
ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡಿರುವ ‘ಪ್ರೇಮದ ಊರಲ್ಲಿ’ ಸಿನಿಮಾ ಇದೀಗ 150 ಕೋಟಿ ರೂಪಾಯಿ ಕಲೆಕ್ಷನ್‌ನತ್ತ ಸಾಗುತ್ತಿದೆ ಎನ್ನಲಾಗಿದೆ. ಆರಂಭದಲ್ಲಿ ಚಿತ್ರಮಂದಿರಗಳಲ್ಲಿ ಶೋ ಪಡೆಯಲು ಪರದಾಡಿದ್ದ ಈ ಸಿನಿಮಾ, ನಂತರ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದೆ. ಚಿತ್ರದ ಯಶಸ್ಸಿನ ಬೆನ್ನಲ್ಲೇ ಇದೀಗ ಸಿನಿಮಾದ ಕಲಾವಿದರಿಗೆ ಸಿಕ್ಕ ಸಂಭಾವನೆ ಎಷ್ಟು ಎಂಬ ಚರ್ಚೆಯೂ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ.
ಚಿತ್ರ ಬಿಡುಗಡೆಯಾದ ಆರಂಭದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಚಿತ್ರಮಂದಿರಗಳು ಸಿಗದೆ ಚಿತ್ರತಂಡ ಸಾಕಷ್ಟು ಕಷ್ಟಪಟ್ಟಿತ್ತು. ದೊಡ್ಡ ಸಿನಿಮಾಗಳಂತೆ ಅದ್ದೂರಿ ಪ್ರಚಾರ ನಡೆಸಲು ಸಾಧ್ಯವಾಗದಿದ್ದರೂ, ನಾಯಕ ಶ್ರೀರಾಮ್, ನಾಯಕಿಯರಾದ ರಮಿಕಾ ಶಿವು ಮತ್ತು ತಪಸ್ವಿನಿ ಪುಣಚ ಸೇರಿದಂತೆ ಇಡೀ ತಂಡವೇ ಪ್ರಚಾರದ ಜವಾಬ್ದಾರಿ ಹೊತ್ತುಕೊಂಡಿತ್ತು.
ಸಿನಿಮಾಗೆ ಪ್ರೇಕ್ಷಕರನ್ನು ಸೆಳೆಯಲು ಚಿತ್ರತಂಡ ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸಿತ್ತು. ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ವಿವಿಧ ಜಿಲ್ಲೆಗಳು, ಸಣ್ಣ ಪಟ್ಟಣಗಳಿಗೂ ಬಸ್, ರೈಲು ಹಾಗೂ ಆಟೋಗಳಲ್ಲಿ ಪ್ರಯಾಣಿಸಿ ಸಿನಿಮಾ ಪ್ರಚಾರ ಮಾಡಿತ್ತು. ರಸ್ತೆಬದಿಯ ಟೀ ಅಂಗಡಿಗಳಿಂದ ಹಿಡಿದು ಮೆಟ್ರೋ ನಿಲ್ದಾಣ, ಮಾಲ್‌ಗಳು ಮತ್ತು ಕಾಲೇಜು ಕ್ಯಾಂಪಸ್‌ಗಳವರೆಗೆ ತೆರಳಿ ಜನರಿಗೆ ಚಿತ್ರದ ಪೋಸ್ಟರ್ ಹಂಚಿ ಸಿನಿಮಾ ನೋಡುವಂತೆ ಮನವಿ ಮಾಡಿದ್ದರು. ಕೆಲವು ಚಿತ್ರಮಂದಿರಗಳಲ್ಲಿ ಶೋ ಸಿಗದಿದ್ದಾಗ ಚಿತ್ರತಂಡವೇ ಮೈಕ್ ಹಿಡಿದು ಥಿಯೇಟರ್ ಮುಂದೆ ನಿಂತು ಪ್ರೇಕ್ಷಕರನ್ನು ಆಹ್ವಾನಿಸಿತ್ತು. ಸಿನಿಮಾ ಬಿಡುಗಡೆಯಾದ ಬಳಿಕ ಪ್ರೇಕ್ಷಕರ ಜೊತೆ ಕುಳಿತು ಚಿತ್ರ ವೀಕ್ಷಿಸಿ, ಅವರ ಅಭಿಪ್ರಾಯಗಳನ್ನು ನೇರವಾಗಿ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ಈ ವಿಭಿನ್ನ ಪ್ರಚಾರ ತಂತ್ರವೂ ಸಿನಿಮಾ ಜನರಿಗೆ ತಲುಪಲು ನೆರವಾಯಿತು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಹಾಗೂ ಕೆಲವು ಸಿನಿ ಮೂಲಗಳ ಹೇಳಿಕೆಯ ಪ್ರಕಾರ, ಚಿತ್ರದ ಪ್ರಮುಖ ಕಲಾವಿದರಿಗೆ ನೀಡಲಾಗಿದೆ ಎನ್ನಲಾದ ಸಂಭಾವನೆಯ ವಿವರ ಇಲ್ಲಿದೆ. ಆದರೆ ಈ ಮೊತ್ತಗಳಿಗೆ ಚಿತ್ರತಂಡದಿಂದ ಅಧಿಕೃತ ದೃಢೀಕರಣ ಸಿಕ್ಕಿಲ್ಲ ಎಂಬುದನ್ನು ಗಮನಿಸಬೇಕು.
