
ಹಿರಿಯ ನಟಿ ಉಮಾಶ್ರೀ ಎಂದರೆ ಕನ್ನಡಿಗರಿಗೆ ನೆನಪಾಗುವುದು ಅವರ ಅದ್ಭುತ ಅಭಿನಯ, ಹಾಸ್ಯಪ್ರಜ್ಞೆ ಮತ್ತು ಗಟ್ಟಿಯಾದ ವ್ಯಕ್ತಿತ್ವ. ಆದರೆ ಹೊರಜಗತ್ತಿಗೆ ಧೈರ್ಯಶಾಲಿಯಾಗಿ ಕಾಣಿಸುವ ಉಮಾಶ್ರೀ ಅವರ ಮನಸ್ಸಿನಲ್ಲೂ ಹಲವು ಭಾವನೆಗಳು, ಆತಂಕಗಳು ಇವೆ. ಇದೀಗ ತಮ್ಮ ವೈಯಕ್ತಿಕ ಮನಸ್ಥಿತಿ ಹಾಗೂ 70ರ ನಂತರದ ಬದುಕಿನ ಬಗ್ಗೆ ಅವರು ಆಡಿರುವ ಮಾತುಗಳು ಗಮನ ಸೆಳೆಯುತ್ತಿವೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಉಮಾಶ್ರೀ ಅವರಿಗೆ, 'ನೀವು ಕಲ್ಲಾಗಿದ್ದೀರಾ? ಬಂಡೆಯಂತಾಗಿದ್ದೀರಾ?' ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಉತ್ತರಿಸಿದ ಅವರು, 'ಇಲ್ಲ, ಹೊರಜಗತ್ತಿಗೆ ನಾನು ಬಹಳ ಗಟ್ಟಿಯಾಗಿ ಕಾಣಿಸುತ್ತೇನೆ. ಆದರೆ ಒಳಗಿನಿಂದ ಬಹಳ ಟೊಳ್ಳು ನಾನು' ಎಂದು ತಮ್ಮ ಮನದಾಳದ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ತಮ್ಮ ಜೀವನದ ಈ ಹಂತದಲ್ಲಿ ಇನ್ನಷ್ಟು ಮಾನಸಿಕವಾಗಿ ಗಟ್ಟಿಯಾಗಬೇಕಿದೆ ಎಂದು ಉಮಾಶ್ರೀ ಹೇಳಿದ್ದಾರೆ. 'ಈ 70 ಮತ್ತೆ 70ರ ನಂತರದ ಬದುಕಿನಲ್ಲಿ ಇನ್ನೂ ಏನೆಲ್ಲ ನೋಡಬೇಕಾಗುತ್ತದೆಯೋ ಏನೋ. ಆ ಒಂದು ಘಟ್ಟವನ್ನು ಎದುರಿಸುವುದಕ್ಕೂ ನಾನು ಸ್ವಲ್ಪ ಗಟ್ಟಿಯಾಗಬೇಕಾಗುತ್ತದೆ' ಎಂದು ಹೇಳಿದ್ದಾರೆ. ಜೀವನದಲ್ಲಿ ಇಷ್ಟು ಅನುಭವಗಳನ್ನು ಕಂಡಿದ್ದರೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸನ್ನಿವೇಶಗಳ ಬಗ್ಗೆ ಅವರಲ್ಲಿರುವ ಆತಂಕವನ್ನು ಈ ಮಾತುಗಳು ಬಿಂಬಿಸುತ್ತವೆ.
ಮುಂದೆ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಮಾನಸಿಕ ಶಕ್ತಿ ಬೆಳೆಸಿಕೊಳ್ಳುವುದು ಸುಲಭವೇ ಎಂಬ ಪ್ರಶ್ನೆಯೂ ಉಮಾಶ್ರೀ ಅವರ ಮಾತುಗಳಲ್ಲಿ ವ್ಯಕ್ತವಾಗಿದೆ. 'ಆ ಗಟ್ಟಿತನ ಬರೋದು ಸ್ವಲ್ಪ ಕಷ್ಟವೇ. ಫೇಲ್ ಆಗಬಹುದು ಅಂತ ಅನಿಸುತ್ತದೆ ನನಗೆ' ಎಂದು ಅವರು ಪ್ರಾಮಾಣಿಕವಾಗಿ ಹೇಳಿದ್ದಾರೆ. ಸಾಮಾನ್ಯವಾಗಿ ಗಟ್ಟಿಮನಸ್ಸಿನ ವ್ಯಕ್ತಿ ಎಂದು ಗುರುತಿಸಿಕೊಂಡಿರುವ ಉಮಾಶ್ರೀ ಅವರ ಈ ಮಾತುಗಳು, ಪ್ರತಿಯೊಬ್ಬರ ಬದುಕಿನಲ್ಲೂ ಹೊರಗಿನ ವ್ಯಕ್ತಿತ್ವಕ್ಕೂ ಒಳಗಿನ ಭಾವನೆಗಳಿಗೂ ವ್ಯತ್ಯಾಸವಿರುತ್ತದೆ ಎಂಬುದನ್ನು ನೆನಪಿಸುತ್ತವೆ.
ಉಮಾಶ್ರೀ ಅವರ ಸಿನಿಮಾ ಜೀವನದ ಹಿಂದೆ ಸುದೀರ್ಘ ಹೋರಾಟ ಮತ್ತು ಪರಿಶ್ರಮದ ಕಥೆಯಿದೆ. ರಂಗಭೂಮಿಯ ಮೂಲಕ ಕಲಾ ಕ್ಷೇತ್ರಕ್ಕೆ ಕಾಲಿಟ್ಟ ಅವರು, ತಮ್ಮ ಅದ್ಭುತ ಅಭಿನಯ ಪ್ರತಿಭೆಯಿಂದ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಗುರುತನ್ನು ಸಂಪಾದಿಸಿದ್ದಾರೆ. ಬಿ.ವಿ. ಕಾರಂತ್ ಮತ್ತು ಗಿರೀಶ್ ಕಾರ್ನಾಡ್ ಅವರಂತಹ ರಂಗಭೂಮಿಯ ದಿಗ್ಗಜರೊಂದಿಗೆ ಕೆಲಸ ಮಾಡಿದ ಅನುಭವ ಅವರ ಕಲಾ ಪಯಣಕ್ಕೆ ಮತ್ತಷ್ಟು ಬಲ ನೀಡಿತು. 1970ರ ದಶಕದ ಕೊನೆಯಲ್ಲಿ ವೃತ್ತಿಪರ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ಉಮಾಶ್ರೀ, ಬಳಿಕ ಕನ್ನಡ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಹಾಸ್ಯ ಪಾತ್ರಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ಅವರು, ತಮ್ಮ ವಿಭಿನ್ನ ಮ್ಯಾನರಿಸಂ, ಉತ್ತರ ಕರ್ನಾಟಕದ ಭಾಷಾ ಶೈಲಿ ಮತ್ತು ಸಹಜ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದರು. ಇದುವರೆಗೆ 470ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಗೂ 200ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ನಟಿ ಉಮಾಶ್ರೀ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಿದ ಸಿನಿಮಾ ಎಂದರೆ ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಗುಲಾಬಿ ಟಾಕೀಸ್'. ಈ ಚಿತ್ರದಲ್ಲಿ ಗುಲಾಬಿ ಎಂಬ ಪಾತ್ರದಲ್ಲಿ ಅವರು ನೀಡಿದ ಮನೋಜ್ಞ ಅಭಿನಯಕ್ಕೆ 2008ನೇ ಸಾಲಿನ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಒಲಿಯಿತು. ಈ ಮೂಲಕ ಹಾಸ್ಯ ಪಾತ್ರಗಳಿಗೆ ಮಾತ್ರ ಸೀಮಿತವಾಗದೆ ಗಂಭೀರ ಪಾತ್ರಗಳಲ್ಲೂ ತಮ್ಮ ಅಭಿನಯದ ಸಾಮರ್ಥ್ಯವನ್ನು ಸಾಬೀತುಪಡಿಸಿದರು.
ಇನ್ನು 'ಪುಟ್ನಂಜ', 'ಅನುಭವ' ಸೇರಿದಂತೆ ಹಲವು ಸಿನಿಮಾಗಳಲ್ಲಿನ ಅವರ ಅಭಿನಯ ಇಂದಿಗೂ ಕನ್ನಡ ಸಿನಿಪ್ರಿಯರ ನೆನಪಿನಲ್ಲಿದೆ. ಸಿನಿಮಾ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಅವರು, ಶಾಸಕಿ ಹಾಗೂ ಸಚಿವೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರಂಗಭೂಮಿ, ಸಿನಿಮಾ ಮತ್ತು ಸಾರ್ವಜನಿಕ ಜೀವನ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಉಮಾಶ್ರೀ ಅವರ ಜೀವನಪಯಣ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.