರು ವಿವಿಧ ಭಾಷೆಗಳಲ್ಲಿ 5000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ ಮತ್ತು 'ಕಲ್ ಹೋ ನಾ ಹೋ' ಚಿತ್ರದ ಟೈಟಲ್ ಟ್ರ್ಯಾಕ್‌ಗಾಗಿ ರಾಷ್ಟ್ರಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಸದ್ಯ ಅವರು ಭಾರತದಾದ್ಯಂತ ಹಲವು ಲೈವ್ ಶೋಗಳನ್ನು ನಡೆಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.