ಶ್ರೀರಾಮ್: ಸಿನಿಮಾದಲ್ಲಿ ಸಂತು ಪಾತ್ರದಲ್ಲಿ ನಟಿಸಿರುವ ನಾಯಕ ಶ್ರೀರಾಮ್ ಅವರ ಸಹಜ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರಕ್ಕಾಗಿ ಅವರು ಸುಮಾರು 10ರಿಂದ 15 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.
ರಂಗಾಯಣ ರಘು: ನಾಗಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಂಗಾಯಣ ರಘು ಅವರ ಅಭಿನಯ ಸಿನಿಮಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಹಾಸ್ಯ ಮತ್ತು ಭಾವನಾತ್ಮಕ ದೃಶ್ಯಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಅವರು ಸುಮಾರು 25ರಿಂದ 30 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ರಮಿಕಾ ಶಿವು: ವಸಂತ ಪಾತ್ರದಲ್ಲಿ ನಟಿಸಿರುವ ರಮಿಕಾ ಶಿವು ಅವರ ಅಭಿನಯಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾಗಾಗಿ ಅವರು ಸುಮಾರು 8ರಿಂದ 10 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ತಪಸ್ವಿನಿ ಪುಣಚ: ರುಕ್ಮಿಣಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಪಸ್ವಿನಿ ಪುಣಚ ಅವರ ಸಹಜ ಅಭಿನಯ ಮತ್ತು ಭಾವನಾತ್ಮಕ ದೃಶ್ಯಗಳ ನಟನೆ ಪ್ರೇಕ್ಷಕರ ಗಮನ ಸೆಳೆದಿದೆ. ಈ ಚಿತ್ರಕ್ಕಾಗಿ ಅವರು ಸುಮಾರು 5ರಿಂದ 8 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಸಿನಿಮಾ ಸೂಪರ್ ಹಿಟ್ ಆದ ಬಳಿಕ ಕಲಾವಿದರು ಮತ್ತು ತಂತ್ರಜ್ಞರಿಗೆ ನಿರ್ಮಾಪಕರು ಹೆಚ್ಚುವರಿ ಹಣ ಅಥವಾ ಉಡುಗೊರೆ ನೀಡುವುದು ಚಿತ್ರರಂಗದಲ್ಲಿ ಹೊಸದೇನಲ್ಲ. ಈ ಹಿಂದೆ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ಯಶಸ್ಸು ಕಂಡಾಗ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಬರಹಗಾರರು ಮತ್ತು ತಂತ್ರಜ್ಞರಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ. ‘ರಾಬರ್ಟ್’ ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ಮಹೇಶ್ ಕುಮಾರ್ ಅವರಿಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕಾರು ಉಡುಗೊರೆ ನೀಡಿದ್ದರು. ‘ಕಿರಿಕ್ ಪಾರ್ಟಿ’ ಯಶಸ್ಸಿನ ಸಂದರ್ಭದಲ್ಲಿಯೂ ಚಿತ್ರತಂಡಕ್ಕೆ ಹೆಚ್ಚುವರಿ ಹಣ ನೀಡಲಾಗಿತ್ತು ಎಂಬ ಉದಾಹರಣೆಗಳಿವೆ.
‘ಪ್ರೇಮದ ಊರಲ್ಲಿ’ ಸಿನಿಮಾದ ನಿರ್ಮಾಣದ ಹಿಂದೆ ಹಲವು ನಿರ್ಮಾಪಕರು ಬಂಡವಾಳ ಹೂಡಿದ್ದು, ಚಿತ್ರತಂಡ ಆರಂಭದಿಂದಲೂ ಸಾಕಷ್ಟು ಶ್ರಮ ವಹಿಸಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ದೊಡ್ಡ ಯಶಸ್ಸು ಕಂಡಿರುವುದರಿಂದ ಕಲಾವಿದರು ಮತ್ತು ತಂತ್ರಜ್ಞರಿಗೆ ಹೆಚ್ಚುವರಿ ಸಂಭಾವನೆ ಅಥವಾ ಬೋನಸ್ ಸಿಗಬಹುದೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.