ಯಶ್ 'ರಾಮಾಯಣ'ಕ್ಕೆ ರಿಷಬ್ ಶೆಟ್ಟಿ ವಿಶೇಷ ಸಂದೇಶ: ಕನ್ನಡಿಗರ ಗಮನ ಸೆಳೆದ ಪೋಸ್ಟ್‌ನಲ್ಲೇನಿದೆ?

Published : Nov 05, 2026, 03:17 PM IST
Rishab Shetty Wishes Yash

ಸಾರಾಂಶ

ಯಶ್ ನಟನೆಯ ರಾಮಾಯಣ ಸಿನಿಮಾಗೆ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ವಿಶೇಷ ಶುಭಾಶಯ ಕೋರಿದ್ದಾರೆ. ರಾಮಾಯಣ ಇತಿಹಾಸ ಸೃಷ್ಟಿಸಲಿ, ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ ಎಂದ ರಿಷಬ್ ಮಾತುಗಳ ಪೂರ್ಣ ವಿವರ ಇಲ್ಲಿದೆ.

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾಗಳಲ್ಲಿ ಒಂದಾದ 'ರಾಮಾಯಣ: ರೈಸ್ ಆಫ್ ಎ ಲೆಜೆಂಡ್' ಭರ್ಜರಿಯಾಗಿ ತೆರೆಕಂಡಿದೆ. ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರಕ್ಕೆ ಇದೀಗ ಕನ್ನಡ ಚಿತ್ರರಂಗದ ಮತ್ತೊಬ್ಬ ಸ್ಟಾರ್ ನಟನಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ಹೌದು, ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರು ಯಶ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದು, ಅವರ ಮಾತುಗಳು ಅಭಿಮಾನಿಗಳ ಗಮನ ಸೆಳೆದಿವೆ.

ರಾಮಾಯಣದ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?

ಭಾರತೀಯ ಸಂಸ್ಕೃತಿ, ಪುರಾಣ ಮತ್ತು ಮಹಾಕಾವ್ಯಗಳನ್ನು ಜಾಗತಿಕ ವೇದಿಕೆಯಲ್ಲಿ ಅದ್ಧೂರಿಯಾಗಿ ಪರಿಚಯಿಸುವ ಪ್ರಯತ್ನಕ್ಕೆ ರಿಷಬ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, 'ನಮ್ಮ ಕಾಲಾತೀತ ಕಥೆಗಳು ಮತ್ತು ಸಂಸ್ಕೃತಿಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಜೀವಂತಗೊಳಿಸುವುದನ್ನು ನೋಡುವುದರಲ್ಲಿ ನಿಜವಾಗಿಯೂ ವಿಶೇಷವಾದದ್ದೇನೋ ಇದೆ.

ಭಾರತೀಯ ಚಿತ್ರರಂಗಕ್ಕೆ ಇದೊಂದು ಹೆಮ್ಮೆಯ ಕ್ಷಣ! ಯಶ್, ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಇಡೀ ಚಿತ್ರತಂಡಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಈ ಭವ್ಯ ದೃಶ್ಯಕಾವ್ಯವನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದೇನೆ. ರಾಮಾಯಣ ಇತಿಹಾಸ ಸೃಷ್ಟಿಸಲಿ ಮತ್ತು ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿಯಾಗಲಿ!' ಎಂದು ಹಾರೈಸಿದ್ದಾರೆ.

ಟ್ರೇಲರ್ ನೋಡಿದಾಗಲೇ ಯಶ್‌ಗೆ ಫಿದಾ ಆಗಿದ್ದ ಶೆಟ್ರು!

ವಿಶೇಷವೆಂದರೆ, ರಿಷಬ್ ಶೆಟ್ಟಿ ಅವರು ಇದೇ ಮೊದಲ ಬಾರಿಗೆ 'ರಾಮಾಯಣ' ತಂಡವನ್ನು ಮೆಚ್ಚಿಕೊಂಡಿಲ್ಲ. ಚಿತ್ರದ ಮೊದಲ ಟ್ರೇಲರ್ ಬಿಡುಗಡೆಯಾದ ಸಂದರ್ಭದಲ್ಲಿಯೂ ತಮ್ಮ ಮೆಚ್ಚುಗೆಯನ್ನು ಮುಕ್ತವಾಗಿ ಹಂಚಿಕೊಂಡಿದ್ದರು. ಮಹಾಕಾವ್ಯಗಳ ಪಾತ್ರಗಳನ್ನು ತೆರೆಯ ಮೇಲೆ ಕಟ್ಟಿಕೊಡುವುದು ಸುಲಭದ ಕೆಲಸವಲ್ಲ. ಏಕೆಂದರೆ ಪ್ರತಿಯೊಬ್ಬರ ಮನಸ್ಸಿನಲ್ಲೂ ರಾಮಾಯಣದ ಪಾತ್ರಗಳ ಬಗ್ಗೆ ವಿಭಿನ್ನ ಕಲ್ಪನೆಗಳಿರುತ್ತವೆ. ಅಂತಹ ಸವಾಲಿನ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿರುವ ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರನ್ನು ರಿಷಬ್ ಅಭಿನಂದಿಸಿದ್ದರು.

ವಿಶೇಷವಾಗಿ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಯಶ್ ಅವರ ಅಭಿನಯದ ಬಗ್ಗೆ ಮಾತನಾಡಿದ್ದ ಅವರು, ''ಯಶ್ ಸರ್, ನಿಮ್ಮ ಪ್ರತಿಯೊಂದು ದೃಶ್ಯದಲ್ಲೂ ನನ್ನ ಕಣ್ಣುಗಳು ದೊಡ್ಡದಾಗುತ್ತಾ ಹೋದವು. ಆ ಪಾತ್ರಕ್ಕೆ ಬೇರೆ ಯಾರಾದರೂ ನ್ಯಾಯ ಒದಗಿಸಬಲ್ಲರು ಎಂದು ನನಗೆ ಅನಿಸುವುದಿಲ್ಲ. ನಿಮ್ಮ ಅದ್ಭುತ ಅಭಿನಯದ ಬಗ್ಗೆ ಹೇಳಲು ಪದಗಳೇ ಸಾಲುತ್ತಿಲ್ಲ. ಓರ್ವ ಕನ್ನಡಿಗನಾಗಿ ನೀವು ಸದಾ ನಮಗೆ ಹೆಮ್ಮೆ ತರುತ್ತೀರಿ'' ಎಂದು ಪ್ರಶಂಸಿಸಿದ್ದರು.

ಅಷ್ಟೇ ಅಲ್ಲ, ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಣ್‌ಬೀರ್ ಕಪೂರ್ ಅವರನ್ನೂ ಅಭಿನಂದಿಸಿ, ಅವರ ಅಭಿನಯದಲ್ಲಿ ರಾಮನ ದೈವಿಕತೆಯನ್ನು ಅನುಭವಿಸುವಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಎಆರ್ ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಅವರ ಸಂಗೀತವನ್ನೂ ಕೊಂಡಾಡಿದ್ದರು.

ತಾರಾಬಳಗ, ಅದ್ಧೂರಿ ಮೇಕಿಂಗ್‌ನಿಂದ ಗಮನ ಸೆಳೆಯುತ್ತಿರುವ ರಾಮಾಯಣ

ನಿತೇಶ್ ತಿವಾರಿ ನಿರ್ದೇಶನದ ಈ ಬೃಹತ್ ಸಿನಿಮಾದಲ್ಲಿ ಭಾರತೀಯ ಚಿತ್ರರಂಗದ ಹಲವು ಖ್ಯಾತ ಕಲಾವಿದರು ಒಂದಾಗಿದ್ದಾರೆ. ರಣ್‌ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಸನ್ನಿ ಡಿಯೋಲ್ ಹನುಮಂತನಾಗಿ, ರವಿ ದುಬೆ ಲಕ್ಷ್ಮಣನಾಗಿ ನಟಿಸಿದ್ದಾರೆ. ಲಾರಾ ದತ್ತಾ ಮತ್ತು ಅರುಣ್ ಗೋವಿಲ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಭಾರತೀಯ ಮಹಾಕಾವ್ಯವನ್ನು ಆಧುನಿಕ ತಂತ್ರಜ್ಞಾನ, ಅದ್ಭುತ ದೃಶ್ಯ ವೈಭವ ಮತ್ತು ಅಂತಾರಾಷ್ಟ್ರೀಯ ಮಟ್ಟದ ನಿರ್ಮಾಣದೊಂದಿಗೆ ಪ್ರೇಕ್ಷಕರ ಮುಂದಿಡುವುದು ಚಿತ್ರತಂಡದ ಉದ್ದೇಶವಾಗಿದೆ.

70 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ರಾಮಾಯಣದ ಅಬ್ಬರ!

ಚಿತ್ರದ ಜಾಗತಿಕ ಬಿಡುಗಡೆಯ ವಿಚಾರವೂ ಸಾಕಷ್ಟು ಕುತೂಹಲ ಮೂಡಿಸಿದೆ. ಸೋನಿ ಪಿಕ್ಚರ್ಸ್ ಜೊತೆ ಕೈಜೋಡಿಸಿರುವ ನಿರ್ಮಾಪಕರು, ಸಿನಿಮಾವನ್ನು ವಿಶ್ವದಾದ್ಯಂತ ಸುಮಾರು 70,000 ಪರದೆಗಳಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ವರದಿಯಾಗಿದೆ. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರ ಪ್ರೇಕ್ಷಕರನ್ನು ತಲುಪುತ್ತಿದೆ.

ಇನ್ನು 'ರಾಮಾಯಣ: ಭಾಗ 2' ಅನ್ನು 2027ರ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಭಾರತೀಯ ಚಿತ್ರರಂಗದ ಮಹಾಕಾವ್ಯವೊಂದನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಈ ಪ್ರಯತ್ನಕ್ಕೆ ರಿಷಬ್ ಶೆಟ್ಟಿ ಅವರ ಶುಭ ಹಾರೈಕೆ ಮತ್ತಷ್ಟು ಮೆರುಗು ನೀಡಿದೆ. ಯಶ್ ಅವರ ರಾವಣನ ಪಾತ್ರವನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿರುವ ಬೆನ್ನಲ್ಲೇ, ರಿಷಬ್ ಅವರ ಈ ಮೆಚ್ಚುಗೆಯ ಮಾತುಗಳು ಕನ್ನಡ ಸಿನಿಪ್ರಿಯರ ಸಂಭ್ರಮವನ್ನೂ ಹೆಚ್ಚಿಸಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಟ ದರ್ಶನ್‌ಗೆ ಚಳಿಗಾಲದಲ್ಲಿ ಹೆಚ್ಚಾದ ಬೆನ್ನುನೋವು: ಅಷ್ಟಕ್ಕೂ ಸಮಸ್ಯೆಯಿರುವ ಮೂಳೆ ಯಾವುದು ಗೊತ್ತಾ?
ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ‘ರಾಮಾಯಣ’ಕ್ಕೆ ಏನಾಯ್ತು? ಹನುಮಂತನ ದೃಶ್ಯ ವೈರಲ್ ಹಿಂದಿನ ಕಥೆಯೇನು